ತೋಟಗಾರಿಕೆ, ಕೃಷಿ, ಕಂದಾಯ, ಭೂಮಾಪನ ಇಲಾಖೆಗಳು ಯಾಕೆ ತಂತ್ರಜ್ಞಾನದಲ್ಲಿ ಅಪ್ಡೇಟ್ ಆಗುವುದಿಲ್ಲ!?

Chandrashekhara Kulamarva
0


21 ನೇ ಶತಮಾನ ಶುರುವಾಗಿ 25 ವರ್ಷಗಳನ್ನು ಕಳೆದ ಮೇಲೆ, ಇಡೀ ಪ್ರಪಂಚವೇ AI ತಂತ್ರಜ್ಞಾನದ ಕಡೆಗೆ ಮಗ್ಗಲು ಬದಲಾಯಿಸುತ್ತಿದ್ದರೂ, ಕೃಷಿ, ತೋಟಗಾರಿಕಾ, ಕಂದಾಯ, ಭೂ ಮಾಪನ ಇಲಾಖೆಗಳು ಹಿಂದಿನ ಶತಮಾನದಲ್ಲೇ ಕುಳಿತು, ಅರೆಗಣ್ಣಿನಲ್ಲಿ ತೂಕಡಿಸುತ್ತ ಕೆಲಸ ಮಾಡುತ್ತಿವೆ!!!


ಬ್ಯಾಂಕು, ಷೇರು ಮಾರುಕಟ್ಟೆ, ಟ್ರಾನ್ಸ್‌ಪೋರ್ಟ್, ಆರೋಗ್ಯ, ಆಹಾರ, ಶಿಕ್ಷಣ, ಚುನಾವಣೆ, ಧಾರ್ಮಿಕ... ಎಲ್ಲ ಕ್ಷೇತ್ರಗಳು ಕಳೆದೆರಡು ದಶಕಗಳಲ್ಲಿ ಆವಿಷ್ಕಾರಗೊಂಡ ತಾಂತ್ರಿಕ ಅಭಿವೃದ್ಧಿಯನ್ನು ಬಳಸಿಕೊಂಡು ದಿನ ದಿನಕ್ಕೂ ಅಪ್ಡೇಟ್ ಆಗುತ್ತಿವೆ. ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುತ್ತಿವೆ. ಪೇಪರ್ ಲೆಸ್ ಅಥವಾ ಲೆಸ್ ಪೇಪರ್ ವ್ಯವಹಾರಕ್ಕೆ ಸಿದ್ದಗೊಂಡಿವೆ, ಸಿದ್ದಗೊಳ್ಳುತ್ತಿವೆ.


ಅಕ್ಷರ ಜ್ಞಾನ ಕಡಿಮೆ ಇರುವ 60 ವರ್ಷದ ಸೊಪ್ಪು ವ್ಯಾಪಾರಸ್ತರ ಹರಿವೆ ಸೊಪ್ಪಿನ ಕಟ್ಟಿನ ಪಕ್ಕದಲ್ಲಿ ಕ್ಯೂಆರ್ ಕೋಡ್ ಸ್ಟಿಕರ್ ಇರುತ್ತೆ.  ಬ್ಯಾಂಕ್, ಎಲ್‌ಐಸಿಯಂತವುಗಳು ಮನೆಯ ಪೋರ್ಟಿಕೋದಲ್ಲಿ ಡಿಜಿಟಲ್ ರೂಪದಲ್ಲಿ ಬಂದು ಕುಳಿತಿವೆ.  ಕೋಟಿ ರೂಪಾಯಿಗಳ ಅದಾನಿ ಷೇರು ತೊಗೊಂಡು ಕಂಪನಿ ಪಾಲುದಾರ ಆದ್ರೂ ಹಳೇ ಬಸ್ ಟಿಕೇಟಿನ ರೀತಿಯ ಒಂದು ಪೇಪರ್ ತುಂಡೂ ಇರೋದಿಲ್ಲ.


