ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-12

Upayuktha
0


ಕರ್ಮಯೋಗ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಎಂಬುದು ಗೀತೆಯು ಸಾರಿರುವ ಕರ್ಮಯೋಗ. ಪ್ರತಿಯೊಬ್ಬನು ತನ್ನ ಕರ್ತವ್ಯ ಕರ್ಮವನ್ನು ಶ್ರದ್ಧೆಯಿಂದ ತನ್ನ ಶಕ್ತಿಗೆ ವಂಚನೆ ಮಾಡಿಕೊಳ್ಳದೆ ಯಾವುದೇ ಪ್ರತಿಫಲದ ಆಪೇಕ್ಷೆಯನ್ನು ಹೊಂದದೇ ಮಾಡುವುದೇ ಕರ್ಮಯೋಗ. ತನ್ನ ಪಾಲಿನ ವಿಹಿತ ಕರ್ಮ, ಶ್ರದ್ಧೆಯಿಂದ ಅದರ ಆಚರಣೆ, ಪ್ರತಿಫಲವನ್ನು ಅಪೇಕ್ಷಿಸದಿರುವುದು ಭಗವಂತನ ಒಲುಮೆಯನ್ನು ಹಾರೈಸುವುದು. ಇದು ಕರ್ಮಯೋಗದ ಹೃದಯ. ಇಂತಹ ಕರ್ಮಯೋಗ ಲೋಕಹಿತಕ್ಕೂ, ಆತ್ಮೋದ್ಧಾರಕ್ಕೂ ಸಾಧನ. ತನಗೆ ವಿಹಿತವಲ್ಲದ ಕರ್ಮದ ಆಚರಣೆ ಅಧಃಪತನದ ಹಾದಿ. ಪ್ರತಿಫಲದ ಅಪೇಕ್ಷೆ ಮನುಷ್ಯನನ್ನು ಕುಬ್ಜನನ್ನಾಗಸುವುದು. ಭಗವಂತನ ಒಲುಮೆಯ ಗುರಿ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯುವುದು. ಕೆಲಸ ಯಾವುದೇ ಇದ್ದರು ಅದನ್ನು ಈ ಹಿನ್ನಲೆಯಲ್ಲಿ ಮಾಡಿದ್ದಲ್ಲಿ ಅದು ಸರ್ವವಿಧ ಶ್ರೇಯಸ್ಸಿಗೆ ದಾರಿ. ಮನುಷ್ಯನ ಬದುಕು ಮುಖ್ಯವಾಗಿ ಭಗವಂತನ ಪ್ರೀತಿಗಗಿ, ಸಮಾಜದ ಒಳಿತಿನಲ್ಲಿ ಶ್ರೇಯಸ್ಸಿನ ಮೂಲ ಅಡಗಿದೆ. ದುರಾಸೆ ಪಾಪದ ಮೂಲ; ಅದನ್ನು ಗೆಲ್ಲುವುದು ಅಪಜಯವನ್ನು ಗೆಲ್ಲುವ ದೊಡ್ಡ ಸಾಧನ. ಮಾಡಿದ ಕರ್ಮ ಎಷ್ಟೇ ಹಿರಿದಾಗಿದ್ದರು, ಅದನ್ನು ಭಗವಂತನಿಗೆ ಸಮರ್ಪಿಸದಿದ್ದಲ್ಲಿ ಅದು ಉದ್ಧಾರಕ್ಕೆ ಕಾರಣವಾಗದು.


'ಭೌತಿಕ ಸುಖ ನಶ್ವರ'; ನಿಂತ ನೀರಿನಂತೆ, ಆಧ್ಯಾತ್ಮಿಕ ಸುಖ ಶಾಶ್ವತ; ಎಂದೂ ಬತ್ತದ ಒರತೆಯ ನೀರಿನಂತೆ. ಪ್ರತಿಯೊಬ್ಬ ಜೀವಿಯ ಒಳಗೆ ಆನಂದದ ಸೆಲೆ ತುಂಬಿದೆ. ಅದರ ಆವಿಷ್ಕರವೇ ಮುಕ್ತಿ. ಭಗವಂತನ ಒಲುಮೆಯೇ ಅದಕ್ಕೆ ಮುಖ್ಯ ಸಾಧನ. ನಿಷ್ಕಾಮ ಕರ್ಮಯೋಗ ಭಗವಂತನ ಒಲುಮೆಯ ರಾಜಮಾರ್ಗ. ಸತ್ಕರ್ಮದಿಂದ ಎಂದೂ ಕೆಡಕಾಗದು, ದುಷ್ಕರ್ಮದಿಂದ ಎಂದೂ ಒಳಿತೂ ಆಗದು.


