ಕಾಸರಗೋಡು ಒಂದು ಕಾಲದಲ್ಲಿ ಕರ್ನಾಟಕದ ನಾಡಿ ಮಿಡಿತವೇ ಆಗಿತ್ತು ಆದರೆ ಭಾಷಾವಾರು ಪ್ರಾಂತ್ಯದ ರಚನೆಯ ಸಂದರ್ಭದಲ್ಲಿ ತಾಯಿಯ ಮಡಿಲಿನಿಂದ ಮಗುವನ್ನು ಬೇರ್ಪಡಿಸಿದಂತೆ ಕಾಸರಗೋಡನ್ನು ಕನ್ನಡನಾಡಿನಿಂದ ಬೇರ್ಪಡಿಸಿದರು. ಆ ದಿನ ಬೇರ್ಪಡಿಸಿದ್ದು ಬರೀ ನೆಲವಾಗದೇ ಕನ್ನಡಮ್ಮನ ಆಸರೆಯಲ್ಲಿದ್ದ ಕನ್ನಡಿಗರ ಮೇಲೆ ಮಾಡಿದ ಅನ್ಯಾಯವೇ ಆಗಿತ್ತು.
1956 ನವೆಂಬರ್ 1 ರಂದು ಕಾಸರಗೋಡು ಜಿಲ್ಲೆಯು ತಿರಸ್ಕಾರದ ಭಾವದಿಂದ ಕೇರಳ ರಾಜ್ಯಕ್ಕೆ ಸೇರಿತ್ತು. ಕೇರಳ ರಾಜ್ಯಕ್ಕೆ ಸೇರಿದ ಮೇಲೆ ಶುರುವಾಯಿತು ಕನ್ನಡಿಗರಿಗೆ ವ್ಯಥೆ. ಅಂದು ಶುರುವಾದ ವ್ಯಥೆ ಇಂದಿಗೂ ಅನುಭವಿಸಿಕೊಂಡು ಬರುವುದು ನನ್ನಂತಹ ಗಡಿನಾಡ ಕನ್ನಡಿಗನಿಗೆ ಸಿಕ್ಕ ವರದಾನ ಅಲ್ಲದೇ ಮತ್ತೇನು...?!
ಕರುನಾಡು ನಮ್ಮನ್ನು ತಬ್ಬಲಿ ಮಾಡಿದ ಮೇಲೆ ಕನ್ನಡವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಭಾಷಾ ವ್ಯವಹಾರಿಗಳು, ಇಲ್ಲಿನ ಮೂಲ ನಿವಾಸಿಗಳು ಮಲಯಾಳಂ ಭಾಷೆಯ ಹೇರಿಕೆ ಮತ್ತು ಕಡ್ಡಾಯ ಭಾಷಾ ಅಸ್ತ್ರದಿಂದ ಕಂಗೆಟ್ಟು ಹೋಗಿದ್ದಾರೆ.
ಇತಿಹಾಸದಲ್ಲಿ ಕನ್ನಡಿಗರ ಸುಪ್ಪತಿನಲ್ಲಿ ರಾರಾಜಿಸುತ್ತಿದ್ದ ಇದ್ದ ಈ ಭಾಗ ಕೆಲವು ಅತೀ ಬುದ್ಧಿವಂತ ಮನುಜರಿಂದ ಇಬ್ಭಾಗವಾಗಿ ಒಡೆಯಿತು. ಅಂದಿನಿಂದ ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ, ವ್ಯವಹಾರಿಕವಾಗಿ ಕೇರಳದೊಂದಿಗೆ ಇಲ್ಲಿನ ಕನ್ನಡಿಗರು ದಿನವನ್ನು ಕಳೆಯುತ್ತಿದ್ದಾರೆ.
ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನ ಮಾಡಬೇಕೆನ್ನುವ ಹೋರಾಟದ ಕಾವು ಹೆಚ್ಚಾದಾಗಿದ್ದರೂ ಕೂಡ ಕಾಸರಗೋಡು ಮತ್ತೆ ಕರ್ನಾಟಕವನ್ನು ಸೇರಲೇ ಇಲ್ಲ. ಆದರೆ ಹೋರಾಟ ಪ್ರಭಾವದಿಂದ ಕೆಲವು ಸವಲತ್ತುಗಳು ಕನ್ನಡಿಗರಿಗೆ ಸಿಕ್ಕರೂ ಅದೂ ಕೂಡ ಮಲತಾಯಿ ಧೋರಣೆಯನ್ನು ಅನುಸರಿಸಿ ಕೇರಳ ಸರಕಾರ ಕಿತ್ತುಕೊಳ್ಳುತ್ತಿದೆ.
