ವಿರಾಜಪೇಟೆ: ಲಿಟಲ್ ಸ್ಕಾಲರ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Chandrashekhara Kulamarva
0


ವಿರಾಜಪೇಟೆ: ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಬುಡದಲ್ಲಿರುವ ಆಂಗ್ಲ ಮಾಧ್ಯಮ ಶಾಲೆ "ಲಿಟಲ್ ಸ್ಕಾಲರ್ ಅಕಾಡೆಮಿ ವಿದ್ಯಾಸಂಸ್ಥೆ" ವತಿಯಿಂದ ಸೋಮವಾರ (ನ.3) ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಲೇಖಕ ವೈಲೇಶ್ ಪಿ.ಎಸ್‌ ಕೊಡಗು ಮತ್ತು ನಿರ್ಮಲ ನರ್ಸಿಂಗ್ ಕಾಲೇಜಿನ ಅಧ್ಯಾಪಿಕೆ ಸುಶ್ಮಿತಾರವರು ಪಾಲ್ಗೊಂಡಿದ್ದರು.


ಕಾರ್ಯಕ್ರಮದ ಪ್ರಾರಂಭದಲ್ಲಿ ಕನ್ನಡದ ಶಾಲುಗಳನ್ನು ಹೊದಿಸಿ ಕವಿ ದುಂಡಪ್ಪ ಸಿದ್ದಪ್ಪ ಕರ್ಕಿಯವರು ರಚಿಸಿದ "ಹಚ್ಚೇವು ಕನ್ನಡದ ದೀಪ" ಹಾಡಿನೊಂದಿಗೆ ಮಂಗಳಾರತಿ ಸಮೇತ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಲ್ಲರ ನಿರೀಕ್ಷೆಗೂ ಮೀರಿದಂತೆ ಮೂರನೆಯ ತರಗತಿಯ ವಿದ್ಯಾರ್ಥಿನಿಯರಾದ ಕು|| ಶೇಯಾನ್ಯ, ಕು|| ಲಿಯಾ ಶಫಿನ್‌ರವರ ಸುಮಧುರ ಮತ್ತು ಅತ್ಯಂತ ಸ್ಪಷ್ಟವಾದ ಕನ್ನಡದ ಉಚ್ಛಾರಣೆಯೊಂದಿಗೆ ಪ್ರಾರಂಭವಾಯಿತು. ಪುಟ್ಟ ಪುಟ್ಟ ಮಕ್ಕಳಿಂದಲೇ ಪ್ರಾರ್ಥನೆ ಕೇಳಿದಾಗ ನಿಜಕ್ಕೂ ಅಚ್ಚರಿಯಾಯಿತು. ಕನ್ನಡದ ಬಾವುಟವನ್ನು ಹಾರಿಸಿದ ನಂತರ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. 


ಕನ್ನಡದ ಬಗ್ಗೆ ಉದ್ದುದ್ದ ಭಾಷಣವಿಲ್ಲದ ಕಾರ್ಯಕ್ರಮದಲ್ಲಿ ಒಂದನೆಯ ತರಗತಿಯ ಮಕ್ಕಳು ತಮ್ಮ ಫೋಷಕರಿಂದ ತಮಗೆ ತೋಚಿದ ಆಹಾರ ಪದಾರ್ಥಗಳ ಅಡುಗೆ ತಯಾರಿಸಿಕೊಂಡು ಬಂದು ಸ್ವತಃ ಮಕ್ಕಳೇ ಅವರ ಅಡುಗೆ ವಿಶೇಷತೆಯ ಕುರಿತು ವಿವರಣೆ ನೀಡಿದರು. ಅತಿಥಿಗಳಿಗೆ ಆಹಾರದ ಗುಣಮಟ್ಟ ರುಚಿಯ ಕುರಿತು ತೀರ್ಪು ನೀಡುವ ಕಾರ್ಯಕ್ರಮ ನಿಯೋಜನೆಯಾಗಿತ್ತು. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮಾತಿಗೆ ಪೂರಕವಾಗುವಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು.