ಪ್ರಾಮಾಣಿಕವಾಗಿ ಪ್ರಯತ್ನಪೂರ್ವಕ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುವುದು ಪ್ರತಿಯೊಬ್ಬನ ಕರ್ತವ್ಯ. ಸೋಲು-ಗೆಲುವುಗಳ ಚಿಂತೆ ಸಲ್ಲದು. ಪ್ರತಿಫಲದ ಅಪೇಕ್ಷೆಯು ಒಳಿತಲ್ಲ. ಸಾತ್ವಿಕ ಹೋರಾಟದಲ್ಲಿ ಸತ್ತರೂ ಸರಿ, ಗೆದ್ದರೂ ಸರಿ, ಒಳಿತು ಕಟ್ಟಿಟ್ಟ ಬುತ್ತಿ. ಸಾವು ಜೀವನದ ಕೊನೆ ಅಲ್ಲ. ಮುಂದಿನ ಜೀವನಕ್ಕೆ ನಾಂದಿ ಮಾತ್ರ. ಹಗಲು-ರಾತ್ರಿಗಳಂತೆ ಹುಟ್ಟು-ಸಾವುಗಳು; ಮನಸ್ಸಿನ ನೆಮ್ಮದಿ ಎಲ್ಲ ಸಿದ್ಧಿಗಳ ಶಿಖರ.


ಸಾವು ಎಂದರೆ ಬಾಲ್ಯ. ಯೌವನ, ಮುದಿತನಗಳ ಮುಂದಿನ ಹಂತ. ಅದು ಮತ್ತೊಂದು ದೇಹದ ಪ್ರಾಪ್ತಿಗೆ ನಾಂದಿ. ದೇಹ ಅಳಿದರೂ, ಜೀವ ಅಳಿಯದು. ಹಳೆಯ ವಸ್ತ್ರವನ್ನು ಬಿಸುಟು ಹೊಸ ವಸ್ತ್ರವನ್ನು ಧರಿಸುವಂತೆ ಸಾವಿನ ಬಳಿಕದ ಮರುಹುಟ್ಟು ಇದೆ. ಕರ್ಮವು ಬೀಗದಕೈ ಇದ್ದಂತೆ, ಒಂದೇ ಬೀಗದ ಕೈಯಿಂದ ಬೀಗವನ್ನು ಹಾಕಲು, ತೆರೆಯಲು ಬರುವಂತೆ ಕರ್ಮತಾರಕವೂ ಹೌದು, ಮಾರಕವೂ ಹೌದು. ಸದುದ್ದೇಶದ ಕರ್ಮ ತಾರಕವಾದರೆ, ದುರುದ್ದೇಶದ ಕರ್ಮ ಮಾರಕ. ಹಲಸಿನ ಅಂಟು ಕೈಗೆ ಮೆತ್ತಿತು ಎಂದು ಹಣ್ಣನ್ನು ತೊರೆಯಲಾದೀತೆ? ಕೈಗೆ ಎಣ್ಣೆಯನ್ನು ಲೇಪಿಸಿಕೊಂಡಾಗ ಆ ಅಂಚಿನ ನಂಟು ತಪ್ಪುವುದು. ಕರ್ಮಾಚರಣೆಯು ಇಂತಹುದೇ. ಕರ್ಮದ ಅಂಟು ಹತ್ತದಿರಲು ಭಕ್ತಿಯ ನಂಟು ಅಗತ್ಯ. 


