ಸಂಪಾಜೆ ಯಕ್ಷೋತ್ಸವ ಸಂಪನ್ನ: 27 ಗಂಟೆಗಳ ದಾಖಲೆ ಪ್ರದರ್ಶನ

Chandrashekhara Kulamarva
0


ಸಂಪಾಜೆ: ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ರಿ. ಸಂಪಾಜೆ ದ.ಕ ಇವರು ಆಯೋಜಿಸಿದ 35ನೇ ವರುಷದ ಸಂಪಾಜೆ ಯಕ್ಷೋತ್ಸವ 2025  ನವೆಂಬರ್ 2ರ ಭಾನುವಾರದಂದು ಸಂಪನ್ನಗೊಂಡಿತು.


ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ 01.11.2025-ಶನಿವಾರ ಮಧ್ಯಾಹ್ನ ಗಂಟೆ 1.20ಕ್ಕೆ ಚೌಕಿ ಪೂಜೆಯೊಂದಿಗೆ ಪ್ರಾರಂಭವಾದ ಬಡಗುತಿಟ್ಟಿನ ಯಕ್ಷಗಾನ "ಕುಶಲವ" ನಂತರ ತೆಂಕು- ಬಡಗು ಯಕ್ಷಗಾನ "ಕಂಸ ವಿವಾಹ" ಸುಮಾರು 7.45 ಗಂಟೆಯ ವರೆಗೆ ತುಂಬಿದ ಸಭೆಯ ಜನಮನವನ್ನು ರಂಜಿಸಿತು.


ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀಪಾದರ ಪುಣ್ಯ ಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಸಭಾ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಶ್ರೀ ಎಡನೀರು ಮಠ ಮತ್ತು ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು ಶ್ರೀ ಸುಬ್ರಹ್ಮಣ್ಯ ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಇವರ ಸುಮಧುರವಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.


ನಂತರ ಪ್ರತಿಷ್ಠಾನದ ಕೆ.ಜಿ. ಮುರಲೀಧರ ಅವರು ಎಡನೀರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಫಲಕಾಣಿಕೆ ಸಮರ್ಪಣೆ ಮಾಡಿದರೆ ಸುಬ್ರಹ್ಮಣ್ಯ ಶ್ರೀಗಳಿಗೆ ಪ್ರತಿಷ್ಠಾನದ ಮನೋಜ್ ಶಾಸ್ತ್ರಿ ಅವರಿಂದ ಮಾಲಾರ್ಪಣೆ ಮಾಡಿ ಫಲಕಾಣಿಕೆ ಸಮರ್ಪಣೆ ಏಕಕಾಲದಲ್ಲಿ ನಡೆಯಿತು. ನಂತರ ಪ್ರಾರ್ಥನೆಯನ್ನು ನಡೆಸಿಕೊಟ್ಟ ಯೋಗೀಶ್ ಶರ್ಮ ಅವರನ್ನು ಸುಬ್ರಹ್ಮಣ್ಯ ಶ್ರೀಗಳು ಶಾಲು ಹೊದಿಸಿ ಅನುಗ್ರಹಿಸಿದರು.


2025 ಯಕ್ಷೋತ್ಸವ, ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ, ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲನೆಯನ್ನು ಮಾಡಿ ಉದ್ಘಾಟಿಸಿದರೆ, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳು, ಪಿ.ಪ್ರದೀಪ್ ಕುಮಾರ್, ಶ್ರೀಮತಿ ಸುಮನಾ ಶ್ಯಾಂ ಭಟ್, ಹಾಗೂ ವೇದಿಕೆಯ ಗಣ್ಯರು ಜೊತೆಯಾದರು. ಸುಬ್ರಹ್ಮಣ್ಯ ಶ್ರೀಗಳು ಕೂಡಲೇ ಅನಿವಾರ್ಯ ಕಾರಣದಿಂದ ಸಭೆಯಿಂದ ನಿರ್ಗಮಿಸಿದರು.


ಡಾ. ಕೀಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆಯನ್ನು ಹಿರಿಯ ಜಾದೂಗಾರ ಪ್ರೊ.ಶಂಕರ್ ಅವರು ನಡೆಸಿಕೊಟ್ಟರು. ಅವರಿಗೆ ಎಡನೀರು ಶ್ರೀಗಳು ಪ್ರತಿಷ್ಠಾನದ ಶಾಲು, ಗೌರವಾರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.