ಮಂಡ್ಯ ಮೈಸೂರಿನ ಕಡೆಯ ರಾಗಿಮುದ್ದೆ ಬಸ್ಸಾರು, ಉಪ್ಸಾರು, ಉತ್ತರ ಕನ್ನಡ ಶೈಲಿಯ ಜೋಳದ ರೊಟ್ಟಿ ಕೊಡಗಿನ ಅಕ್ಕಿರೊಟ್ಟಿ, ದಕ್ಷಿಣ ಭಾರತದ ಇಡ್ಲಿ ವಡೆ, ಕೇಸರಿಭಾತು, ಖಾರಭಾತು, ತರಕಾರಿ ಪುಲಾವ್, ಪೂರಿಪಲ್ಯ, ಚಪಾತಿ ಸಾಗು, ಹಳ್ಳಿ ಸೊಗಡಿನ ಕೆಸುವಿನ ಸಾರು, ನಾನಾ ಬಗೆಯ ಚಟ್ಟಿ, ಚಿತ್ರಾನ್ನ ಪುಳಿಯೊಗರೆ ಸಹಿತವಾಗಿ ಬಹುವಿಧ ಖಾದ್ಯಗಳ ಮೇಳವೇ ಅಲ್ಲಿ ನೆರೆದಿತ್ತು. ಅದನ್ನು ಕಂಡಾಗ ಕರ್ನಾಟಕದ ಮೂಲೆ ಮೂಲೆಯ ಖಾದ್ಯವೈವಿಧ್ಯವು ಬಾಯಲ್ಲಿ ನೀರೂರಿಸುವಂತಿತ್ತು. ಬಳಿಕ ಎರಡನೆಯ ತರಗತಿಯ ಮಕ್ಕಳಿಂದ ಮೊದಲ್ಗೊಂಡು ನಾಲ್ಕನೆಯ ತರಗತಿಯ ಮಕ್ಕಳಿಂದ ಕವನ ವಾಚನ, ಗಾದೆಗಳ ಸಂಗ್ರಹಿಸಿ ಅದರ ಮಹತ್ವ ಮತ್ತು ವಿವರಣೆ ಸಹಿತ ಉವಾಚ, ಕನ್ನಡದ ಪದ್ಯ ಹಾಡುಗಳು ಕನ್ನಡ ಚುಟುಕುಗಳನ್ನು ಹೇಳುವುದರ ಮೂಲಕ ಎಲ್ಲರ ಮನ ಸೆಳೆದರು. ಈ ನಡುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳನ್ನು ಮೂರನೇ ತರಗತಿ ವಿದ್ಯಾರ್ಥಿನಿಯಾದ ಶಿವಾಗ್ನಿ ಸ್ವಾಗತಿದರು. 


ಕಾರ್ಯಕ್ರಮದ ಕುರಿತು ಮಾತನಾಡುವ ಅವಕಾಶ ದೊರೆತಾಗ ಕರ್ನಾಟಕ ರಾಜ್ಯಾದ್ಯಂತ ಸಾಕಷ್ಟು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮೊಳಗೆ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವುದನ್ನು ಸಂಪ್ರದಾಯ ಮಾಡಿಕೊಂಡಿರುವಾಗ ಲಿಟಲ್ ಸ್ಕಾಲರ್ ಅಕಾಡೆಮಿಯಂತಹ ಆಂಗ್ಲ ಮಾಧ್ಯಮದ ವಿದ್ಯಾಸಂಸ್ಥೆಯು ಕನ್ನಡ ರಾಜ್ಯೋತ್ಸವವನ್ನು ಆಂಗ್ಲ ಭಾಷೆಯ ಸಹಾಯವಿಲ್ಲದೆಯೇ ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚ ಕನ್ನಡದಲ್ಲಿಯೇ ನಡೆಸಿಕೊಡುವ ಮೂಲಕ ಕೊಡಗಿಗೆ ಮಾತ್ರವಲ್ಲ ಕರ್ನಾಟಕ ರಾಜ್ಯದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಮಾದರಿ ಶಾಲೆಯಾಗಿದೆ ಎಂದರು.


ಈ ಶಾಲೆಯಲ್ಲಿ ಮಕ್ಕಳು ಕನ್ನಡ ಮಾತನಾಡುವುದನ್ನು ಕೇಳಿದರೆ ತುಂಬಾ ಸಂತೋಷವಾಗುತ್ತದೆ ಎಂದು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆನು. ಬಳಿಕ ನಮ್ಮ ಮನೆ ಮನೆ ಕವಿಗೋಷ್ಠಿ ಬಳಗದ ವತಿಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊಡಗಿನ ಸಾಹಿತ್ಯ ಮತ್ತಿತರ ಕುರಿತಾದ  ರಸಪ್ರಶ್ನೆ ಕಾರ್ಯಕ್ರಮದ ಮೂಲಕ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಈ ಸುಂದರ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಮೀರಾ ಪೂಣಚ್ಚ, ಶಾಲೆಯ ಕಾರ್ಯದರ್ಶಿ ಪ್ರತಿಮ ರಂಜನ್, ಕ್ಯಾಂಪಸ್ ಕೋ ಆರ್ಡಿನೇಟರ್ ರವೀನ್ ರಿಚರ್ಡ್ ಮತ್ತು ಶಾಲೆಯ ಶಿಕ್ಷಕ ವೃಂದದವರು, ಮಕ್ಕಳು ಉಪಸ್ಥಿತರಿದ್ದರು. ಎರಡನೇ ತರಗತಿಯ ವಿದ್ಯಾರ್ಥಿ ಋಷಭ್‌ ವಂದನಾರ್ಪಣೆ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top