ಭಗವಂತನು ಎಲ್ಲೆಡೆ ಇರುವನು. ಎಲ್ಲವನ್ನೂ ಬಲ್ಲವನು, ಎಲ್ಲವನ್ನೂ ನಿಯಂತ್ರಿಸುವವನು. ಇತರ ಸಕಲರೂ ಅವನ ಅಧೀನ, ಅವನ ಅಂಕೆಗೆ ಒಳಪಡದ ವಸ್ತುವೇ ವಿಶ್ವದಲ್ಲಿ ಇಲ್ಲ. ವಸ್ತುಗಳು ಇರಲಿ ಅದರ ಗುಣಧರ್ಮಗಳು ಸಹ ಭಗವಂತನ ಅಧೀನ. ಹೊಳೆಯುವ ಸೂರ್ಯ, ಬೆಳಗುವ ಚಂದ್ರ, ಸುಡುವ ಅಗ್ನಿ ಮೊದಲಾಗಿ ಎಲ್ಲವೂ ಭಗವಂತನ ಅಧೀನ. ದೈವೀ ಸಂಪತ್ತು ಮತ್ತು ಅಸುರೀ ಸಂಪತ್ತು ಎಂಬುದಾಗಿ ಸ್ವಭಾವ ಎರಡು ಬಗೆ. ಅಭಯ, ಇಂದ್ರಿಯ ನಿಗ್ರಹ, ಮನೋದಾರ್ಢ್ಯ, ಸಜ್ಜನಿಕರ, ಸತ್ಯ- ಧರ್ಮಗಳಲ್ಲಿ ನಿಷ್ಠೆ ಮೊದಲಾದವುಗಳು ಅಸುರೀ ಸಂಪತ್ತಿನ ಲಕ್ಷಣ. ದೈವವನ್ನು ನಂಬುವುದು ದೈವೀ ಸಂಪತ್ತಿನ ಮುಖ್ಯ ಲಕ್ಷಣ. ಪ್ರವೃತ್ತಿ ಮುಖ್ಯವಾಗಿ ಅಸುರೀ ಸಂಪತ್ತಿನದು. ದೈವಕ್ಕೆ ಶರಣಾಗುವುದು ದೈವೀ ಸಂಪತ್ತಿನ ರೀತಿ. 



ಭಗವಂತನ ಆರಾಧನೆ ಹೇಗೆ? 

ಭಗವಂತನಲ್ಲಿ ಪ್ರಜ್ಞಾವಂತಿಕೆಯ ಗಾಢ ಶ್ರದ್ಧೆ ಯಶಸ್ಸಿನ ಮೂಲ. ಸೂಕ್ತ ಪ್ರಯತ್ನ ಗುರಿ ಮುಟ್ಟಲು ಅತ್ಯಗತ್ಯ. ಅರ್ಹತೆ ಇವೆರಡರ ತಳಹದಿ. ವಿನಾಕಾರಣ ಸಂದೇಹಿಸುವುದು ಒಳಿತಿಗೆ ಕಾರಣವಾಗದು. ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ನೈಜ ಯೋಗದ ಆಂತರ್ಯ. ಸಾತ್ವಿಕ ಬದುಕು ಜನ್ಮಜನ್ಮಗಳ ಆಸ್ತಿ ಎನ್ನಿಸಿ, ಮುಕ್ತಿಗೆ ಸಾಧನವಾಗುವುದು. ನಿರ್ಮಲ ಭಕ್ತಿಗಿಂತ ಮಿಗಿಲಾದ ಸಿದ್ಧಿ ಬೇರೋಂದಿಲ್ಲ. ಭಗವಂತನ ಒಲುಮೆಗೆ ಜಾತಿ-ಮತಗಳ ಸಂಕೋಲೆ ಎಂದೂ ಅಡ್ಡಿಯಾಗದು. ಪುರುಷರಂತೆ ಸ್ತ್ರೀಯರು ಸಹ ಭಗವದಾರಾಧನೆಗೆ ಅರ್ಹರೇ ಆಗಿರುವರು. ಶರಣು ಬಂದ ಎಂತಹ ಪಾಪಿಯನ್ನು ಸಹ ಭಗವಂತನು ಕೈ ಬಿಡುವುದಿಲ್ಲ.

 

ಭಗವದ್ಗೀತೆ ಒಂದು ವರ್ಗಕ್ಕೆ ಅಥವಾ ಭೌಗೋಳಿಕ ಪ್ರದೇಶದ ಕೆಲವರಿಗೆಂದೇ ಮಾಡಿದ ಉಪದೇಶವಲ್ಲ. ಇಡೀ ಮನುಕುಲವನ್ನು ದೃಷ್ಟಿಯಲ್ಲಿಟ್ಟು ಮಾಡಿದ ಉಪದೇಶ. ಅದನ್ನು ಅರ್ಥೈಸಿಕೊಂಡಾಗಲೇ ಆನಂದದ ನಿಜವಾದ ಅರ್ಥ ತಿಳಿಯುವುದು.


