ಪದವಿ ಎಂದರೆ ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ ಯಾವ ಪದವಿ ಎಂದು ಅದರಲ್ಲೂ ನೀವೇನಾದರೂ ಬಿ ಎ ಪದವಿ ಮಾಡುತ್ತಿದ್ದೀರಾ ಎಂದರೆ ನೋಡುಗರ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ.ಅದೇ ನೀವೇನಾದರೂ ಬಿ ಎ ಪದವಿ ಮಾಡಲು ಊರು ಬಿಟ್ಟು ಹೊರಗೆ ಹೋದರೆ ಬಿಎ ಮಾಡಲು ಅಷ್ಟು ದೂರ ಏಕೆ ಎನ್ನುವ ಪ್ರಶ್ನೆ. ಇಲ್ಲಿಗೆ ನಮಗೆ ಅರ್ಧ ಜೀವನ ಕಾಣಿಸಿ ಬಿಡುತ್ತದೆ.ನಾನು ಹೀಗೆ ಬಿಎ ಪದವಿ ಆಯ್ದುಕೊಂಡಾಗ ನನ್ನ ಅಕ್ಕ ಪಕ್ಕದ ಮನೆಯವರು ನನಗೆ ಇದೇ ಪ್ರಶ್ನೆಗಳನ್ನ ಪದೇ ಪದೇ ಕೇಳುತ್ತಿದ್ದರು. ನಾನು ಅಷ್ಟಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ನನಗೆ ನಿಜವಾದ ಜೀವನದ ಪರಿಚಯವಾದದ್ದು ನಾನು ಪದವಿಗೆ ಸೇರಿದ ನಂತರ.
ನಾನು ಮೊದಲಿನಿಂದಲೂ ಹಾಸ್ಟೆಲ್ ನಲ್ಲಿಯೇ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ, ಹಾಗಾಗಿ ನನಗೆ ಹಾಸ್ಟೆಲ್ ಏನು ಹೊಸದಾಗಿರಲಿಲ್ಲ ಆದರೆ ನಾನು ಸೇರಿದ ಜಾಗ ನನಗೆ ಹೊಸದಾಗಿತ್ತು. ಮತ್ತು ನಾನು ಇದೇ ಮೊದಲ ಬಾರಿಗೆ ಜಿಲ್ಲೆಯನ್ನು ಬಿಟ್ಟು ಜಿಲ್ಲೆಗೆ ಓದಲು ಹೋಗಿದ್ದೆ, ಯಾವ ಕೆಲಸವನ್ನು ಕೂಡ ನಾನು ಒಬ್ಬಳೇ ಮಾಡಿಕೊಂಡಿರಲಿಲ್ಲ ಯಾವತ್ತಿಗೂ ನನ್ನ ಅಪ್ಪನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತಳಾಗಿದ್ದೆ. ಇದು ನನಗೆ ನಾನು ಪದವಿಗೆ ಬಂದು ಸೇರಿದ ನಂತರ ತುಂಬ ದೊಡ್ಡ ಹೊಡೆತವನ್ನು ಕೊಟ್ಟಿತು, ಹೇಗೆಂದರೆ ಅಲ್ಲಿ ಹುಡುಗಿಯರು ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು.
ನನಗೆ ಕೇವಲ ಒಂದೆ ಒಂದು ಚಹಾದ ಅಂಗಡಿಗೆ ಹೋಗಿ ಚಹಾ ಕೇಳುವಷ್ಟು ಧೈರ್ಯ ಕೂಡ ನನ್ನಲ್ಲಿ ಇರಲಿಲ್ಲ, ನನ್ನ ಒಟ್ಟಿಗೆ ನನ್ನ ಸ್ನೇಹಿತೆಯರಿದ್ದರೆ ಮಾತ್ರ ನಾನು ಮುಂದೆ ಹೋಗಿ ಕೇಳುತ್ತಿದ್ದೆ. ಆಮೇಲೆ ನಾನು ಏನನ್ನು ಅರಿತುಕೊಂಡೆನೆಂದರೆ ಇಲ್ಲಿ ನಾನು ಕೇವಲ ಪದವಿಯನ್ನು ಮುಗಿಸಿದರೆ ನನಗೆ ಕೇವಲ ಸಿಗುವುದು ಒಂದು ಪದವಿ ಎಂಬ ಸರ್ಟಿಫಿಕೇಟ್, ಅದೇ ನಾನು ಈಗ ನನ್ನ ಜೀವನದ ಬಗ್ಗೆ ಅರಿತುಕೊಂಡು ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಶುರು ಮಾಡಿದರೆ ಮುಂದೆ ನನಗೆ ಎಲ್ಲಿ ಬೇಕಾದರೂ ಹೋಗಿ ಒಬ್ಬಳೇ ಬದುಕ ಬಲ್ಲೆ ಎಂಬ ಭರವಸೆ ಧೈರ್ಯ ಕೂಡ ಇರುತ್ತದೆ ಎಂದು ಅಂದಿನಿಂದ ನಾನು ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಶುರು ಮಾಡಿದೆ.