ಶ್ರೀ ಶ್ರೀ ಕೇಶವಾನಂದ ಭಾರತೀ ಪುಣ್ಯಸ್ಮೃತಿಯ ಗುರುವಂದನಾ ಕಾರ್ಯಕ್ರಮ ಖ್ಯಾತ ಜ್ಯೋತಿಷಿಗಳೂ, ಆಗಮ ಶಾಸ್ತ್ರಜ್ಞ, ಮಹಾಮಹೋಪಾಧ್ಯಾಯ ವಿದ್ವಾನ್ ಶ್ರೀ ಪಂಜ ಭಾಸ್ಕರ ಭಟ್ ಅವರು ನಡೆಸಿಕೊಟ್ಟರು.ಅವರಿಗೆ ಎಡನೀರು ಶ್ರೀಗಳು ಉತ್ತರೀಯಾಛ್ಛಾದನೆ, ಅನುಗ್ರಹ ಮಂತ್ರಾಕ್ಷತೆ ನೀಡಿ ಗೌರವಿಸಿ ಆಶೀರ್ವದಿಸಿದರು.


ತದನಂತರ ಕಳೆದ ಯಕ್ಷೋತ್ಸವ ಹಾಗೂ ಈ ಯಕ್ಷೋತ್ಸವದ ಮಧ್ಯೆ ನಮ್ಮನ್ನಗಲಿದ ನಾಲ್ವರು ಹಿರಿಯ ಕಲಾವಿದರಾದ ಶ್ರೀ ಪಾತಾಳ ವೆಂಕಟ್ರಮಣ ಭಟ್, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ದಿನೇಶ್ ಅಮ್ಮಣ್ಣಾಯ, ಹಾಗೂ ಯಕ್ಷೋತ್ಸವದ ದಿನ ಅಗಲಿದ ವಿಟ್ಲ ಶಂಭು ಶರ್ಮ ಅವರಿಗೆ ವಾಸುದೇವ ರಂಗಾ ಭಟ್ ಮಧೂರು ಅವರು ಶ್ರದ್ಧಾಂಜಲಿಯ ಮಾತುಗಳನ್ನು ಆಡಿದರು. 


ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ವಕೀಲರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಇವರ ಅಭಿನಂದನಾ ನುಡಿಗಳನ್ನು ಹೈಕೋರ್ಟ್‌ ವಕೀಲ ಜಿ. ಲಕ್ಷ್ಮೀಶ್ ರಾವ್‌ ಅವರು ವಾಚಿಸಿದರು. ಅವರಿಗೆ ಎಡನೀರು ಶ್ರೀಗಳು ಪ್ರತಿಷ್ಠಾನದ ಶಾಲು, ಗೌರವಾರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಪ್ರಶಸ್ತಿ ಪತ್ರವನ್ನು ಕು.ಪ್ರಿಯಾಂಕ ಎಸ್. ಭಟ್ ವಾಚಿಸಿದರು. ತದನಂತರ ಉದಯ ಹೊಳ್ಳರಿಗೆ ಎಡನೀರು ಶ್ರೀಗಳು  ಶಾಲು, ಫಲಕ, ಸ್ಮರಣಿಕೆಯನ್ನಿತ್ತು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಉದಯ ಹೊಳ್ಳ ಅವರು ಪ್ರತಿ ವಚನದ ಮಾತುಗಳನ್ನು ಆಡಿದರು.


ಆ ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಜಸ್ಟಿಸ್ ರಾಜೇಶ್ ರೈ ಕಲ್ಲಂಗಳ ಅವರನ್ನು ಪ್ರತಿಷ್ಠಾನದ ರೂವಾರಿ ಟಿ. ಶ್ಯಾಂ ಭಟ್ ಅವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.


