ಡಿ. 24: ಕಿಷ್ಕಿಂಧಾ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ, ಪದವಿ ಪ್ರದಾನ ಸಮಾರಂಭ

Upayuktha
0


ಬಳ್ಳಾರಿ: ಬಳ್ಳಾರಿಯ ಕಿಷ್ಕಿಂದ ವಿಶ್ವವಿದ್ಯಾಲಯದ ಎಂಬಿಎ ಹಾಗೂ ಎಂಸಿಎ ಕೋರ್ಸ್‍ಗಳ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಮತ್ತು ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ಡಿಸೆಂಬರ್ 24, 2025ರಂದು ಬಳ್ಳಾರಿ-ಸಿರುಗುಪ್ಪ ರಸ್ತೆ ಮಾರ್ಗದಲ್ಲಿರುವ ಮೌಂಟ್ ವ್ಯೂ ಕ್ಯಾಂಪಸ್‍ನಲ್ಲಿ (ಬಳ್ಳಾರಿಯಿಂದ 28 ಕಿ.ಮೀ ದೂರದಲ್ಲಿ) ಆಯೋಜಿಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ ಅವರು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


“ಇದು ಕಿಷ್ಕಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಕ್ಷಣವಾಗಿದ್ದು, ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ನಮ್ಮ ಬದ್ಧತೆಯನ್ನು ಸಾರುತ್ತದೆ. ವಿಶ್ವವಿದ್ಯಾಲಯವು ಶೈಕ್ಷಣಿಕ ಶಿಸ್ತು, ಸಂಶೋಧನೆ ಮತ್ತು ನೈತಿಕ ಮೌಲ್ಯಗಳನ್ನು ಸಮನ್ವಯಗೊಳಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುತ್ತಿದೆ. ಸಮಾಜಮುಖಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಶಿಕ್ಷಣ ನೀಡುವುದು ನಮ್ಮ ಪ್ರಧಾನ ಗುರಿಯಾಗಿದೆ” ಎಂದು ಪ್ರೊ. ನಾಗಭೂಷಣ ತಿಳಿಸಿದರು.


“ಈ ಘಟಿಕೋತ್ಸವ ಸಮಾರಂಭಕ್ಕೆ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ವಿಸಿಟರ್ ಗಳಾದ ಥಾವರ್ ಚಂದ್ ಗೆಹ್ಲೋಟ್ ಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರೊ-ವಿಸಿಟರ್‌ಗಳಾದ ಡಾ. ಎಂ.ಸಿ. ಸುಧಾಕರ್ ಅವರು ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಜಗದೀಶ್ ಶಿವಪ್ಪ ಶೆಟ್ಟರ್, ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ. ನಾಗರಾಜ, ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾದರ್ಲಿ ಹಂಪನಗೌಡ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ” ಎಂದು ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ ವಿವರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕುಲಾಧಿಪತಿ ಡಾ. ಯಶವಂತ್ ಭೂಪಾಲ್ ಅವರು, “ಪ್ರಥಮ ಘಟಿಕೋತ್ಸವವು ಕಿಷ್ಕಿಂದ ವಿಶ್ವವಿದ್ಯಾಲಯದ ದೃಷ್ಟಿಕೋನ, ಶೈಕ್ಷಣಿಕ ಗುಣಮಟ್ಟ ಹಾಗೂ ಸಮಾಜಮುಖಿ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವಿದ್ಯಾರ್ಥಿಗಳು ಸಮಾಜ ನಿರ್ಮಾಣದಲ್ಲಿ ನಾಯಕತ್ವ ವಹಿಸಬೇಕು” ಎಂದು ಆಶಯ ವ್ಯಕ್ತಪಡಿಸಿದರು. 


ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್ ಅವರು ಮಾತನಾಡಿ, “ವಿಶ್ವವಿದ್ಯಾಲಯವು ನಾವೀನ್ಯತೆ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಮೌಲ್ಯಾಧಾರಿತ ಅಧ್ಯಯನಕ್ಕೆ ಆದ್ಯತೆ ನೀಡುತ್ತಿದೆ. ಪದವಿ ಪಡೆದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಹೇಳಿದರು.


