ಅವಧಿ ಮುಗಿದ 'ಗ್ಯಾರಂಟಿ'ಗಳ ಬದಿಗಿರಿಸುವುದೇ ಒಳಿತು

Upayuktha
0


 'ಗ್ಯಾರಂಟಿಗಳು' ಎಂಬ ಪಗಡೆಯ 'ಜೂಜಾಟ'ವನ್ನು ಇನ್ನು ಬದಿಗಿರಿಸುವುದು ಒಳ್ಳೆಯದು. ಗ್ಯಾರಂಟಿಯ ಗ್ಯಾರಂಟಿ ಅವಧಿ ಮುಗಿದಿದೆ


ಕಾಂಗ್ರೆಸ್‌ನವರೂ ಗಂಭೀರವಾಗಿ ಯೋಚನೆ ಮಾಡಬೇಕು. ಬಿಜೆಪಿಯವರೂ ಇನ್ನೂ ಗಂಭೀರವಾಗಿ ಯೋಚನೆ ಮಾಡಬೇಕು. NDA, INDIA ಗಳ ಎಲ್ಲ ಮಿತ್ರಪಕ್ಷಗಳೂ ಯೋಚನೆ ಮಾಡಬೇಕು.


ಮಹಾಭಾರತದಲ್ಲಿ ಗಾಂಧಾರ ದೇಶದ ಶಕುನಿಯ ಕುತಂತ್ರದಿಂದ ಕೌರವನು ಅಧಿಕಾರದ ವಿಸ್ತಾರ ಪಡೆಯುವುದಕ್ಕೆ ಅನೈತಿಕ ಪಗಡೆಯ ಜೂಜಾಟ ಘೋಷಣೆ ಮಾಡುತ್ತಾನೆ. (ಅವತ್ತಿನ ಗಾಂಧಾರ ದೇಶ ಇವತ್ತಿನ ಅಫಘಾನಿಸ್ಥಾನ. ಅಲ್ಲಿಂದ ಬಂದು ಹಸ್ಥಿನಾವತಿಯಲ್ಲಿ ನೆಲಸಿ, ಒಂದು ರೀತಿಯಲ್ಲಿ ಕುರು ಪಕ್ಷದ ಹೈಕಮಾಂಡ್ ಆದವನು!!)


ಪಾಂಡವರಿಗೆ ಅವತ್ತು ಈ ಜೂಜಾಟದಲ್ಲಿ ಭಾಗವಹಿಸುವುದು ಒತ್ತಾಯಪೂರ್ವಕ ಮತ್ತು ಅನಿವಾರ್ಯವೂ ಆಯ್ತು. ಅವತ್ತಿನ ಕ್ಷಾತ್ರ ಧರ್ಮದಲ್ಲಿ ಅದು ಅಕ್ಸಪ್ಟಬಲ್! ಪರಮ ವಿರೋಧಿ ವೈರಿ ದೇಶದ ಮೇಲೆ ಕ್ರಿಕೇಟ್ ಆಡವುದು ಇವತ್ತು ಧರ್ಮ ಆಗಿರುವಂತೆ!!?


ಸರಿ, ಪಗಡೆಯ ಜೂಜಾಟದಲ್ಲಿ ಕೌರವ ಗೆದ್ದ. ಶಕುನಿ ತಂತ್ರ ಫಲಿಸಿತು. ಪರಿಣಾಮ ಕೆಲವು ಅವಧಿಗೆ ಪಾಂಡವರಿಗೆ ಅಧಿಕಾರ ಕೈ ತಪ್ಪಿತು. ಅಧಿಕಾರ ಕೈ ತಪ್ಪಿ 12 ವರ್ಷ ಅವಧಿಗೆ ವನವಾಸ ನಂತರ 1 ವರುಷ ಅಜ್ಞಾತವಾಸ ಪಾಂಡವರಿಗಾಯ್ತು.


