ಕಾಡು ಪ್ರಾಣಿಗಳಿಂದ ಜನ ಹೀಗೆ ಸಾಯ್ತಾ ಇದ್ರೆ, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಪರಿಷತ್ ಸದಸ್ಯರು, ಬರೀ ಚೆಕ್ ಇಶ್ಯೂ ಮಾಡುವುದು, RTGS ಮಾಡುವುದು, ಸಂತಾಪ ಸೂಚಿಸುವುದು ಮಾತ್ರ ಮಾಡ್ತಾ ಇದ್ರೆ... ಅನಿವಾರ್ಯ ಸ್ಥಿತಿಯಲ್ಲಿ ನೆಲವಾಸಿಗಳೇ ಕೂತು ಮಾತಾಡಿ, ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾ ಅಂತ ನೋಡಿಯಾರು? ನ್ಯಾಯಯುತ ದಾರಿ ಯಾವುದಾದರು ಇದೆಯಾ ಅಂತ ಪರಿಶೀಲಿಸಿಯಾರು?
ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಪರಿಷತ್ ಸದಸ್ಯರು ಬಂದಾಗಲೆಲ್ಲ ಶಾಶ್ವತ ಪರಿಹಾರ, ಶಾಶ್ವತ ಪರಿಹಾರ, ಶಾಶ್ವತ ಪರಿಹಾರ, ಶಾಶ್ವತ ಪರಿಹಾರ... ಅಂತ ಭರವಸೆಯ ಜಪ ಹೇಳುವುದನ್ನು ಜನ ಎಷ್ಟು ದಿನ ಅಂತ ಕೇಳ್ತಾ ಕೂರುತ್ತಾರೆ?
ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಪರಿಷತ್ ಸದಸ್ಯರುಗಳು ಕ್ಷೇತ್ರಕ್ಕೂ, ಊರಿಗೂ, ಕಾಡಿಗೂ, ಅಂಗಳಕ್ಕೂ, ಮನೆಗೂ ಬರೋದು ಬೇಡ ಅಂತ ಒಟ್ಟಾಗಿ ಹೇಳುವ ದಿನ ಬರಬಹುದು. (ಮೊನ್ನೆ ಕೆರೆಕಟ್ಟೆಯ ಪ್ರತಿಭಟನೆಯಲ್ಲಿ ಆ ಧ್ವನಿ ಸಣ್ಣದಾಗಿ ಉದ್ಘಾಟನೆಯಾಗಿದೆ!)
ಕ್ರಿಯಾತ್ಮಕವಾಗಿ ಏನನ್ನೂ ಮಾಡದೆ, ಕೇವಲ ಭರವಸೆ, ಆಶ್ವಾಸನೆ, ಕಣ್ಣೀರಧಾರೆ, ಟವಲ್‌ನಲ್ಲಿ ಮುಖ ಒರೆಸಿಕೊಳ್ಳುವುದು, ಯಾರ್ಯಾರನ್ನೋ ಆಕ್ರೋಶದಲ್ಲಿ ದೂರುವುದು ಇತ್ಯಾದಿ ಜಪತಪಾದಿಗಳ ಹೈಡ್ರಾಮಾದ ಮನರಂಜನೆಯ ಭಾಷಣಗಳನ್ನು ವೀಡಿಯೋ ಮಾಡಿ ನಗರದ ಎಸಿ ರೂಮಿನಿಂದ ಕಳಿಸುತ್ತಿರಲಿ!!.
ಅದಲ್ಲ ಅಂತಾದರೆ, ಕೆಂಜಳಿಲು, ಅಳಿಲು, ಮಂಗಗಳ ಸಂತತಿ ಕ್ಷೀಣಿಸುತ್ತಿರುವಂತೆ, ನಾಳೆ ಆನೆ, ಕಾಡುಕೋಣ, ಕಡ, ಕಾಡು ಹಂದಿ, ಚಿರತೆಗಳ ಬದುಕನ್ನು, ಸಾಮಾನ್ಯ ಜನರೇ ತಮ್ಮ ಬದುಕಿನ ಉಳಿವಿಗಾಗಿ ನಿಯಂತ್ರಿಸುವ, ನಿರ್ಣಯಿಸುವ ದಿನಗಳು ಬರುವ ಮೊದಲೇ ಭಾಷಣಗಳಲ್ಲಿ ಹೇಳಿದ ಶಾಶ್ವತ ಪರಿಹಾರ ಸಪ್ತಾಕ್ಷರಿ ಮಂತ್ರದ ಜಪವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಅರಣ್ಯ ಇಲಾಖೆ, ಶಾಸಕರು, ಸಚಿವರು, ಸಂಸದರು, ಪರಿಷತ್ ಸದಸ್ಯರುಗಳು ಪ್ರಯತ್ನಿಸಲಿ.
ಅಧಿಕಾರ, ಸಂಬಳಗಳ ಯೋಗ ವನ್ನು ಜನ, ದೇವರು ಕರುಣಿಸಿದ್ದಾರೆ. ಶಾಶ್ವತ ಪರಿಹಾರದ ಅನುಷ್ಠಾನಕ್ಕೆ ಬೇಕಾಗುವ ಯೋಗ್ಯತೆ ಯನ್ನು ಸೃಷ್ಟಿಸಿಕೊಂಡಾದರೂ ಜನ ಸೇವೆ-ಜನಾರ್ದನ ಸೇವೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಪರಿಷತ್ ಸದಸ್ಯರುಗಳು ಮಾಡಲಿ.
ಚಕ್ ಬರೆಯುವ ಪೆನ್ನನ್ನು ಇನ್ನು ಬಳಸದಂತೆ ಕಸದ ಬುಟ್ಟಿಗೆ ಎಸೆದು, ಏನಾದರು ಮಾಡಿ, ನೆಲವಾಸಿಗಳ ಜೀವ ಉಳಿಸಿ.
*****
ಮಲೆನಾಡಿನ ಹರಿತವಾದ ತೂಗುಕತ್ತಿಯಂತಿರುವ ಹತ್ತಾರು ಸಮಸ್ಯೆಗಳಿಗೆ ಪಕ್ಷ ಭೇದ ಮರೆತು ನಿಯೋಗ ಕಟ್ಟಿಕೊಂಡು ಮುಖ್ಯಮಂತ್ರಿಗಳನ್ನು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲು ಹೋಗುವುದು ಅಂತ ವೀರಭದ್ರನ ಸನ್ನಿಧಿಯಲ್ಲಿ ಪ್ರಮಾಣಿಸಿ ಮಾತಾಡಿದ್ದು ಏನಾಯ್ತು?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


