ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/
ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ
ಒಂದೇ ದೇಹ, ಮೂರುತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ, ದತ್ತಾತ್ರೇಯನ ಜಯಂತಿಯಿಂದು. ಭಜನೆ ಈ ದಿನ ಪ್ರಾಶಸ್ತ್ಯ. ಮಹಾ ಋಷಿ ಅತ್ರಿ -ಪರಮ ಪತಿವ್ರತೆ ಅನಸೂಯರ ಪುತ್ರನೀತ. ಮಹಾಸಾಧಕ. ಶೈವ-ವೈಷ್ಣವ ಎರಡೂ ತತ್ವವಿದೆ. ಸಚ್ಚಾರಿತ್ರ್ಯ, ನಡತೆ, ಪಾತಿವ್ರತ್ಯ, ಜ್ಞಾನ, ವೈರಾಗ್ಯ, ಬ್ರಹ್ಮಚರ್ಯ, ತ್ಯಾಗದಿಂದ ಅಮೃತತ್ವದ ಸಂಕೇತ ಈ ಎಲ್ಲವೂ ದತ್ತಾತ್ರೇಯನಲ್ಲಿ ಅಡಗಿದೆ. ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಜನನ. (ಇಂದಿನ ಹುಣ್ಣಿಮೆಗೆ ಹೊಸ್ತಿಲ ಹುಣ್ಣಿಮೆಯೆಂದೂ ಹೆಸರಿದೆ.) ಬ್ರಹ್ಮ, ವಿಷ್ಣು, ಮಹೇಶ್ವರನ ಸಂಯೋಜಿತ ರೂಪ ಹೊತ್ತ ದತ್ತಾತ್ರೇಯ ಪಾಪನಾಶಕನಂತೆ. ಋಷಿಮುನಿಗಳು, ಸಾಧು ಸಂತರು ಈತನ ಆರಾಧಕರು.
ಶೂಲಹಸ್ತ ಗಧಾಪಾಣೇ ವನಮಾಲಾ ಸುಕಂಧರ/
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ//
ಚಾರಿತ್ರ್ಯ ರಕ್ಷಣೆಯ ಹಿರಿಮೆಯನ್ನು,ಪಾತಿವ್ರತ್ಯದ ಶ್ರೇಷ್ಠತೆಯನ್ನು ಸಾರುವ ಹಿನ್ನೆಲೆಯಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಜಯಂತಿಯನ್ನು ವಿಶೇಷವಾಗಿ ಆಂಧ್ರ, ಮಹಾರಾಷ್ಟ್ರ, ಉತ್ತರಭಾರತ, ಕರ್ನಾಟಕದಲ್ಲಿ ಆಚರಿಸುತ್ತಾರೆ. ಈ ಹಬ್ಬವನ್ನು, ಆರಾಧನೆಯನ್ನು ಹೆಚ್ಚು ಬೆಳಕಿಗೆ ತಂದವರು ಸಾಧು ಶ್ರೇಷ್ಠರಾದ 'ಶ್ರೀಧರ ಸ್ವಾಮಿಗಳು, ಮಾಣಿಕಪ್ರಭು, ದಾಸೋ ಪಂಥದವರು, ಏಕನಾಥರು, ಪೂಜ್ಯ ಜನಾರ್ದನ ಸ್ವಾಮಿಗಳೆಂದು ತಿಳಿದು ಬರುತ್ತದೆ. ದತ್ತಮಂದಿರಗಳ ಸ್ಥಾಪನೆಯನ್ನು ಮಾಡಿದ್ದಾರೆ. ಒಂದು ಹೇಳಿಕೆಯಂತೆ ಯತಿಶ್ರೇಷ್ಠರಾದ ಶ್ರೀಪಾದ ಶ್ರೀವಲ್ಲಭರು, ಶ್ರೀ ನರಸಿಂಹ ಸರಸ್ವತಿ ಯತಿಗಳು ದತ್ತಾತ್ರೇಯನ ಅವತಾರವೆಂದೇ ಪ್ರತೀತಿ. ಭಾಗವತದ ಉಲ್ಲೇಖದಂತೆ ಅತ್ರಿ ಮಹರ್ಷಿಯ ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು, ಋಷಿಯ ಕೋರಿಕೆಯಂತೆ 'ದತ್ತ' ಮಾಡಿದ ಮಗುವಾದ ಕಾರಣ'ದತ್ತಾತ್ರೇಯ'ನಾದ.