ಭಗವದ್ಗೀತೆ ಕೃಷ್ಣ ಮತ್ತು ಅರ್ಜುನರ ನಡುವಿನ ಸಂವಾದ. ಇಲ್ಲಿ ಉಪದೇಶ ಮಾಡಿದವನು ಶ್ರೀಕೃಷ್ಣನಾದರೂ ಅದು ಆತನ ಸ್ವಂತ ಅಭಿಪ್ರಾಯವಲ್ಲ. 'ಇದಂ ಗೀತಾ ಶಾಸ್ತ್ರ ಸಮಸ್ತ ವೇದಾರ್ಥ ಸಂಗ್ರಹ ಭೂತಂ' ಎಂದರೆ ಗೀತಾ ಶಾಸ್ತ್ರವು ಸಮಸ್ತ ವೇದ ಸಾರಾರ್ಥ ಸಂಗ್ರಹವೆಂದರ್ಥ. ನೀವಂದುಕೊಳ್ಳಬಹುದು. ಉಪದೇಶ ವಿದ್ಯೆಯಿಂದ ನಮಗಾಗುವ ಪ್ರಯೋಜನವೇನು? ಅದಕ್ಕೊಂದು ಸಮಾಧಾನಕರವಾದ ಉತ್ತರವಿದೆ. 'ಗೀತಾ ಶಾಸ್ತ್ರಸ್ಯ ಸಂಕ್ಷೇಪತಃ ಪ್ರಯೋಜನಂ ಪರಂ ನಿಃಶ್ರೇಯಸಂ ಸಹೇತುಕಸ್ಯ ಸಂಸಾರಸ್ಯ ಅತ್ಯನ್ತೋ ಪರಮಮ್ ಲಕ್ಷಣಮ್'. ಭಗವತ್ಪಾದ ಶಂಕರಾಚಾರ್ಯರು ಹೇಳಿದಂತೆ 'ಪುನರಪಿ ಜನನಂ ಪುನರಪಿ ಮರಣಂ. ಪುನರಪಿ ಜನನೇ ಜಠರೇ ಶಯನಂ' ಜೀವನ ಚಕ್ರದಲ್ಲಿ ಹುಟ್ಟು, ಸಾವು ನಿರಂತರ. ಅಂತೆಯೇ ಸುಖ, ದುಃಖವೂ. ರೋಗ ರುಜಿನವು. ಹೇ ಭಗವಂತ ನನ್ನನ್ನು ಈ ಚಕ್ರದಿಂದ ಪಾರುಮಾಡು. ಭಗವದ್ಗೀತೆಯು ನಮ್ಮನ್ನು ಪಾರುಮಾಡುವ ಸಾಧನ.


ಸಮುದ್ರದಿಂದ ಸಾಸಿವೆ ಕಾಳನ್ನು ತೆಗೆಯಲು ಸಾಧ್ಯವೇ ಆದರೆ ಮಹಾಪುರುಷರು ಏನು ಮಾಡಿದ್ದಾರೆಂದರೆ ಇಷ್ಟು ದೊಡ್ಡ ಸಾಹಿತ್ಯ ರೂಪದ ಸಮುದ್ರದಿಂದ ಗೀತಾ ರೂಪದ ಸಾಸಿವೆ ಕಾಳನ್ನು ತೆಗೆದು ಇಟ್ಟಿದ್ದಾರೆ. ಮತ್ತು ಆ ಸಾಸಿವೆ ಕಾಳಿನಲ್ಲಿ ಕೂಡ ಜಗತ್ತಿಗೆ ಜ್ಞಾನ ನೀಡುವಂತಹ ಶಕ್ತಿ ಇದೆ. 700 ಶ್ಲೋಕಗಳ ಚಿಕ್ಕ ಗ್ರಂಥ. 18 ಅಧ್ಯಾಯ. 22,447 ಪದಗಳು ಗೀತೆಯಲ್ಲಿವೆ. ಕಳೆದ 2500 ವರ್ಷಗಳಿಂದ ತನ್ನ ಪ್ರಭಾವವನ್ನು ಭಗವದ್ಗೀತೆ ಕೇವಲ ಹಿಂದೂಗಳಷ್ಟೇ ಅಲ್ಲ, ಸಕಲ ಮಾನವ ಕುಲದ ಮೇಲೆ ಬೀರುತ್ತ ಬಂದಿದೆ.


