ಶತ್ರುಗಳ ದಾಳಿಯಿಂದ ಭಾರತದ ರಕ್ಷಣೆಗೆ ಶ್ರೀಕೃಷ್ಣನ 'ಸುದರ್ಶನ ಚಕ್ರ' ಕವಚ: ಪ್ರಧಾನಿ ಮೋದಿ

Upayuktha
0

ಉಡುಪಿ: ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ ಭಾಗಿ, ಮುಗಿಲು ಮುಟ್ಟಿದ ಸಂಭ್ರಮ

ಪ್ರಧಾನಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳಿಂದ 'ಭಾರತ ಭಾಗ್ಯವಿಧಾತ' ಬಿರುದು




ಉಡುಪಿ: ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನ ದಲ್ಲಿ ಶುಕ್ರವಾರ ಆಯೋಜಿಸಲಾದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಸಾರ್ವಜನಿಕರಲ್ಲಿ ವಿಶೇಷ ಉತ್ಸಾಹ, ಸಂಭ್ರಮವನ್ನು ಮೂಡಿಸಿದರು.


ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಈ ಪರ್ಯಾಯವನ್ನು ಗೀತಾ ಪರ್ಯಾಯ ಎಂದು ಆಚರಿಸುತ್ತಿದ್ದು, ಭಗವದ್ಗೀತಾ ಅಭಿಯಾನದ ಭಾಗವಾಗಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಜಾತಿ-ಮತ ಭೇದವಿಲ್ಲದೆ ಆಸ್ತಿಕ ಭಕ್ತರೆಲ್ಲರಿಗೂ ನೀಡುತ್ತಿದ್ದಾರೆ. ನಿರಂತರ ಗೀತಾ ಜ್ಞಾನ ಯಜ್ಞದ ಜತೆಗೆ ಲಕ್ಷ ಕಂಠ ಗೀತಾ ಪಾರಾಯಣ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದರು. ಶ್ರೀಗಳ ಕರೆಗೆ ಓಗೊಟ್ಟು ಪ್ರಧಾನಿ ಮೋದಿಯವರು ಉಡುಪಿಗೆ ಆಗಮಿಸಿ ಲಕ್ಷಕ್ಕೂ ಹೆಚ್ಚು ಭಕ್ತರ ಜತೆಗೆ ಸ್ವತಃ ತಾವೂ ಭಗವದ್ಗೀತೆಯ 15ನೇ ಅಧ್ಯಾಯ-ಪುರುಷೋತ್ತಮ ಯೋಗದ ಶ್ಲೋಕಗಳನ್ನು ಪಠಿಸಿದರು. ಬಳಿಕ ಸನಾತನ ಧರ್ಮದ ಆದರ್ಶಗಳು, ಅಧ್ಯಾತ್ಮ ಪರಂಪರೆಯ ಬೆಳಕಿನಲ್ಲಿ ಭಾರತ ಮತ್ತೊಮ್ಮೆ ಜಗತ್ತಿಗೇ ಬೆಳಕು ನೀಡುವುದರ ಜತೆಗೆ ವಿಶ್ವನಾಯಕನಾಗಿ ಮೆರೆಯುವ ದಿನಗಳು ದೂರವಿಲ್ಲ ಎಂದು ಹೇಳಿದರು.


ಭಗವದ್ಗೀತೆಯ ತತ್ವ ಉಪದೇಶಗಳನ್ನು, ಜೀವನಾದರ್ಶಗಳನ್ನು ಅನುಸರಿಸಿದಲ್ಲಿ ಇಡೀ ವಿಶ್ವವೇ ಶಾಂತಿ, ಸಮೃದ್ಧಿಗಳಿಂದ ಪ್ರಖರವಾಗಿ ಬೆಳಗಬಹುದು ಎಂಬ ಸಂದೇಶವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ನೀಡಿದರು.




ಬೆಳಗ್ಗೆ 11 ಗಂಟೆಗೆ ಉಡುಪಿಗೆ ಆಗಮಿಸಿದ ಪ್ರಧಾನಿ ನೇರವಾಗಿ ಶ್ರೀಕೃಷ್ಣ ಮಠಕ್ಕೆ ತೆರಳಿ ಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಕನಕನ ಕಿಂಡಿಯ ಸುವರ್ಣ ಕವಚವನ್ನು ಹಾಗೂ ಸುವರ್ಣ ಮಂಟಪವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಗೀತಾಮಂದಿರಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪ್ರಧಾನಿ ಮೋದಿ ಅವರಿಗೆ ಕ್ಷೇತ್ರದ ಸಂಪೂರ್ಣ ದರ್ಶನ ಮಾಡಿಸಿದರು.


ಬಳಿಕ ನೇರವಾಗಿ ಲಕ್ಷ ಕಂಠ ಗೀತಾ ಪಾರಾಯಣದ ಸಭಾ ಮಂಟಪಕ್ಕೆ ಆಗಮಿಸಿದ ಪ್ರಧಾನಿ ವೇದಿಕೆಗೆ ಆಗಮಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿಯನ್ನು ಔಪಚಾರಿಕವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯದ ಸಚಿವ ಭೈರತಿ ಸುರೇಶ್, ಬಿಜೆಪಿ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ ಮುಂತಾದವರಿದ್ದರು.


