ಮಾನವನ ದೇಹದ ಬಣ್ಣವು ಕೇವಲ ಶಾರೀರಿಕ ವೈಶಿಷ್ಟ್ಯವಲ್ಲ. ಅದು ವ್ಯಕ್ತಿಯ ಅಸ್ತಿತ್ವ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಸ್ವೀಕಾರದ ಭಾಗವೂ ಆಗಿದೆ. ಆದರೆ ಕೆಲವರಲ್ಲಿ ದೇಹದ ಕೆಲವು ಭಾಗಗಳಲ್ಲಿ ಬಣ್ಣ ನಾಶವಾಗುವುದು ‘ವಿಟಿಲಿಗೋ’ ಅಥವಾ ಬಿಳಿ ಚುಕ್ಕೆ ರೋಗವೆಂಬ ಚರ್ಮದ ಕಾಯಿಲೆ. ಈ ರೋಗವು ದೇಹದಲ್ಲಿನ ಮೆಲಾನಿನ್ ಎಂಬ ವರ್ಣದ್ರವಕದ ಕೊರತೆಯಿಂದ ಉಂಟಾಗುತ್ತದೆ ಮತ್ತು ಅದರ ಪರಿಣಾಮವಾಗಿ ಚರ್ಮದ ಕೆಲವು ಭಾಗಗಳಲ್ಲಿ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ವೈದ್ಯಕೀಯ ದೃಷ್ಟಿಯಿಂದ ಇದು ಸೋಂಕು ಹರಡುವ ಅಥವಾ ಜೀವಕ್ಕೆ ಅಪಾಯಕಾರಿಯಲ್ಲದ ರೋಗವಾದರೂ, ಸಮಾಜದ ನೋಟದಲ್ಲಿ ಇವರು ಶಾಪಗ್ರಸ್ಥರು.
ವಿಟಿಲಿಗೋ ಒಂದು ದೇಹದ ಸಮಸ್ಯೆಯಾದರೂ, ಅದರ ನಿಜವಾದ ನೋವು ಮನಸ್ಸಿನ ಆಳದಲ್ಲಿರುತ್ತದೆ ಮತ್ತು ಈ ರೋಗಿಗಳು ಭಾವನಾತ್ಮಕ ಹಾಗೂ ಮಾನಸಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಚರ್ಮದ ಬಣ್ಣ ಬದಲಾವಣೆಯು ವ್ಯಕ್ತಿಯ ಆತ್ಮವಿಶ್ವಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನೇಕರು ತಮ್ಮದೇ ದೇಹದ ಬದಲಾವಣೆಗಳನ್ನು ಅಸಹ್ಯದಿಂದ ಸ್ವೀಕರಿಸುತ್ತಾರೆ. “ಬಿಳಿ ಚುಕ್ಕೆ” ಎಂಬ ಪದವೇ ಕೆಲವರಲ್ಲಿ ಭಯ, ಅಸಹನೆ ಹಾಗೂ ಅಜ್ಞಾನದಿಂದ ಹುಟ್ಟುವ ಅಂತರದ ಭಾವನೆಯನ್ನು ಉಂಟುಮಾಡುತ್ತದೆ. ಈ ಸಾಮಾಜಿಕ ಭಾವನೆಗಳು ರೋಗಿಯನ್ನು ಮಾನಸಿಕವಾಗಿ ಮತ್ತಷ್ಟು ಒಂಟಿಗೊಳಿಸುತ್ತವೆ.
ವಿಟಿಲಿಗೋ ಇರುವವರು ತಮ್ಮನ್ನು ಬೇರೆ ಎನ್ನುವ ಭಾವನೆಗೆ ಒಳಪಡುತ್ತಾರೆ. ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳು ಹಾಸ್ಯ ಮಾಡುವ ಸಂದರ್ಭಗಳು, ವಯಸ್ಕ ಜೀವನದಲ್ಲಿ ವಿವಾಹ, ಉದ್ಯೋಗ ಅಥವಾ ಸಾಮಾಜಿಕ ಸಂಪರ್ಕಗಳಲ್ಲಿ ಈ ರೋಗ ಅಡ್ಡಿಯಾಗಿದೆ. ಮುಖ, ಕೈಗಳು ಅಥವಾ ಕಣ್ಣಿಗೆ ಕಾಣುವ ದೇಹದ ಭಾಗಗಳಲ್ಲಿ ಬಿಳಿ ಚುಕ್ಕೆಗಳು ಕಂಡುಬಂದಾಗ ಅನೇಕರು ಜನರ ಮುಂದೆ ಕಾಣಿಸಿಕೊಳ್ಳಲು ಬಯಸುವುದಿಲ್ಲ. ಈ ರೀತಿಯ ಸಾಮಾಜಿಕ ಒತ್ತಡಗಳು ಅವರಲ್ಲಿ ಉದ್ವಿಗ್ನತೆ, ನಿರಾಶೆ ಹಾಗೂ ಸಾಮಾಜಿಕ ಹಿಂಜರಿತ ಸಹಜವಾಗಿ ಉಂಟುಮಾಡುತ್ತವೆ.