ಗೀತೆಗಿರುವ ದಿವ್ಯ ಶಕ್ತಿ 

ಭಾರತದ ಅಧ್ಯಾತ್ಮಿಕತೆಯಲ್ಲಿ ಇದಕ್ಕಿಂತ ಜನಪ್ರಿಯ, ಸರ್ವಾಂಗೀರಾಕೃತ ಸಾಹಿತ್ಯವಿಲ್ಲ. ಈಗಲೂ ಜನಗಳಿಗೆ ಇದರ ಮೇಲೆ ಆದರ ಹೆಚ್ಚುತ್ತಿದೆ. ಗೀತೆ ಎಲ್ಲ ಜೀವರಾಶಿಗಳಿಗೂ ಜೀವನದ ಪಾಠ ಹೇಳಿ ಅವರನ್ನು ಉದ್ಧಾರ ಮಾಡುವ ಕೈಪಿಡಿ. ಗೀತೆಯ ಒಂದು ಶ್ಲೋಕವನ್ನು ಪಠಿಸುವುದರಿಂದ, ಆತ್ಮತತ್ವದಲ್ಲಿ ವಿಶ್ರಾಂತಿ ಪಡೆದಿರುವ ಸಾಧು-ಪುರುಷರ ದರ್ಶನದಿಂದ ಕೋಟಿ ತೀರ್ಥಗಳ ಫಲ ಸಿಗುತ್ತದೆಂದು ನಮ್ಮ ಸನಾತನ ನಂಬಿಕೆ. 


ಗೀತೆಯು ಭಗವಂತನ ಮುಖದಿಂದ ಬಂದ ಅಮೃತ. ಮನಸ್ಸು ವ್ಯಾಕುಲಗೊಂಡಾಗ ಅದನ್ನು ಸಂತೈಸುವ ದಿವ್ಯ ಶಕ್ತಿ ಭಗವದ್ಗೀತೆಗಿದೆ. ನಮ್ಮ ದೇಶದಲ್ಲಿ ಆಗಿಹೋದ ಸಾಕಷ್ಟು ಸಮಾಜ ಸುಧಾರಕರು ತಾವೆಲ್ಲ ಗೀತೆಯಿಂದ ಸ್ಫೂರ್ತಿ ಪಡೆದವರು ಎಂದು ಹೇಳಿರುವುದು ನಮ್ಮ ಗಮನದಲ್ಲಿರಬೇಕು. 

ಗೀತೆಯ ಬಗ್ಗೆ ಸಂತ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ: ವಿರಾಗಿ ಯಾವುದನ್ನು ಬಯಸುತ್ತಾನೋ, ಸಂತರು ಯಾವುದರ ಪ್ರತ್ಯಕ್ಷ ಅನುಭವ ಮಾಡುತ್ತಾರೋ ಮತ್ತು ಪೂರ್ಣ ಬ್ರಹ್ಮಜ್ಞಾನಿ ಯಾವುದರಲ್ಲಿ ಅಹಮೇವ ಬ್ರಹ್ಮಾಸ್ಮಿಯ ಭಾವನೆ ಇಟ್ಟು ರಮಿಸುತ್ತಾನೋ, ಭಕ್ತರು ಯಾವುದನ್ನು ಕೇಳುತ್ತಾರೋ, ತ್ರಿಭುವನದಲ್ಲಿ ಎಲ್ಲಕ್ಕಿಂತ ಮೊದಲು ಯಾವುದರ ವಂದನೆಯಾಗುತ್ತದೆಯೋ, ಅದನ್ನು ಜನರು ಶ್ರೀಮದ್ಭಗವದ್ಗೀತೆ ಎಂದು ಹೇಳುತ್ತಾರೆ. ಗೀತೆಯು ಆಯಾಸಗೊಂಡವರನ್ನು ಸೋತವರನ್ನು ಕೆಳಗೆ ಬಿದ್ದವರನ್ನು ಮೇಲಕ್ಕೆ ಏಳಿಸುತ್ತದೆ. ಹಾಗೆಯೇ ಮೇಲಕ್ಕೇರಿ ಮೆರೆಯುವವರನ್ನು ಕೆಳಗಿಳಿಸುತ್ತದೆ. ಬೇರೆಯಾದವರನ್ನು ಮತ್ತೆ ಒಂದುಗೂಡಿಸುತ್ತದೆ. ಶ್ರೀಮನ್ನಾರಾಯಣನ ಭೇಟಿ ಮಾಡಿಸಿ ಜೀವಂತ ಇರುವಾಗಲೇ ಮುಕ್ತಿಯ ಸಾಕ್ಷಾತ್ಕಾರ ಮಾಡಿಸುತ್ತದೆ. ಭಗವದ್ಗೀತೆ ಪಂಚಮವೇದನೆಂದು ಪ್ರಖ್ಯಾತದ ವ್ಯಾಸಪ್ರಣೀತ ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವುದು.


