ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯ: ಕರ್ನಾಟಕಕ್ಕೆ ಪ್ರಶಸ್ತಿ

Chandrashekhara Kulamarva
0

ವಿಂಡರ್ಜಿ 2025ರಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೆಡಲ್‌ನಿಂದ ಕರ್ನಾಟಕದ ಪವನ ವಿದ್ಯುತ್‌ ಸಾಮರ್ಥ್ಯದ ಅನಾವರಣ





ಬೆಂಗಳೂರು: ಅತ್ಯಧಿಕ ಪವನ ವಿದ್ಯುತ್‌ ಉತ್ಪಾದನೆ ಮೂಲಕ 2024-25ನೇ ಸಾಲಿನಲ್ಲಿ ಪ್ರಶಸ್ತಿ ಪಡೆದಿದ್ದ ಕರ್ನಾಟಕವು ಇದೇ ಸಾಲಿನಲ್ಲಿ'ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯತ್ ಸಾಮರ್ಥ್ಯ'ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನೂ ತನ್ನದಾಗಿಸಿಕೊಡಿದೆ.   


ಈ ಸಾಧನೆಯು ಕರ್ನಾಟಕದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಇರುವ ಬದ್ಧತೆ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಪವನ ವಿದ್ಯುತ್‌ ಬಳಸಿಕೊಳ್ಳುವಲ್ಲಿ ರಾಜ್ಯ ಕೈಗೊಂಡಿರುವ ಪೂರ್ವಭಾವಿ ಕ್ರಮಗಳಿಗೆ ಸಾಕ್ಷಿಯಾಗಿದೆ. 


ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯುಟಿಎಂಎ) ಚೆನ್ನೈನ  ಟ್ರೇಡ್ ಸೆಂಟರ್‌ನಲ್ಲಿ ಆಯೋಜಿಸಿದ್ದ 'ವಿಂಡರ್ಜಿ ಇಂಡಿಯಾ 2025'ರ  7ನೇ ಆವೃತ್ತಿಯಲ್ಲಿ ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ  ಪ್ರಲ್ಹಾದ್‌ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷರೂ ಆದ ಶಾಸಕ ಟಿ. ಡಿ. ರಾಜೇಗೌಡ ಮತ್ತು ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಪ್ರಶಸ್ತಿ ಸ್ವೀಕರಿಸಿದರು.


ಕ್ರೆಡಲ್‌ ಮಳಿಗೆಯನ್ನು ಉದ್ಘಾಟಿಸಿದ ಕೇಂದ್ರ ಸಚಿವ  ಪ್ರಲ್ಹಾದ್‌ ಜೋಶಿ, ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಗತಿಪರ ನೀತಿ, ಉಪಕ್ರಮಗಳ ಮೂಲಕ ಕರ್ನಾಟಕ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದರು. "ಸರ್ಕಾರ ಮತ್ತು ಉದ್ದಿಮೆಗಳು ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಗಮನಾರ್ಹ ಸಾಧನೆ ಮಾಡಬಹುದು. ನಾವೀನ್ಯತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಿ ದೇಶಕ್ಕೆ ಸುಸ್ಥಿರ ಇಂಧನ ಭವಿಷ್ಯವನ್ನು ನಿರ್ಮಿಸುವಲ್ಲಿ ಇಂಥ ಸಹಯೋಗದ ಪಾತ್ರ ಮಹತ್ವದ್ದು," ಎಂದು ಅವರು ವಿವರಿಸಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕ್ರೆಡಲ್‌ ಅಧ್ಯಕ್ಷ ಟಿ.ಡಿ. ರಾಜೇಗೌಡ, "ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಶುದ್ಧ ಇಂಧನ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಎಲ್ಲಾ ಪಾಲುದಾರರ  ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.