ಆದರೆ, ಕೃಷಿ, ತೋಟಗಾರಿಕಾ, ಕಂದಾಯ, ಭೂ ಮಾಪನ ಇಲಾಖೆಗಳು ವ್ಯಾವಹಾರಿಕವಾಗಿ Y2K ಕಾಲಕ್ಕೂ ಹಿಂದಿನ ದಿನಮಾನವನ್ನು ದಾಟಲೇ ಇಲ್ಲ!


***


ತೋಟಗಾರಿಕೆ ಇಲಾಖೆಯಿಂದ ₹.600 ರುಪಾಯಿ ಬೆಲೆಯ (ಆ್ಯಕ್ಚುಯಲಿ ಅದರ ಬೆಲೆ ₹.300 ಇರೋದಿಲ್ಲ!) ಉಚಿತ AMC ಕೊಡುವುದನ್ನು ಪಡೆಯುವುದಕ್ಕೆ ರೈತರು ಅಷ್ಟೇ ಹಣವನ್ನು ದಾಖಲಾತಿ, ಸ್ಟ್ಯಾಂಪ್ ಪೇಪರ್ರು, ನೋಟರಿ ಫೀಸ್,  ಜೆರಾಕ್ಸು, ಪೆನ್ನು, ಪೆಟ್ರೋಲ್, ಸಮಯ ಖರ್ಚು ಮಾಡಬೇಕು!!


ಉಚಿತ AMC (ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ) ರೈತರು ಅರ್ಜಿ ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳನ್ನು ಗಮನಿಸಿ: 


1. ಅರ್ಜಿ ನಮೂನೆ

(ಇದರಲ್ಲಿ ಸಮಸ್ತ ಜಾತಕ ಬರೆಯಬೇಕು)


2. 01-04-2025 ನಂತರದ RTC (ಅಡಿಕೆ ಬೆಳೆ ನಮೂದಾಗಿರಬೇಕು) ಬೆಳೆ ನಮೂದಾಗಿರದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸುವುದು.

(ಬೆಳೆ ಸರ್ವೆ ಮಾಡುವುದೇ ಆಗಷ್ಟ್‌ನಲ್ಲಿ. ಅದಕ್ಕೆ ಮುಂಚೆ ₹.25 ಕೊಟ್ಟು ತೆಗೆದಿರಬಹುದಾದ ಪಹಣಿ ಆಗುವುದಿಲ್ಲ. ಯಾಕೆಂದರೆ, ಆ ಪಹಣಿಯಲ್ಲಿ ಅಡಿಕೆ ಮರಗಳು ಕಂವೌಚಿ ಬಿದ್ದು ಸರ್ವನಾಶ ಆಗಿ, ಖಾಲಿ ತೋರಿಸುತ್ತದೆ. ಈಗ ಬೆಳೆ ಸರ್ವೆ ಆಗಿದ್ದರೂ ಪಹಣಿಯಲ್ಲಿ ಬೆಳೆ ಕಾಲಂ‌ನಲ್ಲಿ ಬೆಳೆ ತೋರಿಸುವುದು (ನಮೂದಾಗಿರುವುದು) ಅನುಮಾನ ಅಂತ ತೋಟಗಾರಿಕೆ ಪ್ರಕಟಣೆಯ ಹೇಳುತ್ತದೆ! ಬೆಳೆ ಇಲ್ಲಾ ಅಂದ್ರೆ ಕಂದಾಯ ಇಲಾಖೆಯವರು ದೃಡೀಕರಣ ಕೊಡಬೇಕಂತೆ! ಅಷ್ಟು ಮಾಡಿ, ಕಂದಾಯ ಇಲಾಖೆಗೆ ಹೋದರೆ, ಅವರು ಸುಮ್ಮನೆ ದೃಢೀಕರಣ ಕೊಡೋದಿಲ್ಲ!! ಅದಕ್ಕೆ 50 ಕಟ್ಟಬೇಕು + ಅವರಿಗೆ ಕಾಫಿ ಕಾಸು ಕೊಡಬೇಕು. (ಸರಕಾರಿ ಉದ್ಯೋಗ, ಸಂಬಳ ಇದ್ದರೂ, ಬಹುತೇಕ ಸರಕಾರಿ ಅಧಿಕಾರಿಗಳ ಪರಿಸ್ಥಿತಿ... ಯಾರಾದರು ಕಾಫಿ ಕಾಸು ಕೊಟ್ಟರೆ, ಅವರು ಕಾಫಿ ಕುಡಿಯುವಂತಹ ದಟ್ಟ ದಾರಿದ್ರ್ಯದ ಭಿಕ್ಷುಕರು!!)