ಸನಾತನ ಧರ್ಮದ ಪೂರ್ಣ ಪ್ರತಿನಿಧಿ 

ಈ ಗೀತೆ ಮೇಲೆ ಎಲ್ಲಾ ಆಚಾರ್ಯರೂ ಇದರ ಮೇಲೆ ಭಾಷ್ಯ ಬರೆದಿದ್ದಾರೆ. ಹಿಂದೂ ಜನಾಂಗದಲ್ಲಿ ಗೀತೆಯು ಆಧಾರದ ಮೇಲೆ ನಿಂತ ಸಂಪ್ರದಾಯಕ್ಕೆ ಮಾತ್ರ ಪುರಸ್ಕಾರವಿದೆ.


ಗೀತೆಯನ್ನು ಹೇಳಿದವನು ಸ್ವಯಂ ಭಗವಂತನೇ ಆದ ಶ್ರೀಕೃಷ್ಣ ವ್ಯಾಸರು ಇಡೀ ಮಹಾಭಾರತವೆಂಬ ತೈಲವನ್ನು ಧಾರೆಯೆರೆದಿದ್ದು ಭಗವದ್ಗೀತೆ ಎಂಬ ಒಂದು ದಿವ್ಯ ಜ್ಯೋತಿಯನ್ನು ಪೋಷಿಸುವುದಕ್ಕೆ ಅಂದಿನಿಂದ ಇಂದಿನವರೆಗೆ ಎಷ್ಟೋ ಆಚಾರ್ಯರು, ಯೋಗಿಗಳು, ಭಕ್ತರು, ಕರ್ಮಪಟುಗಳು, ಜ್ಞಾನಿಗಳು ತಮ್ಮ ಜೀವನದ ಹಣತೆಯನ್ನು ಅದರಿಂದ ಹೊತ್ತಿಸಿಕೊಂಡರು. ಭಗವದ್ಗೀತೆಯಲ್ಲಿ ಎಲ್ಲ ವಿವಿಧ ಜನರಿಗೂ ಸ್ವಾಗತವಿದೆ. ಸಾಂಖ್ಯಯೋಗ, ದ್ವೈತ, ವಿಶಿಷ್ಟಾದ್ವೈತ, ಅದ್ವೈತ, ಕರ್ಮ, ಜ್ಞಾನ, ಭಕ್ತಿ ಎಲ್ಲವೂ ಇಲ್ಲಿ ಮಿಲನವಾಗಿದೆ. ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲೆಲ್ಲಿ ವಿಭೂತಿ ಪುರುಷರು ಇರುವರೋ ಅಲ್ಲೆಲ್ಲಾ ನಾನೇ ಇರುವೆನು ಎಂದು ಶ್ರೀಕೃಷ್ಣ ಹೇಳಿದ್ದ. ಅಲ್ಲೆಲ್ಲಾ ಗೀತೆಯೂ ಇರುತ್ತದೆ ಎಂಬುದು ಅನ್ವಯಾರ್ಥ. ಇತರ ಧರ್ಮದವರು ಒಪ್ಪಲಿ, ಬಿಡಲಿ, ಹಿಂದೂ ಮಾತ್ರ ತಾನು ಯಾವುದನ್ನು ಸತ್ಯವೆಂದು ಉಪಾಸನೆ ಮಾಡುತ್ತಿರುವನೋ ಅದನ್ನೇ ಇತರ ಧರ್ಮಾನುಯಾಯಿಗಳು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದಾರೆ, ಹೀಗೆಂದು ಸುಲಭವಾಗಿ ನಂಬುವುದಕ್ಕೆ ಕಾರಣ ಗೀತಾ ಸಂದೇಶದ ವಿಶಾಲತೆ ಮತ್ತು ಜನರ ಮೇಲೆ ಅದಕ್ಕೆ ಇರುವ ಪ್ರಭಾವ.


