ಭಾರತದ ರಾಜಧಾನಿ ದೆಹಲಿಯು ಕೇವಲ ಒಂದು ಆಡಳಿತ ಕೇಂದ್ರವಷ್ಟೇ ಅಲ್ಲ, ಸಾಂಸ್ಕೃತಿಕ ಮತ್ತು ಐತಿಹಾಸಿಕ ವೈಭವದ ಅದ್ವಿತೀಯ ಸಂಕೇತವಾಗಿದೆ. ರಾಷ್ಟ್ರಪತಿ ಭವನ, ಕರ್ತವ್ಯ ಪಥ (ರಾಜಪಥ), ಸಂಸತ್ ಭವನ, ವಿವಿಧ ಕಲೆಯ ಸಂಪ್ರದಾಯಗಳು, ಉದ್ಯಮ ಜಗತ್ತು ಮತ್ತು ದೇಶದ ಮೂಲೆಮೂಲೆಗಳಿಂದ ಬಂದಿರುವ ಜನಪದ ಸಂಸ್ಕೃತಿ; ಇವೆಲ್ಲವೂ ಸೇರಿ ದೆಹಲಿಯ ಬಹುಆಯಾಮದ ಸ್ವರೂಪವನ್ನು ರೂಪಿಸಿವೆ. ಇದೇ ದೆಹಲಿಯು ಪ್ರಾಚೀನ ಕಾಲದಲ್ಲಿ ಪಾಂಡವರ ಭವ್ಯ ರಾಜಧಾನಿ ಮತ್ತು ಸಾಂಸ್ಕೃತಿಕ ವೈಭವದ ಮೂಲ ಜನನಿಯಾದ ‘ಇಂದ್ರಪ್ರಸ್ಥ’ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ನಡೆದ ಆಕ್ರಮಣಗಳ ಸರಣಿಯಲ್ಲಿ ಈ ನಗರದ ಮೂಲ ಗುರುತು ಮಸುಕಾಯಿತು; ಅದರ ಹೆಸರು, ಸಂಸ್ಕೃತಿ ಮತ್ತು ಜೀವನದೃಷ್ಟಿಯ ಮೇಲೆ ಪರಕೀಯ ಛಾಯೆ ಆವರಿಸಿತು. ಇಂದು ದೇಶದಾದ್ಯಂತ ದೆಹಲಿಗೆ ಅದರ ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಸರಾದ ‘ಇಂದ್ರಪ್ರಸ್ಥ’ವನ್ನು ಮರಳಿ ನೀಡಬೇಕೆಂಬ ಬಲವಾದ ಬೇಡಿಕೆ ಕೇಳಿಬರುತ್ತಿದೆ. ಈ ರಾಷ್ಟ್ರೀಯ ಚಳುವಳಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಸಕ್ರಿಯ ಪಾತ್ರವನ್ನು ವಹಿಸುತ್ತಿದೆ.
ದೆಹಲಿಯ ಇತಿಹಾಸ ಮತ್ತು ಐತಿಹಾಸಿಕ ಪುರಾವೆಗಳು : ಇಂದ್ರಪ್ರಸ್ಥವು ಮಹಾಭಾರತ ಕಾಲದ ನಗರವಾಗಿದ್ದು, ಪಾಂಡವರ ರಾಜಧಾನಿಯಾಗಿ ಪ್ರಸಿದ್ಧವಾಗಿದೆ. ಯಮುನಾ ನದಿಯ ದಡದಲ್ಲಿ ನೆಲೆಸಿದ್ದ ಈ ನಗರವು ಆ ಕಾಲದಲ್ಲಿ ಕಲೆ, ಶೌರ್ಯ, ಆಡಳಿತ ಮತ್ತು ವೈಭವದ ಕೇಂದ್ರವಾಗಿತ್ತು. ಐತಿಹಾಸಿಕ ಮತ್ತು ಪುರಾತತ್ವ ಸಂಶೋಧನೆಯ ಪುರಾವೆಗಳನ್ನು ಪರಿಶೀಲಿಸಿದರೆ, ಮೌರ್ಯ, ಶುಂಗ, ಕುಶಾನ, ಗುಪ್ತ, ರಜಪೂತ, ಸುಲ್ತಾನ್ ಮತ್ತು ಮೊಘಲ್ ಕಾಲದ ವಿವಿಧ ಅವಶೇಷಗಳು ದೆಹಲಿಯಲ್ಲಿ ಕಂಡುಬಂದಿವೆ. ವಿಶೇಷವಾಗಿ ಹಳೆಯ ಕೋಟೆಯಲ್ಲಿ 1955 ಮತ್ತು 2013-14 ರಲ್ಲಿ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಡೆಸಿದ ಉತ್ಖನನಗಳಲ್ಲಿ ‘ಪೇಂಟೆಡ್ ಗ್ರೇ ವೇರ್’ (Painted Grey Ware) ಸಂಸ್ಕೃತಿಯ ಅವಶೇಷಗಳು ಪತ್ತೆಯಾಗಿವೆ. ಈ ಸಂಸ್ಕೃತಿಯು ಮಹಾಭಾರತದ ಕಾಲಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಅನೇಕ ಪ್ರಾಚೀನ ಗ್ರಂಥಗಳು, ಪ್ರವಾಸಿಗರು ಮತ್ತು ಇತಿಹಾಸಕಾರರು ದೆಹಲಿ ಪ್ರದೇಶವನ್ನು ‘ಇಂದ್ರಪತ್ತ’ ಅಥವಾ ‘ಇಂದ್ರಪ್ರಸ್ಥ’ ಎಂಬ ಹೆಸರಿನಿಂದಲೇ ಗುರುತಿಸಿದ್ದಾರೆ. ಈ ಸಾಂಸ್ಕೃತಿಕ ಸ್ಮೃತಿಯು ಇಂದಿಗೂ ಆಧುನಿಕ ದೆಹಲಿಯ ಪರಿಚಯದಲ್ಲಿ ಉಳಿದುಕೊಂಡಿದೆ.