ಪೌರಾಣಿಕ ಉಲ್ಲೇಖದಂತೆ ನಾರದ ಮಹರ್ಷಿಗಳು ಸತಿ ಅನಸೂಯೆಯ ಪಾತಿವ್ರತ್ಯವನ್ನು ತ್ರಿಮೂರ್ತಿಗಳ ಪತ್ನಿಯರಿಗೆ ಮತ್ಸರವಾಗುವಂತೆ ವರ್ಣಿಸುತ್ತಾರೆ. ಮೂವರು ಸಹ ತಮ್ಮ ಪತಿದೇವರನ್ನು ಅತ್ರಿ ಋಷಿಗಳ ಆಶ್ರಮಕ್ಕೆ ನೋಡಿ ಪರೀಕ್ಷಿಸಿ ಬರಲು ಕಳುಹಿಸುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರರು ಬ್ರಾಹ್ಮಣ ವೇಷ ಧರಿಸಿ ಬಂದು ಭೋಜನವನ್ನು ಕೇಳುತ್ತಾರೆ.ಅತಿಥಿ ಸತ್ಕಾರಕ್ಕೆ ಎತ್ತಿದ ಕೈ ಆದ ಅನಸೂಯ ತಯಾರು ಮಾಡಿ ಊಟಕ್ಕೆ ಕುಳಿತುಕೊಳ್ಳಲು ಹೇಳುತ್ತಾಳೆ. ಈ ಮೂವರು ಪಾತಿವ್ರತ್ಯ ಪರೀಕ್ಷೆಗೆ ಬಂದ ಕಾರಣ, ಬೆತ್ತಲೆಯಾಗಿ ಬಡಿಸಿದರೆ ಮಾತ್ರ ಊಟ ಸ್ವೀಕರಿಸುತ್ತೇವೆ ಎನ್ನುತ್ತಾರೆ. ಸತಿ ಚಿಂತಿಸದೆ ಜಾಣತನದಿಂದ, ತನ್ನ ಪತಿಯು ಯಜ್ಞಕ್ಕಾಗಿ ತೆರಳುವಾಗ ರಕ್ಷಣೆಗೆಂದು ಇಟ್ಟ ಪತಿಯ ಪಾದೋದಕವನ್ನು ತ್ರಿಮೂರ್ತಿಗಳ ಶರೀರದ ಮೇಲೆ ಸಿಂಪಡಿಸುತ್ತಾಳೆ. ತಕ್ಷಣ ಮೂವರೂ ಹಸುಗೂಸುಗಳಾಗುತ್ತಾರೆ.ಆಕೆ ಎದೆ ಹಾಲನ್ನು ನೀಡಿ ಮೂವರನ್ನೂ ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತಾಳೆ.
ಇತ್ತ ಹೋದ ಪತಿಯರನ್ನು ಕಾಣದೆ ಇರುವಾಗ ಬಂದ ನಾರದರು ವಿಷಯವನ್ನು ತ್ರಿಮೂರ್ತಿಗಳ ಪತ್ನಿಯರಿಗೆ ತಿಳಿಸುತ್ತಾರೆ.ಅತ್ರಿ ಮುನಿಗಳ ಆಶ್ರಮಕ್ಕೆ ಬಂದು, ಸತಿ ಅನಸೂಯಳಲ್ಲಿ ಸಂಶಯಪಟ್ಟದ್ದಕ್ಕಾಗಿ ಮತ್ತು ಅಸೂಯೆಗೊಂಡ ಕಾರಣ ನಾಚಿಕೆಯಿಂದ ಕ್ಷಮೆ ಕೇಳುತ್ತಾರೆ. ಅನುಕಂಪದಿಂದ ಪತಿಯ ಪಾದೋದಕವನ್ನು ಸಿಂಪಡಿಸಿ, ತ್ರಿಮೂರ್ತಿಗಳನ್ನು ಮೊದಲಿನಂತೆಯೇ ಪರಿವರ್ತನೆ ಮಾಡುತ್ತಾಳೆ. ತನ್ನ ಎದೆ ಹಾಲನ್ನು ಕುಡಿಸಿದ ಮೂರು ಶಿಶುಗಳನ್ನು ಬಿಟ್ಟು ಕೊಡುವಾಗ, ಅವರ ಅಂಶಗಳನ್ನು ಒಗ್ಗೂಡಿಸಿ, ಲೋಕ ಕಲ್ಯಾಣಕ್ಕಾಗಿ ಮೂರುತಲೆ, ಆರು ಕೈಗಳು, ಒಂದೇ ದೇಹವುಳ್ಳ ದತ್ತಾತ್ರೇಯ ಮೂರ್ತಿಯನ್ನು ಸೃಷ್ಟಿಸುತ್ತಾಳೆ-ಇದು ಮಾರ್ಕಾಂಡೇಯ ಪುರಾಣದಲ್ಲಿದೆ.
