2025 ರ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ
ಮಂಗಳೂರು: ಅಖಿಲ ಭಾರತ ಗೃಹರಕ್ಷಕದಳ ಉತ್ಥಾನ ದಿನಾಚರಣೆ ಶನಿವಾರ ಬೆಳಿಗ್ಗೆ 10:30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್ ಮಂಗಳೂರು ಇಲ್ಲಿ ಗೃಹರಕ್ಷಕರ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ|| ಜಿ. ಸಂತೋಷ್ ಕುಮಾರ್, ಕೆಎಎಸ್, ಹೆಚ್ಚುವರಿ ಉಪಾಯುಕ್ತರು ಹಾಗೂ ಮ್ಯಾನೇಜಿಂಗ್ ಡೈರಕ್ಟರ್, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರಪಾಲಿಕೆ ದಕ್ಷಿಣ ಕನ್ನಡ ಜಿಲ್ಲೆ, ಮತ್ತು ಮತ್ತೋರ್ವ ಅತಿಥಿ ಡಾ|| ಮುರಲೀಮೋಹನ್ ಚೂಂತಾರು ಮಾಜಿ ಸಮಾದೇಷ್ಟರು ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಶ್ರೀಮತಿ ಕವಿತಾ ಕೆ.ಸಿ., ಸಹಾಯಕ ಆಡಳಿತಾಧಿಕಾರಿಗಳು, ಗೃಹರಕ್ಷಕದಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ|| ಜಿ. ಸಂತೋಷ್ ಕುಮಾರ್, ಇವರು ಖಾಕಿ ಸಮವಸ್ತ್ರವನ್ನು ನೋಡಿದಾಗ ನನಗೆ ಗೌರವ ಮತ್ತು ಹೆಮ್ಮೆ ಎನಿಸುತ್ತದೆ, ಖಾಕಿಯನ್ನು ಮುಟ್ಟಬೇಕು ಅನ್ನಿಸುತ್ತದೆ. ಖಾಕಿ ಸಮವಸ್ತ್ರವನ್ನು ಧರಿಸಿದಾಗ ಸಾರ್ವಜನಿಕರಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಹಾಗೂ ತಮ್ಮ ಆರೋಗ್ಯವನ್ನು ಕಾಪಾಡುವಂತೆ ಸಮವಸ್ತçದಲ್ಲಿರುವಾಗ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವುದು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವ ಗೃಹರಕ್ಷಕರಿಗೆ ಗೃಹರಕ್ಷಕ ದಿನಾಚರಣೆ ಅಂಗವಾಗಿ ಅಭಿನಂದಿಸಿದರು.
ಇನ್ನೋರ್ವ ಅತಿಥಿ ಡಾ|| ಮುರಲೀಮೋಹನ್ ಚೂಂತಾರು ಇವರು ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ಗೃಹರಕ್ಷಕರು ದೇಶದ ಒಳಗೆ ಕಾಯುವ ಸೈನಿಕರು, ಇವರು ಸಮಾಜಸೇವೆ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಜೀವರಕ್ಷಣೆ ಹಾಗೂ ಆಸ್ತಿ ಪಾಸ್ತಿಗಳನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಗೃಹರಕ್ಷಕ ದಳದಲ್ಲಿ ತಾವು 10 ವರ್ಷಗಳ ಸೇವೆ ಸಲ್ಲಿಸಿರುವ ಬಗ್ಗೆ ನನಗೆ ಹೆಮ್ಮೆ ಇದೆ ಹಾಗೂ ಈ ಇಲಾಖೆ ಎಲ್ಲಾ ಕಡೆ ನನ್ನನ್ನು ಗುರುತಿಸುವಂತೆ ಮಾಡಿದೆ ಎಂದು ನುಡಿದರು. ಗೃಹರಕ್ಷಕ ದಳಕ್ಕೆ ಸೇರಿ ಸಮವಸ್ತ್ರ ಧರಿಸಿದಾಗ ಎಲ್ಲಾ ಇಲಾಖೆಗಳ ಪರಿಚಯವಾಗುತ್ತದೆ. ಗೃಹರಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವುದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಗೃಹರಕ್ಷಕದಳದ ಪ್ರಭಾರ ಸಮಾದೇಷ್ಟರಾದ ಶ್ರೀ ಅನಿಲ್ ಕುಮಾರ್ ಎಸ್. ಬೂಮರಡ್ಡಿ ಇವರು ಗೃಹರಕ್ಷಕ ದಳ ಕಛೇರಿಯ ವಾರ್ಷಿಕ ವರದಿ ವಾಚನವನ್ನು ಮಾಡಿ ಮಾತನಾಡುತ್ತಾ ಗೃಹರಕ್ಷಕರ ತರಬೇತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದಿರುವ ಹಾಗೂ ಜಿಲ್ಲಾ ವಲಯ ಹಾಗೂ ರಾಜ್ಯ ಮಟ್ಟಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತಂದಿರುವ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಗೃಹರಕ್ಷಕರ ಸೇವೆಯನ್ನು ಶ್ಲಾಘಿಸಿದರು. ಇನ್ನು ಮುಂದೆಯೂ ಹೆಚ್ಚು ಹೆಚ್ಚು ಗೃಹರಕ್ಷಕರನ್ನು ಸೇರಿಸಿ ಗೃಹರಕ್ಷಕ ದಳದ ಸಂಖ್ಯಾಬಲವನ್ನು ಹೆಚ್ಚಿಸಿ ಎಂದು ಗೃಹರಕ್ಷಕರಿಗೆ ಸೂಚಿಸಿದರು.
2025ನೇ ಸಾಲಿನಲ್ಲಿ ಗೃಹರಕ್ಷಕರ ಸೇವೆಯಲ್ಲಿದ್ದು, ನಿಧನರಾದ ಎರಡು ಗೃಹರಕ್ಷಕರಿಗೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಸಾಧನೆಗೈದ ಗೃಹರಕ್ಷಕರಾದ ಶ್ರೀಮತಿ ಶಕಿಲಾ, ಬಂಟ್ವಾಳ ಘಟಕ, ಸಂತೋಷ್ ಸಲ್ಡಾನ, ಪ್ರಭಾರ ಘಟಕಾಧಿಕಾರಿ ಉಳ್ಳಾಲ ಘಟಕ, ಕು. ಮರೀಟಾ ಡಿ’ಸೋಜ, ಉಳ್ಳಾಲ ಘಟಕ ಇವರುಗಳನ್ನು ಮುಖ್ಯ ಅತಿಥಿಗಳು ಹಾಗೂ ಸಮಾದೇಷ್ಟರು ಸನ್ಮಾನಿಸಿ, ಗೌರವಿಸಿದರು.
ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಶ್ರೀಮತಿ ಸುಖಿತಾ ಎ.ಶೆಟ್ಟಿ ಪ್ರಭಾರ ಘಟಕಾಧಿಕಾರಿ ಉಪ್ಪಿನಂಗಡಿ ಘಟಕ ಇವರು ಪ್ರಾರ್ಥಿಸಿದರು. ಎಂ. ವೀರನಾಥ ಬೆಳ್ಳಾರೆ ಘಟಕಾಧಿಕಾರಿ ಇವರು ಸ್ವಾಗತಿಸಿದರು. ತೀರ್ಥೇಶ್ ಇವರು ಗೃಹರಕ್ಷಕರಿಗೆ ಪ್ರತಿಜ್ಞಾ ಸ್ವೀಕಾರ ನಡೆಸಿಕೊಟ್ಟರು. ಶ್ರೀಮತಿ ಶ್ಯಾಮಲಾ ಎ., ಪ್ರಥಮ ದರ್ಜೆ ಸಹಾಯಕಿ ಇವರು ಸನ್ಮಾನ ಪತ್ರ ವಾಚಿಸಿದರು.
ಜಗದೀಶ್ ಉಳ್ಳಾಲ ಇವರು ಕಾರ್ಯಕ್ರಮ ನಿರೂಪಿಸಿದರು. ಹಾಗೂ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ಶೇರಾ ಇವರು ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ಈ ಕಾಯಕ್ರಮದಲ್ಲಿ 15 ಘಟಕಗಳ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

