ಪ್ರಶಸ್ತಿಗಳಲ್ಲಿ ಅನ್ಯಾಯ; ಸರಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

Chandrashekhara Kulamarva
0

ಕಲಬುರಗಿ ಸಾಹಿತಿ ಚಿಂತಕರ ಸಭೆಯಲ್ಲಿ ಒಕ್ಕೊರಲ ನಿರ್ಣಯ




ಕಲಬುರಗಿ: ರಾಜ್ಯೋತ್ಸವ ಪ್ರಶಸ್ತಿಗೆ ಸ್ಥಳೀಯರ ಕಡೆಗಣನೆಯ ವಿರುದ್ಧ ಸಾಹಿತಿ ಚಿಂತಕರ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿ ಸರ್ಕಾರದ ವಿರುದ್ಧ ಖಂಡನೆ ವ್ಯಕ್ತವಾಯಿತು.


ಕಲಬುರಗಿಯ ಹಿಂದಿ ಪ್ರಚಾರ ಸಭಾದಲ್ಲಿ ನವೆಂಬರ್ 5ರಂದು ಬುಧವಾರ ಕಲಬುರಗಿ ಜಿಲ್ಲಾ ಸಾಹಿತಿ ಚಿಂತಕರು, ಕಲಾವಿದರು, ಸಂಗೀತ ಕಲಾವಿದರು, ಪ್ರಕಾಶಕರು, ಮಾಧ್ಯಮ ರಂಗದವರು, ರೈತ, ಜನಪರ ಹೋರಾಟಗಾರರು ಜಂಟಿಯಾಗಿ ನಡೆಸಿದ ಸಭೆಯಲ್ಲಿ ಜಿಲ್ಲೆಗಾದ ಅನ್ಯಾಯದ ವಿರುದ್ಧ ಒಕ್ಕೊರಳಿನಿಂದ ಪ್ರತಿಭಟನೆ ವ್ಯಕ್ತಪಡಿಸಿ ಸರಕಾರವು ಪ್ರಾದೇಶಿಕ ಕೇಂದ್ರವಾದ ಪ್ರಮುಖ ಜಿಲ್ಲೆಯನ್ನು ಸೂಕ್ತ ಪ್ರಾತಿನಿಧ್ಯ ನೀಡದೆ ಕಡೆಗಣಿಸಿರುವುದು ಅಪಮಾನಕರ ಸಂಗತಿ. ಮುಖ್ಯಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಭಾಗವನ್ನು ಕಡೆಗಣಿಸಿರುವುದಕ್ಕೆ ಇದು ಪ್ರತ್ಯಕ್ಷ ನಿದರ್ಶನವಾಗಿದೆ. ಇಂತಹ ನಿರ್ಲಕ್ಷ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಹಾಗೂ  ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಲಾಯಿತು. ಈ ರೀತಿ ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗವನ್ನು ಅವಗಣಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾದ ಶಿವರಾಜ್ ತಂಗಡಗಿ ರಾಜೀನಾಮೆ ನೀಡಬೇಕು ಎಂಬ ಕೂಗು ಸಭೆಯಲ್ಲಿ ಕೇಳಿ ಬಂತು. ರಾಜಕೀಯ ಇಚ್ಛಾ ಶಕ್ತಿ ಮರೆತ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಒಗ್ಗಟ್ಟಿನಿಂದ ಹೋರಾಡೋಣ ಎಂದು ಎಚ್ಚರಿಕೆ ನೀಡಲಾಯಿತು.


ಸಂಘಟಕರಾದ ಶರಣ ಗೌಡ ಪಾಟೀಲ್ ಪಾಳಾ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತೋಣ. ಅದಕ್ಕಾಗಿ ಪಕ್ಷಾತೀತವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ಹಂತದ ರೂಪುರೇಷೆಗಳನ್ನು ಕೈಗೊಳ್ಳಲು ಜಾಗೃತಿ ಸಭೆ ಅಗತ್ಯ ಎಂದರು.


ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ್ ಕುಲಕರ್ಣಿ, ಖ್ಯಾತ ಪ್ರಕಾಶಕರಾದ ಬಸವರಾಜ್ ಕೊನೇಕ್, ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಮಾಧ್ಯಮ ರಂಗದ ಡಾ. ಸದಾನಂದ ಪೆರ್ಲ, ಸಾಹಿತಿ ಪ್ರೊ. ಶಿವರಾಜ್ ಪಾಟೀಲ್, ಡಾ.ಜಯದೇವಿ ಗಾಯಕವಾಡ, ಡಾ ಚಿ ಸಿ. ನಿಂಗಣ್ಣ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ ಎಚ್ ನಿರಗುಡಿ, ರೈತ ನಾಯಕ ದಯಾನಂದ ಪಾಟೀಲ್,ಜಾನಪದ ಪರಿಷತ್‌ನ ಸಿ.ಎಸ್ ಮಾಲಿ ಪಾಟೀಲ್, ಕನ್ನಡ ಪ್ರಾಧ್ಯಾಪಕ ಡಾ. ಆನಂದ ಸಿದ್ದಾಮಣಿ, ನ್ಯಾಯವಾದಿಗಳಾದ ಎಸ್ ಎಸ್ ಹಿರೇಮಠ್, ವಿನೋದ್ ಜನೆವರಿ, ಭ್ರಷ್ಟಾಚಾರ ವಿರೋಧಿ ಸಂಘಟನೆಯ ಡಾ.ಎ.ಎಸ್ ಭದ್ರ ಶೆಟ್ಟಿ, ಹಿರಿಯ ಕಲಾವಿದರಾದ ಬಸವರಾಜ ಜಾನೆ, ಮಂಜುಳ ಜಾನೆ, ದತ್ತರಾಜ ಕಲಶೆಟ್ಟಿ, ಬಸಯ್ಯ ಗುತ್ತೇದಾರ್ ತೆಲ್ಲೂರು, ಹೋರಾಟಗಾರ ಎಂ.ಎಸ್ ನರಬೋಳಿ ಮಾತನಾಡಿ ನಿಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಶಿವಾನಂದ ಮಠಪತಿ, ಅಮೃತಪ್ಪ ಅನೂರ, ಹನುಮಂತ ರಾವ ಮಂಗಾಣೆ, ಮಾಜೀದ್ ಮಾಗಿ, ಮಾಣಿಕ ಬಾಳುವಾಲೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಸೇವಕ ಬಿ ಎಂ ರಾವೂರ ಧನ್ಯವಾದವಿತ್ತರು.


ನೂತನ ಸಂಘಟನೆ ಉದಯ

ಚಿಂತನ ಸಭೆಯ ಅಧ್ಯಕ್ಷತೆ ವಹಿಸಿದ ಡಾ.ಸ್ವಾಮಿ ರಾವ್ ಕುಲಕರ್ಣಿ ಮಾತನಾಡಿ, ಈ ಭಾಗಕ್ಕಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಕೃತಿಕವಾಗಿ ಒಂದು ಸಂಘಟನೆಯ ಅಗತ್ಯವಿದ್ದು ಶೀಘ್ರದಲ್ಲಿ ಅದಕ್ಕೆ ಹೆಸರು ಅಂತಿಮಗೊಳಿಸಲಾಗುವುದು. ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಮಾಹಿತಿಯನ್ನು ನೀಡಲು ಕಲಬುರಗಿ ಹಾಗೂ ಇತರ ಜಿಲ್ಲೆಗಳ ವಿವಿಧ ಕ್ಷೇತ್ರಗಳ ಸಾಧಕರ ಪೂರ್ಣ ವಿಳಾಸ ಸಾಧನಾ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಕೈಪಿಡಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಅವುಗಳನ್ನು ಸಚಿವರಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ನೀಡಬೇಕು.ಅದಕ್ಕಾಗಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ಅಸ್ತಿತ್ವಕ್ಕೆ ಬರಲಿದ್ದು ಕ.ಕ ಭಾಗದ  ಪ್ರತಿ ಜಿಲ್ಲೆಗಳ ಪ್ರತಿನಿಧಿಗಳು ಒಳಗೊಂಡಿರುತ್ತಾರೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಈ ಭಾಗದವರನ್ನು ಸೇರಿಸಿಕೊಳ್ಳುವಂತೆ ಒತ್ತಾಯಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top