ಪ್ರಪಂಚದಲ್ಲಿ ಮತ್ತಾವ ಆಧ್ಯಾತ್ಮಿಕ ಗ್ರಂಥವೂ ಇಷ್ಟೊಂದು ನಾಟಕೀಯವಾಗಿ ಪ್ರಾರಂಭವಾಗುವುದಿಲ್ಲ. ಗೀತಾಸಂದೇಶ ಪ್ರಾರಂಭವಾಗುದಕ್ಕಾಗಿಯೇ ಭಾರತ ಯುದ್ಧವೆಂಬ ಹಿನ್ನಲೆ ಸೃಷ್ಟಿಯಾಗಿರುವಂತೆ ಕಾಣುತ್ತದೆ. ಹೇಷಾರವ, ಸಮರ ಪಟುಗಳ ಆರ್ಭಟ, ಶಂಖ ರಣಕಹಳೆಗಳ ದಿಗ್‌ಭಿತ್ತಿ ಬಿರಿಯುವಂತಹ ನಿನಾದದಿಂದ ತುಂಬಿ ತುಳುಕಾಡುತ್ತಿರುವ ಕುರುಕ್ಷೇತ್ರವೇ ಅದು. ಅಲ್ಲಿ ಗೀತೆ ಜನ್ಮತಾಳಿತು. ಕುರುಕ್ಷೇತ್ರ ನೂರಾರು ಗದ್ದಲಗಳಿಂದ ತುಂಬಿ ಸಂಕೀರ್ಣಗೊಳ್ಳುವ ನಮ್ಮ ಮನಸ್ಸಿನ ಪ್ರತೀಕ. ಆ ಮನಸ್ಸನ್ನು ಸರಿಯಾದ ದಿಕ್ಕಿನೆಡೆಗೆ ಮುನ್ನಡೆಸುವುದು ಗೀತೆ.


ಅನುದಿನದ ಧರ್ಮಗ್ರಂಥ:

ಭಗವದ್ಗೀತೆಯಲ್ಲಿರುವುದು ಒಂದು ತತ್ವವಲ್ಲ. ಒಂದು ಸಂಪ್ರದಾಯವಲ್ಲ, ಇದೊಂದು ಹಿಮಾಲಯ ಪರ್ವತಸ್ತೋಮದಂತೆ ಹಲವು ತತ್ವಗಳ ಶ್ರೇಣಿ. ಇಲ್ಲಿ ಅತಿಮುಖ್ಯವಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ಮುಖ್ಯ ನದಿಗಳು ಉದ್ಭವಿಸಿ ಹರಿದು ಭಗವಂತನೆಂಬ ಮಹಾಸಾಗರವನ್ನು ಸೇರುತ್ತವೆ. ಇಲ್ಲಿ ಇರುವುದು ಒಂದು ಯೋಗವಲ್ಲ. ಜೀವಿಯ ಯುಕ್ತಿ ಭಕ್ತಿ ಶಕ್ತಿಗಳನ್ನು ಪ್ರಚೋದಿಸುವುದಕ್ಕೆ ಯಾವ ಯಾವ ಸಂದೇಶಗಳು ಬೇಕೋ ಅವೆಲ್ಲಾ ಇಲ್ಲಿವೆ. ಆ ಮಿಶ್ರವನ್ನು ಯಾವುದಾದರೊಂದು ಹೆಸರಿನಿಂದ ಕರೆಯಬಹುದು ಅಥವಾ ಕರೆಯದೇ ಇರಬಹುದು. ಗೀತೆ ಕಾಲಾನಂತರ ವ್ಯಕ್ತಿಗೆ ಮುಕ್ತಿಯನ್ನು ಕೊಡುವ ಗ್ರಂಥ ಮಾತ್ರವಲ್ಲ. ಇಹದಲ್ಲಿ ಜೀವನ ಸುಖವನ್ನೂ, ಸಮಾಜಕ್ಕೆ ಸಕಲ ಕಾರ್ಯಾರಂಗದಲ್ಲಿಯೂ ಒಂದು ಹೊಸ ಹುರುಪನ್ನೂ ಕೊಡಬಲ್ಲದು. ಇದು ಪಾರಾಯಣ ಗ್ರಂಥವಾಗಿ ನಾಲಿಗೆಯ ಮೇಲೆ ನಲಿದಾಡಿದರೆ ಸಾಲದು. ಇದು ಮುಖ್ಯವಾಗಿ ಅನುಷ್ಠೇಯ ಗ್ರಂಥ. ಇದರ ಭಾವ ಹೃದಯದ ಆಳಕ್ಕೆ ಹೋಗಬೇಕು. ಗೀತಾಮೃತ ನಮ್ಮ ಜೀವನದ ತಾಯಿ ಬೇರಿಗೆ ತಾಗಬೇಕು. ಆಗ ಮಾತ್ರ ನಮ್ಮ ಆಲೋಚನೆ ಮತ್ತು ಕ್ರಿಯೆ ಪ್ರಗತಿಗಾಮಿಗಳಾಗುತ್ತವೆ. ಗೀತೆ ನಿತ್ಯ ಕಾಲದ ಧರ್ಮ ಗ್ರಂಥ. ಕಾಲಕಳೆದಂತೆ ಮಾಸುವುದಿಲ್ಲ.


