ಸಂಸ್ಕಾರ, ದೇಶಭಕ್ತಿಗಳನ್ನು ತುಂಬುವುದೇ ನಿಜವಾದ ವಿದ್ಯೆ : ವಿದ್ವಾನ್ ಈಶ್ವರ ಭಟ್

Upayuktha
0

ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ‘ವಂದೇ ಮಾತರಂ’ ಗಾಯನ ಸ್ಪರ್ಧೆ ಉದ್ಘಾಟನೆ



ಪುತ್ತೂರು: ಮಕ್ಕಳನ್ನು ಸುಸಂಸ್ಕೃತರನ್ನಾಗಿಸದೆ ಕೇವಲ ಅಂಕದ ದೃಷ್ಟಿಯಿಂದಷ್ಟೇ ಬೆಳೆಸಿದರೆ ಅದು ಅವನತಿಗೆ ಕಾರಣವೆನಿಸುತ್ತದೆ.  ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ದೇಶಭಕ್ತಿಗಳನ್ನು ತುಂಬುವುದೇ ನಿಜವಾದ ವಿದ್ಯೆ. ಆದರೆ ಅಂತಹ ವಿದ್ಯೆಯನ್ನು ಒದಗಿಸಿಕೊಡುವ ಅಂಬಿಕಾದಂತಹ ಸಂಸ್ಥೆಗಳು ಸಾಕಷ್ಟು ಕಡಿಮೆ ಇವೆ ಎಂದು ಸುನಾದ ಸಂಗೀತ ಶಾಲೆಯ ನಿರ್ದೇಶಕ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ವಿದ್ವಾನ್ ಎ. ಈಶ್ವರ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ವಂದೇ ಮಾತರಂ ರಾಷ್ಟ್ರಗಾನದ ನೂರ ಐವತ್ತನೇ ವರ್ಷಾಚರಣೆ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಂದೇ ಮಾತರಂ ಗೀತೆಯ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ನಾವು ಪ್ರತಿನಿತ್ಯವೂ ಭೂಮಿತಾಯಿಯನ್ನು ನೆನಪಿಸಿಕೊಳ್ಳಬೇಕು. ನಮಗೆಲ್ಲವನ್ನೂ ಕೊಟ್ಟಿರುವುದು ಭೂಮಿಯೇ. ನಾನೇ ಮಾಡಿದೆ, ನನ್ನಿಂದಾಗಿ ಆಯಿತು ಎನ್ನುವುದೆಲ್ಲವೂ ಭ್ರಮೆ. ಭೂಮಿತಾಯಿಯಿಂದಾಗಿ ನಾವು ಅಂದುಕೊಂಡದ್ದನ್ನು ನೆರವೇರಿಸುವುದಕ್ಕೆ ಸಾಧ್ಯವಾಯಿತು ಎಂಬುದಷ್ಟೇ ಸತ್ಯ. ಆದ್ದರಿಂದ ಆ ತಾಯಿಯನ್ನು ವಂದೇ ಮಾತರಂ ಗೀತೆಯ ಮೂಲಕ ನೆನಪಿಸಿಕೊಳ್ಳುವ ಕಾರ್ಯ ನಡೆಯಬೇಕು. ಭೂತಾಯಿಯ ರಕ್ಷಣೆಯ ಕಾರ್ಯವೂ ನಮ್ಮದೆಂಬ ಭಾವ ಬೆಳೆಯಬೇಕು ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿವೀರರ ರಣಮಂತ್ರ ವಂದೇಮಾತರಂ ಗೀತೆ. ಅದರಿಂದ ದೊರೆತ ಪ್ರೇರಣೆಯೇ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಬಲ ನೀಡಿತು. ಹಾಗಾಗಿ ಭಾರತವಿಂದು ಸ್ವತಂತ್ರ ದೇಶವಾಗುವಲ್ಲಿ ವಂದೇ ಮಾತರಂ ಕೊಡುಗೆ ಅಪಾರ. ಅಂತಹ ಗೀತೆಯನ್ನು ಮನೆಮನೆಗಳಲ್ಲಿ ಹಾಡುವಂತಾಗಬೇಕು ಎಂದು ಹೇಳಿದರು.


ತಮ್ಮ ಜೀವನಕ್ಕೆ ಕಾರಣೀಭೂತರಾದ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಮಕ್ಕಳು ಅವರ ದಿನವನ್ನು ಪ್ರತಿವರ್ಷ ಆಚರಿಸುತ್ತಾರೆ, ಅವರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನುಕುಲದ ಉಗಮಕ್ಕೇ ಕಾರಣೀಭೂತಳಾದ ಈ ಭೂತಾಯಿಯನ್ನು ನಾವು ಯಾವತ್ತೂ ಸ್ಮರಿಸಿಕೊಳ್ಳುವುದಿಲ್ಲ. ನಮ್ಮ ಸ್ವಾರ್ಥ ಇಷ್ಟಾನಿಷ್ಟಗಳಿಗೆಲ್ಲಾ ನಮ್ಮಲ್ಲಿ ಸಮಯಗಳಿವೆ. ಆದರೆ ಈ ದೇಶದ ಪ್ರೇರಣಾಗೀತೆ, ಭೂಮಿತಾಯಿಯ ಸ್ತುತಿಯಾದ ವಂದೇಮಾತರಂಗೆ ದಿನದಲ್ಲಿ ಐದುನಿಮಿಷವನ್ನಾದರೂ ನೀಡಲು ಸಮಯವಿರದಿದ್ದರೆ ಈ ಜನ್ಮದ ಸಾರ್ಥಕ್ಯವಾದರೂ ಏನು ಎಂದು ಪ್ರಶ್ನಿಸಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top