ಹಣ್ಣೆಲೆ ಉದುರುವಾಗ ಚಿಗುರೆಲೆ ನಕ್ಕಿದ್ದು....

Upayuktha
0


ಹುಶಃ ಈ ನಾಣ್ನುಡಿಗೆ ನೂರಾರು ವರ್ಷಗಳ ಇತಿಹಾಸ ಇರಬಹುದು. ಆದರೆ ಎಲ್ಲಾ ಕಾಲಕ್ಕೂ ಈ ಮಾತಿನ ರೂಪಕ ಹೊಂದಿಕೆಯಾಗುತ್ತದೆ. ಮನುಷ್ಯ ನಾಗರೀಕನಾಗುವ ಹೊತ್ತಿಗೆ ಕುಟುಂಬ ವ್ಯವಸ್ಥೆ ರೂಪಿಸಿಕೊಂಡ. ಮನುಷ್ಯ ಮಾತ್ರವಲ್ಲದೆ ಬಹಳಷ್ಟು ಪ್ರಾಣಿ ಪಕ್ಷಿಗಳು ಕುಟುಂಬ ಅಥವಾ ಬಂಧುಗಳ ಜೊತೆಯಲ್ಲಿ ಕೂಡಿ ಬಾಳುತ್ತವೆ.


ನಮ್ಮ ಭಾರತದಲ್ಲೂ ಈಗೊಂದು ಐವತ್ತು ವರ್ಷಗಳ ಹಿಂದಿನ ತನಕವೂ ಕೂಡು ಕುಟುಂಬ ವ್ಯವಸ್ಥೆ ಇತ್ತು. ಸ್ವಾತಂತ್ರೋತ್ತರದ ನಂತರ ಈ ಅವಿಭಕ್ತ ಕುಟುಂಬ ವ್ಯವಸ್ಥೆ ಐರೋಪ್ಯ ದೇಶಗಳ "ಆಧುನಿಕತೆ- ವಿಧ್ಯಾಭ್ಯಾಸ -ಕೃಷಿಯೇತರ ತಿಂಗಳ ಸಂಬಳದ ನೌಕರಿಗಾಗಿ ಕೂಡು ಕುಟುಂಬ ದಿಂದ ಹೊರಬಂದು ಪ್ರತ್ಯೇಕ ಸಂಸಾರ ಮಾಡುವುದು ಇತರ ಕಾರಣದಿಂದ ಕುಟುಂಬಗಳು ಮೈಕ್ರೋ ಆಗತೊಡಗಿತು.
ಆಗೆಲ್ಲ ಹಣಕ್ಕೆ ಕೊರತೆಯಿತ್ತು. ಅನ್ನಾಹಾರಕ್ಕೆ ಕೊರತೆಯಿತ್ತು. ಆದರೆ ಪ್ರೀತಿಗೆ ಕೊರತೆಯಿರಲಿಲ್ಲ. ದೊಡ್ಡ ಮನೆ, ನಿಧಾನವಾಗಿ ಅವಿಭಕ್ತ ಕುಟುಂಬಗಳು ಸಣ್ಣ ಆಗುತ್ತಾ ಆಗುತ್ತಾ ಕುಟುಂಬ ಎಂದರೆ ಮನೆ ಎಂದರೆ ಒಂದು ಗಂಡ ಹೆಂಡತಿ ಮತ್ತು ಮಕ್ಕಳು ಇದ್ದರೂ ಚಿಕ್ಕ ಮಕ್ಕಳು ಮಾತ್ರ ಇರುವ ಮನೆಯಾಯಿತು.


