ಹಳೇ ನೆನಪುಗಳಿಗೆ ಸಾಕ್ಷಿಯಾದ ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ

Upayuktha
0

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು- ಕೆನರಾ ಫ್ಯಾಮಿಲಿ ಡೇ ಹಾಗೂ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ-2025




ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಫ್ಯಾಮಿಲಿ ಡೇ ಹಾಗೂ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ-2025 ಮಂಗಳವಾರದಂದು ಕೆನರಾ ಪ್ರೌಢಶಾಲೆ ಮೈನ್ ಗ್ರೌಂಡ್ ಕೊಡಿಯಾಲ್‌ಬೈಲ್ ಇಲ್ಲಿ ಅದ್ದೂರಿಯಾಗಿ ನೆರವೇರಿತು.


ಕಾರ್ಡಿಯೋಥೋರಾಸಿಕ್ ಸರ್ಜನ್ ಡಾ. ಗಣೇಶ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ, ಕೆನರಾ ಶಿಕ್ಷಣ ಸಂಸ್ಥೆಯೊಂದಿಗೆ ನನಗೆ ಮರೆಯಲಾಗದ ನಂಟು ಇದೆ. ಹಲವು ವರ್ಷಗಳ ಹಿಂದೆ ನನ್ನನ್ನು ಸನ್ಮಾನಿಸಿದ ಕ್ಷಣಗಳು ಮರೆಯಲಾಗದ ನೆನಪು. ನನ್ನನ್ನು ಬೆಳೆಸಿದ ಈ ಸಂಸ್ಥೆಯ ಋಣ ತೀರಿಸಲು ಸಾಧ್ಯವಿಲ್ಲ. ಕೆನರಾ ಆಡಳಿತ ಮಂಡಳಿ ಆಶಯದಂತೆ ಸಂಸ್ಥೆಯಲ್ಲಿ ಕಲಿತು ಹೋಗಿರುವ ಬಹು ವಿಧ ಪ್ರತಿಭೆಗಳನ್ನು ಮತ್ತೊಮ್ಮೆ ಈ ಸಂಸ್ಥೆಗೆ ಬರಮಾಡಿಕೊಳ್ಳುವ ಹಾಗೂ ಯುವಶಕ್ತಿಯನ್ನು ಪ್ರಬುದ್ಧ ಮಾನವ ಸಂಪನ್ಮೂಲವನ್ನಾಗಿ ರೂಪಿಸಲು ಈ ಸಮಾವೇಶ ಅತ್ಯುತ್ತಮ ವೇದಿಕೆಯಾಗಿದೆ ಎಂದರು.


ಸೃಜನಶೀಲ ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ಒದಗಿಸುವ ಕೆಲಸವನ್ನು ನಿರ್ವಹಿಸುವ ಪ್ರತಿಭಾನ್ವಿತ ಶಿಕ್ಷಕ ಶಿಕ್ಷಕಿಯರನ್ನು ಹೊಂದಿದಂತಹ ಕೆನರಾ ಶಿಕ್ಷಣ ಸಂಸ್ಥೆ ಎಲ್ಲರ ಮನೆ ಮನಗಳಲ್ಲೂ ನೆಲೆಸಲು ಅದರಲ್ಲಿರುವ ಸತ್ವವೇ ಕಾರಣ. ಈ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಉತ್ತಮ ವೈದ್ಯರು, ತಂತ್ರಜ್ಞರು, ವಿಜ್ಞಾನಿಗಳು, ಉದ್ಯಮಿಗಳು ರೂಪಗೊಂಡು ಸಂಸ್ಥೆಯ ಕೀರ್ತಿಯನ್ನು ಎತ್ತರಿಸಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ವೃತ್ತಿ, ಶಿಕ್ಷಣ ಹಾಗೂ ಉದ್ಯಮಗಳಲ್ಲಿ ತೊಡಗಿಸಿಕೊಂಡ ಹಳೆ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಸಂಸ್ಥೆಯೊಂದಿಗೆ ತಮ್ಮ ಸಂಬಂಧಗಳನ್ನು ನವೀಕರಿಸಲು, ಹಳೆಯ ಗೆಳೆಯರನ್ನು, ವಿದ್ಯೆ ಕೊಟ್ಟ ಗುರುಸಮೂಹವನ್ನು ಭೇಟಿಯಾಗಲು, ಹಳೆಯ ನೆನಪುಗಳೊಂದಿಗೆ ಜೀವನವನ್ನು ಸಿಂಹಾವಲೋಕಿಸಲು ಈ ಕಾರ್ಯಕ್ರಮವು ಅತ್ಯುತ್ತಮ ಅವಕಾಶ ನೀಡಿದೆ ಎಂದು ಹೇಳಿದರು.


