ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-11

Upayuktha
0




ಭಗವದ್ಗೀತೆಯ ಉಪದೇಶ ಸಾರ: ಗೀತೆ ಈ ಹೆಸರೇ ಮಂತ್ರದಂತಹುದು. ಕೇಳಿದವರ, ಓದಿದವರ ಮನಸ್ಸನ್ನು ಮಂತ್ರಮುಗ್ಧರನ್ನಾಗಿಸುವುದು ಅದರ ಹಿರಿಮೆ. ಅದು ಜಗನ್ಮಾನ್ಯವಾದ ಅಮರ ಕೃತಿ; ಭಗವಂತನನ್ನು ಒಪ್ಪುವ ಎಲ್ಲರಿಗೂ ಅತ್ಯಂತ ಪ್ರಿಯ ಗ್ರಂಥ; ಗಾತ್ರದಲ್ಲಿ ಅದರಂತಹ ಪುಟ್ಟ ತಾತ್ವಿಕ ಕೃತಿ ಮತ್ತೊಂದಿಲ್ಲ; ಹಿರಿಮೆಯಲ್ಲಿ ಅದನ್ನು ಮೀರುವ ಗ್ರಂಥ ಕೂಡ. ಅದು ಬರುವ ಮಹಾಭಾರತವೂ ಹಾಗೆಯೇ; ಅರ್ಥದಲ್ಲಿರಲಿ, ಗಾತ್ರದಲ್ಲೂ ಇಂದೂ ಅದೇ ವಿಶ್ವದ ಸಾರ್ವಭೌಮ ಗ್ರಂಥ; ಮಹಾಭಾರತವು ಮೂಲತಃ ಕೃಷ್ಣನ ಕಥೆಯಾದರೆ, ಗೀತೆ ಕೃಷ್ಣನ ಉಪದೇಶದ ಸಾರ; ಗೀತೆಯು ಮಹಾಭಾರತದ 'ದರ್ಶನ'ವಾದರೆ ಮಹಾಭಾರತವು ಗೀತಾತತ್ವದ \ನಿದರ್ಶನ\. ಗೀತೆಯು ವಾಮನನಾದರೆ ಮಹಾಭಾರತವು ಅದರ ತ್ರಿವಿಕ್ರಮರೂಪ; ಅರ್ಜುನನ ತಿಳುವಿಗಾಗಿ ಯಾದವ ಕೃಷ್ಣ ಗೀತೆಯನ್ನು ಉಪದೇಶಿಸಿದರೆ, ಜಗತ್ತಿನ ತಿಳಿವಿಗಾಗಿ ವಾಸಿಷ್ಠಕೃಷ್ಣ ವೇದವ್ಯಾಸರು ಅದನ್ನು ಗ್ರಂಥರೂಪದಲ್ಲಿ ಒದಗಿಸಿದ್ದಾರೆ. ಅವುಗಳಲ್ಲಿ ಯಾವ ಒಂದನ್ನು ತಿಳಿಯದಿದ್ದರೂ, ಉಳಿದ ಮತ್ತೊಂದು ತಿಳಿಯುವುದಿಲ್ಲ. ಪದ್ಮನಾಭನ ಮುಖಪದ್ಮದಿಂದ ಹೊರಹೊಮ್ಮಿದ ಗೀತೆ, ವ್ಯಾಸರ ಮುಖಪದ್ಮದಿಂದ ಜಗತ್ತಿಗೆ ತಲುಪಿತು; ಅದರಲ್ಲಿ ತುಂಬಿರುವುದಂತು ಪ್ರಮೇಯ ಪದ್ಮಗಳೇ. ಮಹಾಭಾರತವು ಪಂಚಮವೇದ; ವ್ಯಾಸರು ಬರೆದದ್ದರಿಂದ 'ಕಾರ್ಷ್ಣವೇದ'; ಮಹತ್ವದಲ್ಲಿ ಇತರ ವೇದಗಳಿಗಿಂತ ಮಿಗಿಲಾದ ವೇದ; ಗೀತೆ ಅದರ ಉಪನಿಷತ್ತು; ಆದ್ದರಿಂದ ಅದು ಇತರ ಉಪನಿಷತ್ತುಗಳಿಗಿಂತ ಮಿಗಿಲಾದ ಉಪನಿಷತ್ತು.

