ಯೂನಿಯನ್ ಬ್ಯಾಂಕಿನ ಕನ್ನಡ ಬಳಗದಿಂದ ಸಂಭ್ರಮದ ರಾಜ್ಯೋತ್ಸವ-2025

Upayuktha
0


ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ (ನೋಂ) ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ 22 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣ (FKCCI) ದಲ್ಲಿ ಸಂಭ್ರಮದಿಂದ ನೆರವೇರಿಸಲಾಯಿತು. 


ಯೂನಿಯನ್ ಬ್ಯಾಂಕ್ ಕನ್ನಡ ಬಳಗದ ಸ್ಥಾಪನೆಯ ಉದ್ದೇಶವು ಕನ್ನಡ ಭಾಷೆಯ ಬೆಳವಣಿಗೆ, ಸಂಸ್ಕೃತಿಯ ಸಂರಕ್ಷಣೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ನಾಡಿನ ಸಾಧಕರನ್ನು ಹೆಕ್ಕಿ ತೆಗೆದು ಸನ್ಮಾನಿಸುವುದು, ಬ್ಯಾಂಕಿನ ಕನ್ನಡಿಗ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು ಮತ್ತು ಕನ್ನಡೇತರ ಉದ್ಯೋಗಿಗಳು ಕೂಡ ಕನ್ನಡವನ್ನು ಕಲಿತು ಕರ್ನಾಟಕದಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವಂತೆ ಮಾಡಬೇಕು. ಬ್ಯಾಂಕಿನ ಅನೇಕ ಅರ್ಜಿ ನಮೂನೆಗಳ ಕನ್ನಡೀಕರಣ, ಹೀಗೆಯೇ ವಿವಿಧ ಆಯಾಮಗಳಿಂದ ಕನ್ನಡತನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೇವಲ 10 ಸದಸ್ಯರಿಂದ ಪ್ರಾರಂಭವಾದ ಯೂನಿಯನ್ ಬ್ಯಾಂಕ್ ಕನ್ನಡ ಬಳಗವು ಈಗ ಐದೇ ವರ್ಷಗಳಲ್ಲಿ 4000 ದ ಸಂಖ್ಯೆಯನ್ನು ತಲುಪುವ ಹಂತದಲ್ಲಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿಗಳೂ, ಬೆಂಗಳೂರು ವಲಯದ ಉಪ ಮುಖ್ಯಸ್ಥರೂ, ಉಪ ಮಹಾ ಪ್ರಬಂಧಕರೂ ಆಗಿರುವ ಅರವಿಂದ ಹೆಗಡೆಯವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.


ರಾಜ್ಯೋತ್ಸವದ ಕಾರ್ಯಕ್ರಮಗಳು: ಕಾರ್ಯಕ್ರಮವು ಶೃತಿಸಿಂಧೂರ ಪಕ್ಕ ವಾದ್ಯಗಳ ಸಂಸ್ಥಾಪಕರೂ ಮತ್ತು ಯೂನಿಯನ್ ಬ್ಯಾಂಕಿನ ಸಿಬ್ಬಂದಿಯೂ ಆದ ರವಿ ಶಂಕರ್ ಮತ್ತು ತಂಡದೊಂದಿಗೆ ಉತ್ತಮವಾಗಿ ಪ್ರಾರಂಭವಾಯಿತು. ಈ ತಂಡವು ಜನಪ್ರಿಯ ಗೀತೆಗಳ ಗುಚ್ಚಗಳನ್ನು ತಮ್ಮ ವಾದ್ಯಗಳಲ್ಲಿ ನುಡಿಸಿ ಕಾರ್ಯಕ್ರಮಕ್ಕೆ ದೈವೀಕವಾದ ಆರಂಭವನ್ನು ನೀಡಿದರು. ನಂತರ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಅವರ ಮಕ್ಕಳು ನೀಡೆದ ಅನೇಕ ಮನರಂಜನಾ ಕಾರ್ಯಕ್ರಮಗಳು ಆಕರ್ಷಕವಾಗಿದ್ದರು. ಜೀ ಕನ್ನಡ ಖ್ಯಾತಿಯ ಗಾಯಕಿ ಕುಮಾರಿ ದಿಯಾ ಹೆಗಡೆಯ ಕನ್ನಡ ಗೀತೆಗಳ ಸುಂದರ ಗಾಯನವು ನೆರೆದವರ ಮನ ಗೆದ್ದಿತ್ತು.