3.ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

(ಭೂಮಿ ವೆಬ್ಸೈಟ್‌ನಲ್ಲಿ ಪಹಣಿಗೆ ಆಧಾರ್ ಲಿಂಕ್ ಆಗಿದೆ. ಫ್ರೂಟ್ ಐಡಿ ಆಗಿದೆ. ಆ ನಂಬರ್‌ಗಳನ್ನೆಲ್ಲ ಅರ್ಜಿಯಲ್ಲಿ ಬರೆದು ಸಹಿ ಮಾಡಲಾಗಿದೆ.  ಆದರೂ ಆಧಾರ್ ಜೆರಾಕ್ಸ್ ಕೊಡಬೇಕು!!)


4.ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ (ಮುಖ ಪುಟ)

(ಇದು ತೋಟಗಾರಿಕೆ ಇಲಾಖೆಯ ಅತ್ಯಂತ ಮೂರ್ಖತನದ ಪರಮ ಜೋಕು!! AMC ಕೊಡುವುದು ಉಚಿತವಾಗಿ. AMC ಕೊಂಡುಕೊಳ್ಳಲು ಹಣದ ಸಹಾಯ ಕೊಡುವುದಲ್ಲ. ನೇರವಾಗಿ AMC ಜೀವಾಣುಗಳನ್ನೇ ರೈತರ ಕೈಗೆ ಇಲಾಖೆ ಕೊಡವಾಗ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಯಾವುದಕ್ಕೆ?  ಇಲ್ಲೊಂದು ಅನುಮಾನವೂ ಇದೆ: ಇಲಾಖೆಯು ರೈತರ ಬ್ಯಾಂಕ್ ಡೀಟೈಲ್ಸ್, ಆಧಾರ್ ಡೀಟೈಲ್ಸ್‌ಗಳನ್ನು ಅನಗತ್ಯವಾಗಿ ಪಡೆದು, ಯಾವುದಾದರು ಹ್ಯಾಕರ್‌ಗಳಿಗೆ ಮಾರಿ ಹಣ ಗಳಿಸುತ್ತಿರಬಹುದಾ!!?) 


5. RTC (ಪಹಣಿ) ಯು ಜಂಟಿ ಖಾತೆಯಾಗಿದ್ದಲ್ಲಿ 100 ರೂಗಳ ಬಾಂಡ್ ಪೇಪರ್ ನಲ್ಲಿ ಒಪ್ಪಿಗೆ ಪತ್ರ ಸಲ್ಲಿಸುವುದು (ನೋಟರಿ ಕಡ್ಡಾಯ)

(ಜಾಯಿಂಟ್ ಅಕೌಂಟ್ ಇದ್ರೆ, ಪಹಣಿಯಲ್ಲಿ ಇರುವ ಹೆಸರಿನ ಎಲ್ಲ ರೈತರು ಅರ್ಜಿಯಲ್ಲಿ ಆಧಾರ್ ನಂಬರ್ ಬರೆದು ಸಹಿ ಮಾಡಿದರೆ ಆಯ್ತಪ್ಪ.  ಅದಕ್ಕೆಂತಕ್ಕೆ ₹.100 ರುಪಾಯಿ ಬಾಂಡ್ + ನೋಟರಿಯವರ ಸಹಿ + ಪ್ರಿಂಟಿಂಗ್ ಚಾರ್ಜು + ನೋಟರಿ ಫೀಸ್.

ನಾನ್ಸೆನ್ಸ್‌ನ ಪರಮಾವಧಿ!!!