ಭಾರತದ ಮಹಾರಾಷ್ಟ್ರದಲ್ಲಿ 430 ಸರ್ಕಾರಿ ನೌಕರರ ಮೇಲೆ ನಡೆದ ವಿಟಿಲಿಗೊಸ್ ಹಿಡನ್ ಸಫರಿಂಗ್: ಸ್ಟಡಿ ರಿವೀಲ್ಸ್ ಹೈ ರೇಟ್ ಆಫ್ ಡಿಪ್ರೆಶನ್ ಅಂಡ್ ಸುಸೈಡ್ ಐಡಿಯೇಷನ್ ಅಮಂಗ್ ಪೇಶಂಟ್ಸ್ ಅಧ್ಯಯನದ ಪ್ರಕಾರ ಒಟ್ಟಾರೆಯಾಗಿ ಶೇಖಡ 60.5 ಜನರು ಈ ರೋಗದಿಂದ ಮನಸ್ಸಿನ ನೋವಿಗೆ ಒಳಗಾಗಿದ್ದರು. ಹಾಗೆಯೇ ಶೇಕಡ 43.3 ಜನರು ಆತ್ಮಹತ್ಯೆ ಯೋಚನೆ ಮಾಡಿರುವುದಾಗಿ ಹೇಳಿದ್ದಾರೆ. ಈ ಶೇಕಡಗಳನ್ನು ನೋಡುವಾಗ ವಿಟಿಲಿಗೊ ಕಾಯಿಲೆಯಿಂದ ಬಳಲುವವರು ಆತ್ಮಸ್ಥೈರ್ಯ ಸಂಪೂರ್ಣವಾಗಿ ಕುಗ್ಗಿರುತ್ತದೆ ಎಂದು ತಿಳಿದುಬರುತ್ತದೆ. ಇಂತಹ ವ್ಯಕ್ತಿಗಳ ಜೊತೆ ಇರುವಾಗ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತ ಇರಬೇಕು.
ಅದಕ್ಕಿಂತಲೂ ಆತ್ಮಗೌರವ ಕಡಿಮೆಯಾಗುವುದು ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಮನೋವ್ಯಥೆ ಹೆಚ್ಚಾಗಿರುತ್ತದೆ, ಏಕೆಂದರೆ ಸಮಾಜವು ಸೌಂದರ್ಯ ಮತ್ತು ಬಾಹ್ಯ ರೂಪದ ಮೇಲೆ ಹೆಚ್ಚಾಗಿ ಒತ್ತು ನೀಡುತ್ತದೆ ಇದರಿಂದ ಸಾಮಾನ್ಯವಾಗಿ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ. ಅನೇಕರು ಮೇಕಪ್, ಉಡುಪು ಅಥವಾ ಚರ್ಮ ಮುಚ್ಚುವ ವಸ್ತ್ರಗಳ ಮೂಲಕ ಚುಕ್ಕೆಗಳನ್ನು ಅಡಗಿಸಲು ಪ್ರಯತ್ನಿಸುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರಗಳು ಮಾತ್ರ- ಮನಸ್ಸಿನ ನೋವು ಹಾಗೆಯೇ ಉಳಿಯುತ್ತದೆ.
