ಸೇವಾ ನಿವೃತ್ತ ಯೋಧರ ಪರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ

Upayuktha
0

ECHS ಯೋಜನೆಯಡಿ ಮಾಜಿ ಸೈನಿಕರ ಚಿಕಿತ್ಸಾ ವೆಚ್ಚ ಪಾವತಿ ವಿಳಂಬ ಸಮಸ್ಯೆಗೆ ತುರ್ತಾಗಿ ಸ್ಪಂದಿಸಲು ರಕ್ಷಣಾ ಸಚಿವರಿಗೆ ಮನವಿ 





ಹೊಸದಿಲ್ಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಾಜಿ ಸೈನಿಕರ ಪರವಾಗಿ ಸದನದಲ್ಲಿ ಧ್ವನಿಯೆತ್ತಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸಿರುವ ನಮ್ಮ ಯೋಧರು ಹಾಗೂ ಅವರ ಕುಟುಂಬದವರಿಗೆ ಜಾರಿಯಲ್ಲಿರುವ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS)ಯಡಿ ವೈದ್ಯಕೀಯ ವೆಚ್ಚದ ಬಿಲ್‌ ಪಾವತಿ ವಿಳಂಬದ ಬಗ್ಗೆ ಇಂದು ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.


ಈ ಗಂಭೀರ ವಿಚಾರದ ಬಗ್ಗೆ ಯೋಧರಾಗಿಯೂ ಸದನದ ಗಮನಸೆಳೆದಿರುವ ಕ್ಯಾ. ಚೌಟ ಅವರು, ಸೇವೆಯಿಂದ ನಿವೃತ್ತಿ ಪಡೆದ ಸೈನಿಕರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಸಕಾಲದಲ್ಲಿ ಮರುಪಾವತಿಯಾಗದೆ ದೀರ್ಘ ವಿಳಂಬ ಆಗುತ್ತಿರುವ ಕಾರಣದಿಂದ ಖಾಸಗಿ ಆಸ್ಪತ್ರೆಗಳು ಈ ECHS ಯೋಜನೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.


"ಯೋಧನಾಗಿ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸೇವೆಯಿಂದ ನಿವೃತ್ತರಾದ ಸೈನಿಕರು ಮತ್ತು ಅವರ ಅವಲಂಬಿತರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಸದನದ ಮುಂದಿಡುವುದು ನನ್ನ ಕರ್ತವ್ಯವಾಗಿದೆ. ಪ್ರಧಾನಿಮಂತ್ರಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾದ ಯೋಧರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಹೀಗಿರುವಾಗ, ECHS ಯೋಜನೆಯಲ್ಲಿನ ಈ ನಿರ್ವಹಣೆ ಲೋಪವನ್ನು ಸಚಿವಾಲಯವು ತುರ್ತಾಗಿ ಗಮನಹರಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.


ವಿಶಿಷ್ಟ ಮಿಲಿಟರಿ ಪರಂಪರೆಗೆ ಹೆಸರಾದ  ನೆರೆಯ ಜಿಲ್ಲೆಯಾದ ಕೊಡಗಿನ ಪರಿಸ್ಥಿತಿಯ ಬಗ್ಗೆ ಉದಾಹರಿಸಿದ ಸಂಸದರು, ಈ ಜಿಲ್ಲೆಯಲ್ಲಿ ECHS-ಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳ ಕೊರತೆಯಿಂದಾಗಿ, ಸೇವೆಯಿಂದ ನಿವೃತ್ತರಾಗಿರುವ ಇಲ್ಲಿನ ಹಿರಿಯ  ಯೋಧರು ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗೂ ಬೆಟ್ಟ-ಗುಡ್ಡಗಳ ದಾರಿಯಲ್ಲಿ 100-150 ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆಯಿದೆ. ಇಂತಹ ಸನ್ನಿವೇಶಗಳ ನಡುವೆ, ಚಿಕಿತ್ಸಾ ವೆಚ್ಚ ವಿಳಂಬ ಪಾವತಿಗಳಿಂದಾಗಿ ದೇಶಾದ್ಯಂತ ಹಲವು ಆಸ್ಪತ್ರೆಗಳು ಈ ಯೋಜನೆಯಲ್ಲಿ ಮುಂದುವರಿಯದೆ ಹಿಂದೆ ಸರಿಯುತ್ತಿರುವುದು ಈ ಸಮಸ್ಯೆಯ ಮತ್ತಷ್ಟು ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


ECHS ವ್ಯವಸ್ಥೆಯಡಿ ಪ್ರಸ್ತುತ ವಾರ್ಷಿಕವಾಗಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಈ ಚಿಕಿತ್ಸಾ ವೆಚ್ಚ ಪಾವತಿ ವಿಳಂಬವು ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದರಿಂದ, ನಿವೃತ್ತ ಯೋಧರಿಗೆ ಈ ಆರೋಗ್ಯ ಸೇವೆಯಡಿ ಯಾವುದೇ ವಿಳಂಬವಾಗದೆ ಕಾಲಮಿತಿಯೊಳಗೆ ಚಿಕಿತ್ಸಾ ವೆಚ್ಚ ಪಾವತಿಯಾಗಬೇಕು. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವರು ಈ ಕೂಡಲೇ ಗಮನಹರಿಸಿ ECHS ಯೋಜನೆ ಅನುಷ್ಠಾನದಲ್ಲಿನ ನ್ಯೂನತೆ ಸರಿಪಡಿಸಿ ಸಕಾಲದಲ್ಲಿ ಸೈನಿಕ ಸಮುದಾಯದ ಅರ್ಹ ಫಲಾನುಭವಿಗಳ ಚಿಕಿತ್ಸಾ ವೆಚ್ಚ ಪಾವತಿಯಾಗುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಒತ್ತಾಯಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top