ಹಳೆಗನ್ನಡ ಕಾವ್ಯಗಳಲ್ಲಿನ ರಾಜನೀತಿ ಸಾರ್ವಕಾಲಿಕ: ಶ್ರೀಧರ ಎಚ್‌ ಜಿ.

Upayuktha
0

ಸರಕಾರಿ ಕಾಲೇಜಿನಲ್ಲಿ ಪ್ರಚಾರೋಪನ್ಯಾಸ ಮಾಲಿಕೆ ಸಮಾರೋಪ



ವಿದ್ಯಾನಗರ (ಕಾಸರಗೋಡು): “ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಾಜನೀತಿಯ ಸ್ವರೂಪವು ಅಧ್ಯಯನ ಯೋಗ್ಯವಾಗಿದ್ದು, ಸಮಕಾಲೀನ ಸ್ಥಿತಿಗತಿಯ ಹಲವು ಸೂಕ್ಷ್ಮಗಳನ್ನು ಸಾವಿರ ವರ್ಷಗಳಿಗಿಂತ ಮೊದಲಿನ ಅಭಿಜಾತ ಕಾವ್ಯಗಳಲ್ಲಿ ಕಾಣಬಹುದು.” ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಢಾ. ಶ್ರೀಧರ ಎಚ್‌ ಜಿ ಅಭಿಪ್ರಾಯಪಟ್ಟರು.


ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು ನೇತೃತ್ವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದೊಂದಿಗೆ ನಡೆದ ಪ್ರಚಾರೋಪನ್ಯಾಸ ಮಾಲೆ ಸಮಾರೋಪ ಸಮಾರಂಭದಲ್ಲಿ ಅವರು ʼ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಾಜನೀತಿʼ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡುತ್ತಿದ್ದರು.


“ಅಭಿಜಾತ ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿರುವ ಕೋಟೆ ಕಟ್ಟಡಗಳ ನಿರ್ಮಾಣ ಶೈಲಿ, ರಾಜಕೀಯ ಗೂಢಚರ್ಯೆ ಈ ಮುಂತಾದುವುಗಳ ಚಿತ್ರಣದಲ್ಲಿ ಅಂದಿನ ಜನರ ಮನೋವೈಜ್ಞಾನಿಕ ಕೌಶಲ್ಯಗಳನ್ನು ಗುರುತುಮಾಡಬಹುದು. ಪಂಪಮಹಾಕವಿಯ ವಿಕ್ರಮಾರ್ಜುನ ವಿಜಯ ಕಾವ್ಯದ ಕೃಷ್ಣಸಂಧಾನ ಭಾಗವು ರಾಜನೀತಿಯ ಗೂಢಚರ್ಯೆ ತಂತ್ರಕ್ಕೆ ಉತ್ತಮ ಉದಾಹರಣೆಯಾಗಿದೆ. ಭೇದಿಸಲು ನುಡಿದೆ ಎಂದೆನ್ನದಿರು ಎಂಬ ಕೃಷ್ಣನ ಮಾತಿನಲ್ಲಿ ರಾಜಕೀಯ ತಂತ್ರಗಾರಿಕೆಯ ಸ್ಪಷ್ಟ ಸುಳಿವನ್ನು ಕಾಣಬಹುದು. ರಾಜನೀತಿಯ ಪ್ರಮುಖ ತಂತ್ರಗಳಾದ ಚತುರೋಪಾಯಗಳನ್ನು ಕನ್ನಡದ ಹಲವು ಪ್ರಾಚೀನ ಕಾವ್ಯಗಳಲ್ಲಿ ಕಾಣಬಹುದು. ಅದರ ಆರು ಗುಣಗಳನ್ನು ಕನ್ನಡ ಕವಿಗಳು ಅಧ್ಯಯನ ಮಾಡಿ ಬರೆದಿದ್ದಾರೆ. ಕನ್ನಡದ ಕವಿಗಳು ಕಲಿಗಳೂ ಆಗಿದ್ದ ಕಾರಣ ಅವರೆಲ್ಲರೂ ರಾಜನೀತಿಯನ್ನು ಹತ್ತಿರದಿಂದ ಬಲ್ಲವರಾಗಿದ್ದರು.” ಎಂದು ಶ್ರೀಧರ ಎಚ್‌ ಜಿ ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವಿ. ಎಸ್‌ ಅನಿಲ್‌ ಕುಮಾರ್‌ ನಿರ್ವಹಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ ಡಾ. ಎನ್‌ ಎಂ ತಲವಾರ ಮಾತನಾಡಿ, “ ಕನ್ನಡ ಭಾಷೆಗೆ ಭಾರತೀಯ ಸರಕಾರವು ನೀಡಿದ ಶಾಸ್ತ್ರೀಯ ಸ್ಥಾನಮಾನದ ಮಹತ್ವವನ್ನು ತಿಳಿದು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಳಲ್ಲಿ ಯುವಜನತೆ ಮುಖ್ಯಪಾತ್ರವಹಿಸಬೇಕು. ಕನ್ನಡಕ್ಕೆ ಹಳೆಗನ್ನಡವು ಅನರ್ಘ್ಯ ಸಂಪತ್ತು. ಅದನ್ನು ಬಿಟ್ಟು ಮುಂದೆ ಹೋಗಬಾರದು. ಹಳೆಗನ್ನಡ ಕಷ್ಟ ಎನ್ನುವುದು ಒಂದು ಹುಸಿಕಲ್ಪನೆ ಮಾತ್ರ. ಹಳೆಗನ್ನಡದ ಸ್ವಾದ ಸಿಕ್ಕಿದವರು ಅದರ ಬಗ್ಗೆ ಹೆಚ್ಚಿನ ಓದು ಮತ್ತು ಅಧ್ಯಯನ ಮಾಡದೆ ಇರಲಾರರು.” ಎಂದು ಡಾ. ನೀಲಗಿರಿ ತಲವಾರ ಅವರು ಅಭಿಪ್ರಾಯಪಟ್ಟರು. 


ಸಮಾರೋಪ ಭಾಷಣ ಮಾಡಿದ ಕನ್ನಡ ವಿಭಾಗ ಮುಖ್ಯಸ್ತೆ ಸುಜಾತ ಎಸ್‌ ಮಾತನಾಡಿ, “ಮೈಸೂರಿನ ಭಾಷಾ ಸಂಸ್ಥೆಯು ನಡೆಸುತ್ತಿರುವ ಇಂತಹ ಕನ್ನಡ ಸಾಹಿತ್ಯ ಅಭಿಯಾನದಿಂದ ವಿದ್ಯಾರ್ಥಿಗಳು ಅಧ್ಯಯನಶೀಲರಾಗುತ್ತಾರೆ. ನಾಡಿನ ಉದ್ದಗಲಕ್ಕೂ ಪ್ರಚಾರ ಉಪನ್ಯಾಸಗಳು ನೆರವೇರಿದ್ದು ಸಂತೋಷದ ವಿಷಯ. ಕನ್ನಡ ಭಾಷೆ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ನಮಗೆಲ್ಲರಿಗೂ ಇದ್ದು ಈ ದಿಶೆಯಲ್ಲಿ ಇಂತಹ ಅಕಾಡೆಮಿಕ್‌ ಕಾರ್ಯಕ್ರಮಗಳು ಸಹಾಯಕ.” ಎಂದರು.


ಪ್ರಚಾರೋಪನ್ಯಾಸ ಮಾಲಿಕೆಯ ಸಂಚಾಲಕಿ ಡಾ. ಮಾಲಿನಿ ಎನ್‌ ಅಭ್ಯಂಕರ್‌ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತ ಸಿ ಕೆ ನಿರೂಪಿಸಿದರು. ಡಾ. ರತ್ನಾಕರ ಮಲ್ಲಮೂಲೆ ವಂದಿಸಿದರು. ಕುಮಾರಿ ಕೀರ್ತನ ಭಟ್‌ ಪ್ರಾರ್ಥನೆ ಹಾಡಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top