 

ಮಹಾಭಾರತವು ಹದಿನೆಂಟು 'ಪರ್ವ'ಗಳ 'ಪರ್ವತ'ವಾದರೆ ಗೀತೆಯು ಅದರ ಗೌರಿಶಂಕರ; ವಿಷ್ಣು ಸಹಸ್ರನಾಮ ಅದರ ಅವಳಿ ಶಿಖರ; ಗೀತೆಯು ಯುದ್ಧಕ್ಕಿಂತ ಮುನ್ನ ಭೀಷ್ಮಪರ್ವದಲ್ಲಿ ಬಂದರೆ, ವಿಷ್ಣು ಸಹಸ್ರನಾಮವು ಯುದ್ಧ ಮುಗಿದ ಮೇಲೆ ಭೀಷ್ಮರ ಬಾಯಿಂದ ಬಂದಿದೆ. ಅವುಗಳ ಅರಿವು ಎಂದರೆ ಅಜ್ಞಾನದ ಅಳಿವು; ಬಾಳಿನ ಉಳಿವು. ಶಾಸ್ತ್ರಗಳು ಸಾರಿವೆ- 'ವೇದ ಓದಬಲ್ಲವರಿಗೆ ಮಹಾಭಾರತ 'ವೇದಾರ್ಥ'ವಾದರೆ ಹಾಗಲ್ಲದವರಿಗೆ ಅದೇ 'ವೇದ'; ಎಲ್ಲರಿಗೂ ಅದರಿಂದಲೇ ತತ್ವಜ್ಞಾನದ ಬೋಧ. 


ವಿಚಿತ್ರ ಸನ್ನಿವೇಶ:

ಋಷಿಮುನಿಗಳು ಅಧ್ಯಯನ ಮಾಡುವ ಇದರ ರಚನೆಯ ರಂಗಸ್ಥಳ ನಿರ್ಮಲವಾದ ತಪೋಭೂಮಿಯಲ್ಲ; ಭಯಾನಕವಾದ ರಣಭೂಮಿ. ಸುತ್ತಲೂ ಇದ್ದದ್ದು ಮರಗಿಡಗಳಲ್ಲ, ಸಾಧು ಪ್ರಾಣಿಗಳಲ್ಲ; ಚಿತ್ರವಿಚಿತ್ರ ಸಾಮರ್ಥ್ಯದ ಯೋಧರು. ಅವರ ಕೈಯಲ್ಲಿ ಆ ಮುನ್ನ ಜಗತ್ತು ಕಂಡರಿಯದ ಬಗೆ ಬಗೆಯ ಶಸ್ತ್ರಾಸ್ತ್ರಗಳು. ನೆರೆದಿದ್ದವರು ಶತ್ರುಗಳಲ್ಲ, ಬಂಧುಗಳು; ಆದರೆ ಅವರಂತಹ ಶತ್ರುಗಳನ್ನೇ ಜಗತ್ತು ಬೇರೆಂದೂ ಕಾಣಲಿಲ್ಲ. ನೆರೆದಿದ್ದ ಸೇನೆಯ ಸಂಖ್ಯೆಯಂತೂ ಹದಿನೆಂಟು ಅಕ್ಷೋಹಿಣಿಯಷ್ಟು ಅಪಾರ. ಆ ಕುರು ಪಾಂಡವರು ಒಂದೇ ವಂಶದ ಕುಡಿಗಳು. ಪ್ರಶಾಂತಿಗೆ ಹೆಸರಾದ ಚಂದ್ರನ ವಂಶ ಅವರದು; ಆದರೆ ಕಂಡರಿಯದ ಅಶಾಂತಿ ಅಲ್ಲಿ ತುಂಬಿತ್ತು. ಕೌರವರಿಗೆ ರಾಜ್ಯಲಕ್ಷ್ಮಿಯ ಬಯಕೆ; ಪಾಂಡವರಿಗೆ ಲಕ್ಷ್ಮೀಪತಿಯಾದ ಶ್ರೀಕೃಷ್ಣನನ್ನು ಒಲಿಸುವ ಹಂಬಲ. ಆ ಕುರುಕ್ಷೇತ್ರವು ಅಂತಹುದೇ. ಅದೇ ವಂಶದ ಪ್ರಖ್ಯಾತನಾದ ಕುರುವೆಂಬ ರಾಜ ನಿರ್ಮಿಸಿದ್ದ ರಣಾಂಗಣ. ಅದರಿಂದಾಗಿಯೇ ಅದು ಕುರುಕ್ಷೇತ್ರ. ಧರ್ಮಕ್ಕೆ ಜಯವಾಗಬೇಕೆಂಬ ಹಂಬಲ ಆ ರಾಜನಿಗೆ ಆ ಕ್ಷೇತ್ರದ ನಿರ್ಮಾಣದ ಹಿನ್ನೆಲೆಯಲ್ಲಿತ್ತು.


