ಪುತ್ತೂರು: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಆದರ್ಶಗಳ ಕೊರತೆ ಇಂದಿನ ಯುವ ಪೀಳಿಗೆಯನ್ನು ಕಾಡುತ್ತಿದೆ. ಹಾಗಾಗಿಯೇ ಒಳ್ಳೆಯದು, ಕೆಟ್ಟದು, ನೈತಿಕ, ಅನೈತಿಕ ಎಂಬ ವಿಭಾಗಗಳ ನಡುವಣ ವ್ಯತ್ಯಾಸ ಮಕ್ಕಳಿಗೆ ಅರಿವಾಗುತ್ತಿಲ್ಲ. ಎಳವೆಯಿಂದ ತೊಡಗಿದಂತೆ ವೃದ್ಧಾಪ್ಯದವರೆಗೂ ವ್ಯಕ್ತಿಯೋರ್ವನಿಗೆ ತನ್ನ ಕಣ್ಣ ಮುಂದೆ ‘ಆದರ್ಶ’ಗಳಿದ್ದಾಗ ಸರಿಯಾದ ಹಾದಿಯಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಾಗುತ್ತದೆ. ಇಂತಹ ಆದರ್ಶಗಳ ತಳಹದಿಯಲ್ಲಿ ಶಿಕ್ಷಣವನ್ನು ಸಾಕಾರಗೊಳಿಸಬೇಕೆಂಬ ಸ್ಪಷ್ಟ ಚಿಂತನೆಯಡಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮೂಲಕ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಲಾಯಿತು.
ರಜತಮಹೋತ್ಸವ: 1999ರಲ್ಲಿ ಅಂಬಿಕಾ ವಿದ್ಯಾಲಯ ಎಂಬ ಹೆಸರಿನಡಿ ಆರಂಭಿಸಲಾದ ಶಿಕ್ಷಣ ವ್ಯವಸ್ಥೆಗೆ ಈಗ ಇಪ್ಪತ್ತೈದರ ಸಂಭ್ರಮ. ರಜತಮಹೋತ್ಸವದ ಸವಿನೆನಪಿಗಾಗಿ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇತ್ತೀಚೆಗೆಯಷ್ಟೇ ರಾಷ್ಟ್ರಪ್ರಶಸ್ತಿ ವಿಜೇತ ದಕ್ಷಿಣ ಭಾರತದ ಪ್ರಸಿದ್ಧ ಗಾಯಕರಾದ ಪದ್ಮಶ್ರೀ ಪಿ. ಉನ್ನಿಕೃಷ್ಣನ್, ಅವರ ಸುಪುತ್ರಿ ಉತ್ತರಾ ಉನ್ನಿಕೃಷ್ಣನ್ ಹಾಗೂ ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ಬಹುದೊಡ್ಡ ಕಾರ್ಯಕ್ರಮವೊಂದಕ್ಕೆ ಅಂಬಿಕಾ ಅಣಿಯಾಗುತ್ತಿದೆ.
ಪರಮವೀರ ಚಕ್ರ ಪ್ರಶಸ್ತಿ ಪುರಸ್ಕøತ ಲೆಫ್ಟಿನೆಂಟ್ ಸಂಜಯ್ ಕುಮಾರ್ : ಅಂಬಿಕಾ ಶಿಕ್ಷಣ ಸಂಸ್ಥೆಗಳು ದೇಶಪ್ರೇಮ, ಧರ್ಮಜಾಗೃತಿ, ಸಂಸ್ಕøತಿ-ಸಂಸ್ಕಾರಗಳಿಗೆ ಹೆಸರಾಗಿವೆ. ಭಾರತೀಯ ಸೇನೆ, ಸೈನಿಕರೆಡೆಗೆ ಅಪಾರ ಗೌರವಭಾವವನ್ನು ಹೊಂದಿವೆ. ಅಂಬಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಾರತೀಯ ಸೇನೆ ಹಾಗೂ ಸೈನಿಕರ ತ್ಯಾಗ, ಪರಿಶ್ರಮಗಳ ಬಗೆಗೆ ಅರಿವು ಮೂಡಿಸುವ ಕಾರ್ಯ ನಿರಂತರ ನಡೆಯುತ್ತಿವೆ. ಸೈನಿಕರ ಮಕ್ಕಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಶುಲ್ಕ ವಿನಾಯಿತಿಯನ್ನೂ ನೀಡಲಾಗುತ್ತಿದೆ. 2024ರಲ್ಲಿ ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಅಂಬಿಕಾ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘಟನೆಗಳು ಹಾಗೂ ನಾಗರಿಕರ ಸಹಯೋಗದೊಂದಿಗೆ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ಅಪ್ರತಿ ಶೌರ್ಯ ಪ್ರದರ್ಶಿಸಿ, ಭಾರತೀಯ ಸೇನೆ ಕೊಡಮಾಡುವ ಅತ್ಯುಚ್ಚ ಪ್ರಶಸ್ತಿಯಾದ ಪರಮವೀರ ಚಕ್ರಕ್ಕೆ ಭಾಜನರಾದ ಕ್ಯಾಪ್ಟನ್ ಯೋಗೇಂದ್ರ ಸೀಂಗ್ ಯಾದವ್ ಹಾಗೂ ಸೇನಾ ಪದಕ ಪಡೆದ ಕ್ಯಾಪ್ಟನ್ ನವೀನ್ ನಾಗಪ್ಪ ಅತಿಥಿಗಳಾಗಿ ಆಗಮಿಸಿದ್ದರು. ಅದೇ ರೀತಿ ಈಗ ಮತ್ತೊಮ್ಮೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ವೀರಾವೇಶದಿಂದ ಶತ್ರು ಸಂಹಾರಗೈದು, ಪರಮವೀರ ಚಕ್ರ ಪ್ರಶಸ್ತಿ ಪಡೆದ ಮತ್ತೋರ್ವ ವೀರ ಯೋಧ, ಭಾರತಾಂಬೆಯ ಹೆಮ್ಮೆಯ ಸುಪುತ್ರ ಲೆಫ್ಟಿನೆಂಟ್ ಸಂಜಯ್ ಕುಮಾರ್ ಡಿಸೆಂಬರ್ 27ರಂದು ಆಗಮಿಸುತ್ತಿದ್ದಾರೆ.
ಅದ್ಧೂರಿ ಮೆರವಣಿಗೆ, ಸಾರ್ವಜನಿಕ ಅಭಿನಂದನಾ ಸಮಾರಂಭ: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮ ಪುತ್ತೂರಿನ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಡಿಸೆಂಬರ್ 27ರಂದು ಬೆಳಗ್ಗೆ 9 ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಧರ ಭಟ್ ವಾಣಿಜ್ಯ ಸಂಕೀರ್ಣದ ಮುಂಭಾಗದ ಮೂಲಕ ಕಿಲ್ಲೆ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಬೃಹತ್ ಮೆರವಣಿಗೆ ಸಾಗಿಬರಲಿದೆ. ಈ ಮೆರವಣಿಗೆಯಲ್ಲಿ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ರಥದಲ್ಲಿ ಕುಳ್ಳಿರಿಸಿ ಕರೆತರಲಾಗುತ್ತದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಚೆಂಡೆ, ಗೊಂಬೆ, ಸ್ಥಬ್ಧಚಿತ್ರಗಳೂ ಜತೆಸೇರಲಿವೆ. ಅಂಬಿಕಾ ಸಂಸ್ಥೆಗಳ ಉದ್ಯೋಗಿಗಳು, ವಿವಿಧ ವಿದ್ಯಾ ಸಂಸ್ಥೆಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಾಜಿ ಸೈನಿಕರನ್ನೊಳಗೊಂಡಂತೆ ಸಮಾಜದ ಬೇರೆ ಬೇರೆ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮೆರವಣಿಗೆಯ ವೇಳೆ ವ್ಯಾಪಾರಸ್ಥರು, ಜನಸಾಮಾನ್ಯರಿಗೆ ಈ ವೀರಸಾಹಸಿಗೆ ಹಾರಾರ್ಪಣೆಯ ಮೂಲಕ ಗೌರವಿಸುವುದಕ್ಕೆ ಅವಕಾಶವಿರುತ್ತದೆ.
ಸಾರ್ವಜನಿಕ ಅಭಿನಂದನಾ ಸಮಾರಂಭ - ಭೋಜನ ವ್ಯವಸ್ಥೆ : ಪೂರ್ವಾಹ್ನ 11 ಗಂಟೆಗೆ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ತದನಂತರ ಆಗಮಿಸಿದ ಸರ್ವರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಸಾಮಾಜಿಕ ಭಾಗವಹಿಸುವಿಕೆ: ಕಾರ್ಗಿಲ್ ಹೋರಾಟ ನಮ್ಮ ದೇಶದ ಮಾನಾಭಿಮಾನದ ಸಂಕೇತ. ಅಕಸ್ಮಾತ್ ಆ ಯುದ್ಧದಲ್ಲಿ ನಮ್ಮ ಸೈನಿಕರು ಕೈಚೆಲ್ಲಿ ಕುಳಿತಿದ್ದಿದ್ದರೆ ನಮ್ಮ ಇಂದಿನ ಪರಿಸ್ಥಿತಿಯನ್ನು ಊಹಿಸುವುದಕ್ಕೂ ಅಸಾಧ್ಯ. ನಮ್ಮ ರಕ್ಷಣೆಗಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿ ಭಾರತಾಂಬೆಯ ಗೌರವವನ್ನು ನಮ್ಮ ಸೈನಿಕರು ಉಳಿಸಿ - ಬೆಳೆಸಿಕೊಟ್ಟದ್ದನ್ನು ನಾವು ಸದಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲೇಬೇಕು. ಅಂತಹ ಯುದ್ಧದಲ್ಲಿ ಭಾಗಿಯಾಗಿ ತನ್ನ ದೇಹಕ್ಕೆ ವೈರಿ ಗುಂಡುಗಳು ಹೊಕ್ಕರೂ ಛಲಬಿಡದೆ ನೇರಾ ನೇರ ದೈಹಿಕ ಹೋರಾಟ ನಡೆಸಿ ವೈರಿಗಳನ್ನು ಯಮಪುರಿಗಟ್ಟಿದ್ದಲ್ಲದೆ ಅವರದೇ ಮೆಷಿನ್ ಗನ್ ಮೂಲಕ ಅವರನ್ನೇ ಸುಟ್ಟು ಹಾಕಿದ ವೀರ ಸೈನಿಕ ಲೆಫ್ಟಿನೆಂಟ್ ಸಂಜಯ್ ಕುಮಾರ್ ಪುತ್ತೂರಿಗೆ ಆಗಮಿಸುತ್ತಿರುವುದು ರೋಮಾಂಚನಕಾರಿ ವಿಚಾರ. ಆದ್ದರಿಂದ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ಸಂಭ್ರಮವನ್ನು ಹೆಚ್ಚಿಸುವ ಕರ್ತವ್ಯವನ್ನು ಮೆರೆಯಬೇಕಿದೆ. ನಮ್ಮ ಯೋಧರು ನಮಗಾಗಿ ತೆತ್ತ ಪ್ರಾಣಕ್ಕೆ, ನಮಗಾಗಿ ಉಂಡ ನೋವಿಗೆ ಕನಿಷ್ಟ ಕೃತಜ್ಞತೆ ತೋರುವ ಕಾರ್ಯಕ್ರಮವನ್ನು ನಾಗರಿಕರೆಲ್ಲರೂ ಜವಾಬ್ದಾರಿಯುತವಾಗಿ ನಡೆಸಬೇಕಿದೆ. ನಮ್ಮ ಮಕ್ಕಳಿಗೆ ವೀರ ಯೋಧರನ್ನು ತೋರಿಸಿ ಅವರ ಮನಸ್ಸಿನಲ್ಲಿ ಒಂದು ಆದರ್ಶ ನೆಲೆಯೂರುವಂತೆ ಮಾಡಬೇಕಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