ಸಭೆಯಲ್ಲಿ ಉಪಸ್ಥಿತರಿದ್ದ ವೃತ್ತಿಯ 50 ವರ್ಷ ಪೂರೈಸಿದ, ಕಲಾ ಪೋಷಕ ಪ್ರಶಸ್ತಿಯನ್ನು ಬಹಳ ಹಿಂದೆಯೇ ಸ್ವೀಕರಿಸಿದ ಹಿರಿಯ ವಕೀಲರಾದ ವ್ಯಾಸರಾವ್ ಅವರನ್ನು ವೇದಿಕೆಯಲ್ಲಿ ಸಭಾಧ್ಯಕ್ಷ ಪ್ರದೀಪ್ ಕುಮಾರ್ ಅವರು ಶಾಲು, ಪ್ರತಿಷ್ಠಾನದ ಗೌರವ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಕಲಾವಿದ 70 ತಿರುಗಾಟವನ್ನು ಮಾಡಿದ 52 ವರುಷದ ತಿರುಗಾಟ ಶ್ರೀ ಧರ್ಮಸ್ಥಳ ಮೇಳ ಒಂದರಲ್ಲೇ ಮಾಡಿದ ಯಕ್ಷದ್ರೋಣಾಚಾರ್ಯ ಸೂರಿಕುಮೇರ್ ಗೋವಿಂದ ಭಟ್ಟರನ್ನು ಟಿ. ಶ್ಯಾಂ ಭಟ್ ಅವರು ಶಾಲು ಹೊದಿಸಿ, ಗೌರವಧನವನ್ನಿತ್ತು ಪುಷ್ಪಗುಚ್ಛ ನೀಡಿ ಗೌರವಿಸಿದರು. 


ಬಳಿಕ ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ- ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ಉಜಿರೆಯ ಸಂಚಾಲಕ ಉಜಿರೆ ಅಶೋಕ ಭಟ್ ಹಾಗೂ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ- ಎಕ್ಸಲೆಂಟ್ ವಿದ್ಯಾ ಸಂಸ್ಥೆ ಮೂಡಬಿದಿರೆಯ ಅಧ್ಯಕ್ಷ ಯುವರಾಜ್ ಜೈನ್ ಇವರೀರ್ವರ ಅಭಿನಂದನಾ ಭಾಷಣವನ್ನು ಹಿರಿಯ ವಿದ್ವಾಂಸರಾದ ಡಾ. ಎಂ ಪ್ರಭಾಕರ ಜೋಶಿ ಅವರು ಮಾಡಿದರು. ಅವರಿಗೆ ಎಡನೀರು ಶ್ರೀಗಳು ಪ್ರತಿಷ್ಠಾನದ ಶಾಲು, ಗೌರವಾರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಈರ್ವರ ಸನ್ಮಾನ ಪತ್ರವನ್ನು ಗಣೇಶ್ ಭಟ್ ಬಾಯಾರು ವಾಚಿಸಿದರು. ಶ್ರೀ ಅಶೋಕ ಭಟ್ ಉಜಿರೆ ಹಾಗೂ ಶ್ರೀ ಯುವರಾಜ್ ಜೈನ್ ಅವರಿಗೆ ಎಡನೀರು ಶ್ರೀಗಳು ಶಾಲು, ಫಲಕ, ಸ್ಮರಣಿಕೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.


ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿಯನ್ನು ಸನ್ಮಾನ್ಯ ಶ್ರೀ ವಿಠ್ಠಲ ರಾಮಮೂರ್ತಿ ಖ್ಯಾತ ಪಿಟೀಲು ವಾದಕರು, ಚೆನ್ನೈ ಹಾಗೂ ಯಕ್ಷೋತ್ಸವ ಕಲಾಪೋಷಕ ಪ್ರಶಸ್ತಿಯನ್ನು ಹೈಕೋರ್ಟ್‌ ವಕೀಲ ಸಿರಿಲ್ ಪ್ರಸಾದ್ ಪಾಯ್ಸ್ ಈರ್ವರ ಅಭಿನಂದನಾ ಭಾಷಣವನ್ನು ವಾಸುದೇವ ರಂಗಾ ಭಟ್ ಮಧೂರು ಅವರು ಮಾಡಿದರು. ಅವರಿಗೆ ಎಡನೀರು ಶ್ರೀಗಳು ಪ್ರತಿಷ್ಠಾನದ ಶಾಲು, ಗೌರವಾರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು ಹರಸಿದರು. ಈರ್ವರ ಸನ್ಮಾನ ಪತ್ರವನ್ನು ಗಣೇಶ್ ಭಟ್ ಬಾಯಾರು ವಾಚಿಸಿದರು. ಶ್ರೀ ವಿಠ್ಠಲ ರಾಮಮೂರ್ತಿಅವರಿಗೆ ಎಡನೀರು ಶ್ರೀಗಳು ಶಾಲು, ಫಲಕ, ಸ್ಮರಣಿಕೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು ಹಾಗೂ ಸಿರಿಲ್ ಪ್ರಸಾದ್ ಪಾಯ್ಸ್ ಅವರಿಗೆ ಸಭಾಧ್ಯಕ್ಷ ಪ್ರದೀಪ್ ಕುಮಾರ್ ಅವರು ಶಾಲು, ಫಲಕ, ಸ್ಮರಣಿಕೆ ನೀಡಿ ಗೌರವಿಸಿದರು. 


ಯಕ್ಷೋತ್ಸವ ವೈದಿಕ ಪ್ರಶಸ್ತಿ- ವೇ|ಮೂ| ಕುಡುಪು ನರಸಿಂಹ ತಂತ್ರಿಗಳು ಮಂಗಳೂರು. ಯಕ್ಷೋತ್ಸವ ಸನ್ಮಾನ - ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಪ್ರಸಿದ್ಧ ಯಕ್ಷಗಾನ ಕಲಾವಿದರು. ಈರ್ವರ ಅಭಿನಂದನಾ ಭಾಷಣವನ್ನು ಹರೀಶ್ ಭಟ್ ಬಳಂತಿಮೊಗರು ಮಾಡಿದರು ಅವರಿಗೆ ಎಡನೀರು ಶ್ರೀಗಳು ಪ್ರತಿಷ್ಠಾನದ ಶಾಲು, ಗೌರವಾರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಈರ್ವರ ಸನ್ಮಾನ ಪತ್ರವನ್ನು ಗಣೇಶ್ ಭಟ್ ಬಾಯಾರು ವಾಚಿಸಿದರು.  ವೇ|ಮೂ| ಕುಡುಪು ನರಸಿಂಹ ತಂತ್ರಿಗಳಿಗೆ ಎಡನೀರು ಶ್ರೀಗಳು ಶಾಲು, ಫಲಕ, ಸ್ಮರಣಿಕೆ ಹಾಗೂ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ನಂತರ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಅವರಿಗೆ ಸಭಾಧ್ಯಕ್ಷ ಪ್ರದೀಪ್ ಕುಮಾರ್ ಅವರು ಶಾಲು, ಫಲಕ, ಸ್ಮರಣಿಕೆ  ನೀಡಿ ಗೌರವಿಸಿದರು.



ಬಳಿಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪ್ರಮುಖ ಸಂಸ್ಥೆಗಳಿಗೆ ಪ್ರತಿಷ್ಠಾನದಿಂದ ದೇಣಿಗೆ ನೀಡುವ ಕಾರ್ಯಕ್ರಮ ನಡೆಯಿತು. ಕಲಾವಿದರ ಯೋಗ ಕ್ಷೇಮಕ್ಕಾಗಿ ನಿರಂತರ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗ ಉಡುಪಿ ಇವರಿಗೆ ರೂ.10 ಲಕ್ಷವನ್ನು ಎಡನೀರು ಶ್ರೀಗಳು ಸಂಸ್ಥೆಯ  ಅಧ್ಯಕ್ಷ, ಕಾರ್ಯದರ್ಶಿ ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.


ಅನಾಥ ಮಾನಸಿಕ ಅಸ್ವಸ್ಥರನ್ನು ಪುನಶ್ಚೇತನ ಗೊಳಿಸುವ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಇದರ ಡಾ. ಉದಯಕುಮಾರ್ ನೂಜಿ ಮತ್ತು ಡಾ.ಶಾರದಾ ಉದಯಕುಮಾರ್ ನೂಜಿ ಅವರಿಗೆ ರೂ.5.00 ಲಕ್ಷವನ್ನು ಎಡನೀರು ಶ್ರೀಗಳು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. 


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗಣೇಶಗಿರಿ- ಬಾಯಾರು ಮುಳಿಗದ್ದೆ ಇವರಿಗೆ ರೂ.3.00 ಲಕ್ಷವನ್ನು ಸಂಸ್ಥೆಯ ಪ್ರತಿನಿಧಿಗಳಿಗೆ ಎಡನೀರು ಶ್ರೀಗಳು  ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.


ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನಕ್ಕೆ ಸಹಾಯಧನವಾಗಿ ರೂ.1.00 ಲಕ್ಷ ನೀಡಲಾಯಿತು. ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಹುಟ್ಟೂರ ಸನ್ಮಾನ ಅಭಿನಂದನಾ ಕಾರ್ಯಕ್ರಮ ಯಲಗುಪ್ಪ ಯಕ್ಷಾರ್ಚನೆ ಕಾರ್ಯಕ್ರಮಕ್ಕೆ ರೂ.1 ಲಕ್ಷವನ್ನು ನೀಡಲಾಯಿತು. ಹೀಗೆ ಒಟ್ಟಿನಲ್ಲಿ ಪ್ರತಿಷ್ಠಾನದಿಂದ ರೂ. 20.00 ಲಕ್ಷದ ದೇಣಿಗೆಯನ್ನು ಈ ಬಾರಿಯ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ನೀಡಲಾಯಿತು.


ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ, ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಅತ್ಯದ್ಭುತವಾಗಿ ನೆರವೇರಿಸಿದ ಶ್ರೀ ಮಠದ ಶಿಷ್ಯರೂ ಗೌರವಾನ್ವಿತರೂ ಆದ ಶ್ಯಾಂ ಭಟ್ ಮತ್ತು ಶ್ರೀಮತಿ ಸುಮನಾ ಶ್ಯಾಂ ಭಟ್ ದಂಪತಿಗಳನ್ನು ಪೂಜ್ಯ ಶ್ರೀ ಶ್ರೀಗಳು  ಶ್ರೀಮಠದ ಶಾಲು ಹೊದಿಸಿ ಮಂತ್ರಾಕ್ಷತೆಯನ್ನಿತ್ತು ಹರಸಿ ಅನುಗ್ರಹಿಸಿದರು.


ಕಾರ್ಯಕ್ರಮ ನಿರೂಪಿಸಿದ ವೇದಮೂರ್ತಿ ಹಿರಣ್ಯ ವೆಂಕಟೇಶ್ ಭಟ್, ಸನ್ಮಾನಿತರ ಪರಿಚಯವನ್ನು ಮಾಡಿದ ಕು.ಪ್ರಿಯಾಂಕಾ ಎಸ್.ಭಟ್, ಮತ್ತು ಗಣೇಶ್ ಭಟ್ ಬಾಯಾರು ಅವರಿಗೆ, ಅತ್ಯದ್ಭುತ ಸಭಾಮಂಟಪದ ನಿರ್ಮಾಣ, ವೇದಿಕೆ ಧ್ವನಿ, ಬೆಳಕು, ವ್ಯವಸ್ಥೆ ಮಾಡಿದ ಆರ್.ಕೆ.ಭಟ್ ಮೂಡುಬಿದಿರೆ  ಅವರಿಗೆ ಪೂಜ್ಯ ಶ್ರೀಗಳು ಶಾಲು ಹೊದಿಸಿ ಮಂತ್ರಾಕ್ಷತೆಯನ್ನಿತ್ತು ಹರಸಿದರು.


ಒಟ್ಟಿನಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭಾ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿ ಬಂತು. ರಾತ್ರಿ 11.15ಕ್ಕೆ ಪುನಃ ಪ್ರಾರಂಭವಾದ ಯಕ್ಷಗಾನ ಪ್ರದರ್ಶನ ಪ್ರಸಂಗಗಳಾದ ಅಹಲ್ಯಾ ಶಾಪ (ತೆಂಕು); ಭಾರತ ರತ್ನ (ತೆಂಕು); ಸೈಂಧವ ವಧೆ (ತೆಂಕು); ವಿರೋಚನ ಕಾಳಗ (ತೆಂಕು)

ಭಾನುವಾರ ಸಂಜೆ 4 ಘಂಟೆಯ ವರೆಗೆ ನಡೆಯಿತು. ಒಟ್ಟು 27 ಗಂಟೆಗಳ ನಿರಂತರ ಕಾರ್ಯಕ್ರಮ ಸಾರ್ವಕಾಲಿಕ ದಾಖಲೆ ನಿರ್ಮಿಸಿತು.


- ಗಣೇಶ್ ಭಟ್ ಬಾಯಾರು ಬೆಂಗಳೂರು 

9448202079


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top