ಐಡಿಯಲ್ ಐಸ್ ಕ್ರೀಮ್ ಪ್ರೈವೇಟ್ ಲಿಮಿಟೆಡ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮುಕುಂದ್ ಕಾಮತ್ ಮಾತನಾಡಿ, ಕೆನರಾ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳ ಭವಿಷ್ಯತ್ತನ್ನು ಗಟ್ಟಿಗೊಳಿಸುವ ಬದ್ಧತೆಯುಳ್ಳ ಶಿಕ್ಷಣ ಸಂಸ್ಥೆ. ನನ್ನ ಕುಟುಂಬದ ತಲೆಮಾರುಗಳು ಈ ಶಿಕ್ಷಣ ಸಂಸ್ಥೆಯ ಋಣಿಗಳು. ಹಲವಾರು ಸಂವೇದನಶೀಲ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯತ್ತಿನ ಸವಾಲುಗಳಿಗೆ ಸಿದ್ಧಗೊಳಿಸುವ ಹೊಣೆಗಾರಿಕೆಯನ್ನು ಈ ಶಿಕ್ಷಣ ಸಂಸ್ಥೆ ಹೊಂದಿದೆ. ಎಂದು ಹೇಳಿದರು.


ಕೆನರಾ ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿ ರಂಗನಾಥ್ ಭಟ್ ಮಾತನಾಡುತ್ತಾ, ನಮ್ಮ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿತು ಇಂದು ವಿಶ್ವದ ಮೂಲೆ ಮೂಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರಿಗೆ ಮತ್ತೊಮ್ಮೆ ಈ ಸಂಸ್ಥೆಯ ಜೊತೆಗೆ ಸಂಪರ್ಕಕ್ಕೆ ತರುವ ಕಾರ್ಯಕ್ರಮ ಇದಾಗಿದ್ದು. ಕಲಿಸಿದ ಗುರು ಹಿರಿಯರನ್ನು ಭೇಟಿಯಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಇದೊಂದು ಸದಾವಕಾಶ. ಶಿಕ್ಷಕ ವೃತ್ತಿ ಎಂಬುದು ಕೇವಲ ವೃತ್ತಿಯಾಗಿರದೇ ಅದೊಂದು ಅದ್ಭುತ ತ್ಯಾಗ. ಅದರ ಫಲಶೃತಿಯೇ ಈ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು.


ಮಂಗಳೂರಿನ ಖ್ಯಾತ ಉದ್ಯಮಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅರೆಹೊಳೆ ಪ್ರತಿಷ್ಠಾನ ವತಿಯಿಂದ ಮಂದಾರ್ತಿ ಮಾದೇವಿ ನೃತ್ಯ ರೂಪಕ ಪ್ರದರ್ಶನಗೊಂಡಿತು.


ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುರೇಶ್ ಕಾಮತ್, ಕಾರ್ಯದರ್ಶಿ ರಂಗನಾಥ ಭಟ್, ಖಜಾಂಚಿ CA ವಾಮನ್ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ವಿಕ್ರಂ ಪೈ, ಅಶ್ವಿನಿ ಕಾಮತ್, ಪಿ ಆರ್ ಒ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪಿ.ಆರ್.ಒ ಶ್ರೀಮತಿ ಉಜ್ವಲ್ ಮಲ್ಯ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top