ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ತಾಳಮದ್ದಳೆ ಸಪ್ತಾಹ
ಮಂಗಳೂರು: 'ಕಳೆದ 12 ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಮೂಲಕ ಯಕ್ಷಾಂಗಣ ಸಂಸ್ಥೆ ಯಕ್ಷ ಕಲೆ ಮತ್ತು ಕನ್ನಡ ಭಾಷೆಗೆ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಕಲಾವಿದರು ಮತ್ತು ಕಲಾತಂಡಗಳಿಗೆ ಅದು ನೀಡುತ್ತಿರುವ ಪ್ರೋತ್ಸಾಹ ಮತ್ತು ಗೌರವ ಅನನ್ಯವಾದುದು' ಎಂದು ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ|ಎ.ಜೆ.ಶೆಟ್ಟಿ ಹೇಳಿದರು.
ಅವರು ಮಂಗಳೂರು ವಿವಿ ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು, ಮಂಗಳೂರು ವಿವಿಯ ಡಾ.ಪಿ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಹಾಗೂ ಕರ್ನಾಟಕ ಯಕ್ಷಭಾರತಿ( ರಿ) ಪುತ್ತೂರು ಇವರ ಸಹಯೋಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ 'ಯಕ್ಷಗಾನ ತಾಳಮದ್ದಳೆ ಸಪ್ತಾಹ- 2025' ಹದಿಮೂರನೇ ವರ್ಷದ ನುಡಿಹಬ್ಬ ತ್ರಯೋದಶ ಸರಣಿ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವಾಂಗೀಣ ಕಲೆ ಯಕ್ಷಗಾನ- ರಾಜು ಮೊಗವೀರ:
ಮಂಗಳೂರು ವಿವಿ ಕುಲಸಚಿವ ಕೆ. ರಾಜು ಮೊಗವೀರ ಯಕ್ಷಗಾನ ಸಪ್ತಾಹವನ್ನು ವಿಧ್ಯುಕ್ತವಾಗಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ 'ಅನೇಕ ಕಲಾಪ್ರಕಾರಗಳ ನಡುವೆ ಯಕ್ಷಗಾನ ಸರ್ವಾಂಗೀಣ ಕಲೆ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲೆಯಾಗಿ ಗುರುತಿಸಿದೆ. ಕರಾವಳಿಯ ಭಾಷೆ ಸಂಸ್ಕೃತಿ, ಭಾವ ಯಕ್ಷಗಾನದಲ್ಲಿ ಪ್ರಕಟವಾಗುತ್ತವೆ. ಕಲಾವಿದರು ಕಲೆಯ ಆತ್ಮವಾದರೆ ಕಲಾಪೋಷಕರು ಕಲೆಯ ಹೃದಯವಿದ್ದಂತೆ' ಎಂದು ಹೇಳಿದರು.
'ಯಕ್ಷಗಾನ ಕಲಾವಿದರ ಪುರಾಣ ಜ್ಞಾನ, ಶುದ್ದ ಕನ್ನಡ ಮಾದರಿಯಾದುದು. ಕಲಾವಿದರ ವಿಶ್ಲೇಷಣಾ ಶಕ್ತಿ ಉನ್ನತಮಟ್ಟದಲ್ಲಿರುತ್ತದೆ. ಅದರ ಮೂಲಕ ಸಾಹಿತ್ಯ, ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ' ಎಂದವರು ನುಡಿದರು.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ:
ಕಲಾಪ್ರೇಮಿ, ಕಲಾಪೋಷಕರಾದ ಉದ್ಯಮಿ ಎಂ. ರವೀಂದ್ರ ಶೇಟ್ ಅವರಿಗೆ ಈ ಬಾರಿಯ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ'ವನ್ನು ಪ್ರದಾನ ಮಾಡಿ ಗಣ್ಯರು ಸನ್ಮಾನಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು 'ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಕಲಾಸಕ್ತಿಯನ್ನು ಬೆಳೆಸುತ್ತದೆ. ಕಲೆಗೆ ಪ್ರೋತ್ಸಾಹ ನೀಡುವುದರಲ್ಲಿ ಸಂತೃಪ್ತಿಯಿದೆ' ಎಂದರು.
ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ 'ಸಾವಿರಾರು ಕಲಾವಿದರು ಈ ಯಕ್ಷಗಾನ ಕುಟುಂಬದಲ್ಲಿದ್ದಾರೆ. ಯಕ್ಷಗಾನ ಹಲವು ಶತಮಾನಗಳಿಂದ ಅದೆಷ್ಟೋ ಕಲಾವಿದರ ಪರಿಶ್ರಮದ ಮೂಲಕ ಬೆಳೆದು ಬಂದ ಕಲೆಯಾಗಿದೆ.ಈ ಕಲಾವಿದ ಕುಟುಂಬಕ್ಕೆ ಎಂದಿಗೂ ಧಕ್ಕೆಯಾಗುವ ಮಾತನ್ನಾಡದೆ ಗೌರವಿಸೋಣ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್, ವಿವಿ ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಎಸ್. ಮೊದಲಾದವರು ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು.
ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕರುಣಾಕರ ಶೆಟ್ಟಿ ಪಣಿಯೂರು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಧಾಕರ ರಾವ್ ಪೇಜಾವರ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ದಾರ್ಥ ಅಜ್ರಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ತಾಳಮದ್ದಳೆ 'ನಚಿಕೇತ:
ಸಪ್ತಾಹದ ಮೊದಲ ದಿನದ ತಾಳಮದ್ದಳೆ 'ನಚಿಕೇತ'. ಭಾಗವತ ಹರೀಶ್ ಶೆಟ್ಟಿ ಸೂಡ ಅವರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘದ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