ಹೆಸರು ಬದಲಾವಣೆಯ ಸಾಂಸ್ಕೃತಿಕ ಅರ್ಥ: ಇಂದ್ರಪ್ರಸ್ಥ ಎಂಬ ಹೆಸರು ಕೇವಲ ಐತಿಹಾಸಿಕವಲ್ಲ, ಅದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಸಂಕೇತವೂ ಹೌದು. ಮಹಾಭಾರತದ ಕಥೆಯ ಪ್ರಕಾರ, ಪಾಂಡವರು ಯಮುನಾ ನದಿಯ ದಡದಲ್ಲಿದ್ದ ಖಾಂಡವವನದಿಂದ (ಕಾಂಡವಪ್ರಸ್ಥ) ಹೊಸ ಭವ್ಯ ನಗರವನ್ನು ನಿರ್ಮಿಸಿದರು ಮತ್ತು ದೇವಾದಿದೇವ ಇಂದ್ರನ ಗೌರವಾರ್ಥವಾಗಿ ಆ ನಗರಕ್ಕೆ ‘ಇಂದ್ರಪ್ರಸ್ಥ’ ಎಂದು ಹೆಸರಿಟ್ಟರು. ಆದ್ದರಿಂದ ಈ ಹೆಸರು ದೈವಿ ಪರಂಪರೆ, ಸಾಂಸ್ಕೃತಿಕ ಗುರುತು ಮತ್ತು ರಾಜಸತ್ತೆ ಎಂಬ ಮೂರೂ ಅಂಶಗಳನ್ನು ಪ್ರತಿನಿಧಿಸುತ್ತದೆ. ಹೊಸ ಪೀಳಿಗೆಯನ್ನು ಅವರ ಇತಿಹಾಸದೊಂದಿಗೆ ಜೋಡಿಸುವ, ಸ್ವಾಭಿಮಾನದ ಭಾವನೆಯನ್ನು ಜಾಗೃತಗೊಳಿಸುವ ಈ ಹೆಸರು ದೆಹಲಿಯ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಅತ್ಯಂತ ಮಹತ್ವದ್ದಾಗಬಹುದು. ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಹೆಸರಿಡುವುದರಿಂದ ಪ್ರವಾಸೋದ್ಯಮ, ಸ್ಥಳೀಯ ಉದ್ಯಮಗಳು, ಹೋಟೆಲ್‌ಗಳು ಮತ್ತು ಕರಕುಶಲ ಕ್ಷೇತ್ರಗಳಿಗೂ ದೊಡ್ಡ ಲಾಭವಾಗಬಹುದು. ರಾಜಕೀಯ ಅಥವಾ ಆಡಳಿತಾತ್ಮಕ ಮಟ್ಟವನ್ನು ಮೀರಿ, ಈ ಬದಲಾವಣೆಯು ರಾಷ್ಟ್ರೀಯ ಸಾಂಸ್ಕೃತಿಕ ಪುನರುಜ್ಜೀವನದ ಒಂದು ದೊಡ್ಡ ಮೈಲಿಗಲ್ಲಾಗಬಲ್ಲದು.
