ಆಯುರ್ವೇದ ಪರ್ಯಾಯವಲ್ಲ, ಇದು ಈ ನೆಲದ ಮೂಲ ಹಾಗೂ ಸಮಗ್ರ ಜೀವನ ಪದ್ಧತಿ: ಗಣ್ಯರ ಅಭಿಪ್ರಾಯ

Upayuktha
0

 



ಬೆಂಗಳೂರು: ಆಯುರ್ವೇದವು ಪರ್ಯಾಯ (Alternative) ವೈದ್ಯಕೀಯ ಪದ್ಧತಿಯಲ್ಲ. ಅದು ಈ ನೆಲದ (Native) ಮೂಲ ವೈದ್ಯಕೀಯ ಪದ್ಧತಿಯಾಗಿದ್ದು, ಕೇವಲ ಚಿಕಿತ್ಸೆಗಷ್ಟೇ ಸೀಮಿತವಲ್ಲದೆ ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ಆಯುರ್ವೇದ ವಿಶ್ವ ಸಮ್ಮೇಳನದ ರೂವಾರಿ ಡಾ. ಗಿರಿಧರ ಕಜೆ ಹೇಳಿದರು.


ಅವರು ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಮಾತನಾಡಿ, ಈ ಸಮ್ಮೇಳನ ಹಲವು ದಾಖಲೆಗಳನ್ನು ಬರೆಯಲು ಸಿದ್ಧವಾಗಿದ್ದು, 6000ಕ್ಕೂ ಅಧಿಕ ದೇಶ–ವಿದೇಶಗಳ ಪ್ರತಿನಿಧಿಗಳು, ನೂರಾರು ಮಳಿಗೆಗಳು, ಆಯುರ್ವೇದ ಅನುಭವ ಕೇಂದ್ರಗಳು ಸೇರಿದಂತೆ ಅನೇಕ ವೈಶಿಷ್ಟ್ಯಗಳ ಮೂಲಕ ಇತಿಹಾಸ ನಿರ್ಮಿಸಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸಿರಿಗೆರೆ ಮಠದ ಶ್ರೀಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಆಚಾರ್ಯ ಸುಶ್ರುತರು ಶಸ್ತ್ರಚಿಕಿತ್ಸೆಯ ಮೂಲಪುರುಷರಾಗಿದ್ದು, ಅವರ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬ್ರಿಟಿಷ್ ಕಾಲದಲ್ಲಿಯೂ ಸೈನ್ಯದಲ್ಲಿ ಅನುಸರಿಸಲಾಗುತ್ತಿತ್ತು ಎಂದು ಹೇಳಿದರು. ಆಯುರ್ವೇದದ ಸೇವೆಗಾಗಿ ಡಾ. ಗಿರಿಧರ ಕಜೆ ಅವರ ಶ್ರಮವನ್ನು ಅವರು ಅಭಿನಂದಿಸಿದರು.


ಎಲ್ಲಾ ಆರೋಗ್ಯ ಪದ್ಧತಿಗಳ ಮೂಲ ಉದ್ದೇಶ ಆರೋಗ್ಯ ರಕ್ಷಣೆ ಆಗಿದೆ. ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಒಂದು ಪದ್ಧತಿಯನ್ನು ಮತ್ತೊಂದು ಪದ್ಧತಿಯನ್ನು ತೆಗಳುವಂತೆ ಬಳಸಬಾರದು ಎಂದು ಶ್ವಾಸಗುರು ಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.


ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಆಯುರ್ವೇದ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಪ್ರಭಾವ ಬೀರಿದ್ದು, ಜಗತ್ತು ಆಯುರ್ವೇದದತ್ತ ವಾಲುತ್ತಿದೆ ಎಂದರು. ಆಯುರ್ವೇದ ಶಕ್ತಿಶಾಲಿಯಾದರೂ ಅದನ್ನು ಆಧುನಿಕ ಸಂಶೋಧನೆಗಳ ಮೂಲಕ ದಾಖಲೆಗೊಳಿಸುವ ಕಾರ್ಯ ಅಗತ್ಯವಿದೆ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ಡಾ. ಗಿರಿಧರ ಕಜೆ ಅವರು ಆಯುರ್ವೇದ ಔಷಧಿಯನ್ನು ಕಂಡುಹಿಡಿದು ಉಚಿತವಾಗಿ ವಿತರಿಸಿದ್ದನ್ನು ಅವರು ಸ್ಮರಿಸಿದರು.


ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜೀವನಶೈಲಿ ಬದಲಾವಣೆಯಿಂದ ಹೃದಯ ರೋಗಗಳು, ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಖಾಯಿಲೆಗಳು ಹೆಚ್ಚುತ್ತಿವೆ ಎಂದರು. ಕೇವಲ ಶಸ್ತ್ರಚಿಕಿತ್ಸೆ ಅಥವಾ ಅಂಗಾಂಗ ಬದಲಾವಣೆಗಳಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆಯುರ್ವೇದದ ಜೀವನಶೈಲಿಯನ್ನು ಅಳವಡಿಸಿಕೊಂಡು ಜನರು ಆರೋಗ್ಯವಂತರಾಗಬೇಕು. ಈ ದಿಶೆಯಲ್ಲಿ ಯೋಗ ಮತ್ತು ಆಯುರ್ವೇದವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ವಿವಿಧ ಕಾರ್ಯಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.


