ಸಂಗೀತವೆಂಬ ಶಾಸ್ತ್ರೀಯ ಕಲೆಯೊಂದಿದೆ ಎನ್ನುವುದು ಗೊತ್ತಾದಾಗ ಬಹುಶಃ ನಾನು ಆರನೆಯ ತರಗತಿಯಲ್ಲಿದ್ದೆ. ಅಲ್ಲಿಯವರೆಗೂ ಗೇಯವಾದ ಎಲ್ಲವೂ ನನ್ನ ಮಟ್ಟಿಗೆ ಹಾಡುಗಳು ಅಷ್ಟೇ ಆಗಿದ್ದವು. ನಾನಿದ್ದ ಆ ಪುಟ್ಟ ಹಳ್ಳಿಯಲ್ಲಿ ಇದಕ್ಕಿಂತ ಹೆಚ್ಚು ತಿಳುವಳಿಕೆಗೆ ಅವಕಾಶವವೂ ಇರಲಿಲ್ಲ. ಸಂಗೀತ ಎಂಬುದರ ಅರ್ಥ ಯಾವತ್ತು ತಿಳಿಯಿತೋ, ನಂತರ ಅದರ ವೈಶಿಷ್ಟ್ಯಗಳು, ಭಿನ್ನ ಪ್ರಕಾರಗಳು ಒಂದೊಂದಾಗಿ ಅರ್ಥವಾಗುತ್ತಾ ಹೋಯಿತು. ಕಾಲ ಕಳೆದಂತೆಲ್ಲ ಸಂಗೀತ ತನ್ನ ಒಡಲೊಳಗೆ ಕಲ್ಪನಾತೀತವಾದ ಮುತ್ತು ರತ್ನಗಳನ್ನು ಹುದುಗಿಸಿಕೊಂಡ ಮಹಾಸಾಗರ ಎಂದು ಗೊತ್ತಾಗಿ ಅದರ ಮೇಲಿದ್ದ ಪ್ರೀತಿಯು, ಗೌರವವೂ ಭಕ್ತಿಯೂ ಆಗಿ ಬೆಳೆಯಿತು; ಅರಿವೇ ಇಲ್ಲದಂತೆ ಬದುಕಿನ ಭಾಗವೂ ಆಯಿತು. ಮನಸು ಹೀಗೆ ಹಳೆಯ ದಿನಗಳಿಗೆ ಸವಾರಿ ಹೋದದ್ದು ನನ್ನೂರ ಹುಡುಗಿ ಚಿತ್ರಾ ಸಂತೋಷ್ ಬರೆದ ʼಹಾಡು ತೊರೆಯ ಜಾಡು - ಸಂಗೀತ ಸಾಧಕರ ಬದುಕಿನ ಕಥೆಗಳುʼ ಪುಸ್ತಕ ಓದುತ್ತಿರುವಾಗ.
ಇದು ಕೇವಲ ಸಂಗೀತಗಾರರ ಬದುಕಿನ ಕಥೆಗಳಲ್ಲ, ಇಲ್ಲಿ ಹಾಡದೆಯೂ ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರ ಕಥೆಗಳಿವೆ. ಹಾಡಿಗೆ ಜೊತೆಯಾಗಿ ಮೆರುಗು ಹೆಚ್ಚಿಸುವ ತಬಲಾ, ಹಾರ್ಮೋನಿಯಂ, ಕೊಳಲು ಮುಂತಾದ ವಾದ್ಯಗಳ ಪ್ರಾಮುಖ್ಯ ನಮಗೆಲ್ಲ ಗೊತ್ತಿರುವಂಥದ್ದು. ನಮ್ಮ ಸುತ್ತಮುತ್ತ ಅಥವಾ ನಮ್ಮ ದೇಶದಲ್ಲಿ ಪಕ್ಕ ವಾದ್ಯಗಳನ್ನು ನುಡಿಸಿ ಖ್ಯಾತರಾದವರ ಹೆಸರುಗಳು ಗೊತ್ತಿವೆ. ಆದರೆ ಅವುಗಳನ್ನು