ಡಿ.23- ರೈತ ದಿನಾಚರಣೆ: ನಮ್ಮ ಅನ್ನದಾತ ರೈತ

Upayuktha
0


ನಾವು ನಮ್ಮ ರೈತನನ್ನು ಈ ದೇಶದ ಬೆನ್ನೆಲುಬು ಎಂದೆಲ್ಲಾ ಕರೆಯುತ್ತೇವೆ. ಆದರೆ ಬೆನ್ನೆಲುಬು ನೆನಪಿಸಿಕೊಳ್ಳಲಿಕ್ಕೆ ನಾವು ಪ್ರತಿ ವರ್ಷ ಡಿಸೆಂಬರ್ 23ರಂದು ರೈತ ದಿನಾಚರಣೆ ಆಚರಿಸಿ ಅವನನ್ನು ನೆನಪಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಆದರೆ ಒಂದು ಲೆಕ್ಕಕ್ಕೆ ನೋಡಿದರೆ ದಿನವೂ ರೈತ ದಿನಾಚರಣೆ ಆಚರಿಸಿದರೆ ಒಂದು ಒಳ್ಳೆಯ ಕೆಲಸವೇ.


ನಮ್ಮ ರೈತನನ್ನು ನೆನಪಿಸಿಕೊಂಡರೆ ನಮ್ಮ ಮನಸ್ಸಿಗೆ ಬರುವಂತಹ ಚಿತ್ರ ಎಂದರೆ, ಹರಿದ ಶರ್ಟು, ಹರಿದ ಧೋತರ ಉಟ್ಟ, ಬ್ಯಾಂಕಿನ ಮ್ಯಾನೇಜರ್ ಮುಂದೆ ಕೈಜೋಡಿಸಿ ನಿಂತ ರೈತನ ಚಿತ್ರ ಬಂದು ನಿಲ್ಲುತ್ತದೆಯೋ ಹೊರತು, ಸೂಟು ಬೂಟು ತೊಟ್ಟ ರೈತನ ಚಿತ್ರ ಬರುವುದೇ ಇಲ್ಲ.


ಕೇವಲ ನೇಗಿಲ ಯೋಗಿ ಹಾಡನ್ನು ಹಾಡಿದ್ದೇವೆ ಹೊರತು ಕೃಷಿ ಕೈಗಾರಿಕೆಗೆ ಚಾಲೆಂಜ್ ಹಾಕುವ ಸ್ಥಿತಿ ಬರಲೇ ಇಲ್ಲ. ನಾವು ಎಳ್ಳು ಅಮವಾಸ್ಯೆ, ಸೀಗೆ ಹುಣ್ಣಿಮೆ, ದಿನ ಚರಗ ಚೆಲ್ಲಲು ಹೊರಟಾಗ ಮಾತ್ರ ನಮಗೂ ಹೊಲ ಇರಬೇಕಾಗಿತ್ತು ಅನಿಸುತ್ತದೆ.


ಆದರೆ ಕೃಷಿಯ ಹೊರೆ ಬೇಡ, ಆದರೆ ಲಾಭ ಮಾತ್ರ ಬೇಕು ಅನ್ನುವ ಮನಸ್ಥಿತಿ ಇರುವುದರಿಂದ ನಮಗೆ ರೈತನ ಬಗ್ಗೆ ಚಿಂತೆ ಮಾಡಲು, ಪುರುಸೊತ್ತಿಲ್ಲ, ಇದ್ದರೂ ಮನಸ್ಸಿಲ್ಲ.


ನಮಗೆ ಐಶಾರಾಮಿ ಜೀವನದ ಕಲ್ಪನೆ ಆವರಿಸುವುದರಿಂದ ಕೃಷಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಅನ್ನುವ ಹಾಗಾಗಿದೆ. ನಮ್ಮ ಬಜೆಟ್‌ನಲ್ಲಿಯೂ ಸಹ ಸುಮ್ಮನೆ ಒಂದಿಷ್ಟು ದುಡ್ಡು ತೆಗೆದಿಟ್ಟು. ಸಾಲ ಮನ್ನಾ ಮಾಡಿದರೆ ನಮ್ಮ ಕೆಲಸ ಮುಗಿದಂತೆ ಅಲ್ಲವೇ?


ಯಾವಾಗ ಕೃಷಿ. ಕೂಡ ಉಳಿದ ಕೈಗಾರಿಕೆಗಳಂತೆ ಯುವ ಜನತೆಯನ್ನು ಆಕರ್ಷಿಸಿದರೆ ಮಾತ್ರ ರೈತ ದಿನಾಚಾರಣೆಗೆ ಒಂದು ಅರ್ಥ ಬಂದಂತೆ.