ಮನೋವಿಜ್ಞಾನಿಗಳ ಅಭಿಪ್ರಾಯದಲ್ಲಿ, ವಿಟಿಲಿಗೋ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಮಾನಸಿಕ ಸಹಾಯವೂ ಅತ್ಯಗತ್ಯ. ಸಮಾಲೋಚನೆ , ಧ್ಯಾನ, ಸಕಾರಾತ್ಮಕವಾಗಿ ಯೋಚನೆ ಮಾಡುವುದು ಹಾಗೆಯೇ ನಮ್ಮನ್ನು ಒಪ್ಪಿಕೊಳ್ಳುವವರ ಜೊತೆ ಇದ್ದು ಎಲ್ಲಾ ವಿಚಾರಗಳಲ್ಲಿಯೂ ಪಾಲ್ಗೊಳ್ಳುವುದು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಮ್ಮನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡುವುದು ಬಹುಮುಖ್ಯ. “ನೀನು ಹೇಗಿದ್ದರೂ ಸುಂದರನೇ/ಸುಂದರಳೇ” ಎಂಬ ಸರಳ ಸಂದೇಶವೂ ಅವರ ಮನಸ್ಸಿನಲ್ಲಿ ಹೊಸ ಬೆಳಕನ್ನು ಬೆಳಗಿಸಬಲ್ಲದು.
ಇತ್ತೀಚಿನ ವರ್ಷಗಳಲ್ಲಿ ಸಮಾಜದ ದೃಷ್ಟಿಕೋನದಲ್ಲಿ ಬದಲಾವಣೆಯ ಅಲೆ ಕಾಣಿಸುತ್ತಿದೆ. ವಿಟಿಲಿಗೋ ಹೊಂದಿರುವ ಮಾದರಿ ಮಹಿಳೆಯರು, ನಟರು ಹಾಗೂ ಸಾಮಾಜಿಕ ಮಾಧ್ಯಮಗಳ ಮುಖಾಂತರ ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಿರುವುದು ಜನರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವೀಕಾರ್ಯತೆ ಮತ್ತು ಸಹಿಷ್ಣುತೆ ಬೆಳೆದು ಬರುತ್ತಿರುವುದು ನವಯುಗದ ಪ್ರಗತಿಯ ಲಕ್ಷಣವಾಗಿದೆ.
ವಿಟಿಲಿಗೋ ದೇಹದ ಬಣ್ಣವನ್ನು ಬದಲಾಯಿಸಬಹುದು, ಆದರೆ ಅದು ವ್ಯಕ್ತಿಯ ಸಾಮರ್ಥ್ಯ, ಪ್ರಜ್ಞೆ, ಧೈರ್ಯ ಅಥವಾ ಮಾನವೀಯತೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ವಿಶಿಷ್ಟರು- ಈ ಸತ್ಯವನ್ನು ಸಮಾಜದಲ್ಲಿ ಎಲ್ಲರು ಒಪ್ಪಿಕೊಂಡು ಮುನ್ನಡೆಯುವುದು ಅಗತ್ಯವಾಗಿದೆ.
ವಿಟಿಲಿಗೋ ವಿರುದ್ಧದ ಹೋರಾಟವು ವೈದ್ಯಕೀಯ ಚಿಕಿತ್ಸೆಗಷ್ಟೇ ಸೀಮಿತವಾಗದೆ, ಸಮಾಜದ ಮನೋಭಾವದ ಬದಲಾವಣೆಯನ್ನೂ ಅಗತ್ಯವಿರಿಸುತ್ತದೆ. ನಾವು ಚರ್ಮದ ಬಣ್ಣವನ್ನು ಮೀರಿ ಮಾನವನ ಮನಸ್ಸು, ಹೃದಯ ಮತ್ತು ವ್ಯಕ್ತಿತ್ವವನ್ನು ನೋಡಲು ಕಲಿತಾಗ, ವಿಟಿಲಿಗೋ ಹೊಂದಿರುವವರು “ಬಿಳಿ ಚುಕ್ಕೆಗಳ ರೋಗಿಗಳು” ಎಂಬ ಹೆಸರಿಗಿಂತಲೂ “ಬಣ್ಣದಿಂದ ತುಂಬಿದ ಜೀವನವನ್ನು ಧೈರ್ಯದಿಂದ ಬದುಕುವ ಪ್ರೇರಣಾದಾಯಕ ವ್ಯಕ್ತಿಗಳು” ಎಂದು ಗುರುತಿಸಲ್ಪಡುವರು.
- ರಮಿತಾ ರೈ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