ದತ್ತಾತ್ರೇಯನ ಕ್ಷೇತ್ರಗಳಲ್ಲಿ ಈ ದಿನ ಭಗವದ್ಗೀತೆ,ವೇದ ಪಾರಾಯಣ, ಸಾಮೂಹಿಕ ಭಜನೆ ಹಮ್ಮಿಕೊಳ್ಳುತ್ತಾರೆ. ದತ್ತಾತ್ರೇಯನ ಮೂಲಮಂತ್ರ 'ಓಂ ದ್ರಂ ಶ್ರೀ ಗುರುದೇವದತ್ತ' ಜಪ ಮಾಡುತ್ತಾರೆ. 'ಓಂ ದತ್ತಾತ್ರೇಯಾಯ ವಿದ್ಮಹೇ ಯೋಗೀಶ್ವರಾಯ ಧೀಮಹಿ, ತನ್ನೋ ದತ್ತ ಪ್ರಚೋದಯಾತ್ ಯೋಗಶಕ್ತಿ:'
ಪೂಜೆ,ಉಪವಾಸ, ಪ್ರಾರ್ಥನೆ, ನಿವೇದನೆ ಭಕ್ತರಿಂದ, ಅನುಯಾಯಿಗಳಿಂದ ಈ ದಿನ ನಡೆಯುತ್ತದೆ. ಗಾಣಾಗಾಪುರದಲ್ಲಿ ಬಹಳ ವೈಭವದಿಂದ ಆಚರಿಸುತ್ತಾರೆ. ಇಷ್ಟಾರ್ಥ ಈಡೇರಿಕೆಗಾಗಿ ಗಂಗಾಸ್ನಾನ ಮಾಡುವವರೂ ಇದ್ದಾರೆ. ಅಜ್ಞಾನ, ಅಹಂಕಾರ, ಮಾನಸಿಕ ಆರೋಗ್ಯ ದೂರವಾಗುವುದೆಂಬ ನಂಬಿಕೆ. ನಿರ್ಮಲ ಮನಸ್ಸಿನ ಧ್ಯಾನದಿಂದ ಆಧ್ಯಾತ್ಮಿಕ ಶಕ್ತಿ ಬಲಗೊಳ್ಳುವುದಂತೆ. ಆಂತರಿಕ ಆಲೋಚನಾ ಲಹರಿಗಳಿಗೆ ಕಡಿವಾಣಕ್ಕೆ ಏಕಾಗ್ರತೆ ಬಲಗೊಳ್ಳುವುದಕ್ಕೆ ಇದು ಕಾರಣವಾಗುವುದು. ದತ್ತಾತ್ರೇಯನನ್ನು ಭಜಿಸಿ, ಧ್ಯಾನಿಸಿ ಕೃತಾರ್ಥರಾಗೋಣ.
ಓಂ ದತ್ತಾತ್ರೇಯ ನಮ:
ಓಂ ಪ್ರಮಥಯೇ ನಮ:
ಓಂ ಯೋಗೀಶ್ವರಾಯ ನಮ"
ಓಂಗುರುದೇವದತ್ತಾಯ ನಮ:
ಎಲ್ಲರಿಗೂ ಒಳ್ಳೆಯದಾಗಲಿ
(ನಾರದ ಪುರಾಣ,ಮರ್ಕಾಂಡೇಯ ಪುರಾಣ--ಸಂಗ್ರಹ ಲೇಖನ)
- ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




