ಕೇಂದ್ರ- ರಾಜ್ಯದ ಗುದ್ದಾಟದಿಂದ ಬಡವಾಯಿತು ಕಲಬುರಗಿ ವಿಮಾನ ನಿಲ್ದಾಣ

Upayuktha
0

ಜನಪ್ರತಿನಿಧಿಗಳ ಗಾಢ ಮೌನಕ್ಕೆ ಪ್ರಯಾಣಿಕರ ಹಿಡಿ ಶಾಪ




ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿಯಲ್ಲಿ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗುದ್ದಾಟದಿಂದ ಬಡಪಾಯಿಯಾಗಿದೆ ಪ್ರಯಾಣಿಕರ ಗೋಳು ಆಲಿಸದ ಜನಪ್ರತಿನಿಧಿಗಳ ಗಾಢ ಮೌನಕ್ಕೆ ವಿಮಾನ ಪ್ರಯಾಣಿಕರು ಈಗ ಹಿಡಿ ಶಾಪ ಹಾಕುವಂತಾಗಿದೆ. 


ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಕಲಬರಗಿಯಲ್ಲಿ ಕಾರ್ಯಾಚರಿಸುತ್ತಿದ್ದ ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸೇವೆಯು ಅಕ್ಟೋಬರ್ 15 ರಿಂದ ಸ್ಥಗಿಗತಗೊಂಡಿದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಪುನರಾರಂಭಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಪ್ರಾಮಾಣಿಕವಾಗಿ ಒತ್ತಡ ಹಾಕದಿರುವುದು ತೀವ್ರ ಖಂಡನೀಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ತುರ್ತು ಪ್ರಯಾಣಕ್ಕೆ ಅನುಕೂಲಕರವಾಗಿದ್ದ ವಿಮಾನ ಸೇವೆಯು ಸ್ಥಗಿತಗೊಂಡಿರುವುದು ಈ ಭಾಗದ ತೀವ್ರ ಕಡಗಣನೆಗೆ ಪ್ರತ್ಯಕ್ಷ ನಿದರ್ಶನವಾಗಿದೆ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯರು ಹಾಗೂ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಜಂಟಿ ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು 371 (ಜೆ) ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದರೂ ಅಭಿವೃದ್ಧಿಗೆ ಪೂರಕವಾದ ವಿಮಾನ ಸೇವೆಯು ಸ್ಥಗಿತಗೊಂಡು ಎರಡು ತಿಂಗಳಾದರೂ ಚಕಾರವೆತ್ತದ ಜನಪ್ರತಿನಿಧಿಗಳ ದಿವ್ಯ ಮೌನ ಈ ಭಾಗದ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಹಾಗೂ ರಾಜ್ಯ ಸರಕಾರದ ಸಂಬಂಧ ಪಟ್ಟ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡದೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವಿಮಾನ ನಿಲ್ದಾಣ ಬೀಕೋ ಎನ್ನುತ್ತಿರುವುದು ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಜನರಿಗೆ ತೀವ್ರ ನಿರಾಸೆ ಉಂಟುಮಾಡುತ್ತಿದೆ.


ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ದೂರುತ್ತಿದ್ದರೆ ಸಂಚಾರ ನಡೆಸುತ್ತಿದ್ದ ವಿಮಾನ ಸಂಸ್ಥೆಯು ದಿಢೀರ್ ಆಗಿ ವಿಮಾನ ಸೇವೆ ರದ್ದು ಮಾಡಿ ಬೇರೆ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದರೂ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದುh ಬೇಸರದ ಸಂಗತಿಯಾಗಿದೆ. 


ವಿಧಾನಸಭೆ, ಸಂಸತ್ತಿನಲ್ಲಿ ಧ್ವನಿ ಎತ್ತಲಿ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಒಕ್ಕೊರಲಿನಿಂದ  ರಾಜ್ಯ ಸರ್ಕಾರದ ಮೂಲಭೂತ ಸೌಲಭ್ಯ ಖಾತೆಯ ಸಚಿವರ ಗಮನಸೆಳೆದು ಕೇಂದ್ರವನ್ನು ಒತ್ತಾಯಿಸುವ ಕೆಲಸ ಮಾಡಲಿ. ಹಾಗೆ ಸಂಸತ್ತಿನ ಚಳಿಗಾಲ ಅಧಿವೇಶನವು ನಡೆಯುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಲೋಕಸಭಾ ಸದಸ್ಯರು ಒಗ್ಗಟ್ಟಾಗಿ ಕೂಡಲೇ ಪ್ರಶ್ನೆ ಎತ್ತಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುವ ಅನ್ಯಾಯವನ್ನು ಬಗೆಹರಿಸುವಂತೆ ಒತ್ತಾಯಿಸಬೇಕು.