6.SC/ST ಫಲಾನುಭವಿಯಾಗಿದ್ದಲ್ಲಿ RD ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ

(ಇದಕ್ಕೆ ನೋ ಕಾಮೆಂಟ್ಸ್!!)


ಇಷ್ಟೆಲ್ಲ ಕಾಗದಗಳನ್ನು, ಬಾಂಡ್‌ಗಳನ್ನು, ಪತ್ರಗಳನ್ನು ಎಲ್ಲ ಕೊಡುವಾಗ ರೈತರ ಕನಿಷ್ಟಪಕ್ಷ ಅರ್ಧ ದಿನ ಕಳೆದು ಹೋಗಿರುತ್ತದೆ. (ಅದರ ಮೌಲ್ಯ ಇಲ್ಲಿ ಪರಿಗಣಿಸಿಲ್ಲ)


ಇಲಾಖೆಯಲ್ಲೂ ಈ ಎಲ್ಲ ದಾಖಲೆಗಳನ್ನು ಕ್ರೂಢಿಕರಿಸಿ, ಒಂದು ಲಾಗ್ ಬುಕ್‌ನಲ್ಲಿ ಎಂಟ್ರಿ ಮಾಡಿ ಸ್ಟೋರ್ ಮಾಡಬೇಕು. ಅವರಿಗೆ ಅದೊಂದು ನಾನ್ಸೆನ್ಸ್ ಕೆಲಸ!!!


ಒಂದೊಂದ್ಸಲ ಅನಿಸುತ್ತೆ: ಓಪನ್ ಖಾಸಗೀ ಮಾರುಕಟ್ಟೆಯಲ್ಲೂ ಈ AMC ದೊರೆಯುತ್ತದೆ. ಆನ್‌ಲೈನ್‌ ಮೂಲಕ  ಅಮೆಜಾನ್‌ನಲ್ಲಿ AMC ದುಡ್ಡು ಕೊಟ್ಟು ತರಿಸಿದರೂ, ರೈತರಿಗೆ ಸ್ವಲ್ಪ ಹಣ ಉಳಿಯಬಹುದು. ಸಮಯವಂತು ಉಳಿಯುತ್ತೆ.  ಒಂದು ಸಣ್ಣ ಕಾಗದದ ತುಂಡೂ ಬೇಡ! ಜಾತಿ, ಉಪಜಾತಿ, ಧರ್ಮ, ಪಹಣಿ, ಪಾಣಿಗ್ರಹಣ!!, ಅರ್ಜಿ, ಪಾಸ್‌ಬುಕ್, ಆಧಾರ್, ಗಂಡೋ, ಹೆಣ್ಣೋ.... ಉಹೂಂ ಏನೂ ಕೇಳಲ್ಲ.  


ಒಂದಕ್ಕೆ ಎರಡು ದುಡ್ಡು ಖರ್ಚು ಮಾಡಿ, ಸಮಯ ಹಾಳುಮಾಡಿಕೊಂಡು ಯಾರ್ಯಾರಿಗೆಲ್ಲ ಹಲ್ಲು ಗಿಂಜಿ ಸಲಾಂ ಹೊಡೆದು, ಕಾಫಿ ಕಾಸು ಕೊಟ್ಟು, ಖಾಸಗೀ ದಾಖಲೆಗಳನ್ನೆಲ್ಲ ಸಲ್ಲಿಸಿ... ತೋಟಗಾರಿಕೆ ಇಲಾಖೆಯಿಂದ ರೈತರು AMC ತರುವಾಗ, AMC ಬಾಟಲಿಯ ಒಳಗಡೆ ಇರುವ ಜೀವಂತ ಜೀವಾಣುಗಳು ಸರಕಾರಿ ವ್ಯವಸ್ಥೆಯನ್ನು ನೋಡಿ ಬಿದ್ದೂ ಬಿದ್ದೂ ನಗುತ್ತಿರಬಹುದು!?


ಅಥವಾ ರೈತರ ಪರಿಸ್ಥಿತಿಯನ್ನು ಕಂಡು ಜೀವಾಣುಗಳು ಕಣ್ಣೀರು ಹಾಕ್ತಿರಬಹುದು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top