ಎಂದೆಂದಿಗೂ ನೀ ಕನ್ನಡವಾಗಿರು

Chandrashekhara Kulamarva
0



ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ನಾವು ಎಲ್ಲೇ ಹೋದರೂ ನಮ್ಮ ಮಾತೃಭಾಷೆ ಕನ್ನಡವನ್ನು, ಅದರ ಮಹತ್ವವನ್ನು ಎಂದಿಗೂ ಮರೆಯಬಾರದು. ಕನ್ನಡವು ಕರ್ನಾಟಕದ ಪ್ರಮುಖ ಭಾಷೆಯಾಗಿದೆ. ಇದು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಒಂದು ಹಳೆಯ ಮತ್ತು ಸಮೃದ್ಧ ಭಾಷೆಯಾಗಿದೆ. ಕನ್ನಡವು ತನ್ನದೇ ಆದ ಶ್ರೀಮಂತ ಸಾಹಿತ್ಯ, ಇತಿಹಾಸ ಮತ್ತು ಉಪಭಾಷೆಗಳನ್ನು ಹೊಂದಿದೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಕನ್ನಡದ ಕಂಪನ್ನು ಪಸರಿಸುವ ಹಬ್ಬವನ್ನು ಪ್ರತಿವರ್ಷ ನಾಡಿನೆಲ್ಲೆಡೆ ನವೆಂಬರ್ 1 ರಂದು ಬಹಳ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ವಿವಿಧ ಕನ್ನಡಿಗರು ಹಂಚಿ ಹೋಗಿದ್ದ ಪ್ರದೇಶಗಳನ್ನು ಒಂದುಗೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

1905ರಲ್ಲಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ಭಾರತವು ಗಣರಾಜ್ಯವಾದ ನಂತರ, ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸುವ ಪ್ರಕ್ರಿಯೆ ಪ್ರಾರಂಭವಾಯಿತು. 1956ರ ನವೆಂಬರ್ 1ರಂದು, ಮದ್ರಾಸ್, ಬಾಂಬೆ ಮತ್ತು ಹೈದರಾಬಾದ್ ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ 'ಮೈಸೂರು ರಾಜ್ಯ' ಅಸ್ತಿತ್ವಕ್ಕೆ ತರಲಾಯಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ನಂತರ ಉತ್ತರ ಕರ್ನಾಟಕದ ಜನರ ತರ್ಕದ ಮಾನ್ಯತೆಗಾಗಿ,1973ರ ನವೆಂಬರ್ 1ರಂದು, ಡಿ. ದೇವರಾಜ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯದ ಹೆಸರನ್ನು 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು ಕರೆಯಲ್ಪಟ್ಟಿತು. ಈ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರಲ್ಲದೆ, ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್, ಬಿ.ಎಂ. ಶ್ರೀಕಂಠಯ್ಯ ಸೇರಿದಂತೆ ಅನೇಕರು ಶ್ರಮಿಸಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಸಂದರ್ಭದಲ್ಲಿ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಹಾಡಿದರು.

ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರ ಸ್ಪೂರ್ತಿಯ ಸಂಕೇತವಾಗಿರುವ ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು ರಾಜ್ಯದ ಎಲ್ಲೆಡೆ ಹಾರಿಸುವುದರೊಂದಿಗೆ ಕನ್ನಡ ನಾಡಗೀತೆಯನ್ನು (ಜಯ ಭಾರತ ಜನನಿಯ ತನುಜಾತೆ) ಹಾಡಲಾಗುತ್ತದೆ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಮತ್ತು ಅಭಿಮಾನವನ್ನು ಮೂಡಿಸುತ್ತದೆ. ಸರಕಾರಿ ಕಚೇರಿ ಮತ್ತು ಪ್ರಮುಖ ಪ್ರದೇಶಗಳಲ್ಲಿ ಭುವನೇಶ್ವರಿಯ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗಳ ಮೂಲಕ ಗೌರವಿಸಲಾಗುತ್ತದೆ.ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಏಕೀಕರಣದ ಕುರಿತು ಭಾಷಣ, ಪ್ರಬಂಧ ಸ್ಪರ್ಧೆ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ರೀತಿಯಾಗಿ ಕನ್ನಡ ರಾಜ್ಯೋತ್ಸವವು ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಆಚರಿಸುವ ಹಾಗೂ ಗೌರವಿಸುವ ದಿನವಾಗಿದೆ. ಇದು ಕನ್ನಡಿಗರ ಏಕತೆ, ಬದ್ಧತೆ ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಭಾಷೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮತ್ತು ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ.


-ಪ್ರಮೀಳಾ ವಾಟೆಕಜೆ 

ಪ್ರಥಮ ಜೆಎಂಸಿ

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top