ಭಾರತಾದ್ಯಂತ ಮೊದಲು ಇದ್ದದ್ದು ಕೃಷಿ ಕುಟುಂಬಗಳೇ ಹೆಚ್ಚು. ಮೊದಲು ಮಕ್ಕಳು ವಿಧ್ಯಾಭ್ಯಾಸ ಮಾಡಿದರೂ ಮನೆಗೆ ಮರಳುತ್ತಿದ್ದವು. ಈಗ ಹೆತ್ತ ತಂದೆ ತಾಯಿಗಳಿಗೆ ಇವು "ನಮ್ಮವು" ಎಂದು ಲಾಲಿಸಲು, ಪ್ರೀತಿಸಲು ಗಟ್ಟಿಯಾಗಿ ಸಿಗೋದು ಎಸ್ ಎಸ್ ಎಲ್ ಸಿ ಹೆಚ್ಚೆಂದರೆ ಪಿಯುಸಿ ತನಕ.
ಹದಿನೆಂಟು ವರ್ಷ ಕಾಲ ಇವತ್ತಿನ ಮಕ್ಕಳು ಅಪ್ಪ ಅಮ್ಮರಿಗೆ ಸಂಪೂರ್ಣ ಲಭ್ಯ. ಒಮ್ಮೆ ಪಿಯುಸಿ ನಂತರ ವಿಧ್ಯಾಭ್ಯಾಸ ಕ್ಕೆ ಮಕ್ಕಳು ಹೊರ ಹೋದವೆಂದರೆ ನಂತರ ಪೋಷಕರಿಗೆ ಮತ್ತೆ "ಪರಿಪೂರ್ಣ ಮಕ್ಕಳಾಗಿ" ಮನೆಗೆ ಮರಳೋಲ್ಲ. ಶಿಕ್ಷಣ ಮುಗಿಸಿದ ನಂತರ ನೌಕರಿ ಹಿಡಿಯುವ ಮಕ್ಕಳು ತದನಂತರ ಅವೇ ಸ್ವಂತ ಮನೆ ಮಾಡ್ತಾವೆ. ಈಗ ಇದು ಎಲ್ಲಿ ತನಕ ಬಂದಿದೆ ಎಂದರೆ ಅದೇ ಊರಲ್ಲಿ ಅಪ್ಪ ಅಮ್ಮ ಇದ್ದರೂ ನೌಕರಿದಾರ ಮಗ/ಮಗಳು ಪ್ರತ್ಯೇಕ ಮನೆ ಮಾಡಿ ಜೀವಿಸುವಷ್ಟು. ತಂದೆ ತಾಯಿಗಳು ಇದನ್ನು ದುಡಿಯುವ ಅಥವಾ ಈ ಕಾಲದ ಮಕ್ಕಳ "ಪ್ರೈವೇಸಿ" ಅಂತ ಒಪ್ಪಿಕೊಂಡಿದ್ದಾರೆ...!!


ಇವತ್ತು "ತವರು ಮನೆ" ಎನ್ನುವ ವಿಚಾರ ಗಂಡು ಮಕ್ಕಳಿಗೂ ಅನ್ವಯಿಸುತ್ತಿದೆ. ಮೊದಲು ನಮ್ಮ ಸಮಾಜದಲ್ಲಿ ಆರತಿಗೊಂದು ಕೀರತಿಗೊಂದು ಎಂದಿತ್ತು. ಇದೀಗ ಗಂಡು ಮಕ್ಕಳ ಮದುವೆ ಆದ ಮೇಲೆ ಅವನಿಗೆ ಹೆಣ್ಣು ಕೊಟ್ಟ ಮನೆಯ ಪಾಲಾಗುತ್ತಾನೆ. ನಾನು ಗಮನಿಸಿದಂತೆ ಈ ಕಾಲದ ಬಹುತೇಕ ಅಪ್ಪ ಅಮ್ಮರಿಗೆ "ಹೆಣ್ಣು ಮಕ್ಕಳೇ" ದೊಡ್ಡ ಆಸರೆಯಾಗಿದ್ದಾರೆ.


