ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂದು ಬದುಕಿದ್ದರೆ ಅವರಿಗೆ ನೂರು ವರ್ಷವಾಗುತ್ತಿತ್ತು. ದೇಶ ಕಂಡ ಅದ್ಬುತ ಪ್ರಧಾನಿಗಳಲ್ಲಿ ವಾಜಪೇಯಿಯವರು ಅಗ್ರಮಾನ್ಯರಾಗಿದ್ದರು. ಅವರ ಅಪೂರ್ವವಾದ ನೀತಿ ಧೋರಣೆಗಳು ಸ್ಪಷ್ಟ ಗುರಿಯನ್ನು ಹೊಂದಿರುವ ಯೋಜನೆಗಳು ಇಂದು ಭಾರತದ ಅಭಿವೃದ್ಧಿಗೆ ಬೆಳಕಾಗಿ ನಿಂತಿವೆ.
ಇಚ್ಛಾಶಕ್ತಿಯ ಪ್ರಬಲ ನಾಯಕ ವಾಜಪೇಯಿ:
ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಮ್ಮ ದೇಶಕ್ಕೆ ಅತ್ಯುತ್ತಮ ನಾಯಕತ್ವವನ್ನು ಒದಗಿಸಿದರು ಮತ್ತು ವಿಶ್ವಾದ್ಯಂತ ಮೆಚ್ಚುಗೆಯನ್ನು ಗಳಿಸಿದರು. ಹಿಂದಿಯಲ್ಲಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ. ಅವರು ನೀಡಿದ ಕೊಡುಗೆಗಳು ಇತಿಹಾಸದಲ್ಲಿ ಮೈಲಿಗಲ್ಲುಗಳಾಗಿ ಉಳಿಯುತ್ತವೆ. ಬಲವಾದ ಆರ್ಥಿಕತೆಗೆ ದಾರಿ ಮಾಡಿಕೊಟ್ಟ ಆರ್ಥಿಕ ಮತ್ತು ಮೂಲಭೂತ ಸೌಕರ್ಯ ಯೋಜನೆಗಳು ಅದರಲ್ಲಿಯೂ ಉತ್ತಮ ಗುಣಮಟ್ಟದ ಎಕ್ಸ್‌ಪ್ರೆಸ್ ಹೆದ್ದಾರಿಗಳ ಮೂಲಕ ದೇಶವನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಕಾಯ೯ ವಿಶೇಷ, ಅವರ ಅವಧಿಯಲ್ಲಿ, ನೆರೆಯ ದೇಶಗಳೊಂದಿಗಿನ ಸಂಬಂಧಗಳು ಹೊಸ ಉತ್ತುಂಗಕ್ಕೇರಿತು. ದೆಹಲಿ-ಲಾಹೋರ್ ಬಸ್ ಸೇವೆಯ ಉಪಕ್ರಮದ ಮೂಲಕ ನೆರೆಯ ದೇಶಗಳೊಂದಿಗೆ ಶಾಂತಿಯುತ ಅಸ್ತಿತ್ವದ ಬಗ್ಗೆ ಅವರ ಕಾಳಜಿಯನ್ನು ಶ್ಲಾಘಿಸಬಹುದು. ಅವರು ವಿಶ್ವ ಶಕ್ತಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಸ್ಥಾಪಿಸುವಲ್ಲಿಯೂ ಯಶಸ್ವಿಯಾದರು. ಅವರ ನಾಯಕತ್ವದಲ್ಲಿ, ಭಾರತವು ದಾರಿಯಲ್ಲಿ ಬರುವ ಯಾವುದೇ ಕಠಿಣ ಪರಿಸ್ಥಿತಿಯನ್ನು ಕುಶಲತೆಯಿಂದ ನಿಭಾಯಿಸಲು ಸಾಧ್ಯವಾಗಿದೆ.
ವಿಶ್ವಶಾಂತಿ ನಿರ್ಮಾಣವಾಗಲು ಅವರ ನೀತಿ ವಿದೇಶದೊಂದಿಗೆ ಅವರ ಮಾತುಕತೆ ಮಹತ್ವದ್ದಾಗಿದೆ.
ಅಭಿವೃದ್ಧಿಯೇ ಮಂತ್ರ:
ಭಾರತದ ಅಭಿವೃದ್ಧಿ ಅವರ ಕಾರ್ಯಸೂಚಿಯಲ್ಲಿ ಪ್ರಮುಖವಾಗಿತ್ತು. ಅವರ ಸರ್ಕಾರವು ಆರ್ಥಿಕ ಉದಾರೀಕರಣ ಪ್ರಕ್ರಿಯೆಯನ್ನು ವಿಸ್ತರಿಸಿತು ಮತ್ತು ಭಾರತೀಯ ಆರ್ಥಿಕತೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಸುಗಮಗೊಳಿಸಿತು. ಲಕ್ಷಾಂತರ ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರವನ್ನು ಒದಗಿಸಲು 2000 ರಲ್ಲಿ ಪರಿಚಯಿಸಲಾದ ಅಂತ್ಯೋದಯ ಅನ್ನ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ- ಸುವರ್ಣ ಚತುಷ್ಪಥ ಮತ್ತು 2000-01 ರಿಂದ ಕಾರ್ಯನಿರ್ವಹಿಸುತ್ತಿರುವ ಸರ್ವ ಶಿಕ್ಷಾ ಅಭಿಯಾನ, ಸಾಕ್ಷರತೆಯನ್ನು ಹರಡಲು ಅವರು ತಮ್ಮ ಪ್ರಧಾನಿ ಅವಧಿಯಲ್ಲಿ ಕೈಗೊಂಡ ಕೆಲವು ಗಮನಾರ್ಹ ಉಪಕ್ರಮಗಳಾಗಿವೆ.