ಸಭಾ ಕಾರ್ಯಕ್ರಮವು ವೀರಗಾಸೆ ಮತ್ತು ಡೊಳ್ಳು ಕುಣಿತಗಳೊಂದಿಗೆ ಪ್ರಾರಂಭವಾಯಿತು. ದೀಪ ಪ್ರಜ್ವಲನೆಯ ನಂತರ ಪುಷ್ಪಾರ್ಚನೆ, ನಾಡಗೀತೆಯ ನಂತರ ಬಳಗದ ಉಪಾಧ್ಯಕ್ಷ ಮಹೇಶ ಜೆ ಅವರು ಸ್ವಾಗತವನ್ನು ಕೋರಿದರು. ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರವಿಂದ ಹೆಗಡೆಯವರು ಕಳೆದ ಸಾಲಿನ ವರದಿಯನ್ನು ಮಂಡಿಸಿದರು ಹಾಗೆಯೇ ಕನ್ನಡದ ಅಸ್ಮಿತೆಯನ್ನು ವಿವರಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಚಲನಚಿತ್ರ ಮತ್ತು ದೂರದರ್ಶನ ನಟ, ನಿರ್ದೇಶಕ, ನಿರ್ಮಾಪಕರಾದ ಸಿಹಿಕಹಿ ಚಂದ್ರುರವರು ಮಾತನಾಡಿ, ತಮ್ಮ ವೃತ್ತಿ ಜೀವನದ ಪ್ರಾರಂಭದ ದಿನದಿಂದಲೂ ನಮ್ಮ ಯೂನಿಯನ್ ಬ್ಯಾಂಕಿನ ಗ್ರಾಹಕರು, ತಮ್ಮ ಗೃಹ ಸಾಲ, ವಾಹನ ಸಾಲವನ್ನು ನಮ್ಮ ಬ್ಯಾಂಕಿನಿಂದಲೇ ಪಡೆದಿದ್ದೇನೆಂದು ಸಭೆಗೆ ತಿಳಿಸಿದರು ಹಾಗೂ ಬ್ಯಾಂಕಿನ ಸೇವೆಯಿಂದ ಸಂತೃಪ್ತಗೊಂಡು ತಮ್ಮ 75 ನೌಕರರ ಸಂಬಳದ ಖಾತೆಗಳನ್ನು ಯೂನಿಯನ್ ಬ್ಯಾಂಕಿನಲ್ಲಿಯೇ ತೆರೆದಿರುವುದಾಗಿ ತಿಳಿಸಿದರು. ಸ್ಮರಣ ಸಂಚಿಕೆಯ ಗುಣಮಟ್ಟದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.


ಸಭೆಯಲ್ಲಿ ಅಪರೂಪದ ಸಾಧಕಿ, ಕನ್ನಡತಿ ದಾವಣಗೆರೆಯ ಶ್ರೀಮತಿ ಸುಧಾರಾಣಿಯವರಿಗೆ ಅವರ ಅಪರೂಪದ ಸಮಾಜ ಸೇವೆಗಾಗಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಿರಿಸಂಪದ ಸ್ಮರಣ ಸಂಚಿಕೆ, 2026ನೇ ಸಾಲಿನ ದಿನಾಂಕ ಪಟ್ಟಿ ಮತ್ತು ಕನ್ನಡೀಕರಿಸಲಾದ ನಮ್ಮ ಬ್ಯಾಂಕಿನ ಕೆಲವು ಅರ್ಜಿ ನಮೂನೆಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು. ಈ ವಿಶೇಷ ಸಂಚಿಕೆ ಅತ್ಯಂತ ಮಾಹಿತಿಯುತ ವಾಗಿದ್ದು, ಒಳಗೊಂಡಿರುವ ಲೇಖನಗಳು, ಕಥೆಗಳು, ಕವಿತೆಗಳು ಎಲ್ಲವೂ ಆಳವಾದ ಅರ್ಥಪೂರ್ಣತೆ ಮತ್ತು ಸಾಹಿತ್ಯದ ಸೊಗಡು ಹೊಂದಿವೆ. ವಿಶೇಷವಾಗಿ, ಸಂಪೂರ್ಣ ಸಂಚಿಕೆಯ ವಿನ್ಯಾಸ, ವಿನ್ಯಾಸದಲ್ಲಿರುವ ನೂತನತೆ ಹಾಗೂ ಮನಸಿಗೆ ತುಂಬುವ ಕಲಾತ್ಮಕ ಸ್ಪರ್ಶಗಳು ಹೃದಯ ಸ್ಪರ್ಶಿಸುತ್ತದೆ. ಒಟ್ಟಾರೆಯಾಗಿ ಈ ವಿಶೇಷ ಸಂಚಿಕೆಯು ಓದುಗರಿಗೆ ನಿಜವಾದ ಜ್ಞಾನ, ಪ್ರೇರಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಾರುವ ಅತ್ಯುತ್ತಮ ಕೃತಿಯಾಗಿ ಹೊರಬರುತ್ತಿದೆ.


ನಂತರ ಮಾತನಾಡಿದ ಗೌರವಾನ್ವಿತ ವಲಯ ಮುಖ್ಯಸ್ಥರಾದ ಕಲ್ಯಾಣ್ ವರ್ಮಾರವರು ನಮ್ಮ ಕಾರ್ಯಕರ್ತರ ಸಂಭ್ರಮ ಮತ್ತು ಅಭಿಮಾನವನ್ನು ಶ್ಲ್ಯಾಘಿಸಿದರು. ಈ ಸಂದರ್ಭದಲ್ಲಿ ನಮ್ಮ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೂ ಆಗಿರುವ ಆಶೀಷ್ ಪಾಂಡೆಯವರು ಕಳಿಸಿದ್ದ ಸಂದೇಶಗಳನ್ನು ಓದಲಾಯಿತು. 