ಹಿಂದೆ ಒಂದು ತಂದೆ ತಾಯಿಗಳಿಗೆ ಐದು ಹತ್ತು ಮಕ್ಕಳು. ಕೊನೆಗಾಲದಲ್ಲಿ ಐದು ಹತ್ತು ಮಕ್ಕಳಲ್ಲಿ ಯಾರಾದರು ಒಬ್ಬರಾದರೂ ಅಪ್ಪ ಅಮ್ಮರಿಗೆ ಆಸರೆ ಆಗುತ್ತಿದ್ದರು. ಯಾವಾಗ ಆರತಿ ಕೀರುತಿ ಸಿಂಗಲ್ ಮೂರುತಿ ಮಕ್ಕಳ ಸಂಖ್ಯೆಗೆ ನಮ್ಮ ಕುಟುಂಬ ವ್ಯವಸ್ಥೆ ಕುಸಿಯಿತೋ ಅಲ್ಲಿಂದ ಈಚೆ ನಮ್ಮ ಭಾರತೀಯ ಕುಟುಂಬ ವ್ಯವಸ್ಥೆ ಪಲ್ಟಿ ಹೊಡೀತು.


ಈ ಇಪ್ಪತೈದು ವರ್ಷಗಳ ಈಚಿನ ಪೋಷಕರು ಮಕ್ಕಳ ಜೊತೆಗೆ ಹಗಲು ರಾತ್ರಿ ನಿದ್ರೆಗೆಟ್ಟು ಓದಿಸಿದರು. ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿದರು, ಕಷ್ಟ ಪಟ್ಟರು. ಆದರೆ ಮಕ್ಕಳು ಎಂಬ ಬೆಳೆ ಫಸಲು ಬರುವಾಗ ಯಾರದ್ದೋ ಪಾಲಾಗಿ‌ ಬೆಳೆ ನಷ್ಟ ವಾದ ಕೃಷಿ ಭೂಮಿಯಲ್ಲಿ ತಲೆಮೇಲೆ ಕೈ ಇಟ್ಟು ಚಿಂತಿಸುವ ರೈತನ ಪಾಡಾಯಿತು ಈ ಪೋಷಕರ ಪಾಡು...!


ಹಾಗೆಯೇ ಈ ಭೂಮಿ ವಾತಾವರಣದಿಂದ ಹಾಳಾಗಿ, ಮನುಷ್ಯನ ಆಹಾರವೂ ವಿಷಮಯವಾಗಿ ಈಗ "ಬೀಜ" ದಿಂದ ಆರಂಭಿಸಿ ಬ್ರೂಣವಾಗಿ, ಮಗುವಾಗಿ, ಭೂಮಿಗೆ ಬಂದು ಮತ್ತು ಪ್ರಿಸ್ಕೂಲ್ ನಿಂದ ಪೋಸ್ಟ್ ಗ್ರಾಜಿಯೇಷನ್ ತನಕ ಔಟ್ ಆಫ್ಔಟ್ ಅಂಕ ತೆಗೆದು ಕ್ಯಾಂಪಸ್ ಸೆಲೆಕ್ಷನ್ ಆಗಿ ನೌಕರಿ ಗಿಟ್ಟಿಸಿ, ಆ ನೌಕರಿಗೆಲ್ಲಿ ಪಿಂಕ್ ಸ್ಲಿಪ್ ನ ಬರಸಿಡಿಲು ಬರುತ್ತದೋ ಎಂಬ "ಸದಾತಂಕ" ದಲ್ಲೇ ನೌಕರಿ ಮಾಡುತ್ತಾ.