ತಯಾರಿಸಿ, ಶ್ರುತಿಗೂಡಿಸಿ ಕಲಾದೇವಿಗೆ ಸಮರ್ಪಿಸಿದ ಕಲಾ ದೀವಿಗೆಗಳ ಬಗ್ಗೆ ಗೊತ್ತಿದೆಯಾ ಕೇಳಿದರೆ ಬಹಳಷ್ಟು ಮಂದಿಯ ಉತ್ತರ “ಇಲ್ಲ” ಎಂಬುದೇ ಆಗಿರುತ್ತದೆ. ಈ ಸಂಕಲನದ ಒಡಲಲ್ಲಿ ಅಂಥ ಅನೇಕರ ಗಾಥೆಗಳು ಬೆಚ್ಚಗೆ ಕುಳಿತಿವೆ. ಈ ಪುಸ್ತಕವನ್ನು ಓದದೇ ಹೋಗಿದ್ದರೆ ಶಿರಸಿಯ ನೆಟ್ಟಗಾರದ ಕೊಳಲು ತಯಾರಿಸುವ ಮಂಜುನಾಥ್ ಹೆಗಡೆಯವರು, ಮೀರಜ್ ಮುತ್ತು, ಹತ್ತು ಸಾವಿರ ತಾಳವಾದ್ಯಗಳಿಗೆ ಶ್ರುತಿಯಾದ ಅಶ್ವತ್ಥಮ್ಮ, ಮುಂತಾದವರನ್ನು ಅರಿಯುವ ಯಾವುದೇ ಸಾಧ್ಯತೆಯೂ ಇರಲಿಲ್ಲ. ಗಾಯಕರ ಹಾಡು ಸಮರ್ಥವಾಗಿ ಶ್ರೋತೃಗಳ ಎದೆಗಿಳಿಯುವಲ್ಲಿ ಪಕ್ಕ ವಾದ್ಯದವರ ಕೊಡುಗೆ, ಸಂಗೀತಗಾರರ ಸಾಮರ್ಥ್ಯದಷ್ಟೇ ಮುಖ್ಯವಾದದ್ದು. ಯಾವುದೇ ವಾದ್ಯದಿಂದ ಹೊಮ್ಮುವ ನಾದದ ಹಿಂದೆ ಅದನ್ನು ತಯಾರಿಸಿದವರ ಶ್ರಮವೂ ಅಷ್ಟೇ ಅಮೂಲ್ಯವೆಂಬ ಯೋಚನೆ ಬರುವುದೇ ಕಡಿಮೆ. ಅವರು ಎಲೆ ಮರೆಯ ಕಾಯಿಗಳಾಗಿಯೇ ಜಗತ್ತಿನಿಂದ ಹೊರಟುಬಿಡುತ್ತಾರೆ. ಚಿತ್ರಾ ಅಕ್ಷರಶಃ ನಾಡಿನ ತುಂಬಾ ಅಲೆದಾಡಿ ಅಂಥವರ ಸಾಧನೆಯನ್ನು ಗುರುತಿಸಿ ಗೌರವಿಸಿದ್ದಾಳೆ. ದಶಕಗಳ ಹಿಂದೆ ಕದ್ರಿ ಗೋಪಾಲನಾಥ್ ಮತ್ತು ಪ್ರವೀಣ್ ಗೋಡ್ಖಿಂಡಿಯವರ ಜುಗುಲ್ ಬಂದಿ ರಾಗ್-ರಂಗ್ ಜನಪ್ರಿಯತೆಯ ಉತ್ತುಂಗವೇರಿತ್ತು. ಆ ರಾಗ ಮಾಲಿಕೆಗೆ ಕೊಳಲಿನ ರಂಗು ತುಂಬಿದ್ದು ಇದೇ ಮಂಜುನಾಥ್ ಹೆಗಡೆಯವರು ಎಂಬುದು ನನಗೆ ಈಗಷ್ಟೇ ಗೊತ್ತಾಯಿತು. ನಮ್ಮ ವಾಹಿನಿಗಳು ಸಾಧಕರ ಕುರ್ಚಿಯಲ್ಲಿ ಕೂರಿಸಿ ಗೌರವಿಸ ಬೇಕಾಗಿರುವುದು ಇಂಥವರನ್ನು!
