ಸುರತ್ಕಲ್ ಹೋಬಳಿ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಆಯ್ಕೆ

Upayuktha
0




ಸುರತ್ಕಲ್:  ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಸುರತ್ಕಲ್ ಹೋಬಳಿ ಘಟಕದ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 11 ರಂದು ನಾರಾಯಣ ಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇಲ್ಲಿ ನಡೆಯಲಿದೆ. ಹೋಬಳಿಮಟ್ಟದ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂಪಿ ಶ್ರೀನಾಥ ಅವರು ಪ್ರಕಟಿಸಿದ್ದಾರೆ.


ಹೋಬಳಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಸಂಸ್ಥೆಯ ಅಧ್ಯಕ್ಷರಾದ  ಪಿ. ದಯಾಕರ್ ಇವರ ನೇತೃತ್ವದಲ್ಲಿ ನಾರಾಯಣಗುರು ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಇವರು ಸಾಹಿತ್ಯ ಸಮ್ಮೇಳನದ ತಯಾರಿಯ ಬಗ್ಗೆ ಮಾತನಾಡಿದರು.


ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ದಯಾಕರ್, ಆಡಳಿತಾಧಿಕಾರಿ ಡಾ.ಗಣೇಶ್ ಅಮೀನ್ ಸಂಕಮಾರ್, ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಗುಣವತಿ ರಮೇಶ್, ಗೋವಿಂದ ದಾಸ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ, ಕೋಶಾಧಿಕಾರಿ ಶ್ರೀಮತಿ ಅನುರಾಧ ರಾಜೀವ್, ಕಾರ್ಯದರ್ಶಿ ಶ್ರೀಮತಿ ಅಕ್ಷತಾ, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಧರ್ಮಪಾಲ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ಚಿದಾನಂದ್, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶ್ರೀ ಮಹಾವೀರ್ ಜೈನ್ ಉಪಸ್ಥಿತರಿದ್ದರು.



ಗೀತಾ ಸುರತ್ಕಲ್-ಪರಿಚಯ

ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮೇ 18 1953 ರಂದು ಜನಿಸಿದ ಗೀತಾ ಅವರ ತಂದೆ, ಗ್ರಾಮಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದ ದಿ.ಎಂ ತಿಮ್ಮಪ್ಪ. ತಾಯಿ ಅಂಚೆ ಅಧಿಕಾರಿಯಾಗಿ ನಿವೃತ್ತರಾದ ಎಂ.ಕೆ.ಶಾಂತ. ಶಿಕ್ಷಣದ ಮಹತ್ವ ಅರಿತಿದ್ದ ಕುಟುಂಬವಾದ್ದರಿಂದ, ಏನನ್ನಾದರೂ ಗೀಚುವ ಗೀಳಿದ್ದ ಗೀತಾ ಈ ಹಂತದಲ್ಲಿ ಹೆಸರಿನೊಂದಿಗೆ ಸುರತ್ಕಲ್ ಸೇರಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದು ಸಿಂಡಿಕೇಟ್ ಬ್ಯಾಂಕ್ ಸೇರಿದರು. ಎಳವೆಯಿಂದಲೂ ರಂಗಭೂಮಿಯ ಗೀಳು ಹಚ್ಚಿಕೊಂಡಿದ್ದ ಗೀತಾ ಸುರತ್ಕಲ್ ಪ್ರಾರಂಭದಲ್ಲಿ ಆಕಾಶವಾಣಿ ನಾಟಕಗಳಲ್ಲಿ ಗುರುತಿಸಿಕೊಂಡರು. ಮಂಗಳೂರು ರಂಗಭೂಮಿಯಲ್ಲಿ ಭೂಮಿಕ, ಆಯನ, ಅಭಿವ್ಯಕ್ತ ತಂಡಗಳಲ್ಲಿ ಪ್ರಸಿದ್ಧ ನಿರ್ದೇಶಕರಾದ ಸುರೇಂದ್ರನಾಥ್, ಸುರೇಶ್ ಆನಗಳ್ಳಿ, ಮೋಹನ ಚಂದ್ರ, ಎಂ.ಸಿ ರಾಮು, ನಾ.ದಾಮೋದರ ಶೆಟ್ಟಿ, ಅನಂತ ರಂಗಾಚಾರ್ ಮೊದಲಾದವರೊಂದಿಗೆ ದುಡಿದ ಗೀತಾ ಸುರತ್ಕಲ್ ಅವರ ಮೊದಲ ನಾಟಕ “ಯಯಾತಿ” ಜಯಪ್ರಕಾಶ ಮಾವಿನಕುಳಿ ಅವರ ನಿರ್ದೇಶನದಲ್ಲಿ.


ರಂಗಭೂಮಿಯಲ್ಲಿ ಹೆಚ್ಚಿನ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಗೀತಾಗೆ  ಬ್ಯಾಂಕ್ ನ ಗಾಂಧಿನಗರ ಶಾಖೆಗೆ ವರ್ಗಾವಣೆ ವರವಾಯ್ತು. ಮೊದಲ ಧಾರಾವಾಹಿ "ಗುಡ್ಡದ ಭೂತ” ಪ್ರಸಾರದೊಂದಿಗೆ ಬೆಂಗಳೂರು ಸೇರಿದ ಗೀತಾ ಸಿನಿಮಾ, ಧಾರಾವಾಹಿ ಎಲ್ಲದರಲ್ಲೂ ಅಭಿನಯಿಸಿದರೂ ಅವರ ಆಸಕ್ತಿಯ ತಾಣ ರಂಗಭೂಮಿಯೇ. ಬೆಂಗಳೂರಿನಲ್ಲಿ ರಂಗನಿರಂತರ, ಕಲಾ ಗಂಗೋತ್ರಿ ಇನ್ನಿತರ ತಂಡಗಳೊಂದಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಗೀತಾ ಈಗಲೂ ರಂಗಮಂಟಪ ತಂಡದೊಂದಿಗೆ ಗುರುತಿಸಿಕೊಂಡು ರಂಗಕ್ರಿಯೆಯಲ್ಲಿ ಪ್ರವೃತ್ತರಾಗಿದ್ದಾರೆ. ಮಿತ್ತಬೈಲ್ ಯಮುನಕ್ಕೆ, ಪಿಲಿ ಪತ್ತಿ ಗಡಸ್, ಮುಖ್ಯಮಂತ್ರಿ, ಅಂತಿಗೊನೆ, ಗಾಂಧಿಬಂದ, ಅಕ್ಕು, ಅನಭಿಜ್ಞ ಶಾಕುಂತಲದಂತಹ ನಾಟಕಗಳು ತನ್ನಮಟ್ಟಿಗೆ ಅವಿಸ್ಮರಣೀಯ ಎನ್ನುತ್ತಾರೆ. ಅವರ ಅತ್ಯಂತ ಪ್ರಿಯವಾದ ನಾಟಕ ರಂಗಶಂಕರ ನಿರ್ಮಿಸಿ, ಅಂತಾರಾಷ್ಟ್ರೀಯ ಖ್ಯಾತಿಯ ಮೋಹಿತ್ ತಾಕಲ್ಕರ್ ನಿರ್ದೇಶಿಸಿದ “ಬೀದಿಯೊಳಗೊಂದು ಮನೆಯ ಮಾಡಿ…”


ಮುಂಬೈಯ ವಸಯಿ ಕನ್ನಡ ಸಂಘದ “ಪ್ರತಿಷ್ಟಿತ ರಂಗಕರ್ಮಿ” ಅನ್ನುವ ಪ್ರಶಸ್ತಿ, ಮುಂಬೈ ಕನ್ನಡ ಸಂಘ”ದ “ಸ್ವರ್ಣ ಮಯೂರ “ಪ್ರಶಸ್ತಿ, ಬೆಂಗಳೂರಿನ ರಂಗನಿರಂತರ, ಭಾರತ ಯಾತ್ರಾ ಕೇಂದ್ರ ಹಾಗೂ ನಾಕುತಂತಿ ಪ್ರಕಾಶನದ ಸಂಯೋಗದಿಂದ “ಕಾರ್ಮಿಕ ರಂಗ ಪ್ರಶಸ್ತಿ” ಇವರಿಗೆ ಲಭಿಸಿವೆ.


2021ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಇವರಿಗೆ ಸಂದಿದೆ.


ಅನನ್ಯ ಕಾಸರವಳ್ಳಿ ನಿರ್ದೇಶನದ “ಕಪ್ಪು ಕಲ್ಲಿನ ಶೈತಾನ” ಅಂತಾರಾಷ್ಟ್ರೀಯವಾಗಿ 12 ಪ್ರಶಸ್ತಿಗಳನ್ನು ಗೆದ್ದಿತು ಅನನ್ಯ ಕಾಸರವಳ್ಳಿ ನಿರ್ದೇಶಿತ ಮತ್ತೊಂದು ಸಿನಿಮಾ”ಹರಿಕಥಾ ಪ್ರಸಂಗ”ದಲ್ಲಿ ನಟಿಸುವುದರೊಂದಿಗೆ ಗೀತಾ ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ. ಮಾರ್ಚ್ 1,2024ರಿಂದ ಆರಂಭವಾಗುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗಲಿರುವ “ಅಬ್ರಕದಬ್ರ”, (ನಿರ್ದೇಶನ ಉಡುಪಿಯ ಶಿಶಿರ್ ರಾಜಗೋಪಾಲ್) ಸಿನಿಮಾದಲ್ಲೂ ಇವರು ನಟಿಸಿದ್ದಾರೆ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಉತ್ತಮ ಕಥಾವಸ್ತುಗಳಿದ್ದು ಪ್ರಬುದ್ಧ ಯುವನಿರ್ದೇಶಕರುಗಳು ನಿರ್ದೇಶಿಸಿದ “ಏಕಮ್ ವೆಬ್ ಸೀರೀಸ್” ಓಟಿಟಿ ಪ್ರದರ್ಶನದ ಸರತಿಯಲ್ಲಿದೆ.


ಇತ್ತೀಚೆಗೆ ಸಿನಿಮಾ ನಿರ್ಮಾಣಕ್ಕೂ ಕೈಹಾಕಿರುವ ಗೀತಾ ಸುರತ್ಕಲ್ ಸಹನಿರ್ಮಾಪಕರೊಂದಿಗೆ ಸೇರಿ ನಿರ್ಮಿಸಿರುವ “ಅಮ್ಮಚ್ಚಿಯೆಂಬ ನೆನಪು”ಮತ್ತು “ಕೋಳಿ ಎಸ್ರು” ಸಿನಿಮಾಗಳು ನೋಡುಗರ ಹಾಗೂ ವಿಮರ್ಶಕರ ಮುಕ್ತಕಂಠದ ಪ್ರಶಂಸೆಗೆ ಭಾಜನವಾಗುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿವೆ.


ಚಾರಣ ಮತ್ತು ಪುಸ್ತಕ ಓದುವುದು ಇವರಿಗೆ ಪ್ರೀತಿಯ ವಿಷಯಗಳು ಕೊನೆಗೂ ಗೀತಾಗೆ ಹೃದಯಕ್ಕೆ ಹತ್ತಿರವಾಗುವ ವಿಷಯ ರಂಗಭೂಮಿಯೇ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top