ಅಂಬಿಕಾ ವಿದ್ಯಾರ್ಥಿಗಳಿಂದ ಶೃಂಗೇರಿ ಭೇಟಿ, ಶಾರದಾಮಾತೆ ಹಾಗೂ ಗುರುದರ್ಶನ
ಪುತ್ತೂರು: ಧರ್ಮವನ್ನು ಎಲ್ಲಾ ಕಾಲದಲ್ಲಿಯೂ ಅನುಸರಿಸಬೇಕು. ಧರ್ಮವನ್ನು ಮೀರಿದ ಬದುಕು ಸುಖ ಕಳೆದುಕೊಳ್ಳುತ್ತದೆ. ಆಧುನಿಕ ವ್ಯವಸ್ಥೆಗಳು, ಸೌಕರ್ಯಗಳು ಬೆಳೆದಂತೆ ಅದರಿಂದಾಗಿಯೇ ಮೂಡುವ ದುಃಖವೂ ಹೆಚ್ಚಾಗುತ್ತಿದೆ. ಹಾಗಾಗಿ ಧರ್ಮದ ಹಾದಿಯಲ್ಲಿ ಮುನ್ನಡೆಯುವುದೇ ನಮ್ಮ ಬದುಕಿನಲ್ಲಿ ಸುಖವನ್ನು ಕಾಣುವ ವಿಧಾನ ಎಂದು ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾಭ್ಯಾಸವು ನಮ್ಮನ್ನು ದೃಢವಾಗಿ ಪ್ರಪಂಚದ ಮುಂದೆ ನಿಲ್ಲುವಂತೆ ಮಾಡುತ್ತದೆ. ಪ್ರತಿಯೊಂದು ವಿದ್ಯೆಯೂ ಸಮಾಜಕ್ಕೆ ಒಂದಲ್ಲ ಒಂದು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ವಿದ್ಯೆಯನ್ನು ನಾವು ಎಷ್ಟು ಸ್ವಾಧೀನ ಮಾಡಿಕೊಳ್ಳುತ್ತೇವೋ ಅಷ್ಟರಮಟ್ಟಿಗೆ ನಾವು ಬೆಳೆಯುತ್ತೇವೆ. ಆದರೆ ವಿದ್ಯೆಯ ಜತೆಗೆ ಸಂಸ್ಕಾರವೂ ಅತ್ಯಂತ ಮುಖ್ಯ. ವಿದ್ಯೆಯನ್ನು ಹೊಂದಿದ್ದರೂ ಸಂಸ್ಕಾರ ಇರದಿದ್ದರೆ ಅಂತಹ ವ್ಯಕ್ತಿತ್ವಕ್ಕೆ ಗೌರವ ದೊರಕುವುದಿಲ್ಲ ಎಂದು ನುಡಿದರು.
ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ, ಅಪರಾಧಗಳಿಗೆ ಸಂಸ್ಕಾರಹೀನತೆಯೇ ಕಾರಣ. ಸ್ತ್ರೀಯರ ಮೇಲಿನ ದೌರ್ಜನ್ಯಗಳಿಗೂ ಇದೇ ಕಾರಣ. ಹಾಗಾಗಿ ಸಂಸ್ಕಾರವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಚಿಕ್ಕ ವಯಸ್ಸಿನಿಂದಲೇ ನಮ್ಮ ಪರಂಪರೆಯಲ್ಲಿ ಹೇಳಿಕೊಟ್ಟಿರುವ ವಿಚಾರಗಳನ್ನು ಕಲಿತುಕೊಳ್ಳಬೇಕು. ನಮ್ಮೆಲ್ಲಾ ಸುಖ, ದುಃಖಗಳಿಗೆ ಧರ್ಮದ ಜತೆಗೆ ಸಂಬಂಧವಿದೆಯೇ ವಿನಃ ಆಧುನಿಕತೆಯ ಜತೆಗಲ್ಲ. ಯಾಕೆಂದರೆ ಸುಖ-ದುಃಖಗಳು ಹಿಂದಿನ ಕಾಲದಲ್ಲಿಯೂ ಇದ್ದವು, ಈಗಿನ ಆಧುನಿಕ ಕಾಲದಲ್ಲಿಯೂ ಇವೆ ಎಂದು ಹೇಳಿದರು.
ನಮ್ಮ ಧರ್ಮದ ಬಗೆಗೆ ಅಪಪ್ರಚಾರ ಮಾಡುವವರು, ತಪ್ಪಾದ ವ್ಯಾಖ್ಯಾನ ಮಾಡುವವರಿದ್ದಾರೆ. ಇದು ಹಿಂದಿನ ಕಾಲದಲ್ಲಿಯೂ ಇತ್ತು. ಆದಾಗ್ಯೂ ನಮ್ಮ ಸನಾತನ ಧರ್ಮ, ಸಂಸ್ಕøತಿಗಳು ಈವತ್ತಿಗೂ ಉಳಿದುಕೊಳ್ಳುವುದಕ್ಕೆ ಕಾರಣ ಆದಿ ಶಂಕರಾಚಾರ್ಯರು. ಧರ್ಮದ ಬಗೆಗೆ ಆಕ್ಷೇಪ ಎತ್ತಿದವರಿಗೆಲ್ಲಾ ಉತ್ತರ ಕೊಟ್ಟು ಧರ್ಮವನ್ನು ದೃಢವಾಗಿ ಸಂಸ್ಥಾಪನೆ ಮಾಡಿದವರು. ಇಡಿಯ ಭಾರತದಲ್ಲಿ ಐಕ್ಯಮತ್ಯವನ್ನು ತಂದು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ದೇಶವನ್ನು ಬೆಸೆದವರು ಅವರು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ 2017ರ ನಂತರ ನಿರಂತರವಾಗಿ ಪ್ರತಿವರ್ಷ ಅಂಬಿಕಾದ ವಿದ್ಯಾರ್ಥಿಗಳನ್ನು ಶೃಂಗೇರಿಗೆ ಕರೆತಂದು ಶಾರದಾಮಾತೆಯ, ಜಗದ್ಗುರುಗಳ ಆಶಿರ್ವಾದವನ್ನು ಯಾಚಿಸುತ್ತಿದ್ದೇವೆ. ಇಡಿಯ ದೇಶದ ರಾಯಭಾರಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳುವ ಕನಸಿನೊಂದಿಗೆ ಶಿಕ್ಷಣವನ್ನು ಒದಗಿಸಿಕೊಡಲಾಗುತ್ತಿದೆ. ಈ ಕಾರ್ಯಕ್ಕೆ ಜಗದ್ಗುರುಗಳ ಆಶಿರ್ವಾದ ಬಹಳ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಬೋಧಕ - ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