ಅದೇ ರೀತಿ ತೆರೆಯ ಮರೆಯಲ್ಲಿರುವ ಹಲವು ಆಚರಣೆಗಳೂ ಸಂಗೀತ ಲೋಕದಲ್ಲಿವೆ. ‘ಚಿಲ್ಲಾ’ ಎಂಬ ಪವಿತ್ರ ವ್ರತ ಅವುಗಳಲ್ಲೊಂದು. ಹೊರ ಪ್ರಪಂಚದಿಂದ ಸಂಪೂರ್ಣ ದೂರವಿದ್ದು, ಸ್ವತಃ ದಿಗ್ಬಂಧನ ಹಾಕಿಕೊಂಡು, ಕೇವಲ ಸಂಗೀತ ಸಾಧನೆಯಲ್ಲಿ ಮಾತ್ರ ಲೀನವಾಗಿ ನಲ್ವತ್ತು ದಿನಗಳ ಕಾಲ ಒಂದೇ ಕೋಣೆಯೊಳಗಿರುವುದು ತಾಳ್ಮೆಯ ಜೊತೆ ದೃಢ ಭಕ್ತಿಗೂ ಸವಾಲು! ಇದರಂತೆಯೇ ಚಾಮರಾಜಪೇಟೆಯ ಕೋಟೆ ಮೈದಾನದ ರಾಮನವಮಿ ಸಂಗೀತೋತ್ಸವ, ಮೀರಜ್ʼನ ದರ್ಗಾದಲ್ಲಿ ನಡೆಯುವ ವಾರ್ಷಿಕ ಸಂಗೀತೋತ್ಸವದಂಥ ಸಂಗೀತಾರಾಧನೆಗಳ ಹಿನ್ನೆಲೆಗಳೂ ನನಗೆ ಹೊಸದು. ನಾನು ಹುಟ್ಟಿ ಬೆಳೆದ ಜಿಲ್ಲೆಯ ಕರುಂಬಿತ್ತಿಲಿನಲ್ಲಿ ನಡೆಯುವ ಸಂಗೀತ ಉತ್ಸವದ ಬಗ್ಗೆ ಇತ್ತೀಚೆಗಷ್ಟೇ ಗೊತ್ತಾಗಿತ್ತು. ಕಾರ್ಪೊರೇಟ್ ಜಗತ್ತಿನಲ್ಲಿ ಸಂಗೀತ ಉದ್ಯಮವಾಗಿ ಬೆಳೆಯುತ್ತಿದೆ ಎಂಬ ಆತಂಕದ ನಡುವೆ, ಅದೇ ಜಗತ್ತಿನ ಇನ್ನೊಂದೆಡೆಯಲ್ಲಿ ಸಂಗೀತ ಸಂಸ್ಕಾರವಾಗಿಯೂ ಬೆಳೆಯುತ್ತಿದೆ ಎಂಬ ಭರವಸೆಯನ್ನು ಇಂಥ ಉತ್ಸವಗಳು ಜೀವಂತವಾಗಿರಿಸುತ್ತವೆ.
ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ ಅವರು ಒಂದೆಡೆ “ಆ ದಿನಗಳು ಬಲು ಕಷ್ಟದವು ಕೊಲ್ಕತ್ತಾದಲ್ಲಿದ್ದೆ ಊಟದ ಪ್ರಮಾಣ ಕಡಿಮೆಯಾಗುತ್ತಿತ್ತು… ನೀರು ಕುಡಿಯುತ್ತಿದ್ದೆ” ಎಂಬ ಮಾತುಗಳನ್ನು ಓದಿದಾಗ ಸಾಧನೆ ಏನನ್ನು ಬೇಡುತ್ತದೆ ಎಂಬುದು ಮತ್ತೆ ಶ್ರುತಪಡುತ್ತದೆ. ದೆಹಲಿಗೆ ಪದ್ಮಭೂಷಣ ಪ್ರಶಸ್ತಿ ಪಡೆಯಲು ಹೋದಾಗ ನಿಜಮುದ್ದೀನ್ ಎಕ್ಸ್ಪ್ರೆಸ್ಸಿನಲ್ಲಿ ದಿಲ್ಲಿಗೆ ಹೋದ ರಾಜಗುರುಗಳು, ಆಯೋಜಕರು ವಿಮಾನದ ಪ್ರಯಾಣ ವೆಚ್ಚ ನೀಡಲು ಬಂದಾಗ “ರೈಲಿನಲ್ಲಿ ಬಂದಿದ್ದೇನೆ ನನಗೆ ಅದರ ದರವನ್ನು ಮಾತ್ರವೇ ನೀಡಿ” ಎಂದರಂತೆ. ಇಂಥದ್ದನ್ನೆಲ್ಲ ದಾಖಲಿಸುವ ಮೂಲಕ ಸಾಧಕರ ಸಂಗೀತಯಾನ ಮಾತ್ರವಲ್ಲ, ಅವರ ವ್ಯಕ್ತಿತ್ವದ ಹಲವು ಆಯಾಮಗಳನ್ನೂ ಕಟ್ಟಿ ಕೊಟ್ಟಿದ್ದಾಳೆ.
ಯಾವುದೇ ವಿಚಾರದಲ್ಲಿ ಅತ್ತ ದೃಢ ನಂಬಿಕೆಯೂ ಇಲ್ಲದೆ ಇತ್ತ ಅಪನಂಬಿಕೆಯೂ ಅಲ್ಲದೆ ಬದುಕುತ್ತಿರುವ ಈ ಕಾಲಘಟ್ಟದಲ್ಲಿರುವ ನಾನು, ಮೇಘ ಮಲ್ಹಾರ ಹಾಡಿ ರಾಜಗುರುಗಳು ಮಳೆ ಬರಿಸಿದ ಘಟನೆಯನ್ನು ಕಲ್ಪಿಸಿಕೊಂಡೇ ರೋಮಾಂಚಿತಳಾದೆ. ಇಲ್ಲಿ ಒಂದು ವಿಚಾರವನ್ನು ನಾನು ಉಲ್ಲೇಖಿಸಲೇಬೇಕು; ರಾಜ ಗುರುಗಳ ಶ್ರೀಮತಿಯವರಾದ ಭಾರತೀ ದೇವಿಯವರ ಬಗ್ಗೆ ಬರೆಯುವಾಗ ಈಕೆ ಗುರುಮಾತೆ ಎನ್ನುತ್ತಾಳೆ. ಈಕೆ ರಾಜಗುರುಗಳ ನೇರ ಶಿಷ್ಯೆ ಅಲ್ಲದಿದ್ದರೂ ಕೂಡ ಸಂಗೀತ ದಿಗ್ಗಜರನ್ನೆಲ್ಲ ಗುರು ಸ್ಥಾನದಲ್ಲಿರಿಸಿ ಅವರನ್ನು ಗುರುಮಾತೆ ಎನ್ನುವಾಗ ಈಕೆಗಿರುವ ಸಂಗೀತ ಶ್ರದ್ಧೆ ಮತ್ತು ಕಲಾಭಕ್ತಿ ಮನಮುಟ್ಟಿತು. ಹಾಗೆಯೇ ಲುಧಿಯಾನದ ಭೈನೀಸಾಹೀಬ್ ಎಂಬ ಪುಟ್ಟ ಹಳ್ಳಿಯಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲದೆ ಪ್ರತಿ ಮಗುವಿಗೂ ಐದನೇ ವರ್ಷದಿಂದ ಸಂಗೀತ ಅಭ್ಯಾಸ ಶುರುವಾಗುತ್ತದೆ ಎಂಬುದು ಎಂಬುದನ್ನು ನೆನೆದೇ ವಿಸ್ಮಯಗೊಂಡೆ. “ಸಂಗೀತದ ಸುಗಂಧ ಪ್ರತಿ ಮಗುವನ್ನು ಸ್ಪರ್ಶಿಸಬೇಕು” ಎಂದ ಸದ್ಗುರು ಪ್ರತಾಪ್ ಸಿಂಗ್ ಅವರ ಮಾತನ್ನು ಇಂದಿನ ಪೋಷಕರು ಅರ್ಥ ಮಾಡಿಕೊಂಡು ಕಲಾಸಕ್ತ ಮಕ್ಕಳಿಗೆ ಅದೇ ದಾರಿಯಲ್ಲಿ ನಡೆಯುವ ಅವಕಾಶ ನೀಡಿದ್ದರೆ, ಅದೆಷ್ಟೋ ಕಲಾವಿದರು ನಮ್ಮ ನಡುವಿರುತ್ತಿದ್ದರು ಮತ್ತು ಓದಿನ ಒತ್ತಡದಿಂದ ಸಂಭವಿಸುವ ಕೆಲವಾದರೂ ಆತ್ಮಹತ್ಯೆಗಳನ್ನು ತಡೆಯಬಹುದಿತ್ತು! ಈ ಬರಹವನ್ನು ಓದಿ ಮುಗಿಸುವಷ್ಟರಲ್ಲಿ, ಒಂದು ಸಲವಾದರೂ ಭೈನೀಸಾಹೀಬ್ಗೆ ಹೋಗಬೇಕು; ಬೆಳ್ಳಂಬೆಳಗ್ಗೆ ಉದಯ ಸೂರ್ಯನ ಜೊತೆ ತಂಬೂ,ರಿ ದಿಲ್ರುಬಾ, ಸಿತಾರಾ ಶ್ರುತಿಗೂಡುವುದನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆಯೂ ಹುಟ್ಟಿತು. ಸಂಗೀತ ಪ್ರಿಯರಿಗೆ ಈ ಪುಸ್ತಕವನ್ನು ಓದಿದ ನಂತರ ಒಂದಷ್ಟು ಪ್ರವಾಸಗಳ ಹುಕಿ ಬಂದರೆ ಅಚ್ಚರಿಯಿಲ್ಲ.
ಸುಮಾರು ಆರು ದಶಕಗಳ ಹಿಂದೆ, ಇವತ್ತಿಗಿಂತಲೂ ಹೆಚ್ಚು ಪುರುಷ ಪ್ರಧಾನವಾದ ಸಮಾಜದಲ್ಲಿ ನಾದೋಪಾಸನೆ ಮಾಡಿ ಬೆಳಗಿದ ಸಾಧಕಿಯರ ಕಥೆಗಳು ಮನತುಂಬಿದವು. ಇಲ್ಲಿರುವ ಕೆಲವು ಸಾಧಕಿಯರ ಮಾಹಿತಿಯಿರಲಿ, ಹೆಸರು ಕೂಡ ನನಗೆ ಗೊತ್ತಿರಲಿಲ್ಲ. ʼದಾಸಿʼ ಎಂಬ ಮೂದಲಿಕೆಯನ್ನು ಮೆಟ್ಟಿ ನಿಂತು ಸಂಗೀತ ಸಾಮ್ರಾಜ್ಞಿಯಾದ ಬೆಂಗಳೂರು ನಾಗರತ್ನಮ್ಮ, ವಚನಗಳನ್ನು ಮೆರೆಸಿದ ನೀಲಾ ಕೊಡ್ಲಿ, ಗಂಡಸರಷ್ಟೇ ಇದ್ದ ಘಟಂ ಲೋಕಕ್ಕೆ ದಿಟ್ಟ ಹೆಜ್ಜೆಯಿಟ್ಟು ಮೆರೆದ ಸುಕನ್ಯಾ ಎಲ್ಲರೂ ನನ್ನ ಮಟ್ಟಿಗೆ ಹೊಸಬರು!
