‎ಶಾಂತಿಯ ಕೇಂದ್ರ ಶ್ರೀ ಕೃಷ್ಣ ಧ್ಯಾನಮಂದಿರ

Chandrashekhara Kulamarva
0


ನಾನು ಮಂಗಳೂರಿಗೆ ಬಂದು ಸುಮಾರು ದಿನಗಳು ಕಳೆದವು. ಇಲ್ಲಿನ ಸುಮಾರು ಹಿಂದೂ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ನನಗೆ ವಿಶೇಷ ಅನಿಸಿದ್ದು ಮುಡಿಪು ಕ್ಷೇತ್ರದಲ್ಲಿರುವ ಶ್ರೀ ಕೃಷ್ಣ ಧ್ಯಾನ ಮಂದಿರ. ತುಂಬಾ ಎತ್ತರದ ಪ್ರದೇಶದಿಂದ ಘಟ್ಟದ ಹಚ್ಚ ಹಸುರಿನ ಸೌಂದರ್ಯವನ್ನು ಸವಿಯುವ ಬಯಕೆ ಇದ್ದರೆ ಈ ಜಾಗ ಸೂಕ್ತ. ಮುಡಿಪು ನಗರದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಈ ಮಂದಿರದ ಭೇಟಿಗೆ ಹೊರಟರೆ, ಮೊದಲು ನಮ್ಮನ್ನು ಸ್ವಾಗತಿಸುತ್ತದೆ ಸ್ವಚ್ಛವಾದ ಹಚ್ಚ ಹಸಿರಿನ ಎಡ ಬದಿಯುಳ್ಳ ಕಪ್ಪು ಬಣ್ಣದ ಡಾಂಬರು ರಸ್ತೆ. ಮುಂದೆ ಎದುರಾಗುತ್ತದೆ, ಹೊಳೆಯುವ ನಾಮಫಲಕದ ಕಂದು ಬಣ್ಣದ ಎತ್ತರದ ಕಮಾನು. ಆ ನಾಮವನ್ನೊಮ್ಮೆ ಮನದಲ್ಲೇ ಪಠಿಸಿ ಎರಡೆಜ್ಜೆ ಹಾಕಿದ್ದೇವಷ್ಟೇ ಬಲ ಬದಿಯಲ್ಲಿ ಕಾಣ ಸಿಕ್ಕಿತು ಮೈ ರೋಮಾಂಚನಗೊಳಿಸುವ ಐತಿಹಾಸಿಕ ಹಿನ್ನೆಲೆಯ ಮರದ ಬೃಹತ್ ತೇರು (ರಥ). 


‎ಅದನ್ನೊಮ್ಮೆ ಸ್ಪರ್ಶಸಿ, ನಮಸ್ಕರಿಸಿ ಮುಂದೆ ನಡೆದು, ಮಾರ್ಗದ ಬದಿಯ ಫಲಕಗಳಲ್ಲಿರುವ ಹಿತನುಡಿಗಳ ಸಾಲುಗಳನ್ನು ಮನಸ್ಸಲ್ಲೆ ಪಠಿಸುತ್ತ ಮುಂದೆ ಸಾಗಿದೆ. ಕಣ್ಣಿಗೆ ಬಿತ್ತು ನೋಡಿ ಮನಮೋಹಕ ರಮಣೀಯ ಶ್ರೀ ಕೃಷ್ಣ ಧ್ಯಾನ ಮಂದಿರ. ಧ್ವನಿಯನ್ನು ಪ್ರತಿಧ್ವನಿಸುವ ದೊಡ್ಡ ಗುಮ್ಮಟ, ಮುಗಿಲು ಮುಟ್ಟುವ ಗೋಪುರ, ಶಾಂತ ವಾತಾವರಣ. ದ್ವಾರದ ಎದುರಿಗೆ ಸ್ವಾಮಿ ವಿವೇಕಾನಂದ ಮತ್ತು ಮಹಾವೀರರ ಕಲ್ಲಿನ ಪ್ರತಿಮೆಗಳು ಇನ್ನಷ್ಟು ಅದ್ಭುತವಾಗಿದೆ. ಇಬ್ಬರು ಬಲಿಷ್ಠರು ದೂಡಿದರೂ ಹಿಂದೆ ಸರಿಯದಂತಹ ಮರದ ಬೃಹತ್ ಬಾಗಿಲುಗಳು. ಅದನ್ನು ದಾಟಿ ಮುಂದೆ ನೋಡಿದರೆ ನಮ್ಮ ಪಯಣ ಸಾರ್ಥಕವಾಗುವ  ದೃಶ್ಯ; ಹಾಲ್ಗಲ್ಲಿನಿಂದ ನಿರ್ಮಿಸಿರುವ ಮುದ್ದು ಕೃಷ್ಣನ ದರ್ಶನವಾಗುತ್ತದೆ. ಇಡೀ ಮಂದಿರದಲ್ಲಿ ಒಂದು ದೀಪ ಕಳಶ ಮತ್ತು ಪೀಠದ ಮೇಲೆ ಅಲಂಕಾರಗೊಂಡಿರುವ ಕೃಷ್ಣನ ವಿಗ್ರಹ ಬಿಟ್ಟರೆ ಬೇರಾವುದೇ ದೃಶ್ಯಗಳು ಕಣ್ಣಿಗೆ ಬೀಳುವುದಿಲ್ಲ.