ಈ ನಡುವೆ ಶಿಕ್ಷಣ ನೌಕರಿಯಷ್ಟೇ ಸೂಕ್ತ ಸಂಗಾತಿಯೂ ಸಿಕ್ಕಿ ಮದುವೆ ಮಾಡಿಕೊಂಡು ಈ ಸಾಮಾಜಿಕ ಸ್ವೇಚ್ಚಾ ಕ್ರಾಂತಿಯ ನಡುವೆ ಎಲ್ಲಿ ಕಟ್ಟಿಕೊಂಡ ಹೆಂಡತಿ ಬಿಟ್ಟು ಹೋಗ್ತಾಳೋ ಎನ್ನುವ ಎರಡು ಸಮಾನ ಭಯಾತಂಕ ದಲ್ಲೇ ಇವತ್ತಿನ ಹುಡುಗರು ಜೀವನ ನಡೆಸಿಕೊಂಡು ಹೋಗ್ತಿದ್ದಾರೆ. ಎಲ್ಲೋ ಕೆಲವು ಹುಡುಗರ ಜೀವನ ಹೂವಿನ ಹಾದಿಯಿರಬಹುದು. ಆದರೆ ಹೆಚ್ಚಿನ ಯುವಕರ ಪಾಡು "ಸದಾತಂಕ"....!!!

ತನ್ನ ಸ್ವಂತ ಬದುಕಿನ ವರ್ತಮಾನ ಹೀಗೆ ಆತಂಕದಲ್ಲಿರುವಾಗ ತನ್ನ ಹೆತ್ತವರ ನಿರೀಕ್ಷೆ ಪೂರೈಸಲು ಹೆಚ್ಚಿನ ಯುವ ಪೀಳಿಗೆಗೆ ಕಷ್ಟವಾಗುತ್ತಿದೆ..


ಮುಂಚೆ ಎಸ್ ಎಸ್ ಎಲ್ ಸಿ ಫೇಲೋ ಪಾಸೋ ಅಥವಾ ಪಿಯುಸಿ ಡಿಗ್ರಿ ಮುಗಿಸಿ ಅಪ್ಪ ನೆಟ್ಟ "ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಕೃಷಿ" ಗೆ ಬರುತ್ತಿದ್ದದ್ದು ಸಹಜ ಸಾಮಾನ್ಯವಾಗಿತ್ತು. ‌ಯಾವಾಗ ಜಾಗತಿಕರಣ ಬಂತೋ ಈಗಿನ ಮಕ್ಕಳು ಔಟ್ ಆಫ್ ಔಟ್ ಆಗಲಿ ಜೆಸ್ಟ್ ಪಾಸಾಗಲಿ "ಮನೇಲಿರೋಲ್ಲ". ಹದಿನೆಂಟು ವರ್ಷದ ನಂತರ ಹುಡುಗರಿಗೆ "ರಕ್ತ ಭಲ" ಬರುತ್ತದೆ. ಜೊತೆಯಲ್ಲಿ ಪದವಿ ಮುಗಿದ ತಕ್ಷಣ ಲಕ್ಷ ಲಕ್ಷ ಸಂಬಳ ಸಿಗುತ್ತದೆ. ‌ಅಪ್ಪನ ಆರ್ಥಿಕ ಅವಲಂಬನೆ ಇಲ್ಲದ ಮಕ್ಕಳು. ಬಾಲ್ಯ ಟೀನೇಜು ಬಿಟ್ಟರೆ ಬಹುತೇಕ ಹೊರಗೇ ಕಾಲ ಕಳೆದ ಮಕ್ಕಳಿಗೆ ಅಪ್ಪ ಅಮ್ಮರ ಜೊತೆಗಿನ "ಭಾವನಾತ್ಮಕ" ನಂಟು ಕಡಿಮೆಯಾಗುತ್ತಾ ಹೋಗಿರುತ್ತದೆ. ಇದು ಇವತ್ತಿನ ಪೋಷಕರು ಸ್ವಾಭಾವಿಕ ವಾಗಿ ಮಕ್ಕಳ ಆಸರೆಯಿಂದ ವೃದ್ದಾಶ್ರಮ ಸೇರಲು ಮುಖ್ಯ ಕಾರಣ.


