ಸುಮಾರು ವರುಷದ ಹಿಂದಿನ ಮಾತು. ಆಗಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿದಿತ್ತು. ಥಿಯೇಟರಿನಲ್ಲಿ ಪುಟ್ಟಣ್ಣ ಕಣಗಾಲ ನಿರ್ದೇಶನದ "ನಾಗರಹಾವು "ಸಿನಿಮಾ ಬಿಡುಗಡೆಯಾಗಿತ್ತು. ಪರೀಕ್ಷೆ ಮುಗಿದ ದಿನ ಆ ದಿನಗಳಲ್ಲಿ ಸಂತೋಷ ಅಂದರೆ ಸಿನಿಮಾ ನೋಡುವದು ಮತ್ತು ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿನ್ನುವದು. ಸಿನೆಮಾ ಯಾವುದೇ ಇರಲಿ ಗೆಳೆಯರೆಲ್ಲಾ ಸೇರಿ ಹೋಗೋದೇ ಒಂದು ಹಬ್ಬ.
ನೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲರ ನಾಗರಹಾವು ನೋಡಿದ್ದು ಇಂದಿಗೂ ಸ್ಮರಣೀಯ ನೆನಪು. ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ಕಾದಂಬರಿ ಜೊತೆಗೆ ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಕೋಟೆಯ ಅನಾವರಣ, ಪುಟ್ಟಣ್ಣ ನವರ ನಿರ್ದೇಶನ, ಕಲಾವಿದರ ಅಭಿನಯ, ಚೆಂದದ ಹಾಡುಗಳು ಹೀಗೇ... ಎಲ್ಲವೂ ಅದ್ಭುತ. ಇಂದಿಗೂ ಬೆಂಗಳೂರಿಗೆ ಹೋಗುವಾಗ ಚಿತ್ರದುರ್ಗ ಬಂತೆಂದರೆ ನಾಗರಹಾವಿನದೇ ನೆನಪು. ರಾಮಾಚಾರಿ ಚಾಮಯ್ಯ ಮೇಷ್ಟ್ರ ಧ್ವನಿಗಳು ಪ್ರತಿಧ್ವನಿ ಸಿದಂತೆ ಅನಿಸುತ್ತದೆ. ಸಾಹಸಸಿಂಹ ವಿಷ್ಣುವರ್ಧನ ಅವರ ಮೊದಲ ಚಿತ್ರ. ಆರತಿಯವರ ಅಲಮೇಲು ಪಾತ್ರ, ಕ್ರಿಸ್ತೀಯನ್ ಹುಡುಗಿಯಾಗಿ ಶುಭಾ, ದೇವ್ರೇ ದೇವ್ರೇ ಎಂದು ಕಾಡುವ ಲೀಲಾವತಿ ಎಲ್ಲಕ್ಕೂ ಮಿಗಿಲಾದ ಅಶ್ವಥ ಅವರ ಚಾಮಯ್ಯ ಮೇಷ್ಟ್ರ ಪಾತ್ರ... ಮರೆಯಲಾಗದ ಅಭಿನಯ. "ಬಾರೇ ಬಾರೇ ಚೆಂದದ ಚೆಲುವಿನ ತಾರೆ" ಹಾಡಂತೂ ಇಂದಿಗೂ ಹಸಿರು.
"ಕೈ ಬಳೆ ನಾದದ ಗುಂಗನು ಮರೆಯಲಾರೆ" ಎನ್ನುವ ಆ ಹಾಡಿನ ಸಾಲು ಇಂದಿಗೂ ರೋಮಾಂಚನ. ಕೊನೆಯಲ್ಲಿ ರಾಮಾಚಾರಿ ಹಾಗೂ ಮಾರ್ಗರೆಟ್ ಪಾತ್ರದ ವಿಷ್ಣುವರ್ಧನ ಶುಭಾ ಎತ್ತರದ ಕೋಟೆಯಿಂದ ಜಿಗಿದು ಕೆಳಗೆ ಬಿದ್ದು ಸಾಯುವ ದೃಶ್ಯವಿದೆ. ನಾನಂತೂ ನಿಜವೆಂದೇ ತಿಳಿದು ಅತ್ತಿದ್ದೆ. ಆಗೆಲ್ಲಾ ಸಿನೆಮಾದಲ್ಲಿ ದುಃಖದ ಸನ್ನಿವೇಶಗಳು ಬಂದಾಗ ಅಳುವ ರೂಢಿ. ಅಳದಿದ್ದರೆ ಸಿನಿಮಾ ಅವರಿಗೆ ಅರ್ಥವಾಗಿಲ್ಲ ಅಂತ ತಿಳಿಯುತ್ತಿದ್ದರು. ಅಂದಿನ ಸಿನಿಮಾಗಳು ಅಷ್ಟೊಂದು ಮನಸ್ಸಿಗೆ ತಟ್ಟುವಂತಿರುತ್ತಿತ್ತು, ಪ್ರಭಾವ ಬೀರುತ್ತಿದ್ದವು.
ಚಿತ್ರವನ್ನು ವೀಕ್ಷಿಸುವಾಗ ರಾಮಾಚಾರಿ ಎನ್ನುವ ಕೂಗನ್ನು ಪ್ರತಿಧ್ವನಿಸುವ ಕೋಟೆಯ ಧ್ವನಿ ಹಾಗೆ ಕನ್ನಡ ನಾಡಿನ ವೀರ ರಮಣಿಯ ಹಾಡಿನಲ್ಲಿ ಇಡೀ ಚಿತ್ರದುರ್ಗದ ಇತಿಹಾಸವನ್ನು ಸಾರಿದ್ದು... ಕೊನೆಯಲ್ಲಿ ಚಾಮಯ್ಯ ಮೇಸ್ಟ್ರು ಹೋದ ದಾರಿಯಲ್ಲೇ ರಾಮಾಚಾರಿ ಮಾರ್ಗರೆಟ್ ಬದುಕಿನ ಪಯಣ ಮುಗಿಸಿದ್ದು.. ಪ್ರತಿ ದೃಶ್ಯ.. ಸಂಭಾಷಣೆ.. ಅಭಿನಯ ಎಷ್ಟು ಹೃದಯ ಸ್ಪರ್ಶಿ ಎನಿಸಿತೆಂದರೆ ನಿಜವಾಗಿಯೂ ರಾಮಾಚಾರಿ ಹೋದಂತೆ ಭ್ರಮೆ ಮೂಡಿಸಿ ನಾಲ್ಕಾರು ದಿನ ಅದೇ ಕನವರಿಕೆಯಲ್ಲೇ ಬಳಲಿದೆ. "ಬಾರೇ ಬಾರೇ ಚೆಂದದ ಚೆಲುವಿನ ತಾರೆ.." ಗೀತೆ ಟಿ.ವಿ ಯಲ್ಲಿ, ರೇಡಿಯೋದಲ್ಲಿ ಬಂದಾಗ ಇದ್ದ ಕೆಲಸ ಬಿಟ್ಟು ಓಡೋಡಿ ಬಂದು ಆಲಿಸುವ ಮನಸ್ಸು ಇಂದಿಗೂ ಇದೆ.
- ತಾರಾ ಹೆಗಡೆ ಸಿರಸಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