“ನಮ್ಮ ಟಿ.ಇ.ಹೆಚ್.ಆರ್.ಡಿ ಟ್ರಸ್ಟ್ ಪ್ರಾಯೋಜಿತ ಕಿಷ್ಕಿಂದ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವಕ್ಕೆ ನಮ್ಮ ಟ್ರಸ್ಟ್‍ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗಿದ್ದು, ಘಟಿಕೋತ್ಸವದ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳಿಗೆ ಉತ್ಖೃಷ್ಠ ಶಿಕ್ಷಣ ನೀಡುವತ್ತ ದಾಪುಗಾಲು ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್ ತಿಳಿಸಿದರು. 


ಸಮಾಜದ ನೈತಿಕ, ಆಧ್ಯಾತ್ಮಿಕ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ದೀರ್ಘಕಾಲದಿಂದ ಅಪಾರ ಸೇವೆ ಸಲ್ಲಿಸಿರುವುದನ್ನು ಗುರುತಿಸಿ, ವಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅವರಿಗೆ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (ಹಾನರಿಸ್ ಕಾಸಾ) ಪ್ರದಾನ ಮಾಡಲಾಗುತ್ತದೆ. ಧಾರ್ಮಿಕ ಸೌಹಾರ್ದತೆ, ಸಮಾಜ ಸೇವೆ, ಶಿಕ್ಷಣ ಪ್ರೋತ್ಸಾಹ ಹಾಗೂ ಮಾನವ ಕಲ್ಯಾಣ ಕ್ಷೇತ್ರಗಳಲ್ಲಿ ಅವರ ಮಹತ್ವದ ಕೊಡುಗೆಯನ್ನು ಗೌರವ ಡಾಕ್ಟರೇಟ್ ಅರ್ಪಿಸುವ ಮೂಲಕ ವಿಶ್ವವಿದ್ಯಾಲಯವು ಗೌರವಿಸುತ್ತಿದೆ. ಈ ಕುರಿತು ಮಾತನಾಡಿದ ಕುಲಸಚಿವ ಡಾ. ಯು. ಈರಣ್ಣ ಅವರು, “ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸಮಾಜಮುಖಿ ಹಾಗೂ ಮೌಲ್ಯಾಧಾರಿತ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ. ಇದು ಸಮಾಜ ಸೇವೆ ಮತ್ತು ನೈತಿಕ ಮೌಲ್ಯಗಳಿಗೆ ಕಿಷ್ಕಿಂದ ವಿಶ್ವವಿದ್ಯಾಲಯ ನೀಡುವ ಗೌರವದ ಸ್ಪಷ್ಟ ಸಂಕೇತವಾಗಿದೆ” ಎಂದು ಹೇಳಿದರು.


ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಗೌರವಿಸಲಾಗುತ್ತಿದೆ. ಎಂಬಿಎ ವಿಭಾಗದಲ್ಲಿ, ಶಬಾನಾ ಅವರು 9.33 ಸಿಜಿಪಿಎದೊಂದಿಗೆ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಸೌಗಂಧಿಕಾ ಲಕ್ಷ್ಮಿ ಅವರು 9.27 ಸಿಜಿಪಿಎದೊಂದಿಗೆ ದ್ವಿತೀಯ ರ್‍ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆಯಲಿದ್ದಾರೆ.


ಎಂಸಿಎ ವಿಭಾಗದಲ್ಲಿ, ಸಜ್ಜ ಜಗತಿ ಅವರು ಅತ್ಯುತ್ತಮ 9.82 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಸ್ವೀಕರಿಸಲಿದ್ದು, ಸಂಧ್ಯಾ ಜಿ ಅವರು 9.66 ಸಿಜಿಪಿಎದೊಂದಿಗೆ ದ್ವಿತೀಯ ರ್‍ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಪಡೆಯಲಿದ್ದಾರೆ.


ಈ ಪತ್ರಿಕಾ ಗೋಷ್ಠಿಯಲ್ಲಿ ಕುಲಾಧಿಪತಿ ಡಾ. ಯಶವಂತ್ ಭೂಪಾಲ್, ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ, ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಸಚಿವರು ಡಾ. ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ಡಾ. ರಾಜು ಜಾಡರ್ ಹಾಗೂ ಹಣಕಾಸು ಅಧಿಕಾರಿ ವೈ. ನಮ್ರತಾ ಅವರು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top