ಎಷ್ಟೇ ಜನಸ್ತೋಮವಿದ್ದರೂ ಸೊನ್ನೆಯಷ್ಟು ನಿಶಬ್ಧವಾಗಿರುತ್ತೆ ಈ ಧ್ಯಾನ ಮಂದಿರ. ವಿಸ್ತಾರವಾದ ಗುಮ್ಮಟ, ಗೋಪುರ ಒಳಾಂಗಣ. ಮಾಧವನೆದುರು ಕೈಗಳನ್ನೊಮ್ಮೆ ಜೋಡಿಸಿ ಹೊರಬಂದು ಮಂದಿರದ ಎಡಬದಿಗೆ ತಿರುಗಿದೆ. ಅಲ್ಲಿ ಕಾಣಿಸಿತು ಕಣ್ಣಿಗೆ ಮನಮೋಹಕ, ಮೈ ರೋಮಾಂಚನಗೊಳಿಸುವ ಅತೀ ಎತ್ತರದ ಹೊರಾಂಗಣ ದೃಶ್ಯ. ಅಗಲವಾದ ಎತ್ತರದ ಮೈದಾನ, ಸುತ್ತಲು ಸ್ಟೀಲ್ ಕಂಬಿಗಳಿಂದ ನಿರ್ಮಿಸಿದ ಎತ್ತರದ ರಕ್ಷಾಕವಚ (ಗ್ರಿಲ್ಸ್)  ಆ ಪ್ರದೇಶದಿಂದ ಸುತ್ತಲಿನ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಒಂದು ಸೊಬಗು. ದೂರದ ಅಡಿಕೆ ಮರದ ಸಾಲಿನಲ್ಲಿ ಅಡಗಿರುವ ಹೆಂಚಿನ ಮನೆಗಳು, ಪುಟ್ಟ ಪುಟ್ಟ ಬಿಳಿ ಬಣ್ಣದ ಕಟ್ಟಡಗಳು, ತಂಪಾದ ಗಾಳಿ, ಎಂತಹ ಮಾನಸಿಕ ಒತ್ತಡವಿದ್ದರು ಈ ದೃಶ್ಯಕ್ಕೆ ಅದೆಲ್ಲವನ್ನು ಮರೆಸುವ, ಮನಸ್ಸು ಉಲ್ಲಾಸ ಗೊಳಿಸುವ ಶಕ್ತಿ ಇದೆ. ಛಾಯಾಚಿತ್ರ ಪ್ರಿಯರಿಗೆ ಇದೊಂದು ಹೇಳಿ ಮಾಡಿಸಿದ ಜಾಗವಾಗಿದೆ.


ಇನ್ನು ಮಂಜು ಕವಿದ ವಾತಾವರಣವಿದ್ದರೆ ಈ ಜಾಗ ಸ್ವರ್ಗವೇ ಸರಿ. ಛಾಯಾಚಿತ್ರ ಪ್ರಿಯರಿಗೆಂದು ಒಂದು ಗಾಜಿನ ಕೊಠಡಿಯನ್ನೂ ನಿರ್ಮಿಸಲಾಗಿದೆ. ಮಂದಿರದ ಅಕ್ಕ ಪಕ್ಕದಲ್ಲಿ ಹಸಿರು ಉದ್ಯಾನವನ ಬಣ್ಣದ ಹೂವಿನ ಮೆರುಗು ಜೊತೆಗೆ ಹಿಂಬದಿಯಲ್ಲೊಂದು 150-200 ಜನ ಕುಳಿತುಕೊಳ್ಳುವಷ್ಟು ವಿಸ್ತಾರವಾದ ರಂಗಸ್ಥಳವಿದ್ದು, ಇಲ್ಲಿ ವಿಶೇಷ ದಿನಗಳಲ್ಲಿ ಮನೋರಂಜನೆ ಕಾರ್ಯಕ್ರಮಗಳು ಜರುಗುತ್ತವೆ. ಒಟ್ಟಿನಲ್ಲಿ ಪ್ರವಾಸ ಪ್ರಿಯರಿಗೆ ಇದೊಂದು ಉತ್ತಮ ಜಾಗವಾಗಿದೆ. ಈ ಧ್ಯಾನ ಕೇಂದ್ರ ಮಂಗಳೂರು ನಗರದಿಂದ 25 ಕಿಲೋಮೀಟರ್ ದೂರದಲ್ಲಿದ್ದು ಬಸ್ಸು ಸಾರಿಗೆ ಮೂಲಕ ತಲುಪಬಹುದಾಗಿದೆ.

- ಹನುಮಂತ ಎಸ್ ಕೆ. 

ಪತ್ರಿಕೋದ್ಯಮ ವಿದ್ಯಾರ್ಥಿ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top