ಆಹಾರ ಸಂಸ್ಕೃತಿಯ ಪ್ರತೀಕ ಎಳ್ಳು ಅಮವಾಸ್ಯೆ

Upayuktha
0



ಳ್ಳು ಅಮವಾಸ್ಯೆ ದಕ್ಷಿಣಾಯನ ಮಾರ್ಗಶಿರಮಾಸದ ಅಮವಾಸ್ಯೆಯ ದಿನವಾಗಿದ್ದು, ಎಳ್ಳು ಬೆಳೆ ಬರುವ ದಿನವನ್ನು ಎಳ್ಳ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ನಮ್ಮ ದೇಶದ ಕರ್ನಾಟಕ, ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಅದೂ ಕರ್ನಾಟಕದ ಮಲೆನಾಡು ಉತ್ತರ ಕರ್ನಾಟಕ ಹಾಗೂ ದಕ್ಷಿಣಕನ್ನಡ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಎಳ್ಳುಅಮವಾಸ್ಯೆಯು ಆಹಾರ ಸಂಸ್ಕೃತಿಯ ಪ್ರತೀಕದ ದಿನವಾಗಿದೆ.


ಮಹಾಭಾರತದಲ್ಲಿ ಪಾಂಡವರು ಹಾಗೂ ಕೌರವರೊಂದಿಗೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದಂತಹ ಅವರ ಬಂಧುಮಿತ್ರರಿಗಾಗಿ ಪಿಂಡಪ್ರಧಾನ ಮಾಡಿರುವ ಈ ದಿನವನ್ನು ಎಳ್ಳ ಅಮವಾಸ್ಯೆ ಎಂದು ಆಚರಿಸಲಾಗುತ್ತದೆ.


ಇದೊಂದು ರೈತರ ಹಬ್ಬ. ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ.ಇವು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳಿಗೆ ಆಹಾರವಾಗುತ್ತದೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ.ಅವರು ಬೆಳೆದ ಹೊಲದಲ್ಲಿ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು ಹುಡುಕಿ ಅದಕ್ಕೆ ಪೂಜೆಮಾಡಿ ಭೂಮಿತಾಯಿಗೆ ಚರಗ ಚೆಲ್ಲುವದು ಈ ಹಬ್ಬದ ವಿಶೇಷತೆಯಾಗಿದೆ. ಕೆಲವರು ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ರೈತರ ಮನೆಗಳಲ್ಲಿ ನಾನಾ ರೀತಿಯ ಚಟ್ನಿ, ಕಾಳು, ಎಣ್ಣಗಾಯಿ, ಎಳ್ಳು ಹಾಗೂ ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ ಹಾಗೂ ಜೋಳದ ರೊಟ್ಟಿ, ಚಿಕ್ಕಿ, ಭರ್ತಾ, ಪಾಲಕ, ಮೆಂಥೆ ಉಪಯೋಗಿಸಿ ಮಾಡುವ ತಿಂಡಿ, ನಾನಾ ಬಗೆಯ ಖಾದ್ಯ ತಯಾರಿಸಿ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.


ವೈಜ್ಞಾನಿಕ ಕಾರಣ

ಎಳ್ಳ ಅಮವಾಸ್ಯೆ ಸಮಯದಲ್ಲಿ ಹಿಂಗಾರು ಪೈರು ಎಂದರೆ ಜೋಳ ಮತ್ತು ಕಡಲೆ ಬೆಳೆಯುತ್ತಾರೆ. ಜೋಳದ ಮಧ್ಯ ಬೆಳೆಯುವ ಕಡಲೆಗೆ ಕಾಯಕೊರಕ ಹುಳುಗಳು ಬೆಳೆಯ ನಾಶಕ್ಕೆ ಕಾರಣವಾಗುತ್ತವೆ. ಚರಗ ಚೆಲ್ಲಿದಾಗ ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳುಗಳನ್ನು ನಾಶ ಮಾಡುತ್ತವೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಂದು ಎತ್ತಿನಗಾಡಿ ಟ್ರ್ಯಾಕ್ಟರಗಳನ್ನುವ ಸಿಂಗರಿಸಲಾಗುತ್ತದೆ. ರೈತರು ಉತ್ತಮ ಬೆಳೆಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಕರ್ನಾಟಕದ ಮಲೆನಾಡು, ದಕ್ಷಿಣಕನ್ನಡ, ಉಡುಪಿ ಭಾಗಗಳಲ್ಲಿ ತೀರ್ಥಸ್ನಾನವೇ ಪ್ರಮುಖವಾಗಿದೆ. ಸಮುದ್ರ ಸ್ನಾನದಿಂದ ಚರ್ಮರೋಗ ಗುಣವಾಗುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ತರ್ಪಣ ಬಿಟ್ಟು ಬಡವರಿಗೆ ಊಟ ಹಾಕಿ ದಾನ ಮಾಡಿ ಶ್ರಾದ್ಧ ಕಾರ್ಯ ಮಾಡುವದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರುತ್ತದೆಂಬ ನಂಬಿಕೆಯಿದೆ. ಎಳ್ಳಿಗೆ ಪಾಪನಾಶಮಾಡುವ ಶಕ್ತಿಯಿದೆ ಎಂಬ ನಂಬಿಕೆ ಜನರಲ್ಲಿದೆ.



- ಗಿರಿಜಾ. ಎಸ್. ದೇಶಪಾಂಡೆ

ಸಾಹಿತ್ಯಶ್ರೀ ಬೆಂಗಳೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top