ಬೆಂಗಳೂರು: ಆಯುರ್ವೇದ ಎಲ್ಲರಿಗೂ ಸಲ್ಲುವ ವೈದ್ಯಕೀಯ ಪದ್ಧತಿಯಾಗಿದೆ. ರೋಗ ಬರದಂತೆ ತಡೆಯುವ ಜೀವನ ಶೈಲಿಯನ್ನು ಆಯುರ್ವೇದ ಸೂಚಿಸುವುದಷ್ಟೇ ಅಲ್ಲದೇ, ರೋಗ ಬಂದಾಗ ಅದನ್ನು ನಿವಾರಿಸುವ ಸಾಮರ್ಥ್ಯವನ್ನೂ ಹೊಂದಿದೆ. ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರ ದೈಹಿಕ ಸಾಮರ್ಥ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗುತ್ತಿದೆ. ಆಯುರ್ವೇದದ ದಿನಚರ್ಯೆಯನ್ನು ಬಿಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಜನರ ಜೀವಿತಾವಧಿ ಜಾಸ್ತಿಯಾಗಿದೆ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಆದರೆ ಆ ಹೆಚ್ಚಿನ ಜೀವಿತದ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಆಯುರ್ವೇದದ ಜೀವನ ಕ್ರಮ ಅನುಸರಣೆಯಿಂದ ಸತ್ವಶಾಲಿಯಾದ ಬದುಕು ಸಾಧ್ಯ ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಹೇಳಿದರು. ಅವರು ಸಮ್ಮೇಳನಕ್ಕೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು.
ಹರಿಹರಪುರ ಮಠದ ಶ್ರೀಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಮಾತನಾಡಿ, ಆಯುರ್ವೇದ ಕೇವಲ ಔಷಧಿ ಕೊಡುವ ಪದ್ಧತಿಯಲ್ಲ. ಮನುಷ್ಯ ತನ್ನ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಹೊಂದಲು ಆಯುರ್ವೇದ ಅವಶ್ಯಕವಾಗಿದ್ದು, ಆಯುರ್ವೇದ ನಮ್ಮ ಭಾರತೀಯ ಪರಂಪರೆಯ ಭಾಗವೇ ಆಗಿದೆ. ಆಯುರ್ವೇದ ಕೇವಲ ಲೌಕಿಕ ಜಗತ್ತಿನ ವಿಚಾರವಲ್ಲ. ಇದು ಅಧ್ಯಾತ್ಮಿಕತೆಯ ಭಾಗವೂ ಆಗಿದೆ.
ಇಂದು ಆಸ್ಪತ್ರೆ ಹಾಗೂ ನ್ಯಾಯಾಲಯಗಳಲ್ಲಿ ಜನರು ಸಂತೆಯಂತೆ ತುಂಬಿಕೊಳ್ಳುತ್ತಿದ್ದಾರೆ. ಇದಕ್ಕೆ ಆಯುರ್ವೇದದಲ್ಲಿ ಪರಿಹಾರವಿದೆ. ಆಯುರ್ವೇದ ಕ್ಷೇತ್ರಕ್ಕೆ ಡಾ. ಗಿರಿಧರ ಕಜೆ ಯವರ ಕೊಡುಗೆ ಅಪಾರವಾಗಿದೆ. ಕೊರೋನಾ ಸಂದರ್ಭದಲ್ಲಿ ಅವರು ಲಕ್ಷಾಂತರ ಜನರಿಗೆ ಔಷಧವನ್ನು ಉಚಿತವಾಗಿ ಹಂಚಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮಾತನಾಡಿ, ಕೆಲವು ವರ್ಷಗಳ ಹಿಂದೆ ಜಗತ್ತು ಕೊರೋನಾದಿಂದ ಪೀಡಿತವಾಗಿದ್ದಾಗ ಜನರೆಲ್ಲರೂ ಭಯಭೀತರಾಗಿದ್ದರು. ಅದಕ್ಕೆ ಯಾವುದೇ ವ್ಯಾಕ್ಸಿನ್ ಆಗಲೀ ಔಷಧವಾಗಲೀ ಬರುವ ಮೊದಲೇ ಡಾ.ಗಿರಿಧರ ಕಜೆಯವರು ಕೊರೋನಾಕ್ಕೆ ಔಷಧವನ್ನು ಸಂಶೋಧಿಸಿದ್ದರು. ಇದು ಆಯುರ್ವೇದದ ಶಕ್ತಿಯಾಗಿದ್ದು, ಆಯುರ್ವೇದ ಈ ಕಾಲದ ಆರೋಗ್ಯ ಸಮಸ್ಯೆಗೆ ಎಲ್ಲರಿಗಿಂತ ಮೊದಲು ಪರಿಹಾರವನ್ನು ಸೂಚಿಸಿತ್ತು ಎಂದರು.
ನಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿಯನ್ನು ಮರು ಪರಿಷ್ಕರಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಮುಂದಿನ ಪೀಳಿಗೆಯನ್ನು ಸ್ವಾಸ್ಥ್ಯದಿಂದ ಇಟ್ಟು ಭಾರತ ವಿಶ್ವಗುರುವಾಗಲು ಆಯುರ್ವೇದ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, ಆಧುನಿಕ ವೈದ್ಯಕೀಯ ಪದ್ಧತಿ ತತ್ಕಾಲದ ಪರಿಹಾರವನ್ನು ಸೂಚಿಸದರೆ ಆಯುರ್ವೇದ ದೀರ್ಘಕಾಲಿಕ ಪರಿಹಾರವನ್ನು ನೀಡುತ್ತದೆ. ಆಯುರ್ವೇದ ನಮ್ಮ ನೆಲಮೂಲದ ಪದ್ಧತಿಯಾಗಿದ್ದು, ಈ ಹಿಂದೆ ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಆಯುರ್ವೇದ ಆಧಾರಿತ ಮನೆ ಮದ್ದು ಚಾಲ್ತಿಯಲ್ಲಿತ್ತು. ಇದೀಗ ಆಧುನಿಕ ಔಷಧಗಳು ಎಲ್ಲೆಡೆ ವ್ಯಾಪಿಸುತ್ತಿದೆ ಎಂದರು.
ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ, ಆಯುರ್ವೇದವು ನಮ್ಮ ವೇದಗಳ ಭಾಗವೇ ಆಗಿದ್ದು, ಆಯುರ್ವೇದದಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರವಿದೆ. ಆಯುರ್ವೇದದ ಕುರಿತು ಜನಜಾಗೃತಿ ಮೂಡಿಸಲು ಡಾ.ಗಿರಿಧರ ಕಜೆಯವರು ಈ ಸಮ್ಮೇಳನವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