ಪ್ರಜಾಪ್ರಭುತ್ವ ದಿನಪತ್ರಿಕೆ ‘ಪ್ರಜಾವಾಣಿ’ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಆಯುರ್ವೇದವು ಔಷಧಿ ನೀಡುವುದಕ್ಕಿಂತ ಔಷಧವಿಲ್ಲದೇ ಬದುಕುವುದನ್ನು ಕಲಿಸುವ ಪದ್ಧತಿ ಎಂದರು. ಔಷಧಿ ಸೇವಿಸುವ ಏಕೈಕ ಪ್ರಾಣಿ ಮನುಷ್ಯನಾಗಿದ್ದು, ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಮಾತ್ರೆಗಳ ಮೇಲೆ ಅವಲಂಬಿತ ಜೀವನ ರೂಪುಗೊಂಡಿದೆ ಎಂದು ಹೇಳಿದರು.


ಕೇಂದ್ರ ಆಯುಷ್ ಸಚಿವಾಲಯದ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ ಮಾತನಾಡಿ, ಆರೋಗ್ಯ ಸರ್ಕಾರದ ಹೊಣೆಗಾರಿಕೆಯಲ್ಲ, ಅದು ಪ್ರತಿಯೊಬ್ಬರ ವೈಯಕ್ತಿಕ ಹೊಣೆಗಾರಿಕೆ ಎಂದು ಹೇಳಿದರು. ವೈಯಕ್ತಿಕ ಆರೋಗ್ಯ ರಕ್ಷಣೆಗೆ ಯೋಗವನ್ನು ಪ್ರಚುರಪಡಿಸಲು ಕೇಂದ್ರ ಆಯುಷ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಔಷಧಿಗಳಿಗೆ ಆಧುನಿಕ ವಿಜ್ಞಾನದ ಆಧಾರದ ಮೇಲೆ ಸಂಶೋಧನಾ ಪ್ರಮಾಣಿಕತೆ ಒದಗಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ತೊಡಗಿದೆ ಎಂದರು.


ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು ಮಾತನಾಡಿ, ಆಹಾರವನ್ನೇ ಔಷಧವಾಗಿ ಬಳಸುವ ಪದ್ಧತಿ ಆಯುರ್ವೇದ ಎಂದು ಹೇಳಿದರು. ಜೀವನಶೈಲಿಯ ಮೂಲಕ ಸಂಪೂರ್ಣ ಆರೋಗ್ಯ ಸಾಧಿಸುವುದೇ ಆಯುರ್ವೇದದ ಸೂತ್ರವಾಗಿದ್ದು, ತಾವು ಕೂಡ ಆಯುರ್ವೇದದಿಂದ ವೈಯಕ್ತಿಕವಾಗಿ ಲಾಭ ಪಡೆದಿದ್ದಾಗಿ ತಿಳಿಸಿದರು.


ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಮಾತನಾಡಿ, ಆಯುರ್ವೇದ ನಮ್ಮ ದೇಶದ ಅಮೂಲ್ಯ ಸ್ವತ್ತಾಗಿದ್ದು, ವೇಗದ ಜೀವನಶೈಲಿಯಿಂದ ನಾವು ಕ್ರಮೇಣ ಆಯುರ್ವೇದದಿಂದ ದೂರವಾಗುತ್ತಿದ್ದೇವೆ ಎಂದರು. ವೇಗವಾಗಿ ಸಾಗಿದಾಗ ಆಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಜೀವನಶೈಲಿಯನ್ನು ಸರಿಪಡಿಸಿಕೊಂಡು ಆಯುರ್ವೇದವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ದೇಶದ ವೈದ್ಯಪದ್ಧತಿಗಳ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಆಯುಷ್ ಇಲಾಖೆಯನ್ನು ಸ್ಥಾಪಿಸಿದೆ ಎಂದು ಹೇಳಿದರು.


ಚಿಂತಕ ಡಾ. ಗುರುರಾಜ ಕರ್ಜಗಿ ಮಾತನಾಡಿ, ಮಾನವ ಶರೀರ ಪಂಚಭೂತಗಳಿಂದ ನಿರ್ಮಿತವಾಗಿದ್ದು, ಪ್ರಕೃತಿಯ ಜೊತೆಗೆ ಬದುಕಿದಾಗ ಮಾತ್ರ ಸುಂದರ ಮತ್ತು ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಿದರು. ಪ್ರಕೃತಿಯನ್ನು ಅರಿತು ಬದುಕಲು ಆಯುರ್ವೇದ ದಾರಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top