ಮತ್ತೊಂದು ವಿಷಯ ಎಂದರೆ ನಾನು ಸಾಮಾನ್ಯವಾಗಿ ಬಸ್ಸಿನಲ್ಲಿ ನನ್ನಮ್ಮನ ಒಟ್ಟಿಗೆ ಊರಿಗೆ ಎಂದು ಓಡಾಡುವಾಗ ಕಾಲೇಜು ಹುಡುಗಿಯರು ಬೆಂಗಳೂರು, ಮಂಗಳೂರು ಇಂತಹ ದೊಡ್ಡ ದೊಡ್ಡ ನಗರಗಳಿಂದ ಕಾಲೇಜಿನಿಂದ ಮನೆಗೆ ಬರುತ್ತಿದ್ದದ್ದನ್ನು ನೋಡುತ್ತಿದ್ದೆ, ಅವರನ್ನು ನೋಡಿದಾಗ, ನಾನು ಹೀಗೆಯೇ ದೂರ ಹೋಗಿ ನನ್ನ ವಿದ್ಯಾಭ್ಯಾಸವನ್ನು ಮಾಡಬೇಕು ಎಂಬ ಆಸೆ ನನ್ನಲ್ಲಿ ಹುಟ್ಟುತ್ತಿತ್ತು. ಮತ್ತೆ ನನ್ನ ತಲೆಯಲ್ಲಿದ್ದ ಇನ್ನೊಂದು ಬ್ರಾಂತಿ ಎಂದರೆ ನಾನು ಮನೆಯಿಂದ ದೂರ ಇದ್ದರೆ ಯಾವಾಗಲೂ ಬಯ್ಯುತ್ತಿದ್ದ ನನ್ನ ಅಪ್ಪ ಅಮ್ಮನಿಗೆ ನನ್ನ ಪ್ರಾಮುಖ್ಯತೆ ಮನೆಯಲ್ಲಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ನಾನು ತಿಳಿದುಕೊಂಡಿದ್ದೆ, ಆದರ ಬದಲಿಗೆ ನನಗೆ ನನ್ನ ಮನೆಯವರ ಪ್ರಾಮುಖ್ಯತೆ ಇನ್ನೂ ಹೆಚ್ಚಾಗಿ ನನಗೆ ನಗರ ಬಿಟ್ಟು ನಗರ ಸೇರಿದಾಗ ಅರಿವಾಗ ತೊಡಗಿತು.\
ಹೀಗೆಯೇ ನಮಗೆ ಕಷ್ಟಗಳು ಮತ್ತು ಏಕಾಂಗಿತನ ಎಂಬುದನ್ನು ಕಲಿಸಿಕೊಡಲು ನಮಗೆ ಈ ತರಹದ ಒಂದು ಸಣ್ಣ ಸಣ್ಣ ಅನುಭವಗಳೇ ದೊಡ್ಡ ದೊಡ್ಡ ದಾರಿಗಳಿಗೆ ಮೆಟ್ಟಲಾಗುತ್ತವೆ ಎಂಬುದು ನನ್ನ ಆಶಯ.
-ಸಿಂಧು ಎಸ್ ಬಿ
ಎಸ್.ಡಿ.ಎಂ. ಕಾಲೇಜು, ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