ಆದರೆ ನಮ್ಮ ಯುವ ಜನಾಂಗ ಕೃಷಿ ಬಿಟ್ಟು ಓಡಿ ನಗರಗಳಲ್ಲಿ ಸೆಟ್ಲ್ ಆಗಿ ತುಂಬ ಕಾಲವೇ ಆಯ್ತು. ಈಗ ಕೃಷಿ ಏನಿದ್ದರೂ ವಯಸ್ಸಾದ ತಂದೆ ತಾಯಿಗೆ ಅಘೋಷಿತ ಜವಾಬ್ದಾರಿ ಅಷ್ಟೇ.


ಈಗ ಹಳ್ಳಿಗಳು ಕೇವಲ ಲೇಬಲ್ ಇಲ್ಲದ ವೃದ್ಧಾಶ್ರಮಗಳಾಗಿವೆ ಅಷ್ಟೇ. ಆದರೂ ಕಪ್ಪು ಕಾರ್ಮೋಡದಲ್ಲಿ ಬೆಳ್ಳಿ ಚುಕ್ಕಿ ಚಿತ್ತಾರ ಇದ್ದಂತೆ ಸಿಟಿ ಬಿಟ್ಟು ಹಳ್ಳಿಯ ಕಡೆಗೆ ಮುಖ ಮಾಡಿದ, ಕೃಷಿಯಲ್ಲಿ ತೊಡಗಿಸಿ ಕೊಂಡ ಜನರನ್ನು ಕಾಣುತ್ತೇವೆ.


ಈಗೀಗ ಆಧುನಿಕ ತಂತ್ರಜ್ಞಾನ ಹಳ್ಳಿಗೆ ಕಾಲಿಟ್ಟಿದೆ. ಹಳ್ಳಿಯಿಂದ ಸ್ಕೂಲ್ ವ್ಯಾನುಗಳು ಮಕ್ಕಳನ್ನು ಸಿಟಿ ಶಾಲೆಗೆ ಕರೆದುಕೊಂಡು ಬರುವುದನ್ನು  ನೋಡ ಬಹುದು. ಕೋವಿಡ್ ಕಾಲದಲ್ಲಿ ಶುರುವಾದ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯಿಂದ ಎಷ್ಟೋ ಜನ ಹಳ್ಳಿಗೆ ಬಂದು ತಂದೆ ತಾಯಿಗಳ ಜೊತೆಗೆ ಬಂದು ಇರತೊಡಗಿದರು.


ಕೇವಲ ಊರ ಜಾತ್ರೆಗೆ ಬಂದು ಮುಖ ತೋರಿಸಿ ಹೋಗುತ್ತಿದ್ದ ಜನ ಸಾವಕಾಶವಾಗಿ ಲ್ಯಾಪ್‌ಟಾಪ್ ಜೊತೆಗೆ ಹಳ್ಳಿಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಶುರು ಮಾಡಿದರು. ಈಗಲೂ ಕೆಲವು ಯುಟ್ಯೂಬರ್ ಗಳು ಕೃಷಿಯ ಮೇಲೆ ವಿಡಿಯೋ ಮಾಡಲು ಶುರು ಮಾಡಿದ ಮೇಲೆ ಕೃಷಿಯಲ್ಲಿ ಕೂಡ ಆಧುನಿಕತೆಯ ಗಾಳಿ ಬೀಸುತ್ತಿದೆ ಅನ್ನಬಹುದು.


ಏನೇ ಇರಲಿ, ನಮ್ಮ ಕೃಷಿಗಾಗಿಯೇ ಒಂದು ಬಜೆಟ್ ಬಂದು, ನಮ್ಮ ರೈತ ಕೂಡ ಬಿಸಿನೆಸ್ ಮ್ಯಾನ್ ರೇಂಜಿಗೆ ಸೂಟು ಬೂಟು ತೊಟ್ಟು ಬ್ಯಾಂಕಿನ ಮ್ಯಾನೇಜರ್ ಮುಂದೆ ಖುರ್ಚಿ ಮೇಲೆ ಕುಳಿತುಕೊಂಡು ಮಾತನಾಡಲು ಶುರು ಮಾಡಿದರೆ ರೈತ ದಿನಾಚರಣೆ ಕೂಡ ಅರ್ಥ ಪೂರ್ಣ ಅನಿಸಿಕೊಳ್ಳುತ್ತದೆ ಅಲ್ಲವೇ? ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top