ಮಂಗಳೂರು ವಿವಿಯ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸ ಮಾಲಿಕೆ ಉದ್ಘಾಟನೆ
ಮುಡಿಪು:'ವಿಜ್ಞಾನ ಎಲ್ಲರಿಗೂ ಬೇಕು. ಆಧುನಿಕ ಸಮಾಜದಲ್ಲಿ ವಿಜ್ಞಾನದ ತಿಳುವಳಿಕೆ ಅತೀ ಅಗತ್ಯ. ಸುಸ್ಥಿರ ಅಭಿವೃದ್ಧಿಯನ್ನು ಹೊಂದುವಲ್ಲಿ ರಸಾಯನಶಾಸ್ತ್ರದ ಪಾತ್ರ ಹಿರಿದು' ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ಡೀನ್ ಆಗಿರುವ ಪ್ರೊ. ಮಂಜಯ್ಯ ಡಿ ಹೆಚ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗ, ಪ್ರೊ. ಬಿ. ನಾರಾಯಣ ಲೆಗಸಿ ಫಾರಂ ಮತ್ತು ಪೆಟ್ರೋಪಾತ್ ಪ್ರೈ. ಲಿ. ಬೆಂಗಳೂರು ಇದರ ಸಹಯೋಗದೊಂದಿಗೆ 'ಸಸ್ಟೈನೇಬಲ್ ಕೆಮಿಸ್ಟ್ರಿ-ಇನ್ನೋವೆಶನ್ಸ್ ಆಂಡ್ ಅಪ್ಲಿಕೇಷನ್ಸ್' ಎಂಬ ವಿಷಯದಲ್ಲಿ ಒಂದು ದಿನದ ಉಪನ್ಯಾಸ ಮಾಲಿಕೆಯ ಅಧ್ಯಕ್ಷ ಸ್ಥಾನವನ್ನು ವಹಿಸುತ್ತಾ 'ಪ್ರೊ. ನಾರಾಯಣ ಅವರು ವಿದ್ಯಾರ್ಥಿಗಳ ಮತ್ತು ವಿಶ್ವವಿದ್ಯಾಲಯದ ಬೆಳವಣಿಗೆಗೆ ಮಹತ್ತರ ಕೊಡುಗೆ ಕೊಟ್ಟ ವಿಜ್ಞಾನಿಗಳಲ್ಲಿ ಒಬ್ಬರು. ಅವರ ಜ್ಞಾನ ಭಂಡಾರದ ಪ್ರಯೋಜನವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಇಂದು ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಂಡವರಾಗಿದ್ದಾರೆ' ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ಮತ್ತು ಪ್ರಸ್ತುತ ಬಿಹಾರದ ಕೆ.ಕೆ. ಯುನಿವರ್ಸಿಟಿ ಕುಲಪತಿಗಳಾಗಿರುವ ಪ್ರೊ. ನಾರಾಯಣ ಬಿ ಇವರು ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗವು ಹುಟ್ಟಿ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಅತಿಥಿಗಳಾಗಿ ಆಗಮಿಸಿದ ಭಾಸ್ಕರ್ ನಾಯಕ್, ಮ್ಯಾನೇಜಿಂಗ್ ಡೈರೆಕ್ಟರ್, ಪೆಟ್ರೋಪಾತ್ ಪ್ರೈ. ಲಿ. ಬೆಂಗಳೂರು, ಡಾ. ಮುರಳೀಧರ ರಾವ್,ನಿವೃತ್ತ ಪ್ರಾಂಶುಪಾಲರು, ಗೋವಿಂದ ದಾಸ ಕಾಲೇಜು, ಸುರತ್ಕಲ್ ಮತ್ತು ಡಾ. ರಾಮಚಂದ್ರ ಭಟ್, ಪ್ರಾಧ್ಯಾಪಕರು, ಎನ್ ಐ ಟಿ ಕೆ, ಸುರತ್ಕಲ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಹಿರಿಯ ಪ್ರಾಧ್ಯಾಪಕರಾಗಿರುವ ಪ್ರೊ. ಬಿ. ಕೆ. ಸರೋಜಿನಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕಿ ನಿಶಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರದಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಭಾಸ್ಕರ್ ನಾಯಕ್, ಮ್ಯಾನೇಜಿಂಗ್ ಡೈರೆಕ್ಟರ್, ಪೆಟ್ರೋಪಾತ್ ಪ್ರೈ.ಲಿ. ಬೆಂಗಳೂರು ಇವರು 'ದಿ ಫ್ಯೂಚರ್ ಆಪ್ ಪೆಟ್ರೋಕೆಮಿಕಲ್ ಟ್ರೆಂಡ್ಸ್- ಅಪಾರ್ಚುನಿಟೀಸ್ ಆಂಡ್ ರಿಸ್ಕ್' ಎಂಬ ವಿಷಯದ ಬಗ್ಗೆ, ಡಾ. ರಾಮಚಂದ್ರ ಭಟ್, ಪ್ರಾಧ್ಯಾಪಕರು, ಎನ್ ಐ ಟಿ ಕೆ, ಸುರತ್ಕಲ್ ಇವರು 'ಕಾರ್ಬನ್ ಫಂಕ್ಷನಲ್ ಮೆಟೀರಿಯಲ್ಸ್ ಫಾರ್ ಸೆನ್ಸರ್' ಎಂಬ ವಿಷಯಾಧಾರಿತವಾಗಿ, ಡಾ. ಅಬ್ರಹಾಂ ಜೋಸೆಫ್, ಹಿರಿಯ ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ, ಕಲ್ಲಿಕೋಟೆ ವಿಶ್ವವಿದ್ಯಾನಿಲಯ ಇವರು 'ಪೀರಿಯೋಡಿಕ್ ಟೇಬಲ್ ಆಫ್ ಲೈಫ್' ಎಂಬ ವಿಷಯದ ಕುರಿತಾಗಿ ಮತ್ತು ಪ್ರೊ. ಬಿ. ಕೆ. ಸರೋಜಿನಿ, ಹಿರಿಯ ಪ್ರಾಧ್ಯಾಪಕೆ, ಕೈಗಾರಿಕಾ ರಸಾಯನಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಇವರು 'ವರ್ಸೆಟೈಲ್ ಪಾಲಿಮರ್/ಆರ್ಗಾನಿಕ್ ಡೋಪೆಂಟ್ ಕಾಂಪೋಸಿಟ್ ಮೆಟೀರಿಯಲ್ಸ್ ಫಾರ್ ಆಪ್ಟಿಕಲ್ ಆಂಡ್ ಬಯಾಲಜಿಕಲ್ ಅಪ್ಲಿಕೇಷನ್ಸ್' ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿವಿಯ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಪ್ರೊ. ಬಿ. ಕೆ. ಸರೋಜಿನಿ ಅವರನ್ನು ಸನ್ಮಾನಿಸಲಾಯಿತು.




