ಮಂಗಳೂರು: ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿರುವ, ಇಡೀ ಯಕ್ಷಗಾನ ರಂಗವನ್ನು ಅವಮಾನಿಸಿರುವ ಹೇಳಿಕೆಯ ಬಗ್ಗೆ ಸಂಸ್ಕಾರ ಭಾರತಿ ಮಂಗಳೂರು ತೀವ್ರ ಆಘಾತ ಆಕ್ರೋಶ ಮತ್ತು ಖಂಡನೆಯನ್ನು ವ್ಯಕ್ತಪಡಿಸಿದೆ.
ಅವರು ಹೇಳಿದ ವಿಷಯವನ್ನು ಇಲ್ಲಿ ಪ್ರಸ್ತಾವಿಸಿ, ಉದ್ದರಿಸುವುದು ಕೂಡ ತೀರಾ ಮುಜುಗರದ ಮತ್ತು ಹೇಯವಾದ ವಿಷಯವಾಗಿದೆ. ಡಾ. ಬಿಳಿಮಲೆಯವರು ಸ್ವತಃ ಯಕ್ಷಗಾನ ಕಲಾವಿದ ಮತ್ತು ಕಲಾಭಿಮಾನಿ. ಹಾಗಿರುವಾಗ ಬಿಳಿಮಲೆಯವರು ಹೀಗೇಕೆ ಹೇಳಿದರು ಎಂಬುದು ತುಂಬಾ ವಿಷಾದನೀಯ ವಿಷಯವಾಗಿದೆ. ಕಲಾವಿದರ ಬಗ್ಗೆ ಅವರು ಹೇಳಿದ ಮಾತು ವಸ್ತುಸ್ಥಿತಿಗೆ, ಸಭ್ಯತೆಗೆ ಮತ್ತು ಸಂಸ್ಕಾರಕ್ಕೆ ತೀರಾ ವಿರುದ್ಧವಾಗಿದೆ ಎಂದು ಸಂಸ್ಕಾರ ಭಾರತಿ ವತಿಯಿಂದ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ ಸಂಸ್ಕೃತಿಯ ಸಾರವಾದ ಒಂದು ವಿಶ್ವಮಾನ್ಯ ಕಲೆಯ ಕುರಿತು ಇಂತಹ ಬೇಜಾರು ಮತ್ತು ಅವಾಚ್ಯ ನಿಂದನೆಯ ವಾದ ಮಾತುಗಳು ಯಾರಿಂದಲೇ ಬಂದರೂ ಖಂಡನಾರ್ಹ. ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರಾತ್ರಿ ನಿದ್ರೆ ಬಿಟ್ಟು ನಾಡಿನಾದ್ಯಂಚ ಸಂಚರಿಸಿ ಯಕ್ಷಗಾನ ಪ್ರದರ್ಶನ ನೀಡುವ ಕಲಾವಿದರನ್ನು ಹೀಯಾಳಿಸುವುದು ಯಾರಿಗೂ ಶೋಭೆ ತರುವಂತಹ ವಿಚಾರವಲ್ಲ. ಅದರಲ್ಲಿಯೂ ಸ್ವಯಂ ಈ ಕಲೆಯ ಕ್ಷೇತ್ರದ ವ್ಯಕ್ತಿಯಾಗಿ ರಾಜ್ಯದ ಒಂದು ಸಂವಿಧಾನಬದ್ಧ ಹುದ್ದೆಯ ಪ್ರಮುಖರಾಗಿ, ಕ್ಯಾಬಿನೆಟ್ ಸ್ಥಾನಮಾನದ ಸರಕಾರಿ ಗಣ್ಯರಾಗಿ ಈ ಮಾತುಗಳನ್ನು ಅವರು ಹೇಳಿರುವ ಬಗ್ಗೆ ಖಂಡನೆಗೆ ನಮ್ಮಲ್ಲಿ ಮಾತುಗಳಿಲ್ಲ. ಕಲಾವಿದರಾದ ನಮಗೆ ಆಗಿರುವ ಆಘಾತಕ್ಕೆ ಮತ್ತು ಆಕ್ರೋಶಕ್ಕೆ ಸಿಕ್ಕಿ ತೀಕ್ಷ್ಣ ಶಬ್ದಗಳನ್ನು ಬಳಸಬಾರದು ಎಂಬ ಸಂಯಮದಿಂದ ಮಾತ್ರ ಪದಗಳನ್ನು ನಿಯಂತ್ರಿಸುತ್ತಿದ್ದೇವೆ ಎಂದು ಸಂಸ್ಕಾರ ಭಾರತಿ ಪದಾಧಿಕಾರಿಗಳು ತಿಳಿಸಿದರು.
ಈ ಹೇಳಿಕೆಯು ಯಕ್ಷಗಾನ ಕಲೆಯ ವ್ಯವಸಾಯ ಮತ್ತು ನಾಡಿನ ಸಾಂಸ್ಕೃತಿಕ ಮಾಧ್ಯಮವೊಂದರ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ. ಕಲಾವಿದರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯನ್ನು ತರುವುದಲ್ಲದೆ ಕಲಾ ಕುಟುಂಬಗಳನ್ನು ಇದು ಒಡೆದು ಹಾಕುತ್ತದೆ. ಸಂಶೋಧನೆ ಚಿಂತನೆಗಳು ಕಲೆಗೆ ಬೇಕು ಆದರೆ ಆ ಹೆಸರಿನ ವಿಕೃತಿಗಳು ಖಂಡಿತ ಬೇಡ. ರಾಜ್ಯದ ಸಂಬಂಧಿತ ಖಾತೆಯ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಈ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಮತ್ತು ಕಲೆ ಮತ್ತು ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಸಂಸ್ಕಾರ ಭಾರತಿ ಮಂಗಳೂರು ನಗರದ ಅಧ್ಯಕ್ಷ ಪುರುಷೋತ್ತಮ ಕೆ ಭಂಡಾರಿ, ಪ್ರಧಾನ ಕಾರ್ಯದರ್ಶಿ ಶ್ರೀಧರ ಹೊಳ್ಳ, ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಮಾರ್ಗದರ್ಶಕರಾದ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷರಾದ ಧನಪಾಲ ಶೆಟ್ಟಿಗಾರ್, ರಾಜಶ್ರೀ ಉಳ್ಳಾಲ್, ಶ್ರೀಲತಾ ನಾಗರಾಜ್, ರಘುವೀರ್ ಗಟ್ಟಿ, ಮಾಧವ ಭಂಡಾರಿ ಒತ್ತಾಯಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