ಇನ್ನೇನು ಯುದ್ಧ- ಪ್ರಾರಂಭವಾಗಬೇಕು ಎನ್ನುವ ಸಮಯದಲ್ಲಿ ಉಭಯ ಪಕ್ಷದ ಯೋಧರನ್ನು ಕಾಣುವ ವಿಚಿತ್ರ ಬಯಕೆ ಅರ್ಜುನನಿಗೆ. ಅದನ್ನು ಪೂರೈಸಲೆಂದು ಪುರುಷೋತ್ತಮನಿಂದ ಎರಡು ಸೇನೆಗಳ ಮಧ್ಯೆ ಅವನ ರಥದ ಸ್ಥಾಪನೆ. ಉಭಯ ಪಕ್ಷಗಳಲ್ಲಿ ನೆರೆದಿದ್ದ ಕಾದಲು ಸಜ್ಜಾಗಿ ನಿಂತಿದ್ದ ಬಂಧು ಸಮೂಹವನ್ನು ಕಾಣುತ್ತಲೇ ಸಲ್ಲದ ಕರುಣೆಗೆ ಒಳಗಾಗಿ ಅರ್ಜುನನ ವಿಷಾದ. ಅದರ ಪರಿಹಾರಕ್ಕಗಿ ಅವನು ಶ್ರೀಕೃಷ್ಣನನ್ನೇ ಮೊರೆಹೋಗುವ ವಿವೇಕ ತೋರಿದ. ಅದರ ಫಲವಾಗಿ ಭಗವಂತನಿಂದ ಹರಿದ ಉಪದೇಶಧಾರೆ ಮನುಕುಲದ ಅಜ್ಞಾನದ ಕೊಳೆಯನ್ನು ತೊಳೆಯುವ ಗಂಗಾಧಾರೆಯಾಯಿತು. ಅದನ್ನು ಕೇಳುತ್ತದ್ದಂತೆಯೇ ಅರ್ಜುನನ ದುಗುಡ ಕಳೆಯಿತು; ಜ್ಞಾನದ ಕಣ್ಣುತೆರೆಯಿತು. ತತ್ವಶ್ರವಣ ಮಾಡಿದ ಅವನು ಭಗವಂತನ ದಯೆಯಿಂದ ಅವನ ವಿಶ್ವರೂಪವನ್ನು ಕಣ್ಣಾರೆ ಕಂಡ. ಸಾಧನೆಯ ಸಾರಸರ್ವಸ್ವವನ್ನೂ ಮನಗಂಡ. ತೊರೆದಿದ್ದ ಬಿಲ್ಲು ಬಾಣಗಳನ್ನು ಅವನ ಆದೇಶದಂತೆ ಮತ್ತೆ ಕೈಗೆತ್ತಿಕೊಂಡ. ಶತ್ರುನಾಶಕ್ಕೆ ಬದ್ಧ- ಕಂಕಣನಾಗಿ ನಿಂತುಕೊಂಡ. ಅಂತೂ ಕರ್ತವ್ಯ ವಿಮುಖನಾಗಿದ್ದ ಅರ್ಜುನ ಕರ್ತವ್ಯ ಸುಮುಖನಾದ.



ಮಹತ್ವದ ಕೃತಿ 

ಇಂತಹ ಭಗವದ್ಗೀತೆಯ ಮೇಲೆ ರಚಿತವಾಗಿರುವಷ್ಟು ವಿಪುಲ ಸಾಹಿತ್ಯ ಜಗತ್ತಿನ ಬೇರಾವ ಕೃತಿಯ ಮೇಲೂ ರಚಿತವಾಗಿಲ್ಲ. 'ಸಕಲ ಉಪನಿಷತ್ತುಗಳು ಗೋವುಗಳು; ಶ್ರೀಕೃಷ್ಣನೇ ಗೋವುಗಳಿಗ; ಅರ್ಜುನನೇ ಕರು; ಗೀತಾಮೃತವೇ ಅವನು ಕರೆದ ಕ್ಷೀರ; ಸಜ್ಜನರು ಅದನ್ನು ಸವಿಯುವವರು' ಎಂಬ ಮಾತು ಸುಪ್ರಸಿದ್ಧ. ದೇಹದ ಪೋಷಣೆಗೆ ಅವಶ್ಯಕವಾದ ಸಕಲ ಅಂಶಗಳೂ ಹಸುವಿನ ಹಾಲಿನಲ್ಲಿರುವಂತೆ ಜೀವದ ಪೋಷಣೆಗೆ ಅವಶ್ಯವಾದ ಸಕಲ ವಿಚಾರಗಳೂ ಗೀತೆಯಲ್ಲಿ ಬಂದಿವೆ ಎಂದು ಅದರ ಭಾವ.