ಕಲಬುರಗಿಯಿಂದ ಬೆಂಗಳೂರು, ಮಂಗಳೂರು, ದೆಹಲಿ, ಮುಂಬೈ ತಿರುಪತಿ ಮಧ್ಯೆ ವಿಮಾನ ಸೇವೆ ಆರಂಭಿಸಬೇಕು. ಇತ್ತೀಚಿನ ವರೆಗೆ ವಿಮಾನ ಸೇವೆ ಒದಗಿಸುತ್ತಿದ್ದ ಸಂಸ್ಥೆಯು  ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರನ್ನು ಕಡೆಗಣಿಸಿ ಬೇರೆ ಮಾರ್ಗಗಳಲ್ಲಿ ಸಂಚಾರ ಪ್ರಾರಂಭಿಸಿ ಮೋಸ ಮಾಡಿರುವುದರಿಂದ ಆ ಸಂಸ್ಥೆಯನ್ನು ಹೊರತುಪಡಿಸಿ ಇತರ ಖಾಸಗಿ ಸಂಸ್ಥೆಗಳಿಗೆ ವಿಮಾನ ಸೇವೆ ಆರಂಭಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 


ಕಾರ್ಗೋ ಸೇವೆಗೂ ಉತ್ತಮ ಅವಕಾಶ

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಜಿಐ ಟ್ಯಾಗ್ ಹೊಂದಿದ ತೊಗರಿಯ ಕಣಜವಾಗಿದ್ದು ಈ ಭಾಗದಿಂದ ದೇಶ,ವಿದೇಶಗಳಿಗೆ ತೊಗರಿಬೇಳೆ ಸಾಗಿಸಲಾಗುತ್ತಿದೆ. ಅದಕ್ಕಾಗಿ ಕಲಬರಗಿ ವಿಮಾನ ನಿಲ್ದಾಣವನ್ನು ಕಾರ್ಗೋ ಸೇವೆಗೂ ಬಳಸುವ ಸಾಧ್ಯತೆ ವಿಫುಲವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಇತರ ಕೃಷಿ ವಲಯದ ಉತ್ಪನ್ನಗಳನ್ನು ಸಾಗಾಟ ಮಾಡಲು ವಿಮಾನಸೇವೆ ಅನುಕೂಲಕರವಾಗಿದೆ. ವಿಮಾನ ಸೇವೆ ಸಗಿತಗೊಂಡ ಪರಿಣಾಮವಾಗಿ ವಿಭಾಗದ ಪ್ರವಾಸೋದ್ಯಮ ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಿಗೆ ತೀವ್ರ ಪರಿಣಾಮ ಉಂಟಾಗಿದೆ.


ನವಿ ಮುಂಬಯಿ ಸಂಪರ್ಕಕ್ಕೂ ಅವಕಾಶ 

ನವಿ ಮುಂಬಯಿ ನೂತನ ವಿಮಾನ ನಿಲ್ದಾಣ ಕಾರ್ಯಾರಂಭದಿಂದಾಗಿ ಕಲಬುರಗಿ _ನವಿ ಮುಂಬಯಿ ನಡುವೆ ವಿಮಾನ ಸಂಚಾರಕ್ಕೆ ಈಗ ಅವಕಾಶವಿದ್ದು ಈಗಾಗಲೇ ರಾಜಮಂಡ್ರಿ ಮುಂತಾದ ಸಣ್ಣ ನಗರಗಳಿಂದ ನವಿ ಮುಂಬಯಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿಂದ ಕೇವಲ 30 ಕಿ. ಮೀ ದೂರವಿರುವ ಮುಂಬಯಿ ನಗರಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top