ರಾಜ್ಯದಲ್ಲಿನ ಪವನ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ, ಸದ್ಯದ ಯೋಜನೆಗಳು ಮತ್ತು ಈ ವಲಯದಲ್ಲಿನ ಸಹಯೋಗದ ಅವಕಾಶಗಳ ಬಗ್ಗೆ ಮಾಹಿತಿ ನೀಡಲು ಸಮಾವೇಶದಲ್ಲಿ ಕ್ರೆಡಲ್‌ ಮಳಿಗೆ ತೆರೆದಿತ್ತು. ವಲಯದ ಉದ್ಯಮ ಮುಖಂಡರು, ನೀತಿ ನಿರೂಪಕರು, ಅಭಿವರ್ಧಕರು ಮಳಿಗೆಗೆ ಭೇಟಿ ನೀಡಿ, ಕ್ರೆಡಲ್ ‌ಅಧಿಕಾರಿಗಳಿಂದ ಮಾಹಿತಿ ಪಡೆದರು. 



ಇಂಧನ ಸಚಿವ ಜಾರ್ಜ್‌ ಹರ್ಷ


ಪವನ ವಿದ್ಯುತ್‌ ವಲಯದಲ್ಲಿ ಕರ್ನಾಟಕದ ಸಾಧನೆಗೆ ಸಂದಿರುವ ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜಾರ್ಜ್‌,"ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿರುವ ಅಂಶವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ.ಈ ಪ್ರಶಸ್ತಿಯು ಶುದ್ಧ ಇಂಧನ ಉತ್ಪಾದನೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರಕ್ಕೆ ಇರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿ ತಲುಪುವ ನಿಟ್ಟಿನಲ್ಲಿ ಕ್ರೆಡಲ್‌ ಅಧಿಕಾರಿಗಳ ಅವಿರತ ಪ್ರಯತ್ನಕ್ಕೆ ಅಭಿನಂದನೆ,"ಎಂದಿದ್ದಾರೆ.




"ಹಸಿರು ಇಂಧನದತ್ತ ಪರಿವರ್ತನೆಯ ನಮ್ಮ ಪ್ರಯತ್ನಗಳಿಗೆ ವೇಗ ತುಂಬಿ, ನವೀಕರಿಸಬಹುದಾದ ವಲಯದಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುವತ್ತ ಗಮನಹರಿಸಿದ್ದೇವೆ. ಇಂಧನ ವಲಯದಲ್ಲಿನ ನಮ್ಮ ನವೀನ ನೀತಿಗಳು ರಾಜ್ಯವನ್ನು ನವೀಕರಿಸಬಹುದಾದ ಇಂಧನದ ಶಕ್ತಿ ಕೇಂದ್ರವನ್ನಾಗಿ ರೂಪಿಸುತ್ತಿವೆ."

- ಗೌರವ್ ಗುಪ್ತ,

ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ 



"ಶುದ್ಧ ಇಂಧನದ ಉತ್ಪಾದನೆಗೆ ನಮ್ಮ ಬದ್ಧತೆ ಮತ್ತು ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ರಾಜ್ಯದ ಅವಿರತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದೆ. ಹೂಡಿಕೆದಾರ ಸ್ನೇಹಿ ನೀತಿಗಳಿಂದ ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವುಮಾಡಿಕೊಡಲಾಗದೆ. ಇದಕ್ಕೆ ಪೂರಕವಾಗಿ ಕ್ರೆಡಲ್‌ ಕಾರ್ಯ ನಿರ್ವಹಿಸಲಿದೆ."

- ಕೆ.ಪಿ. ರುದ್ರಪ್ಪಯ್ಯ,

ವ್ಯವಸ್ಥಾಪಕ ನಿರ್ದೇಶಕ,  ಕ್ರೆಡಲ್ 



ವಿಂಡರ್ಜಿ ಇಂಡಿಯಾ 2025

ಮೂರು ದಿನಗಳ ವಿಂಡರ್ಜಿ ಇಂಡಿಯಾ 2025 ಕಾರ್ಯಕ್ರಮವು ನೀತಿ ನಿರೂಪಕರು, ತಂತ್ರಜ್ಞಾನ ವಲಯದ ಜಾಗತಿಕ ನಾಯಕರು, ಹೂಡಿಕೆದಾರರು, ಉದ್ಯಮದ ಪಾಲುದಾರರ ಸಂವಾದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತ್ತು. 3,000 ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು ಮತ್ತು ಗಣ್ಯರು ಹಾಜರಿದ್ದ ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಪವನ ವಿದ್ಯುತ್‌ ವಲಯದಲ್ಲಿನ ದೇಶದ ಸಾಧನೆಯನ್ನು ಎತ್ತಿ ಹಿಡಿಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top