ಬಂಟ್ವಾಳ: ಬಿ.ಸಿ. ರೋಡಿನ ನಾರಾಯಣ ಗುರು ವೃತ್ತಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಪೀಣ್ಯ ನಿವಾಸಿಗಳಾದ ನಂಜಮ್ಮ(75), ರವಿ (64), ರಮ್ಯ (25) ಎಂಬವರು ಮೃತಪಟ್ಟು ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ತುರ್ತು ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಒಂಭತ್ತು ಮಂದಿಯ ತಂಡದಲ್ಲಿ ಕೀರ್ತಿ, ಬಿಂದು, ಸುಶೀಲಾ, ಪ್ರಶಾಂತ್ ಗಂಭೀರ ಗಾಯಗೊಂಡವರಾಗಿದ್ದಾರೆ. ಚಾಲಕ ಸುಬ್ರಮಣ್ಯ ಮತ್ತು ಕಿರಣ್ ಎಂಬವರು ಅಲ್ಪ ಸ್ವಲ್ಪ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಇನ್ನೋವ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದವರು ರಾಷ್ಟ್ರೀಯ ಹೆದ್ದಾರಿ ಬಿ.ಸಿ ರೋಡಿನಲ್ಲಿ ಮುಂಜಾನೆ ವೇಳೆ ವೃತ್ತವು ಗಮನಕ್ಕೆ ಬಾರದೆ ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕ್ರೇನ್ ಬಳಸಿ ತೆಗೆಯಲಾಯಿತು.