ಅಜ್ಞಾತವಾಸದಲ್ಲಿದ್ದ ಪಾಂಡವರ ಹಿರಿಯ ವರಿಷ್ಟ, ಧರ್ಮರಾಯ ಪಗಡೆ ಆಟದ ಕೈಚಳಕಗಳನ್ನು ಕರತಲಾಮಲಕ ಮಾಡಿಕೊಂಡ. (ಅದಕ್ಕೆ ಮೊದಲು ವನವಾಸದಲ್ಲಿದ್ದಾಗ ಅಸ್ತ್ರ ಶಸ್ತ್ರ ಸಂಗ್ರಹ ಮತ್ತು ಶಸ್ತ್ರ ಅಭ್ಯಾಸಗಳನ್ನು ಪಾಂಡವರು ಕರತಲಾಮಲಕ ಮಾಡಿಕೊಂಡಿದ್ದರು) 


ಅವಧಿ ಮುಗಿದು, ಅಧಿಕಾರ ಹಂಚಿಕೆ ಮತ್ತು ಆಸ್ತಿ ಹಂಚಿಕೆ ಚರ್ಚೆಗೆ ಬಂದಾಗ, ದುರ್ಯೋಧನ ಅಧಿಕಾರ ಹಸ್ತಾಂತರಿಸಲು ಒಪ್ಪಲಿಲ್ಲ. ಮಾವನಾದ  ಶಕುನಿಗೆ ಹೇಳಿದ "ಅಧಿಕಾರ ನನ್ನ 'ಕೈ'ಯಲ್ಲೇ ಉಳಿಯಬೇಕು. ಇನ್ನೊಮ್ಮೆ ಪಗಡೆ ಮ್ಯಾಚ್ ಏರ್ಪಡಿಸುವ" ಅಂತ.  


ಆದರೆ, ಯಾವಾಗ ಧರ್ಮರಾಯ ದಾಳ ಉರುಳಿಸಿ ಗೆಲ್ಲುವ ಕಲೆ ಕಲಿತಿದ್ದಾನೆ ಅಂತ ಶಕುನಿಗೆ ಗೊತ್ತಾಯ್ತೋ, ವನವಾಸಾದಿ ಅವಧಿ ಮುಗಿದ ಮೇಲೆ, ಇನ್ನು ದಾಳ ಉರುಳಿಸುವುದರಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು 'ಗ್ಯಾರಂಟಿ'ಯಾಗಿ ಮನವರಿಕೆಯಾದ ಶಕುನಿ "ಪುತ್ರ ದುರ್ಯೋಧನ ಪಗಡೆ ಆಡುವ ದಿನಗಳು ಮುಗಿದು ಹೋಗಿವೆ. ಅದು ಆಗುವುದಿಲ್ಲ. ಈಗ ಏನಿದ್ದರೂ ರಣರಂಗದಲ್ಲಿ ನೇರ ಕಾದಾಟ ಮಾತ್ರ" ಅಂದ.  


ಆ ಕಾಲಕ್ಕೆ ಪಗಡೆ ಆಟದಲ್ಲಿ ಕೌರವ ಪಕ್ಷಕ್ಕಿಂತ, ಪಾಂಡವ ಪಕ್ಷವೇ ಪ್ರಬಲವಾಗಿ ಗೆಲ್ಲುವ ಪಕ್ಷ ಆಗಿತ್ತು!! ವಿದೇಶಿ ವಲಸಿಗ ಶಕುನಿಗೆ ಇದು ಸ್ಪಷ್ಟವಾಗಿ ಮನವರಿಕೆಯೂ ಆಗಿತ್ತು.


ದುರ್ಯೋಧನ, ಜಯದ್ರಥ, ಕರ್ಣ, ಶಕುನಿ ಮತ್ತು ದುಶ್ಯಾಸನರು ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿ, ಪಗಡೆ ದಾಳ ತಂತ್ರವನ್ನು ಬದಿಗಿರಿಸಿದರು. ಎಂಬಲ್ಲಿಗೆ ಮಹಾಭಾರತದ ಎರಡೂ ಪಕ್ಷಗಳು ಧರ್ಮ ಯುದ್ಧದ ಕಡೆಗೆ ಮುಖ ಮಾಡಿದವು.  

(ವನವಾಸದಲ್ಲಿದ್ದಾಗ ಪಾಂಡವರು ಅಸ್ತ್ರ ಶಸ್ತ್ರ ಸಂಗ್ರಹ ಮತ್ತು ಶಸ್ತ್ರ ಅಭ್ಯಾಸಗಳನ್ನು ಹೆಚ್ಚಿಸಿಕೊಂಡಂತೆ, ಇತ್ತ ಅಧಿಕಾರದಲ್ಲಿದ ಕೌರವರು ಅಸ್ತ್ರ, ಶಸ್ತ್ರ ಅಭ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡದೇ ಹೋಗಿದ್ದು ಮುಂದೆ ಆ ಪಕ್ಷ ನಾಶ ಆಗುವುದಕ್ಕೆ ಕಾರಣವಾಯ್ತು.)


***


ವರ್ತಮಾನದ ರಾಜಕಾರಣದಲ್ಲಿ ಕಾಂಗ್ರೆಸ್‌ ಚಲಾಬಣೆಗೆ ತಂದ ಗ್ಯಾರಂಟಿ ಸ್ಕೀಮ್ ಮಹಾಭಾರತದ ಪಗಡೆ ಉರುಳಿಸಿ ಗೆಲ್ಲುವ ತಂತ್ರ ಕಥಾನಕದ ಮರು ಸೃಷ್ಟಿಯಂತಿದೆ!  


ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ತಂತ್ರದಿಂದ ಒಂದು ಅವಧಿಯ ಅಧಿಕಾರ ಪಡೆಯಿತು. ನಂತರ, ಅದೇ ಕಾಂಗ್ರೆಸ್, ಲೋಕ ಸಭೆಗೆ ಈ ತಂತ್ರವನ್ನು ವಿಸ್ತರಿಸುವ ಕಾಲಕ್ಕೆ (ಕಾಂಗ್ರೆಸ್ ದೇಶದ ಪ್ರತೀ ಕುಟುಂಬದ ಮಹಿಳೆಗೆ ತಿಂಗಳಿಗೆ ₹.8,500 ಘೋಷಣೆ ಮಾಡಿದ್ದು, ಆದರೆ, ಕಾಂಗ್ರೆಸ್‌ನ ಗ್ಯಾರಂಟಿ ಪಗಡೆ ಆಮಿಷಕ್ಕೆ ದೇಶದ ಮಹಿಳೆಯರು ಆಸಕ್ತಿ ತೋರಲಿಲ್ಲ). ಬಿಜೆಪಿ ಗ್ಯಾರಂಟಿ ಪಗಡೆ ತಂತ್ರವನ್ನು ಪ್ರಬಲವಾಗಿ ಆಕ್ಷೇಪಣೆ ಮಾಡಿದ್ದರೂ, ಅಲ್ಲಲ್ಲಿ, ಅರ್ಧ ಲೀಟರ್ ಹಾಲು, ಮೂರು ಉಚಿತ ಗ್ಯಾಸ್ ಸಿಲಿಂಡರ್‌ಗಳಂತಹ ಗ್ಯಾರಂಟಿ ಪಗಡೆಗಳನ್ನು ತಾನೂ ಉರುಳಿಸುತ್ತ ಫೀಲ್ಡಿಗೆ ಇಳಿಯಿತು! ಆಟ ಬಾರದ ಧರ್ಮರಾಯನಂತೆ ಉರುಳಿಸುವ ಅನಿವಾರ್ಯತೆಗೆ ಬೇಕಾದ ಸಂಖ್ಯೆ ಬೀಳಲಿಲ್ಲ. ವನವಾಸದಿಂದ ತಪ್ಪಿಸಿಕೊಂಡಿತು ಬಿಟ್ಟರೆ, ಸೋಲಲಿಲ್ಲ ಆದರೆ, ಆಟ ಗೆದ್ದರೂ 'ಸ್ಪಷ್ಟವಾಗಿ' ಗೆಲ್ಲಲಾಗಲಿಲ್ಲ ಎಂಬಂತಾಯ್ತು!


ನಂತರದಲ್ಲಿ ನೆಡೆದ ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ, ಬಿಜೆಪಿ ಗ್ಯಾರಂಟಿ ಪಗಡೆ ತಂತ್ರವನ್ನು ತನ್ನ ಪ್ರಣಾಳಿಕೆ ಒಳಗೆ ಸಾಂಕೇತಿಕವಾಗಿ ಸೇರಿಸಿ ಉರುಳಿಸಿತು! ಪಾಂಡವ ಪಕ್ಷಕ್ಕೆ ಪಗಡೆ ಅನಿವಾರ್ಯವಾದ ಹಾಗೆ ಬಿಜೆಪಿಗೆ 'ಗ್ಯಾರಂಟಿ' ಅಂಟಿಕೊಂಡಿತು.


ಗ್ಯಾರಂಟಿ ದಾಳವನ್ನು ಕಾಂಗ್ರೆಸ್ ಉರುಳಿಸಿದರೆ, ಗ್ಯಾರಂಟಿ ದಾಳವನ್ನು ವಿರೋಧಿಸುತ್ತಿದ್ದ ಬಿಜೆಪಿಯೂ ಅದೇ ರೀತಿಯ ಗ್ಯಾರಂಟಿ ದಾಳವನ್ನು ಆಮಿಷವಾಗಿ ಉರುಳಿಸಲು ಧರ್ಮರಾಯನಂತೆ ಕರಗತ ಮಾಡಿಕೊಂಡಿತು!! 


ಕಾಂಗ್ರೆಸ್ಸೂ ನಿರೀಕ್ಷಿಸದಂತೆ ಗ್ಯಾರಂಟಿ ದಾಳ ಉರುಳಿಸುವಿಕೆಯಲ್ಲಿ ಬಿಜೆಪಿ ಕಾಂಗ್ರೆಸ್‌ನ್ನೂ ಮೀರಿಸುವ ಕ್ರೀಡಾ ಪಟ್ಟುಗಳನ್ನು ಬಳಸಲು ಚಾಣಾಕ್ಷತನ ಮೆರೆಯಿತು!


ಮೊನ್ನೆಯ ಬಿಹಾರ ಕುರುಕ್ಷೇತ್ರದಲ್ಲಿ ಬಿಜೆಪಿ ಗ್ಯಾರಂಟಿ ದಾಳವನ್ನು ಹಿಡಿದು, ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಬೆರಳ ತುದಿಗೆ ಇಂಕು ಹಾಕುವ ಮೊದಲೇ, ₹.10,000 ವನ್ನು ಪ್ರತೀ ಕುಟುಂಬದ ಮಹಿಳೆಯ ಖಾತೆಗೆ ಜಮಾ ಮಾಡಿ, 'ಅಮಿತ' ಉತ್ಸಾಹದಲ್ಲಿ ಯುದ್ಧ ಕಣಕ್ಕೆ ಇಳಿಯಿತು.  ಕೃಷ್ಣ ಸಾರಥ್ಯ ವಹಿಸಿದಂತೆ ನಿತೀಶ್ ಸಾರಥ್ಯದದ ಹೋರಾಟವನ್ನು ಜನ ಅನು'ಮೋದಿ'ಸಿದರು. ಜಯ ವಧು ಬಿಹಾರದ ಹಾರವನ್ನು ಬಿಜೆಪಿಯ NDAಗೆ ಹಾಕಿದಳು.   


Your a/c No.XXXXX is credited by Rs.10,000.00 from NDA Guarantee a/c ಎಂಬ ಮೆಸೇಜ್ ಮುಂದೆ, 'ಪ್ರತೀ ಕುಟುಂಬಕ್ಕೂ ಸರಕಾರಿ ಕೆಲಸ' ಎಂಬ ಅಸಾಧ್ಯವಾದ 'ಗ್ಯಾರಂಟಿ' ಆಮಿಷ ಫಲ ನೀಡಲಿಲ್ಲ. ಕಾಂಗ್ರೆಸ್ ನೇತ್ರತ್ವದ I.N.D.I.A. ಘಟಬಂಧನದ ಅಸಧ್ಯದ ಗ್ಯಾರಂಟಿಗೆ ಮಗಧದ ಜನ ನಿರಾಕರಿಸಿದರು. ದಾಳದಲ್ಲಿ ಇಲ್ಲದೇ ಇರುವ ಲೆಕ್ಕಾಚಾರದ ಸಂಖ್ಯೆ ಉರುಳಿಸುವ ಬುದ್ಧಿ ರಹಿತ ಆಮಿಷಕ್ಕೆ, ಮಗಧ ಜನ "ನೋ" ಎಂದರು. ದಶಕಗಳ ಹಿಂದೆ ಜಂಗಲ್ ರಾಜ್ಯವಾಗಿದ್ದ ಬಿಹಾರದಲ್ಲಿ ಕಾಂಗ್ರೆಸ್‌ಗೆ ಈಗ ವನವಾಸ!!!


***


ರಾಜ್ಯದಲ್ಲಿ ಗ್ಯಾರಂಟಿ ಪಗಡೆ ಇನ್ನು ಕೆಲಸ ಮಾಡುವುದಿಲ್ಲ ಎಂಬುದು ಮತ್ತು ಅದಕ್ಕಿಂತ ಹೆಚ್ಚಾಗಿ ಗ್ಯಾರಂಟಿ ಪಗಡೆಯನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ಯಾರಂಟಿಯ ಜನಕ/ಜನನಿಯರಿಗೇ ಅರ್ಥವಾಗಿದೆ. ಗ್ಯಾರಂಟಿ ಮುಂದುವರೆದರೆ ಗುಂಡಿ ಬಿದ್ದ ರಸ್ತೆಗೆ ಬುಟ್ಟಿ ಮಣ್ಣು ಹಾಕುವುದಕ್ಕೂ ಅಸಾಧ್ಯ ಅಂತ ಪಕ್ಷದ ಯಜಮಾನ್ರು ರಾಜ್ಯದ ದೊರೆಯನ್ನೂ, ರಾಜ್ಯದ ಯುವರಾಜರನ್ನೂ ಅಕ್ಕಪಕ್ಕ ಕೂರಿಸಿಕೊಂಡು ತಿಳಿ ಹೇಳಿದ್ದೂ ಆಗಿದೆ!! ರಸ್ತೆ ಗುಂಡಿ ಹಾಗೆ ಉಳಿದಿವೆ. ರಾಜ್ಯದ ಗ್ಯಾರಂಟಿ ಗಾಡಿಗೆ ಎಕ್ಸ‌ಲೇಟ್ರೂ ಇಲ್ಲ, ಕ್ಲಚ್ಚೂ ಇಲ್ಲ.


**


ಒಂದು ದಿನ ದ್ವಾಪರದ ಮಹಾಭಾರತದ ಪಗಡೆ ದಾಳ ಸವಕಳಿ ಆದಂತೆ, ಇಂದಿನ ಭಾರತದ ಗ್ಯಾರಂಟಿ ದಾಳ ಸವಕಳಿ ಆಗಿದೆ!!


**


ಗ್ಯಾರಂಟಿ ಪಗಡೆಯನ್ನು ಭವಿಷ್ಯದಲ್ಲಿ ಮುಂದುವರಿಸುವುದು ಅಥವಾ ನಿಲ್ಲಿಸುವುದು ಎರಡೂ ಈಗ ಕಾಂಗ್ರೆಸ್ ಕೈ ಯಲ್ಲಿದೆ. 


ಅಜ್ಞಾತ ಮುಗಿಯುವ ಕಾಲಕ್ಕೆ ಪಾಂಡವರೂ ಪಗಡೆಯಲ್ಲಿ ನಿಷ್ಣಾತರಾಗಿದ್ದರು, ಪಗಡೆಯಲ್ಲಿ ಕೌರವರಿಗಿಂತ ಪಾಂಡವರೇ ಹೆಚ್ಚು ಬಲಶಾಲಿಗಳು, ತಂತ್ರಗಾರರು ಎನ್ನುವ ಕಾಲಕ್ಕೆ ಪಗಡೆ ದಾಳಗಳು ಮೂಲೆ ಸೇರಿದವು. ಅದಿನ್ನು ಪಕ್ಷಕ್ಕೆ ಬಲ ಕೊಡುವುದಿಲ್ಲ ಎಂಬುದನ್ನು ದುರ್ಯೋಧನ, ಶಕುನಿಯರು ಅರ್ಥೈಸಿಕೊಂಡಿದ್ದರು.  