ಪರ್ಯಾಯ ಶ್ರೀಗಳು ಪ್ರಧಾನಿ ಮೋದಿ ಅವರನ್ನು ಸಂಸ್ಕೃತದಲ್ಲಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು. 'ಭಾರತ ಭಾಗ್ಯವಿಧಾತ' ಬಿರುದನ್ನು ನೀಡಿ ಗೌರವಿಸಿದರು. ವಜ್ರಕವಚದಿಂದ ಅಲಂಕರಿಸಲಾದ ಶ್ರೀಕೃಷ್ಣನ ಫೋಟೋ, ಬೆಳ್ಳಿಯ ಬೃಹತ್ ಕಡೆಗೋಲು ನೀಡಿ ಆಶೀರ್ವದಿಸಿದರು.


ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಗವದ್ಗೀತೆಯಿಂದ ಪ್ರೇರಣೆ ಪಡೆದು ತಮ್ಮ ಸರಕಾರ ಆಡಳಿತ ನಡೆಸುತ್ತಿರುವುದನ್ನು ಉದಾಹರಣೆಗಳ ಸಹಿತ ವಿವರಿಸಿದರು. ಎರಡು ದಿನಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಸಂಕೇತವಾಗಿ ಬೃಹತ್ ಧರ್ಮಧ್ವಜ ಆರೋಹಣ ನಡೆಸಿರುವುದನ್ನು ಸ್ಮರಿಸಿದರು. ತಮ್ಮ ತವರು ರಾಜ್ಯ ಗುಜರಾತ್‌ಗೂ ಉಡುಪಿಗೂ ಇರುವ ನಂಟನ್ನು ವಿಶೇಷವಾಗಿ ಉಲ್ಲೇಖಿಸಿದರು. ದ್ವಾರಕೆಯಲ್ಲಿ ಸಾಕ್ಷಾತ್ ರುಕ್ಮಿಣಿ ದೇವಿ ಪೂಜಿಸುತ್ತಿದ್ದ ಶ್ರೀಕೃಷ್ಣನ ವಿಗ್ರಹವನ್ನು ಶ್ರೀ ಮಧ್ವಾಚಾರ್ಯರು ಉಡುಪಿಗೆ ತಂದು ಪ್ರತಿಷ್ಠಾಪಿಸಿರುವ ಐತಿಹಾಸಿಕ ವಿದ್ಯಮಾನವನ್ನು ಸ್ಮರಿಸಿದರು.


ಭಾರತದ ಭವ್ಯ ಆಧ್ಯಾತ್ಮಿಕ ಪರಂಪರೆ ಇಡೀ ಜಗತ್ತಿಗೆ ಬೆಳಕು ನೀಡುವಂಥದ್ದು. ಅಧರ್ಮವು ತಾಂಡವವಾಡುವಾಗ ಧರ್ಮ ಸಂಸ್ಥಾಪನೆಗಾಗಿ ಭಗವಾನ್ ಶ್ರೀಕೃಷ್ಣನು ಮತ್ತೆ ಮತ್ತೆ ಅವತರಿಸಿ ಬರುತ್ತಾನೆ ಎಂಬ ಭಗವದ್ಗೀತೆಯ ಸಂದೇಶವನ್ನು ಸ್ಮರಿಸಿದರು. ದೇವಭೂಮಿ ಭಾರತದ ಮೇಲೆ ಶತ್ರುಗಳ ದಾಳಿಯನ್ನು ತಡೆಯಲು ಶ್ರೀಕೃಷ್ಣನ 'ಸುದರ್ಶನ ಚಕ್ರ'ದ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ರಕ್ಷಾಕವಚದ ಬಗ್ಗೆ ಪ್ರಸ್ತಾಪಿಸಿದರು.




ಉಡುಪಿಯಲ್ಲಿ ಏಕಕಾಲಕ್ಕೆ ಲಕ್ಷ ಕಂಠ ಗೀತಾ ಪಾರಾಯಣ ನಡೆದಿರುವ ಈ ಕಾರ್ಯಕ್ರಮ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ದಾಖಲಾಯಿತು. ಈ ಕುರಿತ ಪ್ರಮಾಣ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರು ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.


ಬೆಳಿಗ್ಗೆ 10.25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನ ಮಂತ್ರಿಗಳನ್ನು, ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಗಳನ್ನು ಸ್ವಾಗತಿಸಿದರು. ಬಳಿಕ ಪ್ರಧಾನಮಂತ್ರಿಗಳು ವಾಯುಪಡೆ ಹೆಲಿಕಾಪ್ಟರ್ ನಲ್ಲಿ ಉಡುಪಿಗೆ ತೆರಳಿದರು.


ಹೆಲಿಕಾಪ್ಟರ್ ನಿಂದ ಇಳಿದ ಬಳಿಕ ಪ್ರಧಾನಿ ಮೋದಿಯವರವನ್ನು ಬಿಜೆಪಿ ವತಿಯಿಂದ ರೋಡ್ ಶೋ ಮೂಲಕ ಶ್ರೀಕೃಷ್ಣ ಮಠಕ್ಕೆ ಕರೆದೊಯ್ಯಲಾಯಿತು.


ಮೂರು ಗಂಟೆಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿಯವರು ಬಳಿಕ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾದರು. ಅಲ್ಲಿಂದ ಗೋವಾಗೆ ನಿರ್ಗಮಿಸಿದರು. ವಿಮಾನ ನಿಲ್ದಾಣದಲ್ಲಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪೊಲೀಸ್ ಕಮೀಷನರ್  ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಗಳನ್ನು ಬೀಳ್ಕೊಟ್ಟರು.



إرسال تعليق

0 تعليقات
إرسال تعليق (0)
Advt Slider:
To Top