ಬಂಟ್ವಾಳ: ಮೊಂಟೆಪದವಿನ ಮಾಧವ ವನದಲ್ಲಿರುವ ಸೇವಾ ಭಾರತಿ ಸಂಸ್ಥೆಯಲ್ಲಿ ನ.27ರಂದು ವೈದ್ಯರೊಂದಿಗೆ ಅರ್ಥಪೂರ್ಣ ಸಮಾಲೋಚನಾ ಸಭೆ ನಡೆಯಿತು. ಭಾರತೀಯ ಮೆಡಿಕಲ್ ಅಸೋಸಿಯೇಶನ್‌ನ ಮಹಿಳಾ ವಿಭಾಗ, ವೈದ್ಯಕೀಯ ಸಲಹೆಗಾರರ ಸಂಘ ಮತ್ತು ಭಾರತೀಯ ಮೆಡಿಕಲ್ ಅಸೋಸಿಯೇಶನ್, ಮಂಗಳೂರು ವಿಭಾಗ ಇವುಗಳ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 20 ಮಂದಿ ವೈದ್ಯರುಗಳು ಭಾಗವಹಿಸಿದ್ದರು.
ಖ್ಯಾತ ಮೂಳೆತಜ್ಞರೂ ಸೇವಾ ಭಾರತಿ ಸಂಸ್ಥೆಯ ವಿಶ್ವಸ್ಥರೂ ಆದ ಡಾ. ಕೆ.ಆರ್.ಕಾಮತ್ ಅವರು ಸ್ವಾಗತಿಸಿದ ನಂತರ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಪೃಥ್ವೀಪಾಲ್ ಅವರು ಸೇವಾ ಭಾರತಿಸಂಸ್ಥೆಯು ದಿವ್ಯಾಂಗರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮ ಮತ್ತು ಮುಂದಿನ 3 ವರ್ಷಗಳ ಯೋಜನೆಯ ಕಾರ್ಯತಂತ್ರದ ಮಾಹಿತಿಯನ್ನು ವಿವರಿಸಿದರು.
ಸೇವಾ ಭಾರತಿ ವಿಶ್ವಸ್ಥರೂ, ಖ್ಯಾತ ಮನೋವೈದ್ಯರೂ ಆದ ಡಾ. ಸತೀಶ್ ರಾವ್ ಅವರು ದಿವ್ಯಾಂಗರ ಆರೈಕೆಗಾಗಿ ವೈದ್ಯಕೀಯ ಸಂಸ್ಥೆಗಳು ಹೇಗೆ ಸೇವಾಭಾರತಿಯೊಂದಿಗೆ ಕೈಜೋಡಿಸಬಹುದು ಎಂಬುದರ ಬಗ್ಗೆ ಮಾಹಿತಿ ಇತ್ತರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳೂ,ಸೇವಾ ಭಾರತಿಯ ಸಲಹಾ ಮಂಡಳಿ ಸದಸ್ಯರೂ ಆದ ಖ್ಯಾತ ವೈದ್ಯರಾದ ಡಾ. ಶಾಂತಾರಾಮ ಶೆಟ್ಟಿ ಎಂ.ಬಿ.ಬಿ.ಎಸ್, ಎಂ.ಎಸ್ (ಆರ್ಥೋ), ಎಫ್.ಐ.ಸಿ.ಎಸ್. (ಆರ್ಥೋ) ಅವರು ಈ ವಿಷಯದ ಬಗ್ಬೆ ಕೆ.ಎಸ್. ಹೆಗ್ಡೆ ಮತ್ತು ನಿಟ್ಟೆ ಸಂಸ್ಥೆಗಳ ಆಡಳಿತ ವರ್ಗದೊಂದಿಗೆ ಮಕ್ಕಳ ತಜ್ಞರು, ಮೂಳೆ ತಜ್ಞರು, ಥೆರಪಿಸ್ಟ್, ಮನೋವೈದ್ಯರು ಇತ್ಯಾದಿ ವೈದ್ಯರ ತಂಡವನ್ನು ನಿಯಮಿತವಾಗಿ ಮಾಧವ ವನಕ್ಕೆ ಕಳುಹಿಸುವ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದುದು ಗಮನಾರ್ಹ ಅಂಶವಾಗಿತ್ತು.
ಎಲ್ಲಾ ವೈದ್ಯರುಗಳೂ ಸೇವಾಭಾರತಿಯು ದಿವ್ಯಾಂಗರಿಗಾಗಿ ನಡೆಸುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಈ ಸಭೆಯಲ್ಲಿ ಭಾರತೀಯ ಮೆಡಿಕಲ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ಡಾ. ಜೆಸ್ಸಿಮಿಯಾ, ಪ್ರಸ್ತುತ ಅಧ್ಯಕ್ಷರಾದ ಡಾ.ಪ್ರೇಮಾ ಡಿ ಕುನ್ಹಾ, ಭಾರತೀಯ ಮೆಡಿಕಲ್ ಅಸೋಸಿಯೇಶನ್,ಮಂಗಳೂರು ಇದರ ಅಧ್ಯಕ್ಷರಾದ ಡಾ.ಸದಾನಂದ ಪೂಜಾರಿ, ವೈದ್ಯಕೀಯ ಸಲಹೆಗಾರರ ಸಂಘದ ಅಧ್ಯಕ್ಷರಾದ ಡಾ. ಆನಂದ ಬಂಗೇರಾ ಅವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






