ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ

Upayuktha
0

ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸಾಶ್ರಮ ಸ್ವೀಕಾರದ 50ನೇ ವರ್ಷದ ನಿಮಿತ್ತ ವಿಶೇಷ ಸೇವೆ




ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸಾಶ್ರಮ ಸ್ವೀಕಾರದ 50 ನೇ ವರ್ಷದ ನಿಮಿತ್ತವಾಗಿ ಶ್ರೀ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ ಸಂಕಲ್ಪದಂತೆ ಉಡುಪಿಯ ಜೋಡುಕಟ್ಟೆಯಿಂದ ರಥಬೀದಿಯಾಗಿ ಮೆರವಣಿಗೆ ಮೂಲಕ ರಥವನ್ನು ರಾಜಾಂಗಣಕ್ಕೆ ತರಲಾಯಿತು.


ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ವೈಭವದ ಮೆರವಣಿಗೆಯಲ್ಲಿ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು, ಸಂಸ್ಕೃತ ಕಾಲೇಜು ತಂಡದಿಂದ ವೇದಘೋಷ, ಬಿರುದಾವಳಿ, ವಿವಿಧ ಬಗೆಯ ಆಕರ್ಷಕ ಸ್ತಬ್ದ ಚಿತ್ರಗಳು, ವಿವಿಧ ಬಗೆಯ ಆಕರ್ಷಕ ವೇಷಗಳು, ನಾಸಿಕ್ ಬ್ಯಾಂಡ್ ಸೇರಿದಂತೆ ವಿವಿಧ ಬಗೆಯ ವಾದ್ಯ ತಂಡಗಳು, ಭಜನಾ ತಂಡಗಳು ಪಾಲ್ಗೊಂಡಿದ್ದರು.


ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂತ್ರಾಲಯ ಶ್ರೀಗಳು ಹಾಗೂ ಪುತ್ತಿಗೆ ಮಠದ ಉಭಯ ಶ್ರೀಪಾದರು ರಥಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿಸಿ ಶ್ರೀ ಕೃಷ್ಣನಿಗೆ ರಥವನ್ನು ಸಮರ್ಪಿಸಿದರು. ನಂತರ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.



ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೋತ್ಸವ ಸಂದರ್ಭ ಖ್ಯಾತ ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಶ್ರೀ ವಿ.ವಿ. ಪ್ರಸನ್ನ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.


ಉಡುಪಿಯ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ದೇವಾಲಯದಲ್ಲಿ ರಾಶಿ ಪೂಜೆಯ ಅಂಗವಾಗಿ ಅಷ್ಟಾವಧಾನ ಸೇವೆಯು ನಡೆಯಿತು. ಇದರ ಅಂಗವಾಗಿ ಹೂವಿನ ತೊಟ್ಟಿಲಲ್ಲಿ ಉಭಯ ದೇವರ ಉತ್ಸವ ಮೂರ್ತಿಯನ್ನಿಟ್ಟು ತೊಟ್ಟಿಲು ಪೂಜೆಯನ್ನು ಮಾಡಲಾಯಿತು. ನಂತರ ಅಷ್ಟಾವಧಾನ ಸೇವೆಯಲ್ಲಿ ವೇದ, ಪುರಾಣ, ಜ್ಯೋತಿಷ್ಯ, ಸಂಗೀತ, ನೃತ್ಯ, ಸರ್ವವಾದ್ಯ ಸೇವೆಗಳು ಸಮರ್ಪಿತಗೊಂಡಿತು. ಮರುದಿನ ಬೆಳಿಗೆ ವೃಶ್ಚಿಕ ಲಗ್ನದಲ್ಲಿ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾಶಿಪೂಜೆಯು ಸಂಪನ್ನಗೊಂಡಿತು.


ಉಡುಪಿಯ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ದೇವಾಲಯದಲ್ಲಿ ರಾಶಿ ಪೂಜಾ ಮಹೋತ್ಸವದ ಅಂಗವಾಗಿ ಹೂವಿನ ರಥೋತ್ಸವವು ನಡೆಯಿತು. ಮಿಥುನ ಲಗ್ನದಲ್ಲಿ ಅಲಂಕೃತ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನಿಟ್ಟು ಆರತಿಯನ್ನು ಮಾಡಿ, ವಿವಿಧ ಬಗೆಯ ವಾದ್ಯ ಸೇವೆಗಳೊಂದಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ, ದೇವಾಲಯದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.


ಚಿತ್ರಗಳು: ಎ.ಕೆ. ಭಾಗವತ್



Post a Comment

0 Comments
Post a Comment (0)
To Top