ಜ. 14–15: ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

Upayuktha
0


ಮಂಗಳೂರು: ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ದಿವ್ಯಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ರ ಜನವರಿ 14 ಹಾಗೂ 15ರಂದು ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವವನ್ನು ಭಕ್ತಿಭಾವ ಮತ್ತು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಫಾ| ಸ್ಟೀಫನ್ ಪಿರೇರಾ ತಿಳಿಸಿದ್ದಾರೆ.


ಜನವರಿ 14ರಂದು ಸಂಜೆ 6 ಗಂಟೆಗೆ ನಡೆಯುವ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ನೆರವೇರಿಸಲಿರುವರು. ಅದೇ ದಿನ ಬೆಳಿಗ್ಗೆ 10 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಅರ್ಪಿಸಲಿರುವರು.


ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ದುಮಿಂಗ್ ಡಾಯಸ್ ಅವರು ಮಕ್ಕಳಿಗಾಗಿ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ನೆರವೇರಿಸಲಿರುವರು. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಅದೇ ದಿನ ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಅತೀ ವಂದನೀಯ ಮೊನ್ಸಿಂಞೆರ್ ಮ್ಯಾಕ್ಸಿಂ ನೊರೊನ್ಹಾ ಅವರ ನೇತೃತ್ವದಲ್ಲಿ ನಡೆಯಲಿದೆ.


ಜನವರಿ 14ರಂದು ಬೆಳಿಗ್ಗೆ 6 ಗಂಟೆಗೆ ಕೊಂಕಣಿ, 8 ಗಂಟೆಗೆ ಇಂಗ್ಲೀಷ್ ಹಾಗೂ ಮಧ್ಯಾಹ್ನ 1 ಗಂಟೆಗೆ ಕನ್ನಡ ಭಾಷೆಯಲ್ಲಿ ಬಲಿಪೂಜೆಗಳು ನಡೆಯಲಿವೆ. ಜನವರಿ 15ರಂದು ಬೆಳಿಗ್ಗೆ 6 ಮತ್ತು 8 ಗಂಟೆಗೆ ಕೊಂಕಣಿ, 10 ಗಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ನಡೆಯಲಿದೆ.


ವಾರ್ಷಿಕ ಮಹೋತ್ಸವದ ಸಿದ್ಧತೆಯಾಗಿ ಜನವರಿ 5ರಿಂದ 13ರವರೆಗೆ ನವದಿನಗಳ ನವೇನಾ ಪ್ರಾರ್ಥನೆ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ಒಂಬತ್ತು ಬಲಿಪೂಜೆಗಳು ಆಯಾ ಭಾಷೆಗಳಲ್ಲಿ ನೆರವೇರಲಿದ್ದು, ಪ್ರತಿ ದಿನ ಬೆಳಿಗ್ಗೆ 11.45ರಿಂದ 12.30ರವರೆಗೆ ಪರಮ ಪ್ರಸಾದದ ಆರಾಧನೆ ನಡೆಯಲಿದೆ. ನವೇನಾ ದಿನಗಳಲ್ಲಿ ಸಂಜೆ 6 ಗಂಟೆಯ ಬಲಿಪೂಜೆಯ ಬಳಿಕ ದಿವ್ಯಬಾಲ ಯೇಸುವಿನ ಮೆರವಣಿಗೆಯೂ ನಡೆಯಲಿದೆ.


ಜನವರಿ 3ರಂದು ಸಂಜೆ 4.30ಕ್ಕೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಹೊರೆಕಾಣಿಕೆ ಆರಂಭಗೊಳ್ಳಲಿದ್ದು, ಅಂತಿಮ ಹಂತದಲ್ಲಿ “ಸಹಬಾಳ್ವೆ” ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ವಂ| ಡಾ| ಪ್ರವೀಣ್ ಮಾರ್ಟಿಸ್ ಅವರು ಧ್ವಜಾರೋಹಣ ನೆರವೇರಿಸಲಿರುವರು.


ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಜನವರಿ 7ರಂದು ಕಣ್ಣಿನ ಶಿಬಿರ, ಜನವರಿ 9 ಹಾಗೂ 10ರಂದು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಇದಲ್ಲದೆ ಕಾರ್ಮೆಲ್ ಸಭೆಯ ಜುಬಿಲಿ ವರ್ಷದ ಅಂಗವಾಗಿ “ಕಾರ್ಮೆಲ್ ಇಗ್ನೆಟ್” ಯೋಜನೆಯಡಿ ಬಡ ಹಾಗೂ ಯೋಗ್ಯ 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಸಮಾಜಾಭಿವೃದ್ಧಿ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ನವೇನಾ ಮತ್ತು ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಮತ್ತು ಬೋಧನೆಗಳ ಕುರಿತ ವಿಶೇಷ ವಸ್ತು ಪ್ರದರ್ಶನವೂ ನಡೆಯಲಿದೆ.


ಈ ಕುರಿತು ನಡೆದ ಪ್ರತಿಕಾಗೋಷ್ಠಿಯಲ್ಲಿ ವಂದನೀಯ ಫಾ| ಮೆಲ್ವಿನ್ ಡಿಕುನ್ಹಾ, ವಂದನೀಯ ಫಾ| ಸ್ಟೀಫನ್ ಪಿರೇರಾ, ವಂದನೀಯ ಫಾ| ದೀಪ್ ಫೆರ್ನಾಂಡಿಸ್, ಶ್ರೀ ವಲೇರಿಯನ್ ಫುರ್ಟಾಡೊ ಹಾಗೂ ಶ್ರೀ ವಿಲ್‌ಫ್ರೆಡ್ ಲಸ್ರಾದೊ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top