ರಾಜ್ಯೋತ್ಸವ ಸ್ಪರ್ಧಾ ಕಾರ್ಯಕ್ರಮಗಳು:

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಬಳಗವು 2025 ರಲ್ಲಿ ಬಳಗವು ಒಟ್ಟಾರೆ 15 ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಇದರಲ್ಲಿ  ಪ್ರಬಂಧ ಲೇಖನ ಸ್ಪರ್ಧೆ, ಫೋಟೋ ನೋಡಿ ಕವನ ರಚನೆ, ಕನ್ನಡದ ಜಾನಪದ ಕವಿಗಳ ಭಾವಚಿತ್ರ ರಚನೆ, ಬಣ್ಣದ ರಂಗೋಲಿ ಸ್ಪರ್ಧೆ, ಅಂದದ ಕೈ ಬರವಣಿಗೆ ಸ್ಪರ್ಧೆ, ಏಕ ವ್ಯಕ್ತಿ ಗಾಯನ ಸ್ಪರ್ಧೆ, ಫೋಟೋಗ್ರಫಿ ಸ್ಪರ್ಧೆ, ಹನಿಗವನ, ವ್ಯಂಗ್ಯ ಚಿತ್ರ ಸ್ಪರ್ಧೆ, ಹಾಸ್ಯಕತೆ, ಸಮೂಹಗಾನ ಸ್ಪರ್ಧೆ, ಕನ್ನಡ ನಾಡ ಗೀತೆ ಮತ್ತು ರಾಷ್ಟ್ರ ಗೀತೆಗಳನ್ನು ತಪ್ಪಿಲ್ಲದೆ ದುಂಡಾಗಿ ಬರೆಯುವ ಸ್ಪರ್ಧೆ, ಸಹೋದ್ಯೋಗಿಗಳ ಮಕ್ಕಳಿಗಾಗಿ ಉಕ್ತಲೇಖನ, ಕನ್ನಡ ಅಕ್ಷರಮಾಲೆ ಮತ್ತು ಕಾಗುಣಿತ, ವರ್ಣಮಾಲೆ ಮತ್ತು ಕನ್ನಡ ಕಾಗುಣಿತ ಬರೆಯುವುದು ಮತ್ತು ಚಿತ್ರ ಬಿಡಿಸುವ ಸ್ಪರ್ಧೆಗಳು ಇತ್ಯಾದಿಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. 


ಬಹುಮಾನ ವಿತರಣೆಯ ನಂತರ, ವಲಯದ ಉಪಾಧ್ಯಕ್ಷರು, ಮತ್ತು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಿಗೆ ಮತ್ತು ಸಿಬ್ಬಂದಿ ಮತ್ತು ಅಧಿಕಾರಿ ಗಣದ ಮುಖಂಡರುಗಳನ್ನು ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷರೂ ಮಹಾ ಪ್ರಬಂಧಕರೂ ಆದ  ಹೆಚ್ ಟಿ ವಾಸಪ್ಪರವರು ಮಾತನಾಡಿ, ಈ ಕಾರ್ಯಕ್ರಮದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಕನ್ನಡ ಸೇವೆಯನ್ನು ಮಾಡುವಂತೆ ಕರೆ ನೀಡಿದರು. ಖಜಾಂಚಿ ಬಿ ಜಿ ಪರಮೇಶ್ವರರವರು ವಂದಿಸಿದರು. ಶ್ರೀಮತಿ ಶೋಭಾ ದೇಶಪಾಂಡೆ ಪ್ರಾರ್ಥಿಸಿದರು. ಶ್ರೀಮತಿ ಉಷಾ ಕೃಷ್ಣಮೂರ್ತಿ ಮತ್ತು ವಿನಯ್ ಮೈಸೂರ್ ಇವರು ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ನಟರಾಜ್ ಎಂಟರ್ ಟೈನರ್ಸ್ ರವರು ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದರು. ಸಮಾರಂಭದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಯುವ ಪುಸ್ತಕಗಳನ್ನು, ಮತ್ತು ಪರಿಸರ ಪ್ರಜ್ಞೆಗಾಗಿ ಹಸಿರು ಗಿಡಗಳನ್ನು ಎಲ್ಲರಿಗೂ ನೀಡಲಾಯಿತು.  ಕನ್ನಡಿಗ ಮತ್ತು ಕನ್ನಡೇತರ ಸಿಬ್ಬಂದಿಗಳು, ಅವರ ಕುಟುಂಬ ಸದಸ್ಯರು ಮತ್ತು ಅನೇಕ ನಿವೃತ್ತ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top