ಕಾಸರಗೋಡು: ಗಡಿನಾಡಿನ ಹಿರಿಯ ಕವಿ, ಸಾಹಿತಿ, ವಿದ್ವಾಂಸ, ಸಾಹಿತ್ಯ ಸಂಘಟಕ ಹಾಗೂ ಮಾಧ್ಯಮ ತಜ್ಞರಾದ ಡಾ. ವಸಂತಕುಮಾರ್ ಪೆರ್ಲ ಅವರಿಗೆ ಕನ್ನಡ ಭವನದ ಶ್ರೇಷ್ಠ ಗೌರವವಾದ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ – 2026” ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಪೆರ್ಲ ಮೂಲದವರಾದ ಡಾ. ಪೆರ್ಲ ಅವರು ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಂತು ಕಡಿಯದೆ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ರಚನೆ, ಸಂಘಟನೆ, ಸಂವರ್ಧನೆ ಹಾಗೂ ಕಿರಿಯ ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವ ಕಾರ್ಯಗಳಲ್ಲಿ ಅವರು ಸಕ್ರಿಯರಾಗಿದ್ದು, ಕನ್ನಡ ನಾಡು–ನುಡಿಯನ್ನು ಕಟ್ಟುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರವಾಸ ಕಥನ ಹಾಗೂ ಅನುವಾದ ಸೇರಿದಂತೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರು ಕೃತಿರಚನೆ ಮಾಡಿದ್ದಾರೆ. ಕನ್ನಡ, ತುಳು, ಇಂಗ್ಲಿಷ್ ಮತ್ತು ಹವ್ಯಕ ಭಾಷೆಗಳಲ್ಲಿ ಇದುವರೆಗೆ 55 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು, ಬಹುಭಾಷಾ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಕೆಲವು ಕೃತಿಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಳಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಪತ್ರಿಕೋದ್ಯಮ, ರೇಡಿಯೋ, ದೂರದರ್ಶನ, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿಯೂ ಅವರು ಕಾರ್ಯನಿರ್ವಹಿಸಿ ವ್ಯಾಪಕ ಅನುಭವ ಹಾಗೂ ಲೋಕಜ್ಞಾನವನ್ನು ಗಳಿಸಿದ್ದಾರೆ. ಸಮರ್ಥ ವಾಗ್ಮಿಯಾಗಿಯೂ ಗುರುತಿಸಿಕೊಂಡಿರುವ ಅವರು, ತಮ್ಮ ಕುಟುಂಬದವರನ್ನೂ ಸಾಹಿತ್ಯ–ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಅವರನ್ನೂ ಸಾಧನಾ ಮಾರ್ಗದಲ್ಲಿ ಮುನ್ನಡೆಸಿದ್ದಾರೆ.
ಡಾ. ಪೆರ್ಲ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಅವರ ಸಮಗ್ರ ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.
ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ 2026ರ ಜನವರಿ 18ರಂದು (ಭಾನುವಾರ) ನಡೆಯಲಿರುವ “ನಾಡು–ನುಡಿ ಹಬ್ಬ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