‘ಇಂದ್ರಪ್ರಸ್ಥ’ದ ಶೋಧ, ಸಂಶೋಧನೆ ಮತ್ತು ಬೇಡಿಕೆ: ‘ದ್ರೌಪದಿ ಡ್ರೀಮ್ ಟ್ರಸ್ಟ್’ನ ನೀರಾ ಮಿಶ್ರಾ ಅವರು ಇಂದ್ರಪ್ರಸ್ಥದ ಇತಿಹಾಸದ ಬಗ್ಗೆ ಗಮನಾರ್ಹ ಸಂಶೋಧನೆ ನಡೆಸಿ ಈ ಪರಿಕಲ್ಪನೆಗೆ ಶಾಸ್ತ್ರೀಯ ಆಧಾರವನ್ನು ಒದಗಿಸಿದ್ದಾರೆ. ಹಳೆಯ ಕೋಟೆಯಲ್ಲಿ ಉತ್ಖನನಗಳು , ಮಹಾಭಾರತ ಮತ್ತು ಪೌರಾಣಿಕ ಸಂಹಿತೆಗಳ ಉಲ್ಲೇಖಗಳು, ಚೀನಾ-ಗ್ರೀಸ್ ಪ್ರವಾಸಿಗರ ದಾಖಲೆಗಳು, ಭೌಗೋಳಿಕ ಪ್ರತಿಪಾದನೆ ಮತ್ತು ಐತಿಹಾಸಿಕ ಸಾಹಿತ್ಯದ ಆಳವಾದ ಅಧ್ಯಯನ ಮಾಡಿ ಅವರು ‘ಇಂದ್ರಪ್ರಸ್ಥ ರಿವಿಸಿಟೆಡ್’ (Indraprastha Revisited) ಎಂಬ ಮಹತ್ವದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಿಜೆಪಿ ಸಂಸದ ಶ್ರೀ. ಪ್ರವೀಣ್ ಖಂಡೇಲ್ವಾಲ್ ಅವರು ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾ ಅವರಿಗೆ ದೆಹಲಿಯ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಲು ಪತ್ರದ ಮೂಲಕ ವಿನಂತಿಸಿದ್ದಾರೆ. ಹಳೆಯ ದೆಹಲಿ ರೈಲ್ವೆ ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ಜಂಕ್ಷನ್’ ಮತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡಲು, ಹಾಗೆಯೇ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸಲು ಅವರು ಒತ್ತಾಯಿಸಿದ್ದಾರೆ.
ಶಂಖನಾದ ಮಹೋತ್ಸವದಲ್ಲಿ ಈ ಭೂಮಿಕೆಯ ಮಹತ್ವ : ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಪ್ರಸ್ತುತ ಪಡಿಸುವ ಮತ್ತು ‘ಸನಾತನ ಸಂಸ್ಥೆ’ ಆಯೋಜಿಸುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಎಂಬ ರಾಷ್ಟ್ರೀಯ ಮಟ್ಟದ ಭವ್ಯ ಕಾರ್ಯಕ್ರಮವು 13-14 ಡಿಸೆಂಬರ್ 2025 ರಂದು ‘ಭಾರತ ಮಂಟಪ’ದಲ್ಲಿ (ಇಂದ್ರಪ್ರಸ್ಥ) ನಡೆಯಲಿದೆ. ಈ ಮಹೋತ್ಸವದಲ್ಲಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರ ಪ್ರದರ್ಶನ, ಪ್ರಾಚೀನ ಭಾರತೀಯ ಭದ್ರತಾ ವ್ಯವಸ್ಥೆ, ಶೌರ್ಯದ ಸ್ಮರಣೆ ಮತ್ತು ಸಾಂಸ್ಕೃತಿಕ ಪರಂಪರೆಯ ಜಾಗೃತಿಯನ್ನು ಮೂಡಿಸಲಾಗುವುದು. ಈ ಮಹೋತ್ಸವವು ಕೇವಲ ಸಾಂಸ್ಕೃತಿಕ ಪುನರುಜ್ಜೀವನದ ಕಿಡಿಯನ್ನು ಹೊತ್ತಿಸುವ ಕಾರ್ಯಕ್ರಮವಾಗಿ ಉಳಿಯದೆ, ‘ದೆಹಲಿಯಿಂದ ಇಂದ್ರಪ್ರಸ್ಥ’ದತ್ತ ಸಾಗುವ ಈ ಪರಿವರ್ತನೆಯ ಪ್ರಕ್ರಿಯೆಗೆ ಸಮಾಜದ ಸಾಮೂಹಿಕ ಸಹಭಾಗದ ಮೂಲಕ ವೇಗ ನೀಡುವ ಐತಿಹಾಸಿಕ ಕ್ಷಣವಾಗಲಿದೆ. ಬನ್ನಿ, ಇಂದ್ರಪ್ರಸ್ಥದ ಶಂಖನಾದ ಮಾಡಲು ನಾವೆಲ್ಲರೂ ಮುಂದೆ ಬರೋಣ!
-ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




