ಗುರು ಸ್ಮರಣೆ-1: ಅಬ್ಬಾ.... ವಿಶ್ವೇಶತೀರ್ಥರ ಭೌಗೋಳಿಕ ಜ್ಞಾನವೇ !

Upayuktha
0

ಶ್ರೀ ವಿಶ್ವೇಶತೀರ್ಥ ಶ್ರೀಪಾದರ 6 ನೇ ಆರಾಧನೋತ್ಸವ 2025 

ಇಂದಿನಿಂದ ಮೂರು ದಿನಗಳ ಕಾಲ ಪದ್ಮವಿಭೂಷಣ ಪುರಸ್ಕೃತ, ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ನಡೆಯಲಿದೆ. ತನ್ನಿಮಿತ್ತ ಗುರುಗಳೊಂದಿಗಿನ ಒಡನಾಟದಲ್ಲಿ ಕಂಡುಕೊಂಡ ಮೂರು ಸ್ಮರಣೀಯ ಘಟನೆಗಳು ಈ ಸರಣಿಯಲ್ಲಿ ಬರಲಿವೆ. 



2016 ರಲ್ಲಿ ಗುರುಗಳ ಚಾರಿತ್ರಿಕ ಪಂಚಮ ಶ್ರೀ ಕೃಷ್ಣಪೂಜಾ ಪರ್ಯಾಯ. ದಿನ ನಿತ್ಯ ಪೂರ್ವಾಹ್ನ ಶ್ರೀ ಕೃಷ್ಣನ ಮಹಾಪೂಜೆ, ಬಳಿಕ ಇತರ ಸನ್ನಿಧಿಗಳ ಪೂಜೆ ಮುಗಿಸಿ ಭಿಕ್ಷೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠದಲ್ಲಿ ಅಂದಂದಿನ ಸೇವಾರ್ಥಿಗಳಿಗೆ ಶ್ರೀ ಕೃಷ್ಣನ ಪ್ರಸಾದ ಫಲ ಮಂತ್ರಾಕ್ಷತೆಯನ್ನು ನೀಡಿ ಗುರುಗಳು  ಅನುಗ್ರಹಿಸ್ತಾ ಇದ್ರು. ನಿತ್ಯವೂ ಜನ ಜಂಗುಳಿ ನೂರಾರು ಭಕ್ತಿರಿಗೆ ಪ್ರಸಾದ ವಿತರಿಸುವ ಒತ್ತಡ ಇದ್ದೇ ಇತ್ತು. ಆ ಬಳಿಕ ಅಲ್ಪ ವಿಶ್ರಾಂತಿ ಪಡೆದು ಶಾಸ್ತ್ರ ಪಾಠಕ್ಕೆ ಸಿದ್ಧರಾಗ್ಬೇಕು.‌ಇಷ್ಟೆಲ್ಲ ಒತ್ತಡ ಇದ್ರೂ ಪ್ರತಿಯೊಬ್ಬ ಸೇವಾರ್ಥಿ ಭಕ್ತರ ಹೆಸರು, ಊರು, ಉದ್ಯೋಗ ಜೊತೆಗೆ ಬಂದವರ ಕುಶಲೋಪರಿ ಎಲ್ಲವನ್ನೂ ಖುದ್ದಾಗಿ ಕೇಳಿದ ಬಳಿಕವೇ ಪ್ರಸಾದ ನೀಡೋದು ಗುರುಗಳ ವಾಡಿಕೆ.‌


ಆ ದಿನವೂ ಸೇರಿದ್ದ ನೂರಾರು ಭಕ್ತರಿಗೆ ಪ್ರಸಾದ ವಿತರಣೆ ನಡೀತಾ ಇತ್ತು. ಹೀಗೆ ಸರತಿಯಲ್ಲಿ ಬಂದ ಕುಟುಂಬವೊಂದಕ್ಕೂ (ಮಧ್ಯವಯಸ್ಕ ದಂಪತಿ ಇಬ್ರು ಮಕ್ಕಳೊಂದಿಗೆ ಬಂದಿದ್ರು) ಪ್ರಸಾದ ವಿತರಣೆಯ ಸಂದರ್ಭ.‌ ಎಲ್ಲಿಂದ ಬಂದ್ರಿ? ಊಟ ಆಯ್ತಾ? ಇತ್ಯಾದಿ ಪ್ರಶ್ನೆಗಳ ಸಾಲು ಗುರುಗಳಿಂದ ಬಂತು. ನಾನು ನಾರ್ವೆ ದೇಶದಲ್ಲಿ ಉದ್ಯೋಗ ಮಾಡಿ ಅಲ್ಲೇ ಕುಟುಂಬ ಸಹಿತ ನೆಲೆಸಿದ್ದೇನೆ ಅಂತ ಭಕ್ತರು ವಿವರಿಸಿದರು. ಗುರುಗಳಿಗೋ ಅಚ್ಚರಿ... ಹೌದಾ? ಸಂತೋಷದಿಂದ ಜೊತೆಗಿದ್ದ ಆ ದಂಪತಿಯ ಪುಟ್ಟ ಮಗುವಿಗೂ ಕಲುಸಕ್ಕರೆ ಕೊಟ್ಟು ಪ್ರಸಾದವನ್ನೂ ಕೊಟ್ಟು ಅನುಗ್ರಹಿಸಿದರು.