ಸಂವಿಧಾನಕ್ಕೆ 86ನೇ ತಿದ್ದುಪಡಿಯನ್ನು ತರುವ ಮೂಲಕ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದವರು ವಾಜಪೇಯಿ. ಈ ಕಾಯ್ದೆಯು 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಉಚಿತಗೊಳಿಸಿದೆ. ಪೋಖ್ರಾನ್ ಪರಮಾಣು ಪರೀಕ್ಷೆಗಳು ಮತ್ತು ಭಯೋತ್ಪಾದನಾ ತಡೆ ಕಾಯ್ದೆಯು ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ಅವರ ದೃಢನಿಶ್ಚಯ ಮತ್ತು ಧೈರ್ಯಕ್ಕೆ ಸಾಕ್ಷಿಯಾಗಿದೆ.
ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ:
ವಾಜಪೇಯಿ ಸರಳ ಮತ್ತು ಅನುಕರಣೀಯ ಜೀವನವನ್ನು ನಡೆಸಿದರು. ಅವರು ಗ್ವಾಲಿಯರ್‌ನಲ್ಲಿರುವ ತಮ್ಮ ಏಕೈಕ ಆಸ್ತಿಯನ್ನು ಕೃಷ್ಣ ಬಿಹಾರಿ ವಾಜಪೇಯಿ ಟ್ರಸ್ಟ್ ಅಡಿಯಲ್ಲಿ ಮಕ್ಕಳಿಗಾಗಿ ಓದುವ ಕೋಣೆಯನ್ನಾಗಿ ಪರಿವರ್ತಿಸಿದರು ಭಾರತದ ಪ್ರಧಾನಿಯಾಗಿದ್ದರೂ ಕೂಡ ತಮ್ಮ ಸರಳ ಜೀವನದಿಂದ ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವ ಹೊಂದಿದ್ದರು.
ಪ್ರಶಾಂತಮನಸ್ಕತೆ:
ಎಷ್ಟು ಒತ್ತಡ ಇದ್ದಾಗಲೂ ವಾಜಪೇಯಿ ಅವರ ಹಸನ್ಮುಖ ಬಾಡುತ್ತಿರಲಿಲ್ಲ. ಸಂಜೆಯಾದೊಡನೆ ’ಚಲಿಯೇ, ಪಿಕ್‌ಚರ್ ದೇಖತೇ ಹೈ’ ಎಂದು ಯಾವುದೋ ಹಿಂದಿ ಸಿನೆಮಾ ನೋಡಲು ಉತ್ಸಾಹದಿಂದ ಹೊರಟುಬಿಡುವರು. ಅಂತರಂಗದಲ್ಲಿ ಪ್ರಶಾಂತಿ ನೆಲೆನಿಂತಿದ್ದವರಿಗೆ ಮಾತ್ರ ಇಂತಹ ಆನಂದಮಯತೆ, ಅವಿಚಲಿತತೆ ಸ್ವಭಾವಗತವಾಗಿ ಇರಬಲ್ಲದು.
ಅದ್ಭುತ ಸಂಘಟಕ:
ಒಮ್ಮೆ ಹೊಸ ಸಂಸದರನ್ನು ಪರಿಚಯ ಮಾಡಿಸಿದಾಗ ಆಗಿನ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ “ಭಾರತೀಯ ಜನಸಂಘ ಎಂದಿರಾ? ಆ ಹೆಸರಿನ ರಾಜಕೀಯ ಪಕ್ಷ ಇರುವುದೇ ನನಗೆ ಗೊತ್ತಿರಲಿಲ್ಲ!” ಎಂದು ಹಾಸ್ಯಪೂರ್ವಕ ಹೇಳಿದ್ದುದುಂಟು. ಅಂತಹ ಸನ್ನಿವೇಶದಿಂದ ವಾಜಪೇಯಿಯವರು ಪಕ್ಷವನ್ನು ಯಾವ ಸ್ಥಿತಿಗೆ ಏರಿಸಿದರೆಂಬುದು ಈಗ ಇತಿಹಾಸ.
ಒಟ್ಟಾಗಿ ಹೇಳುವುದಾದರೆ, ವಾಜಪೇಯಿ ಅವರು ನಮ್ಮ ದೇಶದ ನಿಜವಾದ ಭಾರತ ರತ್ನ ದೇಶವು ಇಂದು ಈ ಮಟ್ಟದಲ್ಲಿ ಇರಲು ಅವರ ದೂರ ದೃಷ್ಟಿಯ ಯೋಜನೆಗಳೇ ಕಾರಣ. ಎಲ್ಲರೊಂದಿಗೆ ಸ್ನೇಹಭಾವ ಕವಿ ಮನಸ್ಸಿನ ಅವರ ಮಾತುಗಳನ್ನು ಕೇಳುವುದೇ ಚೆಂದ ಇಂತಹ ಅಪರೂಪದ ವ್ಯಕ್ತಿತ್ವದ ವಾಜಪೇಯಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ನೆನಪು ಸದಾ ಕಾಲ ಇರುತ್ತದೆ.
ಅವರ ಜನ್ಮದಿನವನ್ನು ಸರ್ಕಾರ ಸುಶಾಸನ ದಿನವಾಗಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ. ಅಟಲ್ ರವರು ಕಂಡ ನವ ಭಾರತದ ಕನಸು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ.
- ರಾಘವೇಂದ್ರ ಪ್ರಭು ಕರ್ವಾಲು
ಸಂ. ಕಾರ್ಯದರ್ಶಿ, ಕಸಾಪ ಉಡುಪಿ ತಾಲೂಕು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