ಜೀವನ ರಥಕ್ಕೆ ಸಾರಥಿ:

ನಮ ಜೀವನವೇ ಒಂದು ಕುರುಕ್ಷೇತ್ರ. ಎಲ್ಲಾ ಮಾನವರೂ ಅರ್ಜುನನಂತೆ ಬಾಹ್ಯ ಶತ್ರುವಿನೊಂದಿಗೆ ಯುದ್ಧ ಮಾಡದೇ ಇದ್ದರೂ ಬೇರೆ ಬೇರೆ ಕಾರ್ಯಕ್ಷೇತ್ರದಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ಪ್ರಶ್ನೆಗಳಿದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಅವನು ಯಾವ ಧರ್ಮಸಂಕಟಕ್ಕೆ ಒಳಗಾದನೋ ಅದರಂತೆ ನಾವೆಲ್ಲರೂ ಒಂದಲ್ಲ ಒಂದು ತಳಮಳವನ್ನು ಅನುಭವಿಸುತ್ತಲೇ ಇರುತ್ತವೆ. ಶ್ರೀಕೃಷ್ಣ ಪಾರ್ಥನಿಗೆ ಮಾತ್ರ ಸಾರಥಿಯಲ್ಲ. ಎಲ್ಲರ ಜೀವನ ರಥಕ್ಕೂ ಅವನೇ ಸಾರಥಿ. ಅವನನ್ನು ನಂಬಿ ನಮ್ಮ ಜೀವನ ರಥವನ್ನು ಮುಂದುವರೆಸಿದರೆ, ನಮ್ಮನ್ನು ಸಂಶಯಗಳಿಂದ ಪರಿಹರಿಸಿ ಕಷ್ಟನಷ್ಟಗಳ ಕೋಟಲೆಯಿಂದ ಮೇಲೆತ್ತಿ, ಶಾಶ್ವತ ಸಚ್ಚಿದಾನಂದವನ್ನು ನೀಡಬಲ್ಲ. ಆ ಶಕ್ತಿ ಆತನ ಉಪದೇಶವಾದ ಭಗವದ್ಗೀತೆಯಲ್ಲಿದೆ. ಇಂದಿಗೂ ಗೀತೆ ಸಕಲವೇದಗಳ ಸಾರ. ಸಕಲ ಭಾವಗಳಿಗೂ ಉಗಮ ಸ್ಥಾನ. ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ಅಧರ್ಮದ ವಿರುದ್ಧ ಧರ್ಮಕ್ಕೆ ಜಯ ಎಂಬ ಮಾತನ್ನು ಒತ್ತಿ ಹೇಳುವ ಸಮಯದಲ್ಲಿ ಭಗವದ್ಗೀತೆಯನ್ನು ದಿನಕ್ಕೆ ಒಮ್ಮೆಯಾದರೂ ನೆನಪು ಮಾಡಿಕೊಳ್ಳೋಣ.

(ಈ ಲೇಖನ ಸರಣಿ ಇಲ್ಲಿಗೆ ಮುಗಿಯಿತು)




ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top