ಶಿವಮೊಗ್ಗ: ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ 'ಹವಾಮಾನ ಬದಲಾವಣೆ ಹಾಗೂ ಆರೋಗ್ಯ' ವಿಚಾರ ಸಂಕಿರಣ

Chandrashekhara Kulamarva
0


ಶಿವಮೊಗ್ಗ: ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಪ್ರಾಣಿಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಾಗ, IQ AC ಹಾಗೂ ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆ ಇವರ ಸಹಯೋಗದಲ್ಲಿ ಇಂದು (ನ.04) ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ "ಒಂದು ಆರೋಗ್ಯ ದಿನ 2025” ಆಚರಣೆಯ ಪ್ರಯುಕ್ತ ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ವಿಭಾಗದ ಅಧ್ಯಕ್ಷರಾದ ಡಾ|| ಕೆ.ಆರ್.ರವೀಶ್‌ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ|| ರವೀಶ್ ಅವರು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಚಟುವಟಿಕೆಯಿಂದ ಜೀವನ ನಡೆಸುವುದರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಇದ್ದು ಉತ್ತಮ ಆರೋಗ್ಯವನ್ನು ರೂಪಿಸುವ ಗುಟ್ಟು ಅಡಗಿದೆ. ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಆರು ಮುಖ್ಯ ಹಾಗೂ ಶ್ರೇಷ್ಠ ವೈದ್ಯರುಗಳೆಂದರೆ ಗಾಳಿ, ನೀರು, ಬೆಳಕು, ಆಹಾರ, ಚಟುವಟಿಕೆ ಮತ್ತು ಮನಸ್ಸು. ಇವುಗಳ ಸಮತೋಲನವನ್ನು ಕಾಪಾಡಿಕೊಂಡು ಜೊತೆಯಲ್ಲಿ ಪರಿಸರವನ್ನು ಸಂರಕ್ಷಿಸಿಕೊoಡು ಜೀವನ ನಡೆಸುವುದು ನಮ್ಮೆಲ್ಲ ಜವಾಬ್ದಾರಿ ಎಂದು ಕರೆ ಕೊಟ್ಟರು.


ಇದೇ ಸಂದರ್ಭದಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ೨೦೨೫ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಗೆ ಭಾಜನರಾದ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ|| ರಾಜೇಂದ್ರ ಚೆನ್ನಿ ಅವರನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ರಜನಿ ಎ ಪೈರವರು ಸನ್ಮಾನಿಸಿದರು.


ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ|| ರಾಜೇಂದ್ರ ಚೆನ್ನಿಯವರು ಭಾರತೀಯ ಸಾಹಿತ್ಯದ ಅತ್ಯುತ್ತಮ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಅಮೀತಾವ್ ಘೋಷ್ ಅವರನ್ನು ಉಲ್ಲೇಖಿಸಿ, ಮನುಷ್ಯರು ಇರುವ ಒಂದೇ ಭೂಮಿಯನ್ನು ನಾಶಗೊಳಿಸುತ್ತಿರುವುದು ಸಾಮೂಹಿಕ ಆತ್ಮಹತ್ಯೆಗೆ ಸಮಾನವಾಗಿದೆ ಹಾಗೂ ಅದು ಒಂದು ಮಾನಸಿಕ ಹುಚ್ಚು ಎಂಬುದನ್ನ ನಾವು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಸುಮಾರು 57 ದಶಲಕ್ಷ ಜನ ಭಾರತದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. ನಾವು ಭೂಮಿಯನ್ನು ಹೇಗೆ ಬೇಕು ಹಾಗೆ ಭೋಗಿಸಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಸಾಹಿತಿಗಳು ಸಾಹಿತ್ಯದಲ್ಲಿ ನೇರವಾಗಿ ಹವಮಾನ ವೈಪರೀತ್ಯದ ಬಗ್ಗೆ ಬರೆಯುವುದು ಕಲ್ಪನೆ ಎಂದಾಗುತ್ತದೆ. ಇಂತಹ ವಿಚಾರ ಸಂಕಿರಣಗಳು ಅವುಗಳನ್ನು ವಿಸ್ತಾರವಾಗಿ ತಿಳಿಸುವುದರಿಂದ ಜಾಗ್ರತಿ ಮೂಡಿಸಬಹುದು ಎಂದು ಅಭಿಪ್ರಾಯ ಪಟ್ಟರು.


ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿಯ ಸಹಾಯಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶ್ರೀ ಶ್ರೀಕಾಂತ್ ಎ.ವಿ. ಇವರು “ಹವಮಾನ ವೈಪರೀತ್ಯ ಹಿಂತಿರುಗಿ ಬರಲಾರದಂತಹ ಸ್ಥಿತಿಗೆ ತಲುಪುತ್ತಿದ್ದೇವೆ?” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.


ನಮ್ಮ ಜೀವನ ಶೈಲಿಯ ಕಾರಣದಿಂದ ನಾವು ಅತ್ಯಂತ ಹೆಚ್ಚು ಮಿಥೇನ್ ರಾಸಾಯನಿಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ಆಧುನಿಕ ಜೀವನ ಶೈಲಿ,ಅತಿ ಹೆಚ್ಚು ವಾಹನ ಅನಿಲ ಬಿಡುಗಡೆ, ತ್ಯಾಜ್ಯ ಚೆಲ್ಲುವಿಕೆ ಇವೆಲ್ಲವೂ ಮುಂದುವರಿದ ದೇಶಗಳಲ್ಲಿ ಹೆಚ್ಚಾಗಿದೆ. ಮಾತ್ರವಲ್ಲ ಇಂದು ವ್ಯಕ್ತಿಯ ಇಂಗಾಲದ ಹೆಜ್ಜೆಗಳು ನೇರವಾಗಿ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿವೆ. ನಾವೀಗ 1.5 ಡಿಗ್ರಿ ತಾಪಮಾನ ಏರಿಕೆಯ ಅಂಚಿನಲ್ಲಿದ್ದೇವೆ. ಇದು ಹೆಚ್ಚಾದಲ್ಲಿ ಹಿಂತಿರುಗಲಾರದ ಸ್ಥಿತಿಗೆ ತಲುಪುತ್ತೇವೆ. ಇದನ್ನು ತಡೆಯಬೇಕಾದರೆ ಪ್ರತಿಯೊಬ್ಬರು ತಮ್ಮ ಮಟ್ಟದಲ್ಲಿ ಪರಿಸರ ರಕ್ಷಣೆಯ ಜೀವನ ಶೈಲಿ ಅಳವಡಿಸಿಕೊಳ್ಳಲೇಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಅವರ ಉಪನ್ಯಾಸವನ್ನು ಕೇಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್‌ನ ನಿರ್ದೇಶಕರಾದ ಡಾ. ರಜನಿ ಎ ಪೈ ಅವರು ವಹಿಸಿದ್ದರು. ಮಾನಸ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ಡಾ|| ಪ್ರೀತಿ ವಿ ಶಾನಭಾಗ್‌ರವರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ, ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ ಅವರು ಉಪಸ್ಥಿತರಿದ್ದರು.


ಕಾರ್ಯಕ್ರಮವು ಕು. ಭೂಮಿಕ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ವಿಭಾಗದ ಕಾರ್ಯದರ್ಶಿಗಳಾದ ಡಾ|| ಶುಭ್ರತಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ವೈದ್ಯರುಗಳಾದ ನಾವು ವೈದ್ಯಕೀಯ ವೃತ್ತಿಯನ್ನು ಮಾಡುವುದರ ಜೊತೆಗೆ ಸಮುದಾಯದ ಆರೋಗ್ಯಕ್ಕೆ ಭಾರತೀಯ ವೈದ್ಯಕೀಯದ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವರ್ಷವಿಡೀ ಅನೇಕ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರದ ಬಗ್ಗೆ ಹವಮಾನದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದು, ಇಂದಿನ ಕಾರ್ಯಕ್ರಮವು ಅದರ ಒಂದು ಭಾಗವಾಗಿದೆ ಸಮಾಜವು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.


ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ರಾಜೇಂದ್ರ ಚೆನ್ನಿ ಅವರನ್ನು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಾಧುರಿಯವರು ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಶ್ರೀಕಾಂತ್ ಅವರನ್ನು ಕು.ಸುಷ್ಮಿತಾ, ತೃತೀಯ ಬಿ.ಎಸ್ಸಿ ಪರಿಚಯಿಸಿದರು. ಕು.ಭೂಮಿಕ ಸ್ವಾಗತಿಸಿ, ಕುಮಾರ ಕಶಿಶ್ ವಂದಿಸಿದರು. ಕಾರ್ಯಕ್ರಮವನ್ನು ಕುಮಾರಿ ಆಮಿನಾ ಅಫ್ರೀನ್, ತೃತೀಯ ಬಿ.ಎಸ್ಸಿ. ಅವರು ನಿರೂಪಿಸಿದರು ಹಾಗೂ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top