ಒಂದು ಗಮನಾರ್ಹ ಸಂಗತಿ ಏನೆಂದರೆ ಇಂದು ಮದುವೆಯಾದವರು. ಮದುವೆ ಆಗಿ ಮಕ್ಕಳು ಇರೋರು. ಮದುವೆ ಆಗಿ ಮಕ್ಕಳು ಇಲ್ಲದೇ ಇರೋರು. ಮದುವೆ ಆಗದೇ ಇರೋರು. ಎಲ್ರ ವೃದ್ಯಾಪ್ಯದ ಕಾಲದಲ್ಲಿ ಕೊನೆಯಲ್ಲಿ "ವೃದ್ದಾಶ್ರಮ"ವನ್ನೇ ಸೇರುವ ಸಾಮಾಜಿಕ ಸ್ಥಿತಿಗೆ ಕೌಟುಂಬಿಕ ವ್ಯವಸ್ಥೆ ಕುಸಿದಿದೆ...!!


ಮಕ್ಕಳ ಪ್ರೈವೈಸಿಗಾಗಿ ಒಂದೇ ಊರಿನಲ್ಲಿ ಇದ್ದರೂ ದೂರ ಇರುವ ಪೋಷಕರ ಕೈಕಾಲು ಸೋತ ಮೇಲೆ ಮುಂದೆ ಆಸರೆ ನೀಡುವರಾರು...? ವೃದ್ಧ ಪೋಷಕರ ಕೈಕಾಲು ಸೋತಮೇಲೆ ಮಕ್ಕಳು ತಮ್ಮ ಮನೆಗೆ ವೃದ್ದರ ಕರೆದುಕೊಂಡು ಹೋಗ್ತಾರೆಯೇ...?. ಇಲ್ಲವೇ ಹಂತ ಹಂತವಾಗಿ ತಂದೆ ತಾಯಿಗಳ ಜೊತೆಗಿನ ಭಾವನಾತ್ಮಕ ನಂಟೇ ಕಡಿಮೆ ಯಾದ ಹೊತ್ತಿನಲ್ಲಿ ಪೋಷಕರು ವೃದ್ದಾಶ್ರಮ ಸೇರುವುದೇ ಪರಿಹಾರವಾ...?


ಅಪ್ಪ ಅಮ್ಮರು ಬದಲಾವಣೆ ಆದ ಕಾಲದಲ್ಲಿ ಮಕ್ಕಳ ಪ್ರಚಲಿತ ಔದ್ಯೋಗಿಕ ಮತ್ತು ಕೌಟುಂಬಿಕ ಸಮಸ್ಯೆ ಸವಾಲುಗಳನ್ನು ಅರ್ಥ ಮಾಡಿಕೊಳ್ಳೋದು ಉತ್ತಮ. ಮಕ್ಕಳು "ನಮ್ಮವೇ" ಇರಬಹುದು. ಆದರೆ ಮಕ್ಕಳು ದೊಡ್ಡ ಆಗ್ತಾ ಆಗ್ತಾ "ಸ್ವಾತಂತ್ರ್ಯ" ಆಗ್ತಾರೆ ಎನ್ನುವ ಸತ್ಯ ಪೋಷಕರು ಮನಗಾಣಬೇಕು. ಮಕ್ಕಳಿಂದ ತೀರಾ ನಿರೀಕ್ಷೆ ಮಾಡೋಕೆ ಬರೋಲ್ಲ. ಮೊದಲಿದ್ದ "ಗ್ರಾವಿಟಿ" ಅಂದರೆ ಹೊರಗೆ ನೌಕರಿಗೆ ಹೋದ ಮಕ್ಕಳು ಕೊನೆಯಲ್ಲಿ ರಿಪೌಂಡ್ ಆಗಿ ಮರಳಿ ಮನೆಗೆ ಬಂದು ಅಪ್ಪ ಅಮ್ಮ ರಿಗೆ ಆಸರೆ ಯಾಗಿ ಕೃಷಿ ಮುಂದುವರಿಸಿಕೊಂಡು ಹೋಗುವ ಕಾಲ ಇದಲ್ಲ‌.

"ಮೇಲೆ ಎಸೆದ ಚಂಡು ಅಥವಾ ಹಳ್ಳಿಯಿಂದ ಪಟ್ಟಣ ಸೇರಿದ ಮಗ ಹಳ್ಳಿ ಮನೆಗೆ ಬರೋ "ಗುರುತ್ವಾಕರ್ಷಣೆಯ" ನಿಯಮ ಈಗಿಲ್ಲ. ಇದು ಕಟು ವಾಸ್ತವ.

ಹಾಗೇ ಇಂದಿನ ಮಕ್ಕಳು ಕೂಡ ಒಂದು ಮುಖ್ಯವಾದ ವಿಚಾರವನ್ನು ಮನದಟ್ಟು ಮಾಡಿಕೊಳ್ಳುವುದು ಉತ್ತಮ. ಅದೆಂದರೆ, "ಇವತ್ತು ನಿಮ್ಮ ಅಪ್ಪ ಅಮ್ಮ ಇರೋ ಜಾಗದಲ್ಲಿ ಇನ್ನ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನೀವು ಇರ್ತೀರ‌. ಇವತ್ತಿನ ನಿಮ್ಮ ತಂದೆ ತಾಯಿಗಳ ನಿಮ್ಮ ಬಗ್ಗೆಯ ನಿರೀಕ್ಷೆ ಗಳನ್ನು ನೀವು ನಿಮ್ಮ ಮಕ್ಕಳಿಂದ ನಿರೀಕ್ಷೆ ಮಾಡ್ತೀರ. ಇದೇ ಕಾಲಚಕ್ರ....


ಈ ವಾಸ್ತವವಾದ ನಿಮ್ಮ ಜ್ಞಾಪಕದಲ್ಲಿರಲಿ. ನೀವು ನಿಮ್ಮ ಅಪ್ಪ ಅಮ್ಮರನ್ನು ನೋಡಿ ಕೊಂಡದ್ದು ನಿಮ್ಮ ಮಕ್ಕಳು ನೋಡಿರುತ್ತಾರೆ. ನೀವು ನಿಮ್ಮ ಮಕ್ಕಳ ಬಳಿ ನಮಗೆ ಇಳಿಗಾಲದಲ್ಲಿ ಆಸರೆಯಾಗಿ ಎಂದು ನಿರೀಕ್ಷೆ ಮಾಡುವ ನೈತಿಕತೆ ‌ನಿಮಗಿರುತ್ತದಾ...?"

ಜಗತ್ತಿನಲ್ಲಿ ಜೀವಂತ ದೇವರುಗಳು "ತಂದೆ ತಾಯಿಗಳು". ಅವರು ಸಮಾಜಕ್ಕೆ ಎಂಥವರೇ ಆಗಲಿ ನಮಗೆ ದೇವರು. ಜೀವಂತ ದೇವರ ಮನ ನೋಯಿಸಿ ಯಾವ ದೇವರ ಪೂಜೆ ಪುನಸ್ಕಾರ ಮಾಡಿದರೂ ಅದು ದಕ್ಕದು.


ಈ ಲೇಖನ ಯಾರ ವಿರುದ್ಧ ಅಥವಾ ಯಾರ ಮನ ನೋಯಿಸಲೂ ಅಲ್ಲ. ಇಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ಆತ್ಮಾವಲೋಕ ಮಾಡಿಕೊಳ್ಳ ಬೇಕೆಂಬ ಚಿಂತನೆಯಿದೆ.

ಅಪ್ಪ ಅಮ್ಮರ "ಡೀ ಮೆರಿಟ್ಟು"ಗಳ ನಡುವೆ ಮಕ್ಕಳಿಗೆ ಅಪ್ಪ ಅಮ್ಮರೇ "ಮೆರಿಟ್ಟು" ಗಳು. ಮಾತಾ ಪಿತೃ ದೇವೋಭವ.

- ಪ್ರಬಂಧ ಅಂಬುತೀರ್ಥ
9481801869



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top