ಗುರುಗಳಿಗೆ ನಮಸ್ಕರಿಸಿ ಅವರು ಜನಸಂದಣಿಯ ನಡುವೆ ತೂರಿಕೊಂಡು ಈ ಕಡೆ ಬಂದರು. ಮರುಕ್ಷಣವೇ ತಮ್ಮ ಎಂದಿನ ರೀತಿಯಂತೆ ಚಪ್ಪಾಳೆ ತಟ್ಟಿ ಆ ವ್ಯಕ್ತಿಯನ್ನು ನಗುತ್ತಲೇ ಪುನಃ ಕರೆಸಿದರು ಶ್ರೀಗಳು...! ನೀವು ಭೂಮಧ್ಯ ರೇಖೆಯ ಮಧ್ಯೆ ಇದ್ದೀರಲ್ವಾ? ನಾರ್ವೆ ದೇಶ ಭೂಮಧ್ಯ ರೇಖೆಯಲ್ಲಿರೋದಲ್ವಾ? ನಿಮಗೆ ಹಗಲು ರಾತ್ರಿಯ ಅನುಭವ ಹೇಗೆ? ಶ್ರೀಗಳಿಂದ ಪ್ರಶ್ನೆಗಳು.


ಆ ವ್ಯಕ್ತಿಗೋ ಅಚ್ಚರಿಯೋ ಅಚ್ಚರಿ. ತಡಮಾಡದೇ ಆನಂದದಿಂದ ಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀಗಳು ನಗುತ್ತಲೇ ಇದ್ದಾರೆ. ಅಲ್ಲಾ ಸ್ವಾಮೀ?! ನಿಮ್ಮ ಲೋಕಜ್ಞಾನ ಅದೆಷ್ಟು ವಿಸ್ತಾರವಾಗಿದೆ ಅಂತ ವ್ಯಕ್ತಿ ಹೇಳಿದವರೇ ಕೇಳಿದ ಪ್ರಶ್ನೆಗಳಿಗೆ ಸಂತೋಷದಿಂದಲೇ ಉತ್ತರಿಸಿದರು. 


ಇದು ಶ್ರೀ ವಿಶ್ವೇಶತೀರ್ಥರ ಅಗಾಧ ಭೌಗೋಳಿಕ ಜ್ಞಾನಕ್ಕೆ ಒಂದು ಸಾಕ್ಷಿ.


ಭೂಗೋಳ ಕಲಿತವರಲ್ಲ, ದೇಶ ಬಿಟ್ಟು ಹೋದವರಲ್ಲ, ಪ್ರಪಂಚ ಸುತ್ತಿದವರೂ ಅಲ್ಲ. ಆದ್ರೆ ಅದು ಹೇಗೆ ನಾರ್ವೆ ದೇಶದ ಭಗೋಳಿಕ ಅಸ್ತಿತ್ವ ಅವರಿಗೆ ಗೊತ್ತಿತ್ತು? ಆಯ್ತಪ್ಪ ಹೇಗೋ ಗೊತ್ತಿತ್ತು ಅಂತ್ಲೇ ಇಟ್ಕೊಳ್ಳೋಣ. ಈ ಹೊತ್ತು ಭಕ್ತರ ಸಂದಣಿಯಲ್ಲಿಯೂ, ಬೆಳಗ್ಗಿನಿಂದ ವಿದ್ಯುತ್ ವ್ಯವಸ್ಥೆ ಇಲ್ಲದ, ಗಾಳಿ ಸಂಚಾರ ತೀರಾ ಕಡಿಮೆ ಇರುವ ಗರ್ಭಗುಡಿಯಲ್ಲಿ 86 ವರ್ಷದ ಗುರುಗಳು ಪೂಜಾದಿಗಳನ್ಜು ಮುಗಿಸಿ ಆಗೊಮ್ಮೆ ಈಗೊಮ್ಮೆ ಕಣ್ಣು ಕೂರುತ್ತಲೇ ಪ್ರಸಾದ ಕೊಡ್ತಾ ಇರ್ಬೇಕಾದ್ರೂ ಈ ಜ್ಞಾನ ಜಾಗೃತವಾಗುವ, ಅಥವಾ ಅದನ್ನು ಎದುರಾದ ಆ ವ್ಯಕ್ರಿಯಲ್ಲಿ ಕೇಳುವ ಅವರ ಪ್ರಸಂಗಾವಧಾನತೆಗೆ ಅವರೇ ಸಾಟಿ! ಇವತ್ತಿನ ಪಾಠ ನಾಳೆಗೆ ಕೆಲವೊಮ್ಮೆ ನೆನಪೇ ಇರದ ಸ್ಥಿತಿ ನಮ್ಮ ನಿಮ್ಮಂಥವರದ್ದಾಗಿರುತ್ತೆ. ಅಂಥಾದ್ರಲ್ಲಿ ಈ ಪರಿಯ ಲೋಕಜ್ಞಾನವನ್ನು ಶ್ರೀ ವಿಶ್ವೇಶತೀರ್ಥರು ಪಡೆದ ಬಗೆಯೆಂತೋ? ಶ್ರೀ ರಾಮ ವಿಠಲ ಹಯಗ್ರೀವ ದೇವರೇ ಬಲ್ಲರು.


ದೇಶಕಂಡ ಶ್ರೇಷ್ಠ ತಪಸ್ವಿ ಶ್ರೀವಿಶ್ವೇಶತೀರ್ಥರಿಗೆ ಶರಣು ಶರಣು. 


-ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top