“ದಿವಾನಾ ಬನಾನ ಹೈ ತೋ, ದಿವಾನಾ ಬನಾದೇ” ಎಂಬ ಸಾಲಿನ ಜೊತೆಯೇ ಇರುವ ಬೇಗಂ ಅಖ್ತರ್ ಅವರದು ಕರುಳು ಹಿಂಡುವ ಕಥೆ. ಅಂಥ ಸ್ವರ ಮಾಧುರ್ಯವನ್ನು ಹೊಡೆದು ಬಡಿದು ಮನೆಯ ಒಳಗಿರಿಸುವ ಗಂಡ, ಧರ್ಮದ ಹೆಸರಿನಲ್ಲಿ ನೆನೆಗುದಿಗೆ ಬಿದ್ದ ಕಲೆ; ಅದರಲ್ಲೂ ವಿಶೇಷವಾಗಿ ಅದೆಷ್ಟು ಹೆಣ್ಣು ಪ್ರತಿಭೆಗಳು ಹೀಗಾಗಿರಬಹುದೆಂದು ನೆನೆದೇ ಕಣ್ಣೀರಾದೆ. ನೊಂದವರ, ಶೋಷಿತರ ಕಂಬನಿ ಒರೆಸುವುದಕ್ಕಾಗಿಯೇ ಸೃಷ್ಟಿಯಾದ ನಮ್ಮ ಸಂವಿಧಾನ ಇವತ್ತಿಗೂ ಇಂಥವರ ಕಣ್ಣೀರನ್ನು ಒರೆಸಲು ಸಾಧ್ಯವಾಗದೇ ಇರುವುದು ನಮ್ಮ ದೇಶದ ದುರಂತವೂ ಹೌದು.
ಇಂಥ ಸರಣಿಗಳನ್ನು, ಅದೂ ಅಂಕಣವಾಗಿ ಬರೆಯುವಾಗ ಪ್ರತಿ ಲೇಖನದಲ್ಲೂ ರೋಚಕತೆಯನ್ನು ತುಂಬಲು ಸಾಧ್ಯವಿಲ್ಲ, ಮಾಹಿತಿಗಳು ಕೇವಲ ವರದಿಯಂತೆ ಕಾಣುವ ಸಂಭವವೇ ಹೆಚ್ಚು ಎನ್ನುವುದು ಈಕೆಗೆ ಅರಿವಿದೆ. ಹಾಗಾಗದಂತೆ ರಸವತ್ತಾಗಿ ಪ್ರಸ್ತುತಪಡಿಸುವ ಕಲೆ ಇವಳಿಗೆ ಸಿದ್ಧಿಸಿದೆ. ಆಕರ್ಷಕ ತಲೆಬರಹಗಳು ಕೂಡ ಸೆಳೆಯುತ್ತವೆ. ಒಟ್ಟು ಐವತ್ತು ಬಿಡಿ ಬರಹಗಳ ಸಂಕಲನ ಆದ ಕಾರಣ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬೇಕೆಂಬ ಧಾವಂತವಿಲ್ಲ. ಯಾವುದೇ ಪುಟ ತೆರೆದು ಓದಲು ಶುರುವಿಟ್ಟರೂ ಸಂಗೀತ ಕೇಳಿದಷ್ಟೇ ಆನಂದ ಆವರಿಸುತ್ತದೆ. ಓದಿ ಮುಗಿಸಿ ಪುಸ್ತಕ ಕೆಳಗಿಟ್ಟಾಗ ಎಷ್ಟು ಖುಷಿಯಾಯಿತೋ, ಇಷ್ಟೊಂದು ನಾದಮಾಂತ್ರಿಕರನ್ನು ಭೇಟಿಯಾದವಳ ಅದೃಷ್ಟದ ಬಗ್ಗೆ ಅಷ್ಟೇ ಅಸೂಯೆ ಹುಟ್ಟಿದ್ದೂ ನಿಜ! ಇಂಥ ರಸವತ್ತಾದ ಇನ್ನೊಂದಷ್ಟು ಪುಸ್ತಕಗಳು ಚಿತ್ರಾಳ ಲೇಖನಿಗೆ ಒಲಿದು ಕನ್ನಡಮ್ಮನ ಅಡಿದಾವರೆಗಳಿಗೆ ಸಲ್ಲಲಿ ಎಂಬುದು ನನ್ನ ಆಶಯ ಮತ್ತು ಹಾರೈಕೆ.
- ಶಮಾ ನಂದಿಬೆಟ್ಟ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