ಇಲ್ಲಿ ಗಮನಿಸಬೇಕಾದ ಇನ್ನೊಂದು ಸಮೀಕರಣ ಅಂದರೆ, ಮಹಾಭಾರತದಲ್ಲಿ ಕೌರವ ಪಕ್ಷದ ಹಿರಿಯ ವರಷ್ಠ ಭೀಷ್ಮರು "ಪಗಡೆ ಆಡಿ ಅಧಿಕಾರ ಪಡೆದರೆ ಅದು ಶಾಶ್ವತ ಅಲ್ಲ. ಆಮೇಲೆ ಗುಂಡಿಗೆ ಬೀಳುತ್ತೀರಿ, ಮಣ್ಣು ತಿಂತೀರಿ" ಅಂತ ಎಚ್ಚರಿಸಿದ್ದರು.  


"ಕಾಂಗ್ರೆಸ್ ಗ್ಯಾರಂಟಿಯ ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸುವಂತೆ ಖರ್ಗೆ ಹೇಳಿದ್ದರು, ಯೋಜಿತವಲ್ಲದ ವಿಧಾನವು ದಿವಾಳಿತನ ಸೇರಿದಂತೆ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು "ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಎಚ್ಚರಿಸಿದ್ದರು." ಪತ್ರಿಕಾ ವರದಿ.


**


ಎಂಬಲ್ಲಿಗೆ ಇಂದಿನ ಮಹಾಭಾರತದ ಪಕ್ಷಗಳು, ಗ್ಯಾರಂಟಿ ದಾಳ ತಂತ್ರವನ್ನು ಬದಿಗಿರಿಸಿ, ಧರ್ಮ ಚುನಾವಣೆಗಳ ಯುದ್ಧದ ಕಡೆಗೆ ಮುಖ ಮಾಡುವುದು ಎರಡೂ ಪಕ್ಷಗಳಿಗೆ ಒಳ್ಳೆಯದು!!


ಗ್ಯಾರಂಟಿ ಪಗಡೆಯನ್ನು ಭವಿಷ್ಯದಲ್ಲಿ ಮುಂದುವರಿಸುವುದು  ಸರಿಯಲ್ಲ, ಅದರಿಂದ ಇನ್ನು ಗೆಲುವು ಸಾಧ್ಯ ಇಲ್ಲ ಎಂದು ತೀರ್ಮಾನಿಸಿ ನಿಲ್ಲಿಸುವ ನಿರ್ಣಯ ಈಗ ಕಾಂಗ್ರೆಸ್‌ ತೆಗೆದುಕೊಳ್ಳಬೇಕಾಗಿದೆ. 'ಕೈ'ಯಲ್ಲಿರುವ ಗ್ಯಾರಂಟಿ ದಾಳವನ್ನು ಬಳಸುವುದಿಲ್ಲ ಎಂದು ಮೊದಲು ಕಾಂಗ್ರೆಸ್ ನಿರ್ಣಯಿಸಬೇಕಾಗಿದೆ.