ಇಲ್ಲಿನ ಕನ್ನಡ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಇಲ್ಲಿ ಉತ್ತಮ ಶಿಕ್ಷಣ ಸಿಗುವುದಿಲ್ಲವೆಂದು ಅಲ್ಲ ಬದಲಾಗಿ ಈ ಭಾಗದಲ್ಲಿ ಕನ್ನಡ ಕಲಿತರೆ ಮುಂದೆ ಭವಿಷ್ಯ ಇಲ್ಲವೆನ್ನುವ ಅರಿವು ಅವರಿಗೆ ಈಗಾಗಲೇ ಬಂದಂತೆ ಇದೆ. ಅದು ಇಂದು ಅಕ್ಷರಶ ಸತ್ಯವಾಗುತ್ತಾ ಹೋಗುತ್ತಾ ಇದೆ ಕೂಡ ಇಂದಿನ ಇಲ್ಲಿನ ಸ್ಥಿತಿ ಗತಿ ನೋಡುವಾಗ.ಯಾಕೆಂದರೆ ಇಲ್ಲಿ ಕನ್ನಡ ಕಲಿತವರು ಸರಕಾರಿ ಉದ್ಯೋಗವನ್ನು ಪಡೆಯಬೇಕಾದರೆ ಮಲಯಾಳಂ ಭಾಷೆಯನ್ನು ಓದಲು ಬರೆಯಲು ಗೊತ್ತಿರಬೇಕ್ಕೆನುವ ನಿಯಮವಿದೆ. ಕೆಲವು ಸರಕಾರಿ ಉದ್ಯೋಗ ಸಿಕ್ಕರೂ ಇಷ್ಟೇ ವರ್ಷದಲ್ಲಿ ಮಲಯಾಳಂ ಭಾಷೆ ಕಲಿಯಬೇಕೆನ್ನುವ ಕಡ್ಡಾಯವಿದೆ. ಈ ನಿಯಮದಿಂದ ಇಲ್ಲಿನ ಕನ್ನಡಿಗರು ಅತಂತ್ರಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.
ಕರ್ನಾಟಕ ಭಾಗಕ್ಕೆ ಉದ್ಯೋಗ ನಿಮಿತ್ತ ಹೋದರೆ ಅಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಉದ್ಯೋಗದಲ್ಲಿ ಜಾತಿ ಮೀಸಲಾತಿ ಇಲ್ಲ. ನಾವು ಹೊರ ರಾಜ್ಯದವರೆಂದು ಸಾಮಾನ್ಯ ವರ್ಗದಲ್ಲಿ ಬರುತ್ತೇವೆ. ಕನ್ನಡ ಉಳಿಸಬೇಕು ಬೆಳೆಸಬೇಕೆಂದು ಹೇಳುವ ರಾಜಕೀಯ ನಾಯಕರು ಈ ಭಾಗದ ಕನ್ನಡಿಗರಿಗೆ ಉದ್ಯೋಗವನ್ನು ಮಾಡಿಕೊಟ್ಟಿದರೆ ಕನ್ನಡವನ್ನು ಕಲಿಯುವ ಉತ್ಸಾಹ ಇಲ್ಲಿಯ ವಿದ್ಯಾರ್ಥಿಗಳಿಗೆ, ಮಕ್ಕಳನ್ನು ಶಾಲೆಗೆ ಸೇರಿಸುವ ಹೆತ್ತವರಿಗೆ ಹೆಚ್ಚಾಗುತ್ತಿತ್ತು. ಆದರೆ ಅಂತಹ ಸನ್ನಿವೇಶಕ್ಕೆ ಇಲ್ಲಿ ಅವಕಾಶಗಳಿಲ್ಲ.
ಇಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರಕಾರ ಉದ್ಯೋಗ ಅವಕಾಶವನ್ನು ಸೃಷ್ಟಿಸಬೇಕು. ಜೊತೆಗೆ ಕೇರಳ ಸರ್ಕಾರ ಗಡಿನಾಡ ಹಿತ ರಕ್ಷಣೆಯನ್ನು ಕಾಪಾಡಬೇಕು. ಅತ್ತ ಕರುನಾಡಿಗೂ ನಾವು ಭಾರ, ಇತ್ತ ಮಲಯಾಳ ನಾಡಿಗೂ ನಾವು ಭಾರ ನಾವೀಗ ಪಡುವ ವ್ಯಥೆಯು ನಮ್ಮ ಮುಂದಿನ ಪೀಳಿಕೆ ಪಡಬಾರದೆಂದರೆ ಇಲ್ಲಿನ ಕನ್ನಡಿಗರಿಗೆ ವಿಶೇಷ ಮಾನ್ಯತೆಯ ಜೊತೆಗೆ ಭಾಷಾವಾರು ಪ್ರಾಂತ್ಯದ ಸಮಯದಲ್ಲಿ ನೀಡಿದ ಹಿತ ವಚನವನ್ನು ಸರಿಯಾಗಿ ಜಾರಿಗೆ ತರಬೇಕು. ನವೆಂಬರ್ ಒಂದನ್ನು ಕನ್ನಡಿಗರು ಖುಷಿಯಿಂದ ಆಚರಿಸಿದರೆ ನಾವು ಮಾತ್ರ ವ್ಯಥೆಯಿಂದ ಆಚರಿಸುತ್ತೇವೆ.
ಗಡಿನಾಡ ಕನ್ನಡಿಗ
- ಗಿರೀಶ್ ಪಿಎಂ, ಕಾಸರಗೋಡು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


