ಸಾಧಿಸುವ ಛಲವಿದ್ದರೆ ಪ್ರತಿಫಲ ಖಚಿತ: ಸುವರ್ಣ ವಿ ನಾಯಕ್

Upayuktha
0

ಶಿವಮೊಗ್ಗದ ಮನಃಸ್ಪೂರ್ತಿ ವಿಶೇಷ ಶಾಲೆಯಲ್ಲಿ 'ಸ್ಫೂರ್ತಿ ವೈಭವ-2025' ಕಾರ್ಯಕ್ರಮ





ಶಿವಮೊಗ್ಗ: ಮನಃಸ್ಪೂರ್ತಿ ವಿಶೇಷ ಶಾಲೆ (ರಿ) ಮಾನಸಾಧಾರಾ ಟ್ರಸ್ಟ್ (ರಿ) ಮಾನಸ ಸಮೂಹ ಸಂಸ್ಥೆಗಳ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜವನ್ನು ರೂಪಿಸೋಣ ಎಂಬ ಘೋಷವಾಕ್ಯದೊಂದಿಗೆ "ಸ್ಪೂರ್ತಿ ವೈಭವ- 2025" ಎಂಬ ಜಿಲ್ಲಾಮಟ್ಟದ ವಿಶೇಷ ಚೇತನರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿತ್ತು.


ಈ ಕಾರ್ಯಕ್ರಮದ ಉದ್ಘಾಟಕರಾದ ಶಿವಮೊಗ್ಗ ಜಿಲ್ಲೆಯ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಸುವರ್ಣ ವಿ. ನಾಯಕ್ ರವರು ಮಾತನಾಡಿ "ಶಿವಮೊಗ್ಗ ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ಸಾಕಷ್ಟು ಸಂಘ- ಸಂಸ್ಥೆಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಾ ಶ್ರಮವೂ ನಿನ್ನದೇ, ಸಮಯವೂ ನಿನ್ನದೇ, ಸಾಧಿಸುವ ಛಲವಿದ್ದರೆ ಪ್ರತಿಫಲವೂ ನಿನ್ನದೇ ಎಂಬ ಉಕ್ತಿಯಂತೆ ವಿಶೇಷ ಚೇತನರಾದರೂ ಯಾವುದೇ ಕ್ಷೇತ್ರದಲ್ಲಾದರೂ ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಿಬಿಡಬಹುದು ಎಂದರು.


ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಅಂಗವಿಕಲರ ಸೇವೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಹಾಗೂ ಮಾತೃವಾತ್ಸಲ್ಯ ವಿಶೇಷ ಶಾಲೆಯ ಪ್ರಾಂಶುಪಾಲರಾದ ತೀರ್ಥಹಳ್ಳಿಯ ಶ್ರೀಯುತ ಕುಮಾರ್ ರವರು ಮಾತನಾಡಿ "ಸಾಧನೆ ಮಾಡಲೇಬೇಕು ಎಂಬ ಪ್ರಬಲವಾದ ನಂಬಿಕೆ- ಉದ್ದೇಶಗಳಿದ್ದರೆ ಯಾವ ಅಂಗವೈಕಲ್ಯವೂ ಭಾದಿಸದು. ಸಾಧನೆ ಮಾಡುವ ಛಲವೇ ಸ್ಪೂರ್ತಿಯಾದರೆ ಅದುವೇ ಸ್ಫೂರ್ತಿ ವೈಭವ" ಎಂದು ಹೇಳಿದರು.


ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ ಎ.ಪೈ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ "ವಿಶೇಷ ಚೇತನ ಮಕ್ಕಳಿಗೆ ತರಬೇತಿ ನೀಡುವಾಗ ವಿಶೇಷ ಶಿಕ್ಷಕರ ಸಂಯಮ- ತಾಳ್ಮೆ ಅತ್ಯಂತ ಶ್ಲಾಘನೀಯ. ಹಾಗೆಯೇ ಪ್ರತಿಯೊಂದು ವಿಶೇಷ ಚೇತನ ಮಗುವಿಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ. ಆದಷ್ಟು ಬೇಗ ವಿಶೇಷ ಚೇತನರ ಕ್ಷೇತ್ರದಲ್ಲಿ ನಮ್ಮ ಶಿವಮೊಗ್ಗವು ಮಾದರಿ ಜಿಲ್ಲೆಯಾಗಲಿ" ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾನಸ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ವಿ.ಶಾನುಭಾಗ್ ಹಾಗೂ ಮಾನಸ ಸಂಸ್ಥೆಯ ಫಿಜಿಯೋಥೆರಪಿ ವಿಭಾಗದ ಡಾ.ರಾಧಿಕಾ ಪ್ರಭುರವರು ಗೌರವ ಉಪಸ್ಥಿತಿ ವಹಿಸಿದ್ದರು. ಮನಃಸ್ಪೂರ್ತಿಯ ಪ್ರಾಂಶುಪಾಲರಾದ ಶ್ರೀಮತಿ ರಂಗನಾಯಕಿಯವರು ಈ ಕಾರ್ಯಕ್ರಮದ ಒಟ್ಟಾರೆ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ "ಪ್ರತಿಯೊಂದು ವಿಶೇಷ ಚೇತನ ಮಗುವಿನಲ್ಲೂ ಒಂದು ವಿಭಿನ್ನ ರೀತಿಯ ಸಾಮರ್ಥ್ಯವಿರುತ್ತದೆ. ಆ ಸಾಮರ್ಥ್ಯದ ಶಕ್ತಿಯು ಹೊರಹೊಮ್ಮಿ ಸಾಧನೆ ಮಾಡಲು ಸ್ಫೂರ್ತಿ ನೀಡುವಂತಹ ವಿಶೇಷವಾದ ಕಾರ್ಯಕ್ರಮವೇ ಈ ಸ್ಫೂರ್ತಿವೈಭವ ಕಾರ್ಯಕ್ರಮ" ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಅಂದರ ವಿಶ್ವಕಪ್ ಕ್ರಿಕೆಟ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕು.ಕಾವ್ಯ ಹಾಗೂ ಅಥ್ಲೆಟಿಕ್ಸ್ ಮತ್ತು ಥ್ರೋ ಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಜ್ಯೋತಿ ಮತ್ತು ಕುಸ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕು.ಗೌರಮ್ಮರವರಿಗೆ ಸನ್ಮಾನಿಸಲಾಯಿತು. ಮನಃಸ್ಪೂರ್ತಿ ವಿಶೇಷ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಅರುಣ್ ಕುಮಾರ್ ರವರು ಸ್ವಾಗತಿಸಿದರೆ ಶಿಕ್ಷಕರಾದ ಶ್ರೀ ಮತಿ ಪದ್ಮಿನಿಯವರು ವಂದಿಸಿದರು. ಮನಃಶಾಸ್ತ್ರಜ್ಞರಾದ ಕು.ಶಿಲ್ಪಾ ಪ್ರಭಾಕರ್ ಹಾಗೂ ಕು.ಭಾಗ್ಯಶ್ರೀಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.


ಮನಃಸ್ಪೂರ್ತಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಮಾನಸ ಸಮೂಹ ಸಂಸ್ಥೆಯ ಸಿಬ್ಬಂದಿ ವರ್ಗದವರನ್ನೂ ಒಳಗೊಂಡಂತೆ 8 ಕ್ಕೂ ಹೆಚ್ಚು ವಿಶೇಷ ಚೇತನ ಶಾಲೆಗಳು ಹಾಗೂ 400 ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಹಾಗೂ ಅವರ ಪೋಷಕರು ವಿಶೇಷ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top