ಮುಂದಿನ ದಿನಗಳ ಚುನಾವಣೆಗಳಲ್ಲಿ, ಗ್ಯಾರಂಟಿ ಸ್ಕೀಮ್‌ನ್ನು ಕಾಂಗ್ರೆಸ್ ಹಿಂತೆಗೆದುಕೊಂಡರೆ ಕಾಂಗ್ರೆಸ್ಸೂ ಬದಕಬಹುದು, ಗ್ಯಾರಂಟಿ ಸ್ಕೀಮ್‌ಗಳನ್ನು ನಿಲ್ಲಿಸಿದರೆ ದೇಶಕ್ಕೂ ಅನುಕೂಲ ಆಗಬಹುದು. (ಗ್ಯಾರಂಟಿ ಸ್ಕೀಮ್‌ಗಿಂತ ಮೊದಲೂ ಇದ್ದ ಅನ್ನ ಭಾಗ್ಯದಂತಹ ಯೋಜನೆಗಳನ್ನು ಪುನಃ ಗ್ಯಾರಂಟಿಯಿಂದ ಹೊರತಂದು, ಅದನ್ನು ಸರಿಪಡಿಸಿ, ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಮಿತಿಗೊಳಿಸಿ, ಮುಂದುವರಿಸುವುದು ಸೂಕ್ತ).  ಅದಲ್ಲಾ ಅಂತ ಹೇಳಿ, ಗ್ಯಾರಂಟಿಗಳನ್ನು ಮುಂದುವರೆಸುವುದೇ ಆದಲ್ಲಿ ಕಾಂಗ್ರೆಸ್ ಒಂದು ದಿನ ಶಾಶ್ವತ ಅಜ್ಞಾತವಾಸ (ಕಾಂಗ್ರೆಸ್ ಮುಕ್ತ ಭಾರತ) ಅನುಭವಿಸಬೇಕಾದೀತು.


ಇದುವರೆಗೆ, ಗ್ಯಾರಂಟಿ ಪಗಡೆ ಅನ್ನುವುದು ಕಾಂಗ್ರೆಸ್‌ನ ಕ್ರಿಯೆ!! ಮತ್ತು ಬಿಜೆಪಿಗೆ ಅದನ್ನು ಪ್ರತಿ ಅನುಸರಿಸುವುದು ಒಂದು ಪ್ರತಿಕ್ರಿಯೆ!! ಆಗಿತ್ತು.


ಒಂದು ವೇಳೆ ಗ್ಯಾರಂಟಿ ಪಗಡೆಯನ್ನು ಕಾಂಗ್ರೆಸ್ ನಿಲ್ಲಿಸಿದ ಮೇಲೂ, ಬಿಜೆಪಿ ಅದನ್ನು ಮುಂದುವರಿಸಿದರೆ... ಬಿಜೆಪಿಯೂ ಬಲ ಕಳೆದುಕೊಳ್ಳುತ್ತದೆ. ಗ್ಯಾರಂಟಿಯನ್ನು ಕಾಂಗ್ರೆಸ್ ನಿಲ್ಲಿಸಿದ ಮೇಲೂ ಬಿಜೆಪಿ ಅದನ್ನು ಮುಂದುವರಿಸಿದರೆ.... ಬಿಜೆಪಿಯೂ ವನವಾಸ, ಅಜ್ಞಾತವಾಸಕ್ಕೆ ಸಿದ್ಧ ಆಗಾಬೇಕಾಗಬಹುದು!!


ಉಚಿತ ಸರ್ವಿಸ್‌ಗಳ ಗ್ಯಾರಂಟಿ ಕಾರ್ಡಿನ ಅವಧಿ ಮುಗಿದಿದೆ. ಪಕ್ಷಗಳು ಅರ್ಥೈಸಿಕೊಳ್ಳಬೇಕು ಅಷ್ಟೆ.  


ನಾಂದಿ ಇಟ್ಟ ಕೈಗಳೇ ಉದ್ಯಾಪನೆ ಮಾಡಬೇಕು!! ಅದು ಅವತ್ತಿನ ಕೌರವನಿಗೂ ಅನ್ವಯ, ಇವತ್ತಿನ ಕಾಂಗ್ರಸ್‌ಗೂ ಅನ್ವಯ.


ಕೌರವ "ಯದ್ಧ" ಅಂತ ಹೇಳಿದಾಗ, ಪಗಡೆ ನಿಷ್ಣಾತ ಧರ್ಮರಾಯ "ಪಗಡೆಯನ್ನೇ ಆಡೋಣ" ಅಂತ ಹೇಳಲಿಲ್ಲ ಎಂಬುದನ್ನು ಬಿಜೆಪಿ ನೆನಪು ಮಾಡಿಕೊಳ್ಳಬೇಕು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top