"ಅತಿಯಾದರೆ ಅಮೃತವೂ ವಿಷ" ಈ ಗಾದೆಯನ್ನು ನಾವೆಲ್ಲರೂ ಹಿರಿಯರಿಂದ ಕೇಳಿ ತಿಳಿದುಕೊಂಡವರು. ಯಾವುದೂ ಅತಿಯಾಗಬಾರದು, ಎಲ್ಲವೂ ಇತಿಮಿತಿಯಲ್ಲಿದ್ದರೆ ಮಾತ್ರ ಅದಕ್ಕೆ ಬೆಲೆ ಎಂಬುದನ್ನೂ ಅರಿತವರು. ಆದರೂ ಕೆಲವೊಂದು ಬಾರಿ ತಪ್ಪು ನಡೆಯುತ್ತಿದೆ ಎಂದಾಗ ಪ್ರತಿರೋಧ ತೋರದೆ ಮೌನವಾಗಿ ಇದ್ದು ಬಿಡುತ್ತೇವೆ. ಎಲ್ಲವೂ ಅನುಕೂಲ ಶಾಸ್ತ್ರ. ಹೌದಲ್ವೆ... ಈಗಿನ ಕಾಲದಲ್ಲಿ ಇದ್ದ ತಲೆಬಿಸಿಯೇ ಜಾಸ್ತಿಯಾಗಿದೆ ಅದರ ನಡುವಲ್ಲಿ ಬೇಡದ ಉಸಾಬರಿ ನಮಗೇಕೆ...? ಹೀಗೆ ಹಲವಾರು ಬಾರಿ ಅಂದುಕೊಂಡು ಸುಮ್ಮನಾಗಿ ಬಿಡುತ್ತೇವೆ. ಈಗೀಗ "ಮೈ ಲೈಫ್ ಮೈ ರೂಲ್ಸ್" ಬೋರ್ಡನ್ನು ಕುತ್ತಿಗೆಗೆ ನೇತಾಡಿಸಿಕೊಂಡು ತಿರುಗುವವರೇ ಜಾಸ್ತಿಯಾಗಿದ್ದಾರೆ. ಹಾಗಾಗಿ ತಪ್ಪಿ ನಾವೇನಾದ್ರು ಹೇಳಿ ಬಿಟ್ಟರೆ ಸುಮ್ಮನೆ ಕೋಲು ಕೊಟ್ಟು ಪೆಟ್ಟು ತಿನ್ನುವ ಹಾಗೆ ಆಗುತ್ತದೆ. ಆದರೂ ಕೆಲವು ಸಲ ಮನಸ್ಸು ಒಪ್ಪುವುದಿಲ್ಲ.
ಸಮಾಜದಲ್ಲಿ ಇತ್ತೀಚೆಗೆ ಏನು ನಡೆಯುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಬಿಡಿಸಿ, ಹೇಳಬೇಕಾದ ಅವಶ್ಯಕತೆಯೇ ಇಲ್ಲ ಇಲ್ಲಿ. ದೈವಾರಾಧನೆ ದೈವನಡೆಯನ್ನು ಬಿಟ್ಟಾಗಿನ ಈಗಿನ ಸ್ಥಿತಿಯನ್ನು ಗಮನಿಸಿ, ಯಕ್ಷಗಾನ ರಂಗಸ್ಥಳ ಬಿಟ್ಟು ಹಾಸ್ಯ ವೇದಿಕೆ ಏರಿದಾಗ ಏನಾಗುತ್ತಿದೆ ನೋಡಿ. ಭಾರತದಲ್ಲಿ ಶಸ್ತ್ರ ಮತ್ತೆ ಶಾಸ್ತ್ರಕ್ಕೆ ವಿಶೇಷ ಮರ್ಯಾದೆ ಇದೆ. ಅದನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ವೈಯಕ್ತಿಕ ಪ್ರತಿಷ್ಠೆಗಾಗಿ ಅದರ ಬಲಿಯಾಗ ಬಾರದು ಅಷ್ಟೇ. ಈಗಿನ ನವ ಸಮಾಜ ಹೊಸತನವನ್ನು ಬಯಸುತ್ತಿದೆ. ಹಾಗಾಗಿ ಕೆಲವೊಮ್ಮೆ ಅಲ್ಲಿಲ್ಲಿ ಎಡವಟ್ಟುಗಳಾಗುತ್ತಿವೆ.
ಇತ್ತೀಚೆಗೆ ಮಾಧ್ಯಮದಲ್ಲಿ ಎಲ್ಲಾ ಕಡೆ ಚಿತ್ರ ವಿಚಿತ್ರ ದಾಖಲೆಗಳದ್ದೇ ಸುದ್ದಿ. ನೋಡಿ ನೋಡಿ ಬೇಸತ್ತು ಹೋಯಿತು. ಇತ್ತೀಚೆಗಷ್ಟೇ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆಯೊಬ್ಬರು ಅತೀ ದೀರ್ಘ ಕಾಲದವರೆಗೆ ನಾಟ್ಯ ಮಾಡಿ ದಾಖಲೆ ಮಾಡಿದರು. ಪ್ರಥಮವಾಗಿ ಎಲ್ಲರೂ ಪ್ರೋತ್ಸಾಹ ನೀಡಿದರು, ಬೆನ್ನು ತಟ್ಟಿ ಭೇಷ್ ಅಂದರು. ಆದರೆ ನಂತರದಲ್ಲಿ ಅದು ವಾಕರಿಕೆ ಬರುವಷ್ಟು ವಿಷಮವಾಗಿ ಹೋಯಿತು.
ಈಗ ಅದೇ ಸಾಲಿನಲ್ಲಿ ಮತ್ತೊಂದು ಹೊಸ ಸೇರ್ಪಡೆ ಸ್ಕೇಟಿಂಗ್ ಮಾಡುತ್ತಾ ಡ್ಯಾನ್ಸ್. ಆ ಕಲಾವಿದೆಯ ಬಗ್ಗೆ ನನಗೆ ಖಂಡಿತಾ ಗೌರವವಿದೆ. ಅವರ ಪ್ರಯತ್ನ ಶ್ಲಾಘನೀಯ, ಅದರಲ್ಲಿ ಎರಡು ಮಾತಿಲ್ಲ. ನಾವು ಇಲ್ಲಿ ಕುಳಿತು ಟೀಕಿಸಿದಷ್ಟು ಸುಲಭವಲ್ಲ ವೇದಿಕೆಯಲ್ಲಿ ಪ್ರದರ್ಶನ ಮಾಡಿ ದಾಖಲೆ ಮಾಡುವುದು. ಅವರು ರಕ್ತವೇ ಬೆವರಾಗಿಸಿ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಮೆಚ್ಚಿ ಅಭಿನಂದಿಸಬಹುದು. ಆದರೆ ಮನಸ್ಸಿಗೆ ನೋವೆನಿಸುವುದು ಅವರ ಆಯ್ಕೆ ಎಂಬ ವಿಷಯ ಬಂದಾಗ.
ನಾವೆಲ್ಲರೂ ಈಗಾಗಲೇ ಎಲ್ಲ ಕಡೆ ಮಾಧ್ಯಮದಲ್ಲಿ ನೋಡಿದ್ದೇವೆ ಸ್ಕೇಟಿಂಗ್ ಶೂ ಧರಿಸಿ ಗಣಪತಿ ಸ್ತುತಿ...! ಇದರ ಅನಿವಾರ್ಯತೆ ನಿಜವಾಗಿಯೂ ಇತ್ತೇ...? ದಾಖಲೆಗಾಗಿ ಆರಾಧನಾ ಕಲೆಯನ್ನು ಪಣಕ್ಕಿಡುವುದು ಎಷ್ಟು ಸರಿ....? ಯಾಕೆ ಸೆಮಿ ಕ್ಲಾಸಿಕಲ್, ಬಾಲಿವುಡ್, ವೆಸ್ಟರ್ನ್ ಅಲ್ಲದೆ ಕಟ್ಟುನಿಟ್ಟಿನ ಕ್ರಮವಿಲ್ಲದ ಅದೆಷ್ಟೋ ನೃತ್ಯ ಪ್ರಕಾರಗಳಿವೆ. ಅದನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದಿತ್ತು.? ಅಥವಾ ಒಂದು ವೇಳೆ ಅವರ ಪರಿಣಿತಿ ಆ ಪ್ರಕಾರದಲ್ಲಿ ಮಾತ್ರ ಇದೆ, ಅವರಿಗೆ ಅದರಲ್ಲೇ ದಾಖಲೆ ಮಾಡಬೇಕು ಎನ್ನುವ ಹಠವಿದ್ದರೆ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗ್ರತೆ ಮಾಡಬಹುದಿತ್ತಲ್ವೇ...? ಶೂ ಹಾಕಿಕೊಂಡು ದೇವರನಾಮ, ದೇವರ ಸ್ತುತಿ ಬೇಕಿತ್ತೇ...? ನಾಳೆ ಏನಾದರೂ ಅವರಿಗೆ ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರ ಕಲಾ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಅಲ್ಲಿಯೂ ಅವರು ಶೂ ಹಾಕಿ ಕುಣಿಯಬಹುದೇ....? (ಈಗ ಅದನ್ನು ಕೂಡ ಹೇಳಲು ಆಗುವುದಿಲ್ಲ. ಆಯೋಜಕರೆ "ನೀವು ದಾಖಲೆ ಮಾಡಿದ್ದು ಅದರಲ್ಲೇ ಅಲ್ವಾ ಹಾಕಿ ಕುಣಿಯಿರಿ" ಅಂತಾ ಹೇಳಲೂಬಹುದು).
ಅಂತೂ ಇಂತೂ ಅದರಷ್ಟಕ್ಕೆ ಸ್ವಚ್ಛಂದವಾಗಿದ್ದ ನಮ್ಮ ಪುರಾತನ ಕಲೆ, ಸಂಸ್ಕೃತಿ, ಆರಾಧನೆ ಎಲ್ಲವೂ ಬದಲಾವಣೆಯ ಗಾಳಿಗೆ ಸಿಕ್ಕು ಎಲ್ಲಿಂದರಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಒಪ್ಪಿಕೊಳ್ಳುವ, ಬದಲಾವಣೆ ಜಗದ ನಿಯಮ; ಹಾಗಂತ ಗುರುತೇ ಸಿಗದಷ್ಟು ಬದಲಾಗಿ ಹೋದರೆ ಮೂಲ ಸಂಸ್ಕೃತಿ ನಾಶವಾಗುವುದಿಲ್ವೇ...? ನಮ್ಮ ಮೂಲವನ್ನು ಬಿಟ್ಟು ನಮಗೆ ಬದುಕಲಾದೀತೇ...?.
- ಗೀತಾ ಲಕ್ಷ್ಮೀಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