ಗೀತೋಪದೇಶದ ಅವಧಿ ಎಷ್ಟು? ಈಗಿರುವ ರೀತಿಯಲ್ಲಿ ಗೀತೆಯ ಪಾರಾಯಣಕ್ಕೆ ತಗಲುವ ಅವಧಿ ಅದನ್ನು ಸರಿಯಾಗಿ ಬಲ್ಲವರಿಗೆ ಒಂದೂವರೆ ತಾಸುಗಳನ್ನು ಮೀರುವುದಿಲ್ಲ; ಇದು ವ್ಯಾಸರು ಎಲ್ಲರಿಗೂ ತಿಳಿಯಲಿ ಎಂದು ನಿರೂಪಿಸಿದ್ದು; ಅದು ಅರ್ಜುನನಿಗೆ ತಿಳಿಯಲಿ ಎಂದು ಶ್ರೀಕೃಷ್ಣ ಉಪದೇಶಿಸಿದ್ದು; ಇದು ವಿಸ್ತಾರ, ಅದು ಸಂಕ್ಷೇಪ. ಎಂದರೆ ಅದರ ಅವಧಿ ಹೆಚ್ಚೆಂದರೆ 30 ರಿಂದ 40 ನಿಮಿಷಗಳಷ್ಟು ಮಾತ್ರ. 


ಕರ್ಮಯೋಗ 

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಎಂಬುದು ಗೀತೆಯು ಸಾರಿರುವ ಕರ್ಮಯೋಗ. ಪ್ರತಿಯೊಬ್ಬನು ತನ್ನ ಕರ್ತವ್ಯ ಕರ್ಮವನ್ನು ಶ್ರದ್ಧೆಯಿಂದ ತನ್ನ ಶಕ್ತಿಗೆ ವಂಚನೆ ಮಾಡಿಕೊಳ್ಳದೆ ಯಾವುದೇ ಪ್ರತಿಫಲದ ಆಪೇಕ್ಷೆಯನ್ನು ಹೊಂದದೇ ಮಾಡುವುದೇ ಕರ್ಮಯೋಗ. ತನ್ನ ಪಾಲಿನ ವಿಹಿತ ಕರ್ಮ, ಶ್ರದ್ಧೆಯಿಂದ ಅದರ ಆಚರಣೆ, ಪ್ರತಿಫಲವನ್ನು ಅಪೇಕ್ಷಿಸದಿರುವುದು ಭಗವಂತನ ಒಲುಮೆಯನ್ನು ಹಾರೈಸುವುದು. ಇದು ಕರ್ಮಯೋಗದ ಹೃದಯ. ಇಂತಹ ಕರ್ಮಯೋಗ ಲೋಕಹಿತಕ್ಕೂ, ಆತ್ಮೋದ್ಧಾರಕ್ಕೂ ಸಾಧನ. ತನಗೆ ವಿಹಿತವಲ್ಲದ ಕರ್ಮದ ಆಚರಣೆ ಅಧಃಪತನದ ಹಾದಿ. ಪ್ರತಿಫಲದ ಅಪೇಕ್ಷೆ ಮನುಷ್ಯನನ್ನು ಕುಬ್ಜನನ್ನಾಗಸುವುದು. ಭಗವಂತನ ಒಲುಮೆಯ ಗುರಿ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯುವುದು. ಕೆಲಸ ಯಾವುದೇ ಇದ್ದರು ಅದನ್ನು ಈ ಹಿನ್ನಲೆಯಲ್ಲಿ ಮಾಡಿದ್ದಲ್ಲಿ ಅದು ಸರ್ವವಿಧ ಶ್ರೇಯಸ್ಸಿಗೆ ದಾರಿ. ಮನುಷ್ಯನ ಬದುಕು ಮುಖ್ಯವಾಗಿ ಭಗವಂತನ ಪ್ರೀತಿಗಗಿ, ಸಮಾಜದ ಒಳಿತಿನಲ್ಲಿ ಶ್ರೇಯಸ್ಸಿನ ಮೂಲ ಅಡಗಿದೆ. ದುರಾಸೆ ಪಾಪದ ಮೂಲ; ಅದನ್ನು ಗೆಲ್ಲುವುದು ಅಪಜಯವನ್ನು ಗೆಲ್ಲುವ ದೊಡ್ಡ ಸಾಧನ. ಮಾಡಿದ ಕರ್ಮ ಎಷ್ಟೇ ಹಿರಿದಾಗಿದ್ದರು, ಅದನ್ನು ಭಗವಂತನಿಗೆ ಸಮರ್ಪಿಸದಿದ್ದಲ್ಲಿ ಅದು ಉದ್ಧಾರಕ್ಕೆ ಕಾರಣವಾಗದು.

(ಮುಂದುವರಿಯುವುದು)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top