ರುಚಿಯಾಗಿ ಏನಾದರೂ ತಿನ್ನಬೇಕು ಎಂದು ಅನಿಸಿದಾಗ ಬೇಕರಿಯಲ್ಲಿ ಸಾಕಷ್ಟು ತಿಂಡಿ ತಿನಿಸುಗಳಿದ್ದರೂ ಎಲ್ಲರಿಗೂ ತಟ್ಟನೆ ಒಮ್ಮೆಗೆ ನೆನಪಿಗೆ ಬರುವುದು ಕೇಕ್. ಬಗೆ-ಬಗೆ ಬಣ್ಣದ ವಿವಿಧ ಫ್ಲೇವರ್ ಗಳ ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಆಗ ತಾನೇ ಬಾಯಲ್ಲಿ ಪುಟ್ಟ ಹಲ್ಲು ಹುಟ್ಟಿದ ಚಿಕ್ಕ ಮಗುವಿನಿಂದ ಹಿಡಿದು, ಹಲ್ಲು ಉದುರಿ ವಯಸ್ಸಾದ ವೃದ್ಧರ ತನಕ ಎಲ್ಲರೂ ಇಷ್ಟಪಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥವೆಂದರೆ ಅದು ಕೇಕ್ .
ಪ್ರಸ್ತುತ ದಿನಗಳಲ್ಲಿ ಕೇಕ್ ಕತ್ತರಿಸದೆ ಹೋದರೆ ಕಾರ್ಯಕ್ರಮಗಳು ಅಪೂರ್ಣ ಎನ್ನಬಹುದು. ಹಿಂದೆ ಕೇವಲ ಹುಟ್ಟಿದ ಹಬ್ಬವನ್ನು ಆಚರಿಸುವುದಕ್ಕೆ ಕೇಕ್ ಬಳಕೆ ಆಗುತ್ತಿತ್ತು .ಆದರೆ, ಈಗ ಹೊಸ ಸೊಸೆಯನ್ನು ಮನೆ ತುಂಬಿಸಿಕೊಳ್ಳುವಾಗ, ನಿಶ್ಚಿತಾರ್ಥ, ಮದುವೆ ಹೀಗೆ ಎಲ್ಲಾ ಶುಭ ಸಂದರ್ಭ, ಸಮಾರಂಭ ಯಾವುದೇ ಆಗಿರಲಿ ಅಲ್ಲಿ ಕೇಕ್ ಕತ್ತರಿಸುವುದು ತಪ್ಪಿಸುವಂತಿಲ್ಲ. ಕೇಕ್ ತರದೆ ಕತ್ತರಿಸದೆ ಆಚರಿಸುವ ಕಾರ್ಯಕ್ರಮಗಳು ಕಂಡುಬರುವುದು ಅಪರೂಪವಾಗಿದೆ.
ಸಾಮಾನ್ಯವಾಗಿ ಹಿಂದೆ ಕೇಕ್ ಕತ್ತರಿಸಿದ ನಂತರ ಅದನ್ನ ಹಂಚಿ ತಿನ್ನೋಣ ಎಂದು ಹೇಳುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಕೇವಲ ಕೇಕ್ ಕತ್ತರಿಸಿ ಹಂಚಿ ತಿನ್ನುವ ಬದಲಿಗೆ ಮುಖಕ್ಕೆ , ಕೈಗೆ, ಮೈ ,ತಲೆಗೆ ಅದನ್ನು ಮೆತ್ತಿಸಿ, ಚೆಲ್ಲಾಡದೇ ಹೋದರೆ ಸಮಾಧಾನವಿಲ್ಲ. ಇಷ್ಟೆಲ್ಲಾ ಆದ ನಂತರ ಕೇಕ್ ಉಳಿದರೆ ಬಹುಶ: ಹಂಚಿ ತಿನ್ನಬಹುದೇನೋ.
ಸಂಭ್ರಮವನ್ನ ಸಂತೋಷವನ್ನು ವ್ಯಕ್ತಪಡಿಸುವ ಆಯ್ಕೆ ಆದ್ಯತೆ ಕೇಕ್ ಆಗಿದೆ ಅಂದರೆ ಅದುವೇ ವಿಪರ್ಯಾಸ.
ಕಳೆದ ವರ್ಷ ಟಿವಿಯಲ್ಲಿ ಪರೀಕ್ಷೆ ಫೇಲ್ ಆದ ದ್ವಿತೀಯ ಪಿಯುಸಿ ಹುಡುಗನಿಗೆ ತಂದೆ-ತಾಯಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಸುದ್ದಿ ನೀವು ಕೇಳಿರಬಹುದು. ಹೀಗೆ ಬದುಕಿನಲ್ಲಿ ಸೋತಾಗ, ವಿಚ್ಛೇದನೆಯಾದಾಗ, ಅಥವಾ ಬ್ರೇಕಪ್ ಆದಾಗ ಕೂಡ ಕೇಕ್ ಕತ್ತರಿಸಿ ಸಂಭ್ರಮಿಸಿದರೆ ಬಹುಶ: ಕೇಕ್ ಗೆ ಕೂಡ ಡಿಮ್ಯಾಂಡ್ ಹೆಚ್ಚುತ್ತದೆ ಮತ್ತು ಕೇಕ್ ಗಳನ್ನು ಸುಖ-ದುಃಖ, ನೋವು-ನಲಿವು, ಸೋಲು- ಗೆಲುವಿನ ಭಾವವನ್ನು ಅವುಗಳಲ್ಲಿ ಕೂಡ ವ್ಯಕ್ತಪಡಿಸುವ ಆಯ್ಕೆಯನ್ನು ಜನರು ಮಾಡಿಕೊಳ್ಳಬಹುದು..
ಹಿಂದೆಲ್ಲಾ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟಿದ ದಿನವನ್ನು ಆಚರಿಸಿದ ಅದೊಂದು ದೊಡ್ಡ ಸಂಗತಿ, ಸಂಭ್ರಮವಾಗಿತ್ತು. ಆದರೆ, ಈಗ ಸಂಭ್ರಮದ ದಿನಕ್ಕಾಗಿ ಯಾರು ಕಾಯುವುದಿಲ್ಲ ಕೈಯಲ್ಲಿ ಕಾಸಿದ್ದರೆ ಒಂದು ಪುಟ್ಟ ನೆಪ ಹುಡುಕಿ ಬೇಕರಿಗೆ ಹೋಗಿ ಕೇಕ್ ತಿಂದು ಬರುತ್ತಾರೆ.
ಕೇಕ್ ಬಗ್ಗೆ ಬರೆಯುವಾಗ ಈಗ ಕೇಕ್ ಮೇಲೆ ಆಗಿರುವ ವಿನ್ಯಾಸಗಳನ್ನು ಮರೆಯಬಾರದು. ನಮ್ಮೆಲ್ಲರ ಭಾವಚಿತ್ರ ಈಗ ಕೇಕ್ ಮೇಲೆ ಇರುತ್ತದೆ. ಇಂತ ಕೇಕ್ ಗಳು ದುಬಾರಿಯಾದರೂ ಕೂಡ ಜನರ ಮೊದಲ ಆದ್ಯತೆ ಅದುವೇ ಆಗಿರುತ್ತದೆ ಎಂಬುದು ವಿಪರ್ಯಾಸ. ಹೀಗೆ ಹಿಂದೆ ಒಂದು ತುಂಡು ರೊಟ್ಟಿ, ದೋಸೆ ಅಥವಾ ಹಲಸಿನಕಾಯಿ ಗಟ್ಟಿಯೇ ಬಾಲ್ಯದ ಕೇಕ್ ಆದರೆ ಜೀವನಶೈಲಿ, ಸಮಯ ಬದಲಾದಂತೆ ಎಲ್ಲವೂ ಬದಲಾಗಿದೆ. ನಮ್ಮ ಸಾಂಪ್ರದಾಯಿಕ ಖಾದ್ಯಗಳನ್ನು ಈ ಕೇಕ್ ಗಳು ಆಕ್ರಮಿಸಿಕೊಂಡಿದೆ. ಈಗ ಎಲ್ಲ ಕೇಕ್ ಮಯವಾಗಿದೆ ಎಂದರೆ ಅದುವೇ ಕಹಿ ಸತ್ಯ.
ಕವನ ಚಾರ್ಮಾಡಿ
ದ್ವಿತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ








