ಮೂಡುಬಿದಿರೆ: ಮೂಡುಬಿದಿರೆ ಜನಸಾಮಾನ್ಯರ ಆರೋಗ್ಯ ಕಾಳಜಿಯನ್ನು ಮನಗಂಡು ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಆರೋಗ್ಯ ಕೇಂದ್ರವು ಮತ್ತೊಂದು ಮಹತ್ವದ ಹೆಜ್ಜೆಯಾಗಿ ಹೃದಯ ಚಿಕಿತ್ಸಾ ಕೇಂದ್ರ (ಕಾರ್ಡಿಯಾಕ್ ಸೆಂಟರ್) ವನ್ನು ಆರಂಭಿಸಿರುವುದು ಅತ್ಯಂತ ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್ ವಿನಯ್ ಹೆಗ್ಡೆ ನುಡಿದರು.
ಅವರು ಬುಧವಾರ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮೂಡುಬಿದಿರೆ, ಮುಲ್ಕಿ, ಕಾರ್ಕಳ ಹಾಗೂ ಬೆಳ್ತಂಗಡಿ ಪ್ರದೇಶಗಳಲ್ಲಿಯೇ ಮೊದಲ ಬಾರಿಗೆ ಸ್ಥಾಪನೆಯಾದ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಈ ಭಾಗದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಹೃದಯ ಸಂಬಂಧಿತ ರೋಗಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದ್ದು, ಸಮಯೋಚಿತ ಚಿಕಿತ್ಸೆ ದೊರಕದಿದ್ದರೆ ಅವು ಜೀವಕ್ಕೆ ಅಪಾಯಕಾರಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಮೂಡುಬಿದಿರೆಯಲ್ಲೇ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೃದಯ ಚಿಕಿತ್ಸಾ ಕೇಂದ್ರ ಸ್ಥಾಪನೆಯಾಗಿರುವುದು ಈ ಪ್ರದೇಶದ ಜನರಿಗೆ ದೊಡ್ಡ ವರದಾನವಾಗಿದೆ. ಇದರಿಂದಾಗಿ ಈಗ ಚಿಕಿತ್ಸೆಗಾಗಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ.
ಶಿಕ್ಷಣವು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಅದು ವ್ಯಾಪಾರದ ವಸ್ತುವಾಗದೆ ಮಾನವಸೇವೆಯ ಮಹತ್ತರ ಸಾಧನವಾಗಿರಬೇಕು. ವಿಶೇಷವಾಗಿ ವೈದ್ಯಕೀಯ ಶಿಕ್ಷಣದಂತ ಕ್ಷೇತ್ರದಲ್ಲಿ ಲಾಭದ ದೃಷ್ಟಿಕೋನಕ್ಕಿಂತ ಮಾನವೀಯತೆ, ಸೇವಾಭಾವ ಮತ್ತು ಸಾಮಾಜಿಕ ಹೊಣೆಗಾರಿಕೆ ಪ್ರಧಾನವಾಗಬೇಕು. ಇಂದಿನ ದಿನಗಳಲ್ಲಿ ಅನೇಕ ಖಾಸಗಿ ವೈದ್ಯಕೀಯ ಕಾಲೇಜುಗಳು ಶಿಕ್ಷಣ ಸೇವೆಯನ್ನು ನೀಡುತ್ತಿದ್ದರೂ, ಅವುಗಳ ಮೇಲೆ ಸರ್ಕಾರ ವಿಧಿಸಿರುವ ನೀತಿಗಳು ಹಲವು ಸವಾಲುಗಳನ್ನು ಸೃಷ್ಟಿಸುತ್ತಿವೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ ೫೦ರಷ್ಟು ಸೀಟ್‌ಗಳನ್ನು ಸರ್ಕಾರದ ಕೋಟಾದಡಿಯಲ್ಲಿ ನೀಡಲಾಗುತ್ತದೆ. ಈ ಸೀಟ್‌ಗಳಿಗೆ ಸರ್ಕಾರ ನಿಗದಿಪಡಿಸುವ ಶುಲ್ಕವು ಬಹಳ ಕಡಿಮೆ ಇರುತ್ತದೆ. ಆದರೆ ಕಾಲೇಜುಗಳ ನಿರ್ವಹಣಾ ವೆಚ್ಚ, ಅತ್ಯಾಧುನಿಕ ಉಪಕರಣಗಳು, ಪ್ರಯೋಗಾಲಯಗಳು, ಆಸ್ಪತ್ರೆಗಳ ನಿರ್ವಹಣೆ, ತಜ್ಞ ವೈದ್ಯರ ವೇತನ, ಸಂಶೋಧನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇವುಗಳ ವೆಚ್ಚವನ್ನು ಖಾಸಗಿ ಸಂಸ್ಥೆಗಳೇ ಭರಿಸಬೇಕಾಗುತ್ತದೆ. ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡಿದ್ದರೂ, ಸರ್ಕಾರದಿಂದ ಸೂಕ್ತ ಬೆಂಬಲ ಇಲ್ಲದಿದ್ದರೆ ಅವುಗಳ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗುತ್ತದೆ ಎಂದರು.
ಎ. ಜೆ ಗ್ರೂಪ್ ಆಫ್ ಇನ್ ಸ್ಟಿ ಟ್ಯೂಟ್‌ಗಳ ಅಧ್ಯಕ್ಷ ಡಾ ಎ ಜೆ ಶೆಟ್ಟಿ ಮಾತನಾಡಿ ಹೃದಯ ಚಿಕಿತ್ಸಾ ಕೇಂದ್ರವು ಆಳ್ವಾಸ್ ಆರೋಗ್ಯ ಕೇಂದ್ರದ ಸೇವೆಗೆ ಮತ್ತೊಂದು ಮಹತ್ವದ ಆಯಾಮವನ್ನು ನೀಡಿದೆ. ಹೃದಯ ಸಂಬಂಧಿತ ರೋಗಗಳು ಇಂದಿನ ಜೀವನಶೈಲಿಯಲ್ಲಿ ಅತ್ಯಂತ ಗಂಭೀರ ಹಾಗೂ ತುರ್ತು ಚಿಕಿತ್ಸೆಗೆ ಒಳಪಟ್ಟ ಸಮಸ್ಯೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಸಮಯವೇ ಅತ್ಯಂತ ಮುಖ್ಯವಾಗಿರುವುದರಿಂದ, ಮೂಡುಬಿದಿರೆಯಲ್ಲೇ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಿರುವುದು ಅನೇಕ ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಕಣಚೂರು ಗ್ರೂಪ್ ಆಫ್ ಇನ್ ಸ್ಟಿ ಟ್ಯೂಟ್‌ಗಳ ಸ್ಥಾಪಕಾಧ್ಯಕ್ಷ ಡಾ ಹಾಜಿ ಯು.ಕೆ ಮೋನು ಮಾತನಾಡಿ, ಸಾಮಾನ್ಯವಾಗಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿರುವ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯವನ್ನು ಒಂದು ಸಣ್ಣ ಪಟ್ಟಣವಾದ ಮೂಡುಬಿದಿರೆಗೆ ತಂದುಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಇದು ಕೇವಲ ಆರೋಗ್ಯ ಸೇವೆಯಲ್ಲ, ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ, ನಾನು ಎಂದಿಗೂ ನನ್ನ ಊರನ್ನು ಬಿಟ್ಟು ಹೋಗಬೇಕೆಂದು ಭಾವಿಸಿಲ್ಲ. ನನ್ನಿಂದ ಸಾಧ್ಯವಾದ ಎಲ್ಲಾ ಕಾರ್ಯಗಳನ್ನು ನನ್ನದೇ ನೆಲದಲ್ಲಿ, ನನ್ನ ಜನರಿಗಾಗಿ ಮಾಡುವುದೇ ನನ್ನ ಗುರಿಯಾಗಿದೆ. ಇಂದು ನನಗೆ ಅತ್ಯಂತ ಭಾಗ್ಯಶಾಲಿ ದಿನ ಎಂದರು. ಜೀವನದಲ್ಲಿ ಎದುರಾದ ಅನೇಕ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಈ ಹಂತದ ಯಶಸ್ಸನ್ನು ಸಾಧಿಸಿದ್ದೇನೆ. ಸಂಕಷ್ಟಗಳು ತಮ್ಮನ್ನು ಕುಗ್ಗಿಸದೇ ಇನ್ನಷ್ಟು ದೃಢ ಸಂಕಲ್ಪದೊAದಿಗೆ ಮುನ್ನಡೆಯಲು ಸಹಾಯ ಮಾಡಿವೆ ಎಂದರು.
1980ರ ದಶಕದಲ್ಲೆ ಆಳ್ವಾಸ್ ಆರೋಗ್ಯ ಕೇಂದ್ರವನ್ನು ಆರಂಭಿಸಿ, ಎಲ್ಲಾ ವಿಶೇಷ ತಜ್ಞ ವೈದ್ಯರ ಸೇವೆಯನ್ನು ಜನಸಾಮಾನ್ಯರಿಗೆ ಕನಿಷ್ಠ ಶುಲ್ಕದಲ್ಲಿ ನೀಡಿದ ನೆಮ್ಮದಿ ನನಗಿದೆ. ವೈದ್ಯಕೀಯ ಕ್ಷೇತ್ರ ಇಂದಿನ ಮಟ್ಟಕ್ಕೆ ಬೆಳೆಯಲು ಖಾಸಗಿ ಕ್ಷೇತ್ರದ ಭಾಗವಹಿಸುವಿಕೆ ಮಹತ್ವದ ಪಾತ್ರ ವಹಿಸಿದೆ. ಈ ಕ್ಷೇತ್ರದಲ್ಲಿ ಲಾಭಕ್ಕಿಂತ ಮೌಲ್ಯಗಳು ಮುಖ್ಯವಾಗಬೇಕು. ತಮ್ಮ ಜೀವನ ಮತ್ತು ಕಾರ್ಯಕ್ಷೇತ್ರದಲ್ಲಿ ಯಾವತ್ತೂ ಮೌಲ್ಯಗಳು, ನೈತಿಕತೆ, ಕರುಣೆ, ಪ್ರೀತಿ ಹಾಗೂ ಮಾನವೀಯತೆಯನ್ನು ಬಿಟ್ಟು ವ್ಯವಹರಿಸಿಲ್ಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ ಆಳ್ವ ಪ್ರಸ್ತಾವಿಕ ಮಾತಗಳನ್ನಾಡಿ ಸ್ವಾಗತಿಸಿದರು. ಕರ‍್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ ಮಹಾಬಲ ಶೆಟ್ಟಿ, ತಜ್ಞ ವೈದ್ಯ ಡಾ ಹರೀಶ್ ನಾಯಕ, ಸ್ತ್ರೀ ತಜ್ಞೆ ಡಾ ಹನ ಶೆಟ್ಟಿ ಇದ್ದರು. ಆಳ್ವಾಸ್ ಕಾರ್ಡಿಯಾಕ್ ಸೆಂಟರ್‌ನ ಮುಖ್ಯಸ್ಥ ಡಾ ದಿತೇಶ್ ವಂದಿಸಿದರು